ಸಿಂಧನೂರಿನಲ್ಲಿ ವ್ಯಸನಮುಕ್ತ ಬದುಕಿಗಾಗಿ ವಚನ ಶ್ರಾವಣ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಸಿಂಧನೂರ:

ನಗರದ ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಚಾರಿಟೇಬಲ್ ಟ್ರಸ್ಟ್ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ “ವ್ಯಸನ ಮುಕ್ತ ಬದುಕಿಗಾಗಿ ವಚನ ಶ್ರಾವಣ – 2026” ಕಾರ್ಯಕ್ರಮವನ್ನು ಶ್ರಾವಣ ಮಾಸ ಪರ್ಯಂತರ ಹಮ್ಮಿಕೊಂಡಿರುವುದಾಗಿ ಬಸವಕೇಂದ್ರದ ಅಧ್ಯಕ್ಷರಾದ ಕರೇಗೌಡ ಪೊಲೀಸಪಾಟೀಲ ಕುರುಕುಂದ ಅವರು ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಪಿ. ರುದ್ರಪ್ಪರವರು, 12ನೇ ಶತಮಾನದ ಬಸವಾದಿ ಶರಣರ ವಿಚಾರಗಳನ್ನು ಯುವಕರು, ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ತಲುಪಿಸಸಬೇಕಾದ ಅನಿವಾರ್ಯತೆ ಇದೆ.

ಶರಣರ ವಚನಗಳು ನಮ್ಮ ಬದುಕಿನ ಸಂವಿಧಾನ. ಉತ್ತಮ ಬದುಕಿಗಾಗಿ ಅವುಗಳನ್ನು ನಾವು ಅಳವಡಿಸಿಕೊಂಡು ಹೋಗಬೇಕಾಗಿದೆ. ಇದನ್ನು ತಿಳಿಸುವ ಜವಾಬ್ದಾರಿಯು ಬಸವಪರ ಸಂಘಟನೆಗಳ ಮೇಲಿದೆ ಎಂದರು.

ಪ್ರತಿದಿನ ನಡೆಯುವ ಕಾರ್ಯಕ್ರಮದ ವಿವರವಾದ ವರದಿಗಳನ್ನು ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ನಮ್ಮ ಕಾರ್ಯಕ್ರಮಕ್ಕೆ ಸಹಕರಿಸಬೇಕೆಂದು ಪತ್ರಕರ್ತ ಮಿತ್ರರಲ್ಲಿ ವಿನಂತಿಸಿಕೊಂಡರು.

ಬಸವ ಕೇಂದ್ರದ ಉಪಾಧ್ಯಕ್ಷರಾದ ಬಸವಲಿಂಗಪ್ಪ ಬಾದರ್ಲಿ ಮಾತನಾಡುತ್ತಾ, ಇಂದಿನ ಯುವಪೀಳಿಗೆ ಹಾಗೂ ನಾಗರಿಕ ಸಮಾಜ ಬಹುತೇಕವಾಗಿ ಮಧ್ಯ ಮತ್ತಿತರ ಮಾದಕ ವಸ್ತುಗಳು ಜೊತೆಗೆ ಆನ್ಲೈನ್ ಗೇಮ್, ಆನ್ಲೈನ್ ಬೆಟ್ಟಿಂಗ್ಗಳ ವ್ಯಸನಿಗಳಾಗಿದ್ದಾರೆ. ಕಾರಣ ಯುವ ಜನಾಂಗಕ್ಕೆ ಭವಿಷ್ಯದ ಬಗ್ಗೆ ಗಂಭೀರತೆ ಇಲ್ಲದಿರುವುದು. ಬದುಕು ಮತ್ತು ದೈಹಿಕ ಆರೋಗ್ಯ ಮನುಷ್ಯನಿಗೆ ಬಹಳ ಮುಖ್ಯ. ಆರೋಗ್ಯವಿಲ್ಲದ ಜೀವನ ಮತ್ತು ಆರೋಗ್ಯವಿಲ್ಲದ ಬದುಕು ನರಕವೇ ಸರಿ. ಇಂದಿನ ಯುವ ಪೀಳಿಗೆ ಅನೇಕ ರೀತಿಯ ವ್ಯಸನಗಳಿಗೆ ಬಲಿಯಾಗಿ ಅವಘಡವನ್ನು ತಂದುಕೊಳ್ಳುತ್ತಿದ್ದಾರೆ.

