ಪ್ರವಚನ: ಪ್ರಭುಲಿಂಗ ಲೀಲೆ ಸತ್ಯ ಶರಣರ ಕಥೆ

ಬಸವ ಮೀಡಿಯಾ
ಬಸವ ಮೀಡಿಯಾ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 4

ಕಲಬುರಗಿ

ಶರಣರು ತುತ್ತಿನ ಚೀಲದ ಹೋರಾಟದ ಜಗತ್ತಿನ ದೊಡ್ಡ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ವೀರ ವೈರಾಗ್ಯನಿಧಿ ಅಕ್ಕಮಹಾದೇವಿ ‘ಹಸಿವಾದೊಡೆ ಬಿಕ್ಷಾನ್ನಗಳುಂಟು’ ಎಂದು ಹೇಳಿದರೆ, ಜೇಡರ ದಾಸಿಮಯ್ಯನವರು ಒಡಲುಗೊಂಡವ ಹಸಿವ … ನಿನೊಮ್ಮೆ ಒಡಲುಗೊಂಡು ನೋಡು ಎಂದು ದೇವರಿಗೆ ಪ್ರಶ್ನೆ ಮಾಡಿದ್ದಾರೆ.

 ‘ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ ವಿಷವೇರಿತ್ತಯ್ಯ ಅಪಾದ‌ ಮಸ್ತಕಕ್ಕೆ’ ಎಂದು ತುತ್ತಿನ ಚೀಲ ತುಂಬಿಸಿಕೊಳ್ಳುವ ಅವಶ್ಯಕತೆ ಕುರಿತು ಹೇಳಿದ್ದಾರೆ.

ಇದನ್ನೇ ಅಲ್ಲಮಪ್ರಭುಗಳು ಈ ಲೌಕಿಕ ಜಗತ್ತಿನ ವಿಷಯ ಭೋಗದಲ್ಲಿ ಬಿದ್ದು ತೆತ್ತಿಸಕೋಟಿ ಜನ ಒದ್ದಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾನವನಾದಿಯಾಗಿ ಪ್ರಾಣಿ, ಪಶು, ಪಕ್ಷಿಗಳು ಕೂಡ ತುತ್ತಿನ ಚೀಲದ ಹೋರಾಟ ನಡೆಸಿರುವುದನ್ನು ನಾವು ಕಾಣಬಹುದು.‌ ಅನ್ನಕ್ಕಾಗಿ ಹಪಹಪಿಸುವವರನ್ನು, ತಿನ್ನಲಿಕ್ಕೆ ಅನ್ನವಿಲ್ಲದವರನ್ನು, ಒಂದು ತುತ್ತಿಗೂ ಗತಿ ಇಲ್ಲದವರನ್ನು ಇಂದಿನ ಮಾನವ ಸಮಾಜದಲ್ಲಿ ನೋಡಬಹುದು. ಹೀಗಾಗಿ ಅನ್ನ ಕೆಡಿಸಬಾರದು ಎಂದು ಶರಣರು ಹೇಳಿದ್ದಾರೆ. ಪ್ರಸಾದ ತತ್ವವನ್ನು ಆವರು ಹೇಳಿಕೊಟ್ಟಿದ್ದಾರೆ. ಪ್ರಸಾದ ಎಲ್ಲರಿಗೂ ಪ್ರಸನ್ನತೆ ಕೊಡಬಲ್ಲದು.

ಕಾಯಕ ಮತ್ತು ದಾಸೋಹ ಈ ಎರಡು ಜೀವನ ಸಿದ್ಧಾಂತ ಬೋಧಿಸಿದ ಶರಣರು ಕಾಯಕದಿಂದ ಬಂದುದರಲ್ಲಿ ಉಣಿಸಿ ಉಣ್ಣುವ ಭಾವ-ಭಕ್ತಿಯನ್ನು ಕಲಿಸಿದರು. ಅಂತೆಯೇ ಉಣಲು ಕಲಿಸಿದ ಬಸವಣ್ಣ, ಉಡಲು ಕಲಿಸಿದ ಬಸವಣ್ಣ ಎಂದು ಹೇಳುತ್ತೇವೆ.  ಡಿವಿಜಿಯವರು ‘ನೀನು ಉಣ್ಣುವ ಅನ್ನ ಶ್ರಮದ ಬೆವರೇ? ಪರರ ಕಣ್ಣೀರೆ? ಎಂಬ ವಿವೇಚನಾತ್ಮಕ ನುಡಿಗಳನ್ನು ಹೇಳಿದ್ದಾರೆ.

ಯಜ್ಞ, ಯಾಗದ ನೆಪದಲ್ಲಿ ಅಗ್ನಿಗೆ ಆಹುತಿ ಮಾಡುವ ಪ್ರೋಟಿನ್ ಯುಕ್ತ ಪದಾರ್ಥಗಳನ್ನು ಬಡವರ ಜಠರಾಗ್ನಿಗೆ ಹಾಕಬೇಕು. ಅನ್ನವಿಲ್ಲದವರಿಗೆ ಅನ್ನ ಹಾಕಿದರೆ ಉಂಡವರಿಗೆ ಮತ್ತು ಉಣಿಸಿದವರಿಗೆ ಇಬ್ಬರಿಗೂ ತೃಪ್ತಿ ಭಾವ, ಭಕ್ತಿ ಭಾವ ಮೂಡಬಲ್ಲುದು.

ಉಂಡು ಉಂಡು ಹೋಗುವವರ ನೋಡಿ ನೋಡಿ

ನಾಚಿತ್ತಯ್ಯಾ ಎನ್ನ ಮನ.

ಎಡಹಿ ಎಡಹಿ ಹೋಗುವವರ ನೋಡಿ ನೋಡಿ

ನಾಚಿತ್ತಯ್ಯಾ ಎನ್ನ ಮನ.

ಉಣದೆ ಎಡಹದೆ ಹೋದಡೆ ಅವರೆ ಬಸವಾದಿ ಪ್ರಮಥರೆಂಬೆ;

ಅವರೆ ನೀವೆಂದು ಭಾವಿಸುವೆನಯ್ಯಾ,

ಕಪಿಲಸಿದ್ಧಮಲ್ಲಿಕಾರ್ಜುನಾ!

ಯಾರು ಉಣ್ಣಬೇಕು? ಯಾವುದನ್ನು ಉಣ್ಣಬೇಕು, ಏಕೆ ಉಣ್ಣಬೇಕು ಎಂಬ ಅನ್ನದ ಮಹತ್ವ ಸಾರಿದ ಶರಣರು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನನ ಸ್ವರೂಪರು ಕರೆದಿದ್ದಾರೆ. ಹೀಗೆ ಚಾಮರಸನ ಪ್ರಭುಲಿಂಗಲೀಲೆಯ ಪ್ರಥಮ ಗತಿಯಲ್ಲಿ ಫ್ರಭುವಿನ ಮಹತಿಯ ಜೊತೆಗೆ ಸತ್ಯ ಶರಣರ ಕಥೆ ಹೇಳುವಂತಿದೆ ಹೊರತು ಸತ್ತವರ ಸಾಯುವವರ ಕಥೆ ಅಲ್ಲ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *