ವಿಶ್ವೇಶ್ವರ ಭಟ್ಟರೇ, ನಾವು ಪುಸ್ತಕ ಸುಡಂಗಿಲ್ಲರಿ, ಓದ್ತೀವಿ.
ಬೆಂಗಳೂರು
ನಮ್ಮ ರಾಜಕಾರಣಿಗಳನ್ನ ನೋಡೀರಲ್ಲ. ಬಂಧನದ ವಾರಂಟ್ ಬಂದ ದಿನನ ಎದಿ ನೋವು ಶುರು ಆಗ್ತದ. ಆಂಬುಲೆನ್ಸ್, ಐಸಿಯು, ಕೈಯಾಗ ಡ್ರಿಪ್, ಟಿವಿಯಾಗ ಬ್ರೇಕಿಂಗ್ ನ್ಯೂಸ್. ಕೇಸ್ ತಣ್ಣಗಾದ ಮರುದಿನನ ಅದೇ ಸಾಹೇಬರು ಮದುವಿ ಮನ್ಯಾಗ ಹೋಳಿಗಿ ತುಪ್ಪ ಹೊಡೀತಿರ್ತಾರ.
ನಮ್ಮ ಪಡ್ಡೆ ಸಾಹೇಬರಿಗೂ ಅದೇ ಕಾಯಿಲೆ ಬಡದದ, ಆದ್ರ ಸ್ವಲ್ಪ ಬ್ಯಾರೆ ತರದ್ದು.
ಇದಕ್ಕ “ಸಂದರ್ಭದಿಂದ ಹೊರತೆಗೆದ ಎದಿನೋವು” ಅಂತಾರ. ಒಂದೂವರಿ ತಾಸು ಕ್ಯಾಮೆರಾ ಮುಂದ ಕುಂತು ತಾವೇ ಮಾತಾಡಿದ್ದು, ಈಗ ನೋಡಿದ್ರ “taken out of context”! ಜೋಡಿಗೆ ಬಸವಣ್ಣನವರ ಬಗ್ಗೆ “great respect” ಅನ್ನೋ ಡ್ರಿಪ್ ಬ್ಯಾರೆ ಹಚ್ಚಿಕೊಂಡಾರ.
ಡಾಕ್ಟರ ಸಾಹೇಬರೇ, ಈ ರೋಗಿಗೆ ಬೇಕಾದದ್ದು ಒಂದ ಗುಳಿಗಿ. ಅದರ ಹೆಸರು “ತಪ್ಪಾತು”. ಆ ಗುಳಿಗಿ ಮಾತ್ರ ನುಂಗಾಕ ತಯಾರಿಲ್ಲ.
ಒಂದು ವಾರದಾಗ ಏನಾತು ನೋಡ್ರಿ. ಒಬ್ಬರೂ ಬೈಗುಳ ಬರೀಲಿಲ್ಲ, ಒಂದು ಕಲ್ಲೂ ಎಸೀಲಿಲ್ಲ. ಬರೀ ವಚನ, ದಾಖಲೆ, ನಮ್ಮ ಧ್ವನಿ. ಅಷ್ಟಕ್ಕ ಚಿಕಾಗೋದ ಪಂಡಿತರು ಕುಂತು ಸ್ಪಷ್ಟನೆ ಬರೆಯೋ ಹಂಗಾತು.
ಇದು ಬಸವಣ್ಣ ಕಲಿಸಿದ ಹೋರಾಟದ ರೀತಿ, ಮತ್ತ ಇದು ಗೆದ್ದದ.
ಬೀದರದಿಂದ ಚಾಮರಾಜನಗರದ ತನಕ, ಮಠದ ಗದ್ದುಗಿಯಿಂದ ಹೊಲದ ಬದುವಿನ ತನಕ ಒಂದೇ ಧ್ವನಿ ಎದ್ದಿತ್ತು. ಆ ಧ್ವನಿಗೆ ಉತ್ತರ ಕೊಡಲಾರದ ಇರಾಕ ಅವರಿಗೆ ಆಗಲಿಲ್ಲ.
