ಬೆಳೆಯುತ್ತಿರುವ ಬಸವತತ್ವ ಸನಾತನಿಗಳಿಗೆ ನಡುಕ ಹುಟ್ಟಿಸಿದೆ

ಕುಂಕುಮವಾಲ ಸನಾತನಿಗಳ, ವಿಭೂತಿಯಧಾರಿ ಲಿಂಗಾಯತರ ನಡುವೆ ನೇರ ಸಂಘರ್ಷ ಶುರುವಾಗಿದೆ

ಬಸವಕಲ್ಯಾಣ

ಬಸವಣ್ಣನವರು ಸನಾತನ ಧರ್ಮದ ವಾರಸುದಾರರು ಎಂದು ಹೇಳುವ ಕನ್ನೇರಿ ಸ್ವಾಮಿ ಮತ್ತವರ ಬಾಲಂಗೋಸಿಗಳ ಉದ್ದೇಶವೇನು ಎಂದು ಕೆದಕಿದರೆ ಎರಡು ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ: ಒಂದು ಇತ್ತೀಚೆಗೆ ಜಾಗತಿಕವಾಗಿ ಬೆಳೆಯುತ್ತಿರುವ ಬಸವತತ್ವ ಚಿಂತನೆ, ಇನ್ನೊಂದು ನೂತನ ಅನುಭವ ಮಂಟಪದ ಸ್ವಾಧೀನಕ್ಕಾಗಿ.

ಹನ್ನೆರಡನೇ ಶತಮಾನದಲ್ಲಿ ಸಮತಾವಾದವನ್ನು ಹೇಳಿದ ಬಸವಣ್ಣನವರನ್ನು ಮನೆಯಿಂದ ಹೊರಗಟ್ಟಿದ್ದು, ಬಸವಕಲ್ಯಾಣ ನೆಲದಲ್ಲಿ ಸಮತಾ ಧ್ವಜ ಎತ್ತಿ ಹಿಡಿದ ಶರಣರನ್ನು ಕಗ್ಗೊಲೆ ಮಾಡಿದ್ದು, ಸಮತಾವಾದದ ತಳಹದಿಯ ಮೇಲೆ ಮದುವೆ ಮಾಡಿಸಿದ್ದಕ್ಕಾಗಿ ಶರಣರನ್ನು ಆನೆ ಕಾಲಿಗೆ ಕಟ್ಟಿ ಎಳೆಸಿದ್ದು, ವಚನ ಸಾಹಿತ್ಯವನ್ನು ಸುಟ್ಟಿದ್ದು ಯಾರು?

ಕ್ರೈಸ್ತರೇ, ಬೌದ್ಧರೇ, ಜೈನರೇ, ಇಸ್ಲಾಂರೇ, ಯಹೂದಿಗಳೇ, ಪಾರ್ಷಿಗಳೇ ಅಥವಾ ಮನುವಾದಿಗಳೇ?

ಬಸವಣ್ಣನವರ ಬೆನ್ನಿಗೆ ಚೂರಿ ಹಾಕಿದವರು, ನಿನ್ನೆ ಮೊನ್ನೆಯವರೆಗೆ ಬಸವಣ್ಣನವರ ಭಾವಚಿತ್ರವನ್ನು ಮಠದಲ್ಲಿ ಹಾಕದವರು, ಬಸವಣ್ಣನವರ ಭಾವಚಿತ್ರದ ಕೆಳಗೆ ಹೋಗದವರು, ಬಸವ ಜಯಂತಿ ಆಚರಿಸದವರು, ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳದವರು, ಮಠದಲ್ಲಿ ವಚನ ಪಾಠ ಶಾಲೆ ತೆಗೆಯದವರು – ಇವರಿಗೆ ಈಗೇಕೆ ಬಸವಣ್ಣನವರ ಮೇಲೆ ಇಷ್ಟೊಂದು ಮೋಹ ಬಂದಿದೆ?

ಈಗೇಕೆ ವಚನಗಳ ಓದುವ ಹವ್ಯಾಸ ಬೆಳೆದಿದೆ? ಈಗೇಕೆ ಬಸವಕಲ್ಯಾಣದ ಮೇಲೆ ಆಸೆ ಹುಟ್ಟಿತು? ಈಗೇಕೆ ಬಸವಾದಿ ಶರಣರ ಹೆಸರಿನ ಸಮಾವೇಶಗಳು?

