(ಸರ್, ನಿಮಗೆ ಎಷ್ಟು ದುಡ್ಡು ಕೊಟ್ಟಿದಾರೆ ಹೇಳಿ ಅದಕ್ಕಿಂತ ಜಾಸ್ತಿ ನಾವು ಕೊಡ್ತೀವಿ. ನೀವು ಕುಂಕುಮ ಹಾಕಿದ್ದೀರಿ, ವಿಭೂತಿ ಯಾಕೆ ಹಾಕಿಲ್ಲ.
ವಚನ ದರ್ಶನ ಪುಸ್ತಕದ ಪರ ಪ್ರಚಾರ ಮಾಡುತ್ತಿರುವ ಶಿವಾನಂದ ಮಠದ ಸದಾಶಿವಾನಂದ ಶ್ರೀಗಳಿಗೆ ಸುವರ್ಣ ಟಿವಿ ಕಾರ್ಯಕ್ರಮದಲ್ಲಿ ನಾವು ಕೇಳಿದ ಪ್ರಶ್ನೆಗಳು.
ನಮ್ಮ ಕೆಲವು ಪ್ರಶ್ನೆಗಳಿಗೆ ಶ್ರೀಗಳು ಉತ್ತರ ಕೊಟ್ಟರು, ಕೆಲವಕ್ಕೆ ಕೊಡಲಿಲ್ಲ. ಪ್ರಶ್ನೆಗಳನ್ನು ಕೇಳಲು ಸುವರ್ಣ ಟಿವಿಯವರು ಮೊದಲು ಮೈಕ್ ಕೊಟ್ಟರು, ಆಮೇಲೆ ಕೊಡಲಿಲ್ಲ. ಅದಕ್ಕೆ ಬೇಸತ್ತು ಸ್ಟುಡಿಯೋದಲ್ಲೇ ಪುಸ್ತಕ ಹರಿದು, ಧಿಕ್ಕಾರ ಕೂಗಿ ಎದ್ದು ಬಂದೆವು.
ಒಂದೂವರೆ ಗಂಟೆ ರೆಕಾರ್ಡಿಂಗ್ ನಡೆದ ಕಾರ್ಯಕ್ರಮವನ್ನು ಅರ್ಧ ಗಂಟೆಗೆ ಕತ್ತರಿಸಿ ತಮಗೆ ಬೇಕಾದನ್ನು ಮಾತ್ರ ತೋರಿಸಿದ್ದಾರೆ. ಕಾರ್ಯಕ್ರಮದ ವೇಳೆಯಲ್ಲಿ ನಡೆದ ನಮ್ಮ ಅನುಭವವನ್ನು ಬಸವ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದೇವೆ.)
ವಚನ ದರ್ಶನ ಪುಸ್ತಕದ ಮೇಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುವರ್ಣ ಮತ್ತು ಪಬ್ಲಿಕ್ ಟಿವಿಯಿಂದ ಆಗಸ್ಟ್ 17 ಕರೆ ಬಂತು. ನಾನು ಕೆಲವು ಲಿಂಗಾಯತ ಸಂಘಟನೆಗಳಿಗೆ ಫೋನ್ ಮಾಡಿ ಸೂಕ್ತವಾದವರನ್ನು ಕಳುಹಿಸಲು ಕೇಳಿದೆ. ಆದರೆ ಏನೋ ಗೊಂದಲವಾಗಿ ಯಾರೂ ಬರಲಿಲ್ಲ. ನಾವು ಮೂರು ಜನ ಪಬ್ಲಿಕ್ ಟಿವಿ ಕೈಬಿಟ್ಟು ಸುವರ್ಣ ಟಿವಿಗೆ ಹೋದೆವು.
ವಚನ ದರ್ಶನ ಪುಸ್ತಕದ ಬೆಂಬಲಕ್ಕೆ ನಿಂತಿರುವ ಸದಾಶಿವಾನಂದ ಶ್ರೀ ಮತ್ತು ವಚನಾನಂದ ಶ್ರೀಗಳು ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ವಚನಾನಂದ ಶ್ರೀಗಳು ಕಾಣಿಸಲಿಲ್ಲ, ಸದಾಶಿವಾನಂದ ಶ್ರೀ ಒಬ್ಬರೇ ಸ್ವಲ್ಪ ಮಂಕಾಗಿ ಕುಳಿತಿದ್ದರು. ಒಂದು 15 ಜನ ಹಣೆಗೆ ಕುಂಕುಮ ಇಟ್ಟುಕೊಂಡು ಬಂದಿದ್ದರು, ಯಾವುದೋ ವೀರಶೈವ ಸಂಘಟನೆಯಿಂದಲೂ ಇಬ್ಬರು ಬಂದಿದ್ದರು.