ಪುಸ್ತಕ ಬಿಡುಗಡೆ ದಿನ ವೇದಿಕೆ ಮ್ಯಾಲೆ ನಿಂತು ಸಾಹೇಬರು ಏನಂದಿದ್ರು ನೆನಪೈತೇನು?
ನನ್ನ ಪುಸ್ತಕದಾಗ ಆಧಾರ ಇಲ್ಲದ ಒಂದು ವಾಕ್ಯಾನೂ ಇಲ್ಲ. ಸಂದರ್ಶನದಾಗ ಎದಿ ತಟ್ಟಿಕೊಂಡು “ವೈಜ್ಞಾನಿಕ ಮಾನ್ಯತೆ ಪಡೆದಂತಹ ಸಾಕ್ಷಿ ಪುರಾವೆಗಳನ್ನು ನಾನು ಕೊಡ್ತಾ ಬಂದಿದ್ದೇನೆ” ಅಂದ್ರು.
ಈಗ ಆ ಪುರಾವೆ ಬಂದದ. ಅದು ಅವರದಲ್ಲ, ಬ್ರಿಟಿಷ್ ಕಾಲದ ಬಿ.ಎಲ್. ರೈಸ್ ಸಾಹೇಬರ ಮೈಸೂರು ಗೆಜೆಟಿಯರ್, ಪುಟ 332. ಮಳಿ ಬಂದಾಗ ಓಡಿ ಹೋಗಿ ಪಕ್ಕದ ಮನಿಯವರ ಕೊಡಿ ಕೆಳಗ ನಿಂತಂಗ.
ಒಂದೂವರಿ ತಾಸಿನ ಸಂದರ್ಶನ ನಾ ಶಬ್ದ ಶಬ್ದ ಹುಡುಕಿದೆ. ರೈಸ್ ಇಲ್ಲ, ಗೆಜೆಟಿಯರ್ ಇಲ್ಲ, ಜೈನ ಕಾವ್ಯ ಇಲ್ಲ.
51ನೇ ನಿಮಿಷದಾಗ ಇರೋದು ಸಾಹೇಬರ ಸ್ವಂತ ತೀರ್ಪು. ಬಸವಣ್ಣ ಬಿಜ್ಜಳನ ಖಜಾನೆ ದಾಸೋಹಕ್ಕ ಬಳಸಿದ, ಅದು “ಕಳಬೇಡ”ಕ್ಕ ವೈರುಧ್ಯ ಅಂತ. ಅವರೇ ಕೊಟ್ಟ ರೈಸ್ ಪುಟದಾಗ ಖಜಾನೆ ಮಾತೂ ಇಲ್ಲ, ದಾಸೋಹದ ಮಾತೂ ಇಲ್ಲ.
ಪರೀಕ್ಷೆಯಾಗ ಕಾಪಿ ಹೊಡದು ಸಿಕ್ಕಬಿದ್ದ ಹುಡುಗ ರಿಸಲ್ಟ್ ಬಂದಮ್ಯಾಲೆ ಬ್ಯಾರೆ ಪುಸ್ತಕ ತಂದು “ಸರ್, ಇದರಾಗ ಅದ” ಅಂದಂಗಾತು.
ಪರೀಕ್ಷೆಯಾಗ ಕಾಪಿ ಹೊಡದು ಸಿಕ್ಕಬಿದ್ದ ಹುಡುಗ ರಿಸಲ್ಟ್ ಬಂದಮ್ಯಾಲೆ ಬ್ಯಾರೆ ಪುಸ್ತಕ ತಂದು “ಸರ್, ಇದರಾಗ ಅದ” ಅಂದಂಗಾತು.
ಇನ್ನ ಮಜಾ ಕೇಳ್ರಿ. ಸಾಹೇಬರ ಸ್ಪಷ್ಟನೆನ ಹೇಳ್ತದ, ಆ ಕಥಿಗೆ ಆಧಾರ ಜೈನ ಕಾವ್ಯ. ಬಿಜ್ಜಳ ಜೈನ. ಅಂದ್ರ ಬಿಜ್ಜಳನ ಮತದವರು ಬರದ ಕಾವ್ಯಾನ ಬಸವಣ್ಣನ ಮ್ಯಾಲಿನ ತೀರ್ಪು! ಬಿಜ್ಜಳನ ಸಾವಿನ ಬಗ್ಗೆ “Accounts differ” ಅಂತ ರೈಸ್ ಅವರೇ ಬರದಾರ.
ರೈಸ್ ಪ್ರಕಾರನ ಬಸವ ಪುರಾಣ ಹೇಳೋದು ಮೂವರು ಅನುಯಾಯಿಗಳ ಬಗ್ಗೆ, ಬಸವಣ್ಣ ಕೊಲ್ಲಿಸಿದ ಅಂತ ಅಲ್ಲ. ತಾವು ತಂದ ಸಾಕ್ಷಿನ ತಮ್ಮ ವಿರುದ್ಧ ಸಾಕ್ಷಿ ಹೇಳ್ತದ ಅಂದ್ರ ಇದಕ್ಕಿಂತ ದೊಡ್ಡ ಮುಜುಗರ ಏನದ?
ಸ್ಪಷ್ಟನೆ ಇಷ್ಟು ಉದ್ದ ಐತಿ, ಆದ್ರ ಒಂದು ಶಬ್ದದ ಮುಂದ ಬಾಯಿ ಬಂದ್. “ಲಿಂಗಾಹತ.”
ಸಂದರ್ಶನದಾಗ “ನಾನ ಅವರನ್ನ ಲಿಂಗಹತಿಗಳು ಅಂತೇನೆ” ಅಂದ್ರು. ಗುಂಡಿಗೆ ಬಲಿಯಾದ ಕಲಬುರ್ಗಿ ಸರ್ಗೆ “ಲಿಂಗಹತರ ಪರಮ ಗುರು” ಅಂದ್ರು. ಈ ಶಬ್ದಕ್ಕ ಯಾವ ಗೆಜೆಟಿಯರ್, ಯಾವ ಪುಟ ಸಾಹೇಬರೇ?
ಅವಮಾನ ಕನ್ನಡದಾಗ ಮಾಡಿದ್ರಿ, ಸ್ಪಷ್ಟನೆ ಇಂಗ್ಲಿಷ್ನ್ಯಾಗ ಕೊಟ್ರಿ. “ಅವರಿಗೆ ಇಂಗ್ಲಿಷ್ ಬರಲ್ಲ” ಅಂತ ಸಂದರ್ಶನದಾಗ ನೀವೇ ನಕ್ಕಿದ್ರಿ. ಮುಂಜಾನೆ ಲಿಂಗ ಹಿಡಕೊಂಡು ಕುಂತ ನಮ್ಮ ಅಜ್ಜಿಗೆ ನಿಮ್ಮ ಇಂಗ್ಲಿಷ್ ಓದಾಕ ಬರಂಗಿಲ್ಲ, ಆದ್ರ ಅವಮಾನ ಏನಂತ ಮಾತ್ರ ಪೂರಾ ತಿಳದದ.
ವಿಶ್ವೇಶ್ವರ ಭಟ್ಟರೇ, ಪುಸ್ತಕ ಸುಟ್ಟು ವಿಚಾರ ಹತ್ತಿಕ್ಕಾಕ ಆಗಂಗಿಲ್ಲ ಅಂತ ಪೇಪರಿನ್ಯಾಗ ದೊಡ್ಡ ತಲೆಬರಹ ಹಾಕಿದ್ರಿ. ನಾವು ಸುಡಂಗಿಲ್ಲರಿ, ಓದ್ತೀವಿ. ಓದಿದ್ದಕ್ಕನ ನಿಮ್ಮ ಲೇಖಕರು ಇಂಗ್ಲಿಷ್ ಸ್ಪಷ್ಟನೆ ಬರೆಯೋ ಹಂಗಾತು.
“ಇದು ಲಿಂಗಾಹತ ಪ್ರತ್ಯೇಕ ಧರ್ಮಕಾರಣದ ಕರ್ಮಕಾಂಡ!” ಅನ್ನೋ ತಲೆಬರಹ ಅಚ್ಚಾದದ್ದು ನಿಮ್ಮ ವಿಶ್ವವಾಣಿಯಾಗ. ಹಂಜ ಸಾಹೇಬರು ಚಿಕಾಗೋಕ್ಕ ವಾಪಸ್ ಹೋಗಬಹುದು. ನಿಮ್ಮ ಪತ್ರಿಕೆ ಇಲ್ಲೇ ಇರ್ತದ, ನಾವೂ ಇಲ್ಲೇ ಇರ್ತೀವಿ. ನಮ್ಮ ಬೇಡಿಕೆ ದೊಡ್ಡದಲ್ಲ.
“ಲಿಂಗಾಹತ” ಶಬ್ದ ಹಿಂಪಡೀರಿ. ಕನ್ನಡದಾಗ, ನಿಮ್ಮ ಪತ್ರಿಕೆಯಾಗ ಸ್ಪಷ್ಟನೆ ಹಾಕ್ರಿ. ನಮ್ಮ ಉತ್ತರಕ್ಕೂ ಅಷ್ಟ ಜಾಗ ಕೊಡ್ರಿ. ಅಲ್ಲೀತನಕ ವಚನ, ದಾಖಲೆ, ಪತ್ರ ಹಿಡಕೊಂಡು ನಾವು ಬರ್ತಾನ ಇರ್ತೀವಿ. ಬೈಗುಳ ಬ್ಯಾಡ, ದಾಖಲೆ ಸಾಕು. ಒಂದು ವಾರದಾಗ ಏನಾತು ನೋಡೀರಲ್ಲ.
“ಲಿಂಗಾಹತ” ಶಬ್ದ ಹಿಂಪಡೀರಿ. ಕನ್ನಡದಾಗ, ನಿಮ್ಮ ಪತ್ರಿಕೆಯಾಗ ಸ್ಪಷ್ಟನೆ ಹಾಕ್ರಿ. ನಮ್ಮ ಉತ್ತರಕ್ಕೂ ಅಷ್ಟ ಜಾಗ ಕೊಡ್ರಿ.
ಎಂಟನೂರು ವರ್ಷದ ಹಿಂದ ಶರಣರು ವಚನದ ಕಟ್ಟು ಹೆಗಲ ಮ್ಯಾಲೆ ಹೊತ್ತು ಕಾಪಾಡಿದ್ರು. ಇವತ್ತ ಅದೇ ವಚನ ಎದಿಗೆ ಅವಚಿಕೊಂಡು ನಾವು ನಿಂತೀವಿ. ಕಲ್ಯಾಣ ಮತ್ತೊಮ್ಮೆ ಎದ್ದದ.
ಬಸವ ಕರುಳಿನ ಬಳ್ಳಿಗಳೇ ! ಈಗ ಹೇಳ್ರಿ. ಈ ಇಂಗ್ಲಿಷ್ ಸ್ಪಷ್ಟನೆ ನಿಮಗ ಸಮಾಧಾನ ತಂತೇನು, ಹೌದು ಅಥವಾ ಇಲ್ಲ? ವಿಶ್ವವಾಣಿಗೆ ಪತ್ರ ಬರೆಯಾಕ ರೆಡಿ ಇದ್ರ ನಿಮ್ಮ ಊರಿನ ಹೆಸರು ಬರೀರಿ.