ಬಸವಾದಿ ಶರಣರ ವಚನಗಳ ಮೂಲಕ ಶಾಲಾ- ಕಾಲೇಜು, ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಹಾಗೂ ಹಲವು ಗ್ರಾಮೀಣ ಭಾಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಶರಣರ ಸಂದೇಶದ ಜೊತೆಗೆ ಯುವಕರನ್ನು ಜಾಗೃತಿಗೊಳಿಸುವ ಕಾರ್ಯಕ್ರಮ ಇದಾಗಿದೆ.

ಇಂದಿನ ದಿನಮಾನಗಳಲ್ಲಿ ಬಸವಾದಿ ಶರಣರ ಹಾಗೂ ಲಿಂಗಾಯತ ಧರ್ಮದ ಮೇಲೆ ಸಾಂಸ್ಕೃತಿಕ ಹಾಗೂ ರಾಜಕೀಯ ದಾಳಿಯು ನಡೆಯುತ್ತಿದೆ. ಬಸವಾದಿ ಶರಣರ ವಾರಸುದಾರರಾದ ನಾವು ಎಂದು ಹೇಳಿಕೊಳ್ಳುತ್ತಾ, ಶರಣ ಸಂದೇಶಗಳನ್ನು ಮರೆಮಾಚಿ ವಚನಗಳನ್ನು ವಿರೂಪಗೊಳಿಸಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಸವತತ್ವಕ್ಕೆ ದ್ರೋಹ ಬಗೆಯುವ ಶಕ್ತಿಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವು ಕೂಡ ಈ ಕಾರ್ಯಕ್ರಮದ ಮೂಲಕ ನಡೆಯಲಿದೆ.

ಇದೇ 19 ರಂದು ನಮ್ಮ ಭಾಗದಲ್ಲಿ ಬಸವತತ್ವವನ್ನು ಪ್ರಚಾರ ಮಾಡುವ ಮೂಲಕ ಲಿಂಗೈಕ್ಯರಾದ ಪಿ. ವೀರಭದ್ರಪ್ಪ ಕುರುಕುಂದ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಸ್ಥಳೀಯ ಗಣ್ಯರು, ಶರಣು ಬಂಧುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಆಗಸ್ಟ್ 30ರಂದು ಲಿಂಗಾಯತ ತತ್ವ ಹಾಗೂ ಬಸವೇಶ್ವರ ವಿಚಾರಗಳನ್ನು ಪ್ರಚುರಪಡಿಸಿ ಲಿಂಗೈಕ್ಯರಾದ ಡಾ. ಎಂ. ಎಂ. ಕಲಬುರ್ಗಿ ಶರಣರ ನೆನಪು ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯರಾದ ಗುಂಡಪ್ಪ ಬಳಿಗಾರ, ಚಂದ್ರೇಗೌಡ ಹರಟನೂರ, ಅಮರೇಶ ಪಿ. ಕುರುಕುಂದ ಹಾಗೂ ಚಂದ್ರಪ್ಪಣ್ಣ ಚೆನ್ನಳ್ಳಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
1 Comment
  • ಅತ್ಯುತ್ತಮವಾದ ಕಾರ್ಯಕ್ರಮ ಇಂದಿನ ಯುವ ಪೀಳಿಗೆಯ ಪರಿಸ್ಥಿತಿ ನೋಡಿದರೆ ಬಹಳ ದುಃಖ್ಖವಾಗುತ್ತದೆ. ಅನೇಕ ಯುವಕರು ದುಶ್ಚಟಗಳಿಗೆ ಬಲಿಯಾಗಿ ಮಧ್ಯಪಾನ ಜೂಜಾಟದಂತಹ ಅನೇಕ ಚಟುಗಳಿಗೆ ಬಲೆಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಇವರನ್ನು ಸರಿದಾರಿಗೆ ತರಲು ಈ ಕಾರ್ಯಕ್ರಮ ಸಹಕಾರಿಯಾಗುತ್ತದೆ ಈ ಕಾರ್ಯಕ್ರಮಕ್ಕೆ ಸರ್ವರು ಸಹಕರಿಸಿ ಯಶಸ್ವಿಗೊಳಿಸಲು ಸಹಕರಿಸಿ

Leave a Reply

Your email address will not be published. Required fields are marked *