ನಾನು ನೇರವಾಗಿ ಸದಾಶಿವಾನಂದ ಶ್ರೀಗಳನ್ನು ಉದ್ದೇಶಿಸಿ ಮಾತನಾಡಿದೆ: “ಸರ್ ನೀವು ವಿಭೂತಿ ಹಾಕಿಲ್ಲ, ಕುಂಕುಮ ಇಟ್ಟಿದ್ದೀರಿ. ಲಿಂಗಾಯತ ಧರ್ಮದ ವಿರುದ್ಧ ಬದಲಾಗಿರೋ ನಿಮ್ಮ ನಿಲುವಿಗೆ ಎಷ್ಟು ದುಡ್ಡು ಸಿಕ್ಕಿದೆ ಹೇಳಿ. ನಿಮಗೆ ಅವಶ್ಯಕತೆಯಿದ್ದರೆ ಅದಕ್ಕಿಂತ ಜಾಸ್ತಿ ನಾವು ಕೊಡ್ತೀವಿ.”
“ನನಗೆ ಯಾರೂ ದುಡ್ಡು ಕೊಟ್ಟಿಲ್ಲ, ವಚನ ಸಾಹಿತ್ಯ ಬೆಳೆಸಲು ಈ ಕೆಲಸ ಮಾಡುತ್ತಾ ಇದ್ದೀನಿ,” ಅಂದರು.
“ನೀವು ಬೆಳಗಾವಿ ಅಧಿವೇಶನದಲ್ಲಿ ಲಿಂಗಾಯತ ಧರ್ಮದ ಪರವಾಗಿ ಬಂದು ಕುಳಿತ್ತಿದ್ರಿ. ಈಗ ಯಾಕೆ ಯು ಟರ್ನ್ ಹೊಡಿದ್ರಿ ಸರ್,” ಅಂತ ಕೇಳಿದೆ. ಅದಕ್ಕೆ ಅವರು ಸರಿಯಾದ ಉತ್ತರ ಕೊಡದೆ ಲಿಂಗಾಯತ ಹಿಂದೂ ಧರ್ಮದ ಒಂದು ಭಾಗ ಎಂದರು.
ಅದಕ್ಕೆ ನಾನು ಅಂಬಿಗರ ಚೌಡಯ್ಯನವರ ಒಂದು ವಚನ ಹೇಳಿದೆ:
ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕೆ ಹೋಗಿ
ಅಡಿ ಮೇಲಾಗಿ ಬೀಳುವ
ಲೊಟ್ಟೆ ಮೂಳರ ಕಂಡರೆ
ಗಟ್ಟಿ ಪಾದರಕ್ಷೆಯ ತೆಗೆದುಕೊಂಡು
ಟೊಕ ಟೊಕನೆ ಹೊಡೆಯೆಂದ ನಮ್ಮ ಅಂಬಿಗರ ಚೌಡಯ್ಯ
ನೀವು ಹೇಳೋ ಹಾಗೆ ನಾವು ಬೇರೆಯವರ ಜತೆ ಹೋದರೆ ನಮ್ಮ ಪಾದರಕ್ಷೆಯಿಂದ ನಮ್ಮನ್ನ ನಾವೇ ಹೊಡೆದುಕೊಳ್ಳುವ ಕಾಲ ಬರುತ್ತದೆ, ಎಂತಲೂ ಹೇಳಿದೆ.
ಅದನ್ನು ನೋಡಿ ಸದಾಶಿವಾನಂದ ಶ್ರೀಗಳು ಇನ್ನೂ ವಿಶ್ವಾಸ ಕಳೆದುಕೊಂಡ ಹಾಗೆ ಕಾಣಿಸಿತು.
ಆಗ ಮಧ್ಯ ಪ್ರವೇಶಿಸಿದ ಸುವರ್ಣ ಟಿವಿಯ ಅಜಿತ್ ಹನುಮಕ್ಕನವರ್ ವಚನಕಾರರು ತಮ್ಮ ವಚನಗಳಲ್ಲಿ ಬೇರೆ ಬೇರೆ ಹಿಂದೂ ದೇವರ ಅಂಕಿತ ನಾಮ ಇಟ್ಟುಕೊಂಡಿದ್ದಾರಲ್ಲಾ ಎಂದು ಪ್ರಶ್ನಿಸಿದರು.
ಅದಕ್ಕೆ ನಾನು ಅಂಕಿತ ನಾಮ ಒಂದು ಐಡೆಂಟಿಟಿ ಅಷ್ಟೇ, ಅಂಬಿಗರ ಚೌಡಯ್ಯರಂತಹ ಹಲವಾರು ಶರಣರು ತಮ್ಮ ಹೆಸರಿನಲ್ಲೇ ವಚನ ಬರೆದರು. “ನೀವು ಅಜಿತ್ ಹನುಮಕ್ಕನವರ್ ಅಂತ ಅಂಕಿತ ನಾಮ ಇಟ್ಟುಕೊಂಡು ವಚನ ಬರೆದರೆ ನಿಮ್ಮನ್ನೂ ಪೂಜೆ ಮಾಡಬೇಕೇ,” ಎಂದು ಮರು ಪ್ರಶ್ನೆ ಮಾಡಿದೆ.