ಲಿಂಗಾನಂದ ಶ್ರೀಗಳು ಪ್ರವಚನದಲ್ಲಿ ಹಿಗ್ಗಾಮುಗ್ಗಾ ತೊಳೆಯುವಾಗ, ಇಳಕಲ್ ಶ್ರೀಗಳು ಗಣಪತಿ ಬಗ್ಗೆ ಮಾತಾಡಿದಾಗ, ಮಾತೆ ಮಹಾದೇವಿಯವರು ಹಲವಾರು ಪುಸ್ತಕಗಳು ಬರೆದಾಗ (ಲಿಂಗಾಯತರು ಹಿಂದುಗಳಲ್ಲ, ಲಿಂಗಾಯತರು ವೀರಶೈವರಲ್ಲ), ಮತ್ತು ಲಿಂಗಾಯತ ಚಳುವಳಿ ನಡೆಸಿದಾಗ, ಎಂ.ಎಂ. ಕಲಬುರಗಿಯವರು ಖಡಕ್ ಆಗಿ ಮಾತಾಡಿದಾಗ ಇಲ್ಲದ ರೋಷಾವೇಶ ಇಂದೇಕೆ? ನಿಜಗುಣಾನಂದ ಸ್ವಾಮಿಜಿ, ಭಾಲ್ಕಿ ಶ್ರೀ ಮತ್ತು ಬಸವತತ್ವ ಪ್ರಚಾರ ಮಾಡುವ ನಮ್ಮಂತವರ ಈ ಆಕ್ರೋಶವೇಕೆ?

ಕನ್ನೇರಿ ಸ್ವಾಮಿ ಬಸವಣ್ಣನವರ ಮತ್ತು ವಚನಗಳ ಮೇಲಿನ ಪ್ರೀತಿಗೆ ಅಲ್ಲ, ಒಂದು ರಾಜಕೀಯ ಪಕ್ಷದ ಏಳಿಗೆಗೆ ಶ್ರಮಿಸಲು ಮುಂದೆ ಬಂದಿದ್ದಾರೆ ಎಂದು ಸ್ಪಷ್ಟವಾಗಿದೆ. ಕನ್ನೇರಿ ಸ್ವಾಮಿ ಹಿಂದೆ ಪಕ್ಕಾ ರಾಜಕೀಯ ಹಿತಾಸಕ್ತಿ ಅಡಗಿದೆ.

ದಕ್ಷಿಣ ಭಾರತದಲ್ಲಿ ಸೊರಗುತ್ತಿರುವ ಕಮಲದ ಹೂವನ್ನು ಅನ್ನು ಹೇಗಾದರೂ ಮಾಡಿ ಬೆಳೆಸಬೇಕೆಂದು ನಾಗಪುರದ ಚಿಂತನೆಯಾಗಿದೆ. ಈ ಕಮಲದ ಹೂ ಬೆಳೆಸಲು ಒಬ್ಬ ಏಜೆಂಟನ್ನು ಹುಡುಕುತ್ತಿದ್ದಾಗ ಸಿಕ್ಕಿದ್ದು ಕನ್ನೇರಿ ಸ್ವಾಮಿ.

ಕರ್ನಾಟಕವನ್ನು ತೆಕ್ಕೆಗೆ ತೆಗೆದುಕೊಳ್ಳಬೇಕಾದರೆ ಮೊದಲು ಬಸವಣ್ಣನವರನ್ನು ಸನಾತನಗೊಳಿಸಬೇಕು ಎಂದರಿತ ಸಂಘಿಗಳು ಲಿಂಗಾಯತ ಧರ್ಮದ ಘಟಾಟನುಘಟಿ ಮಠಾಧೀಶರು ಇಲ್ಲದ ಈ ಸಂದರ್ಭಕ್ಕಾಗಿ ಬಹಳ ದಿನದಿಂದ ಕಾಯುತ್ತಿದ್ದರು. ಅಂತಹ ಸಂದರ್ಭ ಈಗ ಕೂಡಿ ಬಂದಿದ್ದರಿಂದ ತಮ್ಮ ಏಜೆಂಟ್ ಮುಂದಿಟ್ಟುಕೊಂಡು ಬಂದಿದ್ದಾರೆ.

ಇಂತಹದೇ ಅವಕಾಶಕ್ಕಾಗಿ ಕಾಯುತ್ತಿದ್ದ ಈತ ಶಾಂತಿಯ ಪ್ರವಾದಿ ಸಿದ್ಧೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದ ನಂತರ ತನ್ನ ನಿಜರೂಪವನ್ನು ತೋರಿಸುತ್ತಿರುವನು.

ಕುಂಕುಮವಾಲಾ ಕನ್ನೇರಿ ಸ್ವಾಮಿಯನ್ನು ವಿಭೂತಿಧಾರಿ ಲಿಂಗಾಯತ ಧರ್ಮಿಯರಿಗೆ ಬೆದರುಗೊಂಬೆಯಾಗಿ ತಂದು ಲಿಂಗಾಯತ ಲಿಂಗಾಯತ ಮಠಾಧೀಶರ ನಡುವೆ ಜಗಳ ಹಚ್ಚಿ, ಲಿಂಗಾಯತ ಧರ್ಮ ಹೋರಾಟದ ದಿಕ್ಕು ತಪ್ಪಿಸಲು ಸನಾತನಿಗಳು ಕೈಕೊಂಡ ತಂತ್ರವೇ ಈ ‘ಬಸವಾದಿ ಶರಣರ ಹಿಂದೂ ಸಮಾವೇಶ’.

ಈ ಮೂಲಕವಾಗಿ ಸನಾತನಿಗಳ ಕುಂಕುಮ ಮತ್ತು ಲಿಂಗಾಯತರ ವಿಭೂತಿಯ ನೇರ ನೇರ ಸಾಂಸ್ಕೃತಿಕ ಸಂಘರ್ಷ ಈಗ ಶುರುವಾಗಿದೆ.

ಲಿಂಗಾಯತ ಧರ್ಮ ಸ್ವತಂತ್ರ ಮಾನ್ಯತೆ ಪಡೆದರೆ, ಲಿಂಗಾಯತರು ಸ್ವಾಭಿಮಾನಿಗಳಾದರೆ ದೇವಸ್ಥಾನಗಳು ಮುಚ್ಚುತ್ತವೆ, ತಟ್ಟೆ ಕಾಸಿನಿಂದ ಬದುಕುವ ಸನಾತನಿಗಳಿಗೆ ಕೂಲಿಯೇ ಗತಿಯಾಗುತ್ತದೆ ಎಂಬ ನಡುಕದಿಂದ ಸನಾತನಿಗಳು ಬಸವಣ್ಣನ ಪರವಾಗಿ ನಿಂತುಕೊಳ್ಳುವ ಅಥವಾ ಬಸವಣ್ಣ ಕೂಡ ಸನಾತನಿ ಎಂದು ಹೇಳುವ ದ್ವಿನೀತಿಯನ್ನು ಅನುಸರಿಸಿದ್ದಾರೆ.

ಇದು ಹೊಸತಲ್ಲ. ಅಂದು ಬುದ್ಧನನ್ನು ವಿಷ್ಣುವಿನ ಹತ್ತನೇ ಅವತಾರ ಎಂದು ಪ್ರಚಾರ ಮಾಡಿದ್ದು ಇತಿಹಾಸ. ಹಾಗೆಯೇ ಬಸವಣ್ಣನವರನ್ನು ಆ ಸಾಲಿಗೆ ಸೇರಿಸಲು ಹೊರಟ ಅವರ ಕುತಂತ್ರ ನಡೆ ಈಗ ನಡೆಯದು.

ಹಿಂದಿನ ಮಠಾಧೀಶ ದಿಗ್ಗಜರು ಈಗ ಇಲ್ಲದಿರಬಹುದು. ಅವರ ವಾರಸುದಾರರಾದ ನಾವು ವಿರೋಧಿಗಳ ಎಡಮುರಿ ಕಟ್ಟಲು ಸಿದ್ಧರಿದ್ದೇವೆ.

