ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 13
ಕಲಬುರಗಿ:
ಸಂಗದಿಂದಲ್ಲದೆ ಅಗ್ನಿ ಹುಟ್ಟದು
ಸಂಗದಿಂದಲ್ಲದೆ ಬೀಜ ಮೊಳೆದೋರದು
ಸಂಗದಿಂದಲ್ಲದೆ ದೇಹವಾಗದು
ಸಂಗದಿಂದಲ್ಲದೆ ಸರ್ವಮುಖದೋರದು. ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣರ ಅನುಭಾವ ಸಂಗದಿಂದಾನು ಪರಮಸುಖಿಯಾದೆನಯ್ಯಾ.
ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರಿದರೂ ಪ್ರಾಕೃತಿಕ ಸತ್ಯ ಬದಲಾಯಿಸಲು ಸಾಧ್ಯವಿಲ್ಲ. ಎಲ್ಲದಕ್ಕೂ ಇತಿ ಮಿತಿ ಇದೆ. ಶರಣರು ಪ್ರಾಕೃತಿಕ ಧರ್ಮ ಬೋಧಿಸಿದರು.
ಇದನ್ನೇ ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ ತಿಳಿಸಿದ್ದಾರೆ.
ಮೂರು ತಿಂಗಳಿಗೆ ಛಾಯಾತ್ಮ, ಆರು ತಿಂಗಳಿಗೆ ದೇಹಾತ್ಮ, ಒಂಭತ್ತು ತಿಂಗಳಿಗೆ ಜೀವಾತ್ಮ ಎನ್ನುವಂತೆ ಗರ್ಭಧರಿಸಿದ ಸುಮತಿಗೆ ಎಂಟನೆ ತಿಂಗಳಿಗೆ ಗರ್ಭಕ್ಕೆ ಲಿಂಗಧಾರಣೆ ಮಾಡಲಾಗುತ್ತದೆ.
ಚರಿತ್ರೆಯ ನಾಯಕಿ ಜಗತ್ತಿಗೆ ಬರುವ ಸಂಗತಿಯನ್ನು ನವಮಾಸ, ನವದಿನ ಕಳೆದ ಮೇಲೆ ಸುಮತಿಗೆ ಹೆಣ್ಣು ಮಗುವಿನ ಜನನವಾಗುತ್ತದೆ. ಆಕೆ ಹುಟ್ಟಿದಾಗ ಸೃಷ್ಟಿಯೇ ಹೂ ಮಳೆ ಸುರಿಸಿತು, ಬೆಳಕು ತಾನೆ ಮೂಡಿತು, ಅಜ್ಞಾನವು ವಿವೇಕವಾಗಿ ಪರಿವರ್ತನೆ ಆಯಿತು. ಆ ಮಗು ಅಸಾಮಾನ್ಯವಾಗಿತ್ತು.
ಹೆತ್ತುಗೆಗೆ ಶಿವಯೋಗ
ರಾಜ್ಯದ ಪಟ್ಟಗಟ್ಟುವರಂತೆ
ನೊಸಲಿನೋಳ್ ಅಮಳ ವಿಭೂತಿಯ
ಭವ ಭಯದ ಸೋಂಕುಗಳು ಹುಟ್ಟದಂತಿರೆ
ರಕ್ಷೆಯಂದದಿ ಕಟ್ಟಿದರು ಕಂಠದಲಿ ಲಿಂಗವ,
ಎಂದು ಚಾಮರಸನು ಬಹಳ ಅದ್ಭುತವಾಗಿ ಹೇಳುತ್ತಾನೆ. ‘ತೊಟ್ಟಿಲಲ್ಲಿ ಮಲಗಿದ ಮಗು ತೊಳೆದ ಮುತ್ತನು ಕಂಡಳು, ಹೊಟ್ಟೆ ಮೇಲಾಗಿ ಮಲಗ್ಯಾಳ ದೃಷ್ಟಿಯ ಬೊಟ್ಟು ಇಟ್ಟೇನ’ ಎನ್ನುವಂತೆ ಸುಮತಿ ಮಗುವನ್ನು ಮುದ್ದಾಡುತ್ತ ಎದೆ ಹಾಲುಣಿಸುತ್ತ ಬೆಳೆಸಿದಳು.
ನಂತರದಲ್ಲಿ ಆರಾಧನೆಯ ಜೊತೆಗೆ ತೊಟ್ಟಿಲೋತ್ಸವ ಕೂಡ ನಡೆಯಿತು. ಮಹಾದೇವಿ ಎಂದು ಹೆಸರಿಟ್ಟರು ಎಂಬುದನ್ನು ಚಾಮರಸ ಅತ್ಯಂತ ಹೃದಯಂಗಮವಾಗಿ ವರ್ಣಿಸುತ್ತಾನೆ. ಮುಂದೆ ಅಕ್ಕನಿಗೆ ಧರ್ಮ ಸಂಸ್ಕಾರದ ಅರಿವನ್ನು ಗುರುಲಿಂಗ ದೇವರು ನೀಡುತ್ತಾರೆ. ಹೀಗೆ ಪರಮ ಪ್ರೀತಿಯಿಂದ ಮಹಾದೇವಿ ಬೆಳೆಯುತ್ತಾಳೆ.
ಕೊನೆಗೆ ಯೌವನಾವಸ್ಥೆಗೆ ಕಾಲಿಡುತ್ತಾಳೆ ಎಂಬಲ್ಲಿಗೆ ಈ ಗತಿ ಮುಗಿದು ಹೋಗುತ್ತದೆ.
