ಜಾತ್ರಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ, ಸನ್ಮಾನ
ಬಸವನಬಾಗೇವಾಡಿ:
ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು. ಬರುವ ಶ್ರಾವಣ ಮಾಸದಲ್ಲಿ ಆಗಸ್ಟ್ 31 ರಿಂದ ಸೆಪ್ಟಂಬರ್ 4 ರವರೆಗೆ ನಡೆಯಲಿರುವ ಪಟ್ಟಣದ ಆರಾಧ್ಯದೈವ ಬಸವೇಶ್ವರ ಜಾತ್ರಾಮಹೋತ್ಸವದ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.
ಅಧ್ಯಕ್ಷರಾಗಿ ಶ್ರೀಕಾಂತ ಕೊಟ್ರಶೆಟ್ಟಿ, ಉಪಾಧ್ಯಕ್ಷರಾಗಿ ರವಿ ನಾಯ್ಕೋಡಿ, ಭದ್ರು ಮಣ್ಣೂರ, ಅರವಿಂದ ಗೊಳಸಂಗಿ, ಅಮರ ಗಾಯಕವಾಡ, ಖಜಾಂಚಿಯಾಗಿ ರಮೇಶ ಬನಾಶಿ, ಕಾರ್ಯದರ್ಶಿಯಾಗಿ ಸುರೇಶ ಹಾರಿವಾಳ, ಸಂಚಾಲಕರಾಗಿ ಡಾ. ಜಗದೀಶ ನಿಡಗುಂದಿ ಅವರನ್ನು ಆಯ್ಕೆಗೊಂಡರು.

ಪಟ್ಟಣದ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ಬಸವೇಶ್ವರ ಸೇವಾ ಸಮಿತಿಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾತ್ರಾಮಹೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡುವಾಗ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಅವರು ಜಾತ್ರಾ ಸಮಿತಿಯ ಪದಾಧಿಕಾರಿಗಳಾಗಲು ಇಚ್ಚಿಸುವವರು ತಮ್ಮ ಹೆಸರನ್ನು ನೀಡಬೇಕೆಂದಾಗ ಅಧ್ಯಕ್ಷ ಸ್ಥಾನಕ್ಕೆ ಐದು ಜನ, ಉಪಾಧ್ಯಕ್ಷ ಸ್ಥಾನಕ್ಕೆ ಐದು ಜನ, ಕಾರ್ಯದರ್ಶಿ ಸ್ಥಾನಕ್ಕೆ ಎರಡು ಜನ, ಖಜಾಂಚಿ ಸ್ಥಾನಕ್ಕೆ ಒಬ್ಬರು, ಸಂಚಾಲಕ ಸ್ಥಾನಕ್ಕೆ ಒಬ್ಬರು ತಮ್ಮ ಹೆಸರನ್ನು ನೀಡಿದಾಗ ಸಭೆಯಲ್ಲಿದ್ದ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಬಸವೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಪಟ್ಟಣದ ಹಿರಿಯರು ಚರ್ಚಿಸಿ ಜಾತ್ರೆಯನ್ನು ಎಲ್ಲರ ಸಹಕಾರದೊಂದಿಗೆ ನಿಭಾಯಿಸಿಕೊಂಡು ವ್ಯಕ್ತಿಗಳನ್ನು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಘೋಷಿಸಿದರು.

ಈ ಸಂದರ್ಭದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಕಂದಾಯ ಉಪವಿಭಾಗಾಧಿಕಾರಿ ಗುರನಾಥ ಗಡ್ಡೆ ಮಾತನಾಡಿ, ಬಸವನಬಾಗೇವಾಡಿ ಪ್ರತ್ಯೇಕ ಪ್ರಾಧಿಕಾರಕ್ಕೆ ಪಟ್ಟಣದ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ 31 ರಿಂದ ಆರಂಭವಾಗುವ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆಯನ್ನು ಸಡಗರ ಸಂಭ್ರಮದಿಂದ ಆಚರಿಸೋಣ. ಪಟ್ಟಣದಲ್ಲಿ ಪ್ರತಿವರ್ಷ ಜಾತ್ರೆಯೂ ವಿಶೇಷವಾಗಿ ಆಚರಣೆಯಾಗುತ್ತದೆ.
ಜಾತ್ರೆಗೆ ಪ್ರಾಧಿಕಾರವು ಸಕಲ ರೀತಿಯ ಸಹಕಾರ ನೀಡುತ್ತದೆ. ಎಲ್ಲ ಬಾಂಧವರು ಸೇರಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದರು.
ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪ್ರತಿವರ್ಷ ಜಾತ್ರೆ ವಿಜೃಂಭಣೆಯಿಂದ ಆಚರಣೆಯಾಗಬೇಕಾದರೆ ಪಟ್ಟಣದ ಯುವಕರ, ಹಿರಿಯರ ಸಹಕಾರ ಮುಖ್ಯವಾಗಿರುತ್ತದೆ. ಅಧ್ಯಕ್ಷ ಯಾರೇ ಆಗಲಿ ಎಲ್ಲರೂ ಒಟ್ಟಾಗಿ ಜಾತ್ರೆ ಮಾಡಬೇಕು. ಶ್ರಾವಣ ಮಾಸ, ಜಾತ್ರೆಯಂಗವಾಗಿ 13 ರಿಂದ ಒಂದು ತಿಂಗಳ ಕಾಲ ಪ್ರವಚನ ಜರುಗಲಿದೆ. ಈ ವರ್ಷ ಹುಕ್ಕೇರಿ ತಾಲೂಕಿನ ಬಸವ ಬೆಳವಿಯ ಚರಂತೇಶ್ವರ ಮಠದ ಬಸವ ದೇವರು ಅವರು ಪ್ರವಚನ ನೀಡಲಿದ್ದಾರೆ. ಪ್ರವಚನದಲ್ಲಿ ನಿತ್ಯ ಭಕ್ತರ ಸಹಕಾರದೊಂದಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ.
ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೆಗೆ ಭಕ್ತರು ನೀಡಿರುವ ದೇಣಿಗೆಯನ್ನು ಪಾರದರ್ಶಕವಾಗಿ ಲೆಕ್ಕಪತ್ರ ಮಾಡಲಾಗುತ್ತದೆ. ಮೂಲನಂದೀಶ್ವರನ ಬೆಳ್ಳಿ ಕವಚ ನಿರ್ಮಾಣದ ಸಂಕಲ್ಪ ಮಾಡುವ ಸಂದರ್ಭದಲ್ಲಿ ಬೆಳ್ಳಿ ದರ ಕಡಿಮೆಯಿತ್ತು. ಆಗ ರೂ. 27 ಲಕ್ಷ ಹಣ ಸಂಗ್ರಹವಾಗಿದೆ. ಕೆಲವರು ವಾಗ್ದಾನ ಮಾಡಿದ್ದಾರೆ. ಅವರು ಹಣ ನೀಡಬೇಕಿದೆ. ಇದೀಗ ಬೆಳ್ಳಿ ದರ ಗಗನಕ್ಕೇರಿದೆ. ಭಕ್ತರು ನೀಡಿದ ಹಣದಲ್ಲಿ ಈ ಬೆಳ್ಳಿ ಕವಚ ನಿರ್ಮಾಣ ಕಷ್ಟದಾಯಕ. ಈ ವಿಷಯದಲ್ಲಿ ಪ್ರಾಧಿಕಾರದೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವದು ಎಂದರು.
ಬಸವೇಶ್ವರ ಸೇವಾ ಸಮಿತಿಯ ಎಂ.ಜಿ. ಆದಿಗೊಂಡ ಮಾತನಾಡಿ, ನಮ್ಮ ಸೇವಾ ಸಮಿತಿಯು ನೋಂದಣಿಯಾದ ಸಮಿತಿಯಾಗಿದೆ. ಇದು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಜಾತ್ರೆಯಲ್ಲಿ ರೂ. 56 ಲಕ್ಷ ದೇಣಿಗೆ ಹಣದಲ್ಲಿ ರೂ. 46 ಲಕ್ಷ ಹಣ ಖರ್ಚಾಗಿದೆ. 2022 ರಿಂದ ಇದುವರೆಗೂ ಜಾತ್ರೆಯ ದೇಣಿಗೆ ಹಣದಲ್ಲಿ ಖರ್ಚಾಗಿ ಸುಮಾರು ರೂ.37 ಲಕ್ಷ ಉಳಿಕೆಯಾಗಿದೆ. ಸಮಿತಿಯು ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಕಳೆದ ಜಾತ್ರಾ ಉತ್ಸವ ಸಮಿತಿಯ ಅಧ್ಯಕ್ಷ ರವಿ ರಾಠೋಡ ಮಾತನಾಡಿ, ಕಳೆದ ವರ್ಷ ಎಲ್ಲ ಗುರು-ಹಿರಿಯರ, ಪದಾಧಿಕಾರಿಗಳ, ಯುವಕರು ಸೇರಿದಂತೆ ಎಲ್ಲ ಸಹಕಾರೊಂದಿಗೆ ಜಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ನನಗೆ ಎಲ್ಲರೂ ಸಹಕಾರ ನೀಡಿದ್ದನ್ನು ಸ್ಮರಿಸುವೆ ಎಂದರು.

ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ, ಕರವೇ ಮುಖಂಡ ಅಶೋಕ ಹಾರಿವಾಳ, ವಿವೇಕ ಬ್ರಿಗೇಡ್ ಮುಖಂಡ ವಿನುತ ಕಲ್ಲೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಬಸವೇಶ್ವರ ಸೇವಾ ಸಮಿತಿಯ ಪದಾಧಿಕಾರಿಗಳಾದ ಬಸವರಾಜ ಹಾರಿವಾಳ, ಶಂಕರಗೌಡ ಬಿರಾದಾರ, ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ಉಮೇಶ ಹಾರಿವಾಳ, ಬಸಪ್ಪ ಕಲ್ಲೂರ, ರವಿ ಚಿಕ್ಕೊಂಡ, ಶೇಖರಗೌಡ ಪಾಟೀಲ, ಸುರೇಶಗೌಡ ಪಾಟೀಲ, ಡಾ.ಬಸವರಾಜ ಕೋಟಿ, ರಮೇಶ ಯಳಮೇಲಿ, ಸಂಗಮೇಶ ಓಲೇಕಾರ, ಶೇಖರ ನಾಯ್ಕೋಡಿ, ಗೋಪಾಲ ಅಗರವಾಲ, ಜಟ್ಟಿಂಗರಾಯ ಮಾಲಗಾರ, ರವಿಗೌಡ ಚಿಕ್ಕೊಂಡ, ಶಿವಾನಂದ ತೋಳನೂರ, ವಿವೇಕಾನಂದ ಕಲ್ಯಾಣಶೆಟ್ಟಿ, ಜಗದೇವಿ ಗುಂಡಳ್ಳಿ, ಮೀರಾಸಾಬ ಕೊರಬು, ಮುದುಕು ಬಸರಕೋಡ, ಪ್ರವೀಣ ಪೂಜಾರಿ, ಉಪವಿಭಾಗಾಧಿಕಾರಿ ಇಲಾಖೆಯ ಸಿಬ್ಬಂದಿ ರಾಜು ಇವಣಗಿ, ದೇವಸ್ಥಾನದ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಸಮಿತಿ ನೂತನ ಅಧ್ಯಕ್ಷ ಶ್ರೀಕಾಂತ ಕೊಟ್ರಶೆಟ್ಟಿ ಅವರು ಮಾತನಾಡುತ್ತಾ, ಜಾತ್ರಾ ಮಹೋತ್ಸವವನ್ನು ಎಲ್ಲರ ಸಹಕಾರದೊಂದಿಗೆ ವಿಜೃಂಭಣೆಯಿಂದ ಆಚರಿಸಲು ಉತ್ಸುಕನಾಗಿದ್ದೇನೆ. ಜಾತ್ರೆಯಲ್ಲಿ ದಾಸೋಹಕ್ಕೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುವದು.
ಪರಸ್ಥಳದಿಂದ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ದೇವರ ದರ್ಶನದ ವೇಳೆಯಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಸರದಿ ಸಾಲು ವ್ಯವಸ್ಥೆ ಮಾಡಲಾಗುವದು. ಎಲ್ಲ ಹಿರಿಯರ, ಪದಾಧಿಕಾರಿಗಳ, ಅಧಿಕಾರಿಗಳ ಸಹಕಾರದೊಂದಿಗೆ ಜಾತ್ರೆಯನ್ನು ಯಶಸ್ವಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