ನಮ್ಮ ಸವಾಲು ಸ್ವೀಕರಿಸಿ ಚರ್ಚೆಗೆ ಬನ್ನಿ ಎಂದು ಎಷ್ಟು ಸಾರಿ ಕರೆದರೂ ಇವರಿಗೆ ಮುಂದೆ ಬರುವ ಧೈರ್ಯ ಹಾಗೂ ವಚನಗಳ ಅಧ್ಯಯನವಿಲ್ಲ. ಈ ಕೊರತೆ ಮುಚ್ಚಿಹಾಕಲು ಕನ್ನೇರಿ ಸ್ವಾಮಿ ಮೂಲಕ ‘ಹಂದಿ ನಾಯಿಗಳ ಜೊತೆ ಚರ್ಚೆಗೆ ಬರುವುದಿಲ್ಲ’ ಎಂದು ಪಲಾಯನವಾದಿ ಉತ್ತರ ಕೊಡಿಸುತ್ತಿದ್ದಾರೆ.

ವೀರಶೈವ ದ್ವೈಷಿ ಕನ್ನೇರಿ ಸ್ವಾಮಿ?

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ವೀರಶೈವರು ತಳಬುಡವಿಲ್ಲದ ಸಂಸ್ಕೃತಿಯವರು ಎಂದು ಪಂಚಪೀಠಗಳನ್ನು ಉದ್ಧೇಶಿಸಿ ಟೀಕಿಸುತ್ತಾ, ತಮ್ಮಷ್ಟಕ್ಕೆ ತಾವೇ ಐತಿಹಾಸಿಕವಾಗಿ ಹಾಳಾಗಿ ಹೋಗುತ್ತಾರೆ ಎಂದು ಕನ್ನೇರಿ ಸ್ವಾಮಿ ನಾಲಿಗೆ ಹರಿಬಿಟ್ಟದ್ದರು.

ಈಗ ಅವರ ಹಿಂದೆ ಯಾವ ಪುರುಷಾರ್ಥಕ್ಕಾಗಿ ವೀರಶೈವ ಮಠಾಧೀಶರು ಬೆನ್ನು ಹತ್ತಿದ್ದಾರೆ ಎಂಬುದು ಮತ್ತೊಂದು ಯಕ್ಷಪ್ರಶ್ನೆ.

ಮೊನ್ನೆ ಮೊನ್ನೆಯವರೆಗೆ ದಸರಾ ದರ್ಬಾರ್ ಮಾಡಿದರೂ ಬಸವಭಕ್ತರ ವಿರೋಧದಿಂದ ಅಡ್ಡಪಲ್ಲಕ್ಕಿ ನಡೆಸಲಾಗದೆ ಹೈರಾಣಾದ ತಡೋಳ ಶ್ರೀಗಳು ಕನೇರಿ ಸ್ವಾಮಿ ನಮ್ಮ ವಿರುದ್ಧವೆ ಮಾತನಾಡಿದ್ದಾನೆ ಅಂಥವರ ಜೊತೆ ‘ನಾನು ಹಿಂದೂ ಸಮಾವೇಶಕ್ಕೆ ಹೋಗಲಾರೆ ಎಂದು ಹೇಳಿದ್ರಂತೆ. ಈಗ ಅಂತವರೂ ಕನ್ನೇರಿ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅದ್ಯಾವ ಆಮಿಷದಿಂದಲೋ ಕಾಣೆವು.

ಬಸವಕಲ್ಯಾಣದಲ್ಲಿನ ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀಗಳನ್ನು ಅಡ್ಡಪಲ್ಲಕ್ಕಿಯನ್ನು ಇಳಿಸಿದ ಕೀರ್ತಿ ಬಸವಭಕ್ತರಿಗೆ ಸಲ್ಲುತ್ತದೆ.

ಹಾಗೆಯೇ ನಮ್ಮ ತೀವ್ರ ಹೋರಾಟದ ಪರಿಣಾಮವಾಗಿ ಬಸವಣ್ಣನವರನ್ನು ಮತ್ತು ವಚನಗಳನ್ನು ಸನಾತನಗೊಳಿಸುವ ಹಾಗೂ ಬಸವಣ್ಣನವರನ್ನೇ ತಾಲಿಬಾನಿ ಎಂದ ಕನ್ನೇರಿ ಸ್ವಾಮಿ ನೇತೃತ್ವದ ಬಸವಾದಿ ಶರಣರ ಹಿಂದೂ ಸಮಾವೇಶ ಎಂಬ ಕಲಸುಮೇಲೋಗರ ಕುತಂತ್ರವೂ ಇದೇ ಭೂಮಿಯಲ್ಲಿ ಮಣ್ಣಾಗುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
2 Comments
  • ದೇಹ ದೇವಾಲಯ ಮಾಡುವ ಅದ್ಭುತವಾದ ಸಾಧ್ಯತೆ ಇರುವುದು ಶರಣ ಧರ್ಮದಲ್ಲಿ ಮಾತ್ರ. ಅಹಿಂಸೆ ಮತ್ತು ಸರ್ವಸಮಾನತೆ ಸಾಧಿಸಿ ಸುಖ ಶಾಂತಿ ನೆಮ್ಮದಿ ಶಾಶ್ನೆವತವಾಗಿ ನೆಲೆಸುವಂತೆ ಮಾಡುವುದು ಈ ಧರ್ಮದ ಧ್ಯೇಯ. ಇದನ್ನು ಅರಿತುಕೊಂಡು, ಸಕಲರೂ ಹಿಂದು ಸಂಸ್ಕೃತಿಯಿಂದ ಹೊರಗೆ ಬಂದು ಶರಣ ಧರ್ಮದ ಅನುಯಾಯಿಗಳಾಗುವುದು ಪರಮ ಸುಖ. ಶರಣ ಧರ್ಮದ ಅರಿವು ಆಚರಣೆಗೆ ಅರಿವು ಆಚರಣೆ ಅಭಿಮಾನರಹಿತರಾದ ನಮ್ಮವರೇ ಆಗಿರಬೇಕಾಗಿದ್ದ ಕನ್ನೇರಿ ಸ್ವಾಮಿಗಳು ಬಸವಾದಿ ಶರಣರ ಸಿದ್ಧಾಂತ ವಿರೋಧಿಗಳ ಕೈಗೊಂಬೆ ಆಗಿದ್ದಾರೆ. ಶರಣ ಧರ್ಮೀಯರು ಅವರ ಸಮಾವೇಶದಿಂದ ದೂರ ಉಳಿಯುವಂತಹ ಮತ್ತು ಶರಣ ಧರ್ಮದ ತತ್ವ ಆಚರಣೆಯ ಶ್ರೇಷ್ಠತೆಯನ್ನು ಜನಮಾನಸದಲ್ಲಿ ಬಿತ್ತಿ ಬೆಳೆಯುವ ದೀರ್ಘಾವಧಿ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತರಾಗಬೇಕಾದದ್ದು ಅತ್ಯವಶ್ಯಕವಾಗಿದೆ.

  • 900 ವರ್ಷಗಳಿಂದ ನಿರಂತರವಾಗಿ ಬಸವಣ್ಣನವರ ಚಿಂತನೆಗಳು ಮೂಲೆ ಗುಂಪು ಮಾಡಲು ಪ್ರಯತ್ನ ನಡೆದೆ ಇದೇನು ಹೊಸತಲ್ಲ, ನಾವು ಯಾರಿಗೂ ಹೆದರಬೇಕಿಲ್ಲ, ಬಸವ ಭಕ್ತರು ಘಟ್ಟಿಯಾಗಿ ನಿಲ್ಲಬೇಕು, ನಮ್ಮಲ್ಲೇ ಇನ್ನೂ ಅನೇಕರು ಬಸವ ತತ್ತ್ವ ಆಚರಣೆ ಮಾಡುತ್ತಿಲ್ಲ. ಮೊದಲು ನಾವು ಸದೃಢರಾಗಿ ನಿಲ್ಲೋಣ, ಬಸವಣ್ಣ ಆನೆ ಇದ್ದಂತೆ, ಅದೆಷ್ಟೋ ಕಾಲಗಳಿಂದ ಇಂತಹ ಕನ್ನೇರಿ ಅಂತಃ ನಾಯಿಗಳು ಬೊಗಳುತ್ತಲೇ ಇವೆ, ಇನ್ನು ಮುಂದೆ ನಾವೂ ಬಸವ ತತ್ವಕ್ಕಾಗಿ ಮನೆ ಮನೆಗೆ ಹೋಗಿ, ಹೆಚ್ಚು, ಹೆಚ್ಚು ಪ್ರಚಾರ ಮಾಡೋಣ, ಆ ಗಾಳಿಯಲ್ಲಿ ತಾವೇ ಹಾರಿ ಕೊಂಡು ಹೋಗುತ್ತಾರೆ.
    ಶರಣು ಶರಣಾರ್ತಿಗಳು.

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.