ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 11
ಕಲಬುರಗಿ:
ಚಾಮರಸನ ಪ್ರಭುಲಿಂಗಲೀಲೆಯ ಆರು, ಏಳು, ಎಂಟು ಗತಿಯಲ್ಲಿ ನಿರ್ಮಾಯ ಪ್ರಭು ಯಾರು? ಎಂಬುದನ್ನು ವಿಮಳೆಯ ಮೂಲಕ ಹೇಳಿಸುವ ಪ್ರಸಂಗಗಳಿವೆ. ಮಾಯೆಯನ್ನು ಎಚ್ಚರಿಸುವ ಪ್ರಸಂಗಗಳನ್ನು ಎಣೆಯಲಾಗಿದೆ.
ವಿಮಳೆ ಮಾಯೆಯನ್ನು ಕರೆದುಕೊಂಡು ಗಿರಿಜೆಯ ಬಳಿಗೆ ಹೋದಾಗ ಅಲ್ಲಮನನ್ನು ಒಲಿಸಿಕೊಳ್ಳಲು ಸಾತ್ವಿಕ ಮಾರ್ಗ ಬೇಕು ಎಂದು ಪರಮೇಶ್ವರ ಹೇಳುತ್ತಾರೆ.
ಅಲ್ಲಮರ ಸ್ಥಿತಿಯ ಕುರಿತಾಗಿ ಬೇರೆಯವರು ಹೇಳುವುದಕ್ಕಿಂತ ಅಲ್ಲಮರ ದರ್ಶನ ಅವರ ವಚನಗಳಲ್ಲಿದೆ. ಅವರ ವಚನಗಳು ಬೆಳಕಿನ, ಬೆಳಗಿನ, ಬೆರಗಿನ ವಚನಗಳಾಗಿವೆ. ಕಣ್ಣಿಗೆ ಕಾಣುವ ಸತ್ಯವನ್ನು ತಮ್ಮಅಂತರಂಗದ ಆನುಭಾವಿಕ ನೆಲೆಯಲ್ಲಿ ಸತ್ಯದ ದರ್ಶನ ಮಾಡಿದ್ದಾರೆ.
ಮುಸುರೆಯ ಮಡಕೆಯ ನೊಣ ಮುತ್ತಿಕೊಂಡಿಪ್ಪಂತೆ
ಕಸವುಳ್ಳ ಹೊಲದಲ್ಲಿ ಪಶುಗಳು ನೆರೆದಿಪ್ಪಂತೆ
ಅನ್ನ ಉದಕ ಹೊನ್ನು ವಸ್ತ್ರವುಳ್ಳ ದೊರೆಯ ಬಾಗಿಲಲ್ಲಿ ಬಹುಭಾಷೆಯ ಹಿರಿಯರುಗಳು ನೆರೆದುಕೊಂಡಿಪ್ಪರು. ಗುಹೇಶ್ವರಾ
ನಿಮ್ಮ ಶರಣರು ಆಶಾಪಾಶವಿರಹಿತರು!
ಕಣ್ಣಿಗೆ ಕಾಣುವ ಎರಡು ಪ್ರಾಪಂಚಿಕ ಉದಾಹರಣೆ ಕೊಡುವ ಮೂಲಕ ಜಗದ ಜೀವಿಗಳ ಅಜ್ಞಾನದ ಆಶಾಪಾಶವನ್ನು ಕಂಡು ಮಾನವ ಜಗತ್ತನ್ನು ಎಚ್ಚರಿಸಿದ್ದಾರೆ.
ಊಟ ಮಾಡಿದ ಬಳಿಕ ತೊಳೆಯದೆ ಇಟ್ಟಿರುವ ಎಂಜಲು (ಮುಸುರೆ) ಮಡಕೆಯ ಸುತ್ತ ನೊಣಗಳು ಹೇಗೆ ಮುತ್ತಿಕೊಳ್ಳುತ್ತವೆಯೋ ಹಾಗೆ, ಲೌಕಿಕ ಸುಖ ಹಾಗೂ ಅಧಿಕಾರದ ಆಸೆಯುಳ್ಳ ಜನರು ಅಲ್ಪಸುಖಕ್ಕಾಗಿ ಅಲೆಯುತ್ತಾರೆ.
ಕಸದ ಹೊಲ ಮತ್ತು ಪಶುಗಳು: ಕಸಕಡ್ಡಿ ತುಂಬಿದ ಹೊಲದಲ್ಲಿ ಪ್ರಾಣಿಗಳು ಮೇವಿಗಾಗಿ ಗುಂಪುಗೂಡುವಂತೆ, ಲಾಲಸೆ ಉಳ್ಳವರು ಒಡವೆ, ವಸ್ತುಗಳ ಹಿಂದೆ ಬೀಳುತ್ತಾರೆ. ಆದರೆ ದೇವರ (ಗುಹೇಶ್ವರನ) ನಿಜವಾದ ಶರಣರು ಇಂತಹ ಯಾವುದೇ ಲೌಕಿಕ ಆಸೆಗಳ ಪಾಶಕ್ಕೆ ಸಿಲುಕದೆ, ಎಲ್ಲ ಆಸೆಗಳಿಂದ ಮುಕ್ತರಾಗಿ ನಿರಾಳವಾಗಿರುತ್ತಾರೆ.
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಚಿತ್ತಾರದಲ್ಲಿ ನಿರಪೇಕ್ಷೆ, ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರರಂತೆ ಅಲ್ಲಮರು ನಡೆದರು.
ಹೀಗೆ ಬಯಲ ತತ್ವವನ್ನು ಭೋದಿಸುತ್ತ ವಿದ್ವಾಂಸ, ಜ್ಞಾನಿಗಳೊಂದಿಗೆ ಚರ್ಚೆ, ಸಂವಾದ ನಡೆಸುತ್ತ ಸನ್ಮಾರ್ಗ ತೋರಿಸುತ್ತ ಮಾಯೆಯನ್ನು ಗೆದ್ದು ಪೂರ್ವಾಶ್ರಮವನ್ನು ಧಿಕ್ಕರಿಸಿ ಬನವಸೆ, ಬಳ್ಳಿಗಾವೆ ತೊರೆದು ಲೋಕ ಸಂಚಾರಗೈಯುತ್ತಾರೆ.
