ಬಸವನಬಾಗೇವಾಡಿ :
ವಚನ ಸಾಹಿತ್ಯದ ಉಳಿವಿಗಾಗಿ ಜೀವನವನ್ನೇ ತ್ಯಾಗ ಮಾಡಿ ನಮಗಾಗಿ ವಚನ ಸಾಹಿತ್ಯ ಸಿಗುವಂತೆ ಮಾಡಿದ ಕೀರ್ತಿ ಚಿನ್ಮಯಜ್ಞಾನಿ ಚನ್ನಬಸವಣ್ಣನವರಿಗೆ ಸಲ್ಲುತ್ತದೆ ಎಂದು ಸಾಹಿತಿ ಹಾಗೂ ಶಿಕ್ಷಕ ಬಸವರಾಜ ಹಂಚಲಿ ಬೇನಾಳ ಹೇಳಿದರು.

ಸ್ಥಳೀಯ ಲಕ್ಷ್ಮಿ ನಗರದಲ್ಲಿ ತಾಲೂಕ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಲಕ್ಷ್ಮಿ ದೇವಾಲಯ ಜಾತ್ರಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಚನ್ನಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಜಗತ್ತಿನ ಇತಿಹಾಸದಲ್ಲಿ ಸಮಾನತೆಯನ್ನು ಸಾರಿದ ಬಸವಾದಿ ಶರಣರು ಮಾಡಿದ ಕ್ರಾಂತಿ ಇಡೀ ಜಗತ್ತಿನ ಇತಿಹಾಸದಲ್ಲಿ ನಮಗೆಲ್ಲಿಯೂ ಸಿಗುವುದಿಲ್ಲ. ವಯಸ್ಸಿನಲ್ಲಿ ಚಿಕ್ಕವನಾದರೂ ಕೂಡ ಜ್ಞಾನದಲ್ಲಿ ಅತಿ ಎತ್ತರದಲ್ಲಿ ಶರಣ ಚನ್ನಬಸವಣ್ಣ ಇದ್ದರು ಎಂದು ಹೇಳಿದರು.

ಶರಣರ ವಿಚಾರಗಳು ಅವರು ಕೊಟ್ಟ ನೈತಿಕ ಮೌಲ್ಯಗಳನ್ನು ನಮ್ಮ ಯುವ ಜನಾಂಗಕ್ಕೆ ತಿಳಿಸುವ ಅವಶ್ಯಕತೆ ಇದೆ ಎಂದು ಹಂಚಲಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಬಸನಗೌಡ ಪಾಟೀಲ ಹರನಾಳ ಮಾತನಾಡಿ, ಶರಣರ ವಿಚಾರಗಳನ್ನು ಮನೆ ಮನೆಗೆ ಮುಟ್ಟಿಸುವ ಜವಾಬ್ದಾರಿಯನ್ನು ನಾವೆಲ್ಲ ಒಟ್ಟಾಗಿ ಮಾಡಬೇಕಾಗಿದೆ. ಶರಣರ ನಿಜವಾದ ತತ್ವಗಳನ್ನು ಮುಟ್ಟಿಸುವ ಕೆಲಸ ನಮ್ಮದಾಗಿದೆ. ಇಡೀ ಜಗತ್ತಿನಲ್ಲಿ ಯಾವುದೇ ಸಾಹಿತ್ಯ ಪ್ರಕಾರದಲ್ಲಿ ಇರಲಾರದ ಸಾಹಿತ್ಯ ವಚನ ಸಾಹಿತ್ಯದಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾದ ಎಂ.ಜಿ. ಆದಿಗೊಂಡ ವಹಿಸಿದ್ದರು. ಕಾರ್ಯಕ್ರಮದ ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮಿಗಳು ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಹಾಸಭಾದ ತಾಲೂಕು ಘಟಕದ ಪ್ರಧಾನಕಾರ್ಯದರ್ಶಿಯಾದ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿದರು.
ವೇದಿಕೆಯ ಮೇಲೆ ಜಾತ್ರಾ ಕಮಿಟಿ ಅಧ್ಯಕ್ಷರಾದ ಶ್ರೀಶೈಲ ಸಿದ್ದರಾಮಪ್ಪ ಕುಂಬಾರ, ಅಶೋಕ ಬಡಿಗೇರ, ಲಕ್ಷ್ಮಣ ಅಂಬಿಗೇರ, ರಾಜಕುಮಾರ ಹೊನವಾಡ, ಈರಪ್ಪ ಕುಂಬಾರ, ಮೊದಲಾದವರು ಉಪಸ್ಥಿತರಿದ್ದರು.

ಚಂದ್ರು ಹದಿಮೂರು ಸ್ವಾಗತಿಸಿದರು. ಪಿ.ಎಸ್. ಬಾಗೇವಾಡಿ ಶರಣು ಸಮರ್ಪಿಸಿದರು.ಶಕೊಟ್ರೇಶ ಹೆಗಡ್ಯಾಳ ಹಾಗೂ ಶಿವು ಮಡಿಕೇಶ್ವರ ಕಾರ್ಯಕ್ರಮ ನಿರೂಪಿಸಿದರು.