ಅಜಿತ್ ಅವರು ಲಿಂಗಾಯತರೂ ಶಿವ ಪೂಜೆ ಮಾಡುತ್ತಾರೆ, ಓಂ ನಮಃ ಶಿವಾಯ ಮಂತ್ರ ಹೇಳುತ್ತಾರೆ, ಎಂದರು.
“ನಿಮ್ಮ ಶಿವ ಬೇರೆ, ನಮ್ಮ ಶಿವ ಬೇರೆ, ನಾವು ಕೈಲಾಸದ ಶಿವನನ್ನು ಪೂಜಿಸುವುದಿಲ್ಲಾ,” ಎಂದು ಬಸವಣ್ಣನವರ ಒಂದು ವಚನ ಹೇಳಿದೆ.
ಕೈಲಾಸವೆಂಬುದು ಒಂದು ಹಾಳು ಬೆಟ್ಟ ಕಾಣಿರೋ
ಅಲ್ಲಿರುವ ಶಿವನು ಒಬ್ಬ ದಡ್ಡ ಕಾಣಿರೋ
ಅಲ್ಲಿರುವ ಗಣಂಗಳೆಲ್ಲ(ಋಷಿಗಳು) ಮೈಗಳ್ಳರು ಕಾಣಿರೋ
ಬೇಡ ನನಗೆ ಕೈಲಾಸ
ಕಾಯಕ ದೀಕ್ಷೆಯನು ಕೊಡು
ನಾಡ ಹಂದರಕೆ ಹಬ್ಬಿಸುವೆನು ಕೂಡಲ ಸಂಗಮ ದೇವಾ
ನಾವು ಮೊದಲಿನಿಂದಲೂ ಪ್ರತ್ಯೇಕವಾಗಿಯೇ ಬಂದಿದ್ದೇವೆ. ಯಾರು ಯಾರು ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಎತ್ತಿದ್ದಾರೋ ಅವರನ್ನು ತುಳಿಯುವ, ಕೊಲ್ಲುವ ಪ್ರಯತ್ನಗಳು ಇತಿಹಾಸದ ಉದ್ದಕ್ಕೂ ಆಗಿವೆ. ನಂಜನಗೂಡಿನಲ್ಲಿ ವಿಶಾಲಾಕ್ಷ ಪಂಡಿತ 700 ಲಿಂಗಾಯತರನ್ನು ಕೊಲ್ಲಿಸಿದ. ಈಗ ಸ್ವಾತಂತ್ರ್ಯ ಬಂದಿದೆ, ಸಂವಿಧಾನವಿದೆ. ಸ್ವತಂತ್ರ ಧರ್ಮ ಪಡೆಯುವುದು ನಮ್ಮ ಹಕ್ಕು, ಪಡೆದೇ ಪಡೆಯುತ್ತೇವೆ. ನಾವು ತುಂಬಾ ನೊಂದಿದ್ದೀವಿ, ಎಂದು ಹೇಳಿದೆ.
ಅಜಿತ್ ಅವರು ಔರಂಗಜೇಬ ಹಿಂದುಗಳನ್ನು ಕೊಂದನಲ್ಲ, ಅದಕ್ಕೆ ನಾವೇನು ಮಾಡಬೇಕು ಎಂದು ಕೇಳಿದರು.
ನೀವು ಔರಂಗಜೇಬನ ವಿರುದ್ಧ ಹೋರಾಡಿ, ನಮ್ಮನ್ನು ಕೊಂದವರ ವಿರುದ್ಧ ನಾವು ಹೋರಾಡುತ್ತೇವೆ, ಎಂದು ಹೇಳಿದೆ.
ಅಜಿತ್ ಅವರು ವಿಷಯ ಬದಲಿಸಿ, “ದಲಿತರೆಲ್ಲ ಲಿಂಗ ಕಟ್ಟಿಸ್ಕೊಳ್ತಾರೆ ನೀವು ಅವರನ್ನ ಲಿಂಗಾಯತರು ಅಂತ ಒಪ್ಪಿಕೊಳ್ತೀರಾ,” ಅಂತ ಕೇಳಿದರು. ಅದಕ್ಕೆ ನನ್ನ ಜೊತೆ ಬಂದಿದ್ದ ಪ್ರಕಾಶ್ ಜೀರಿಗೆ ಅವರು ಕೊಟ್ಟ ಉತ್ತರ ನಾನು ಯಾವತ್ತೂ ಮರೆಯುವ ಹಾಗೆಯೆ ಇಲ್ಲ.
“ಸೂಳೆ ಸಂಕವ್ವ ಅಂತ ಒಬ್ಬರು ಶರಣೆ ಇದ್ದರು. ನಾವು ಅವರನ್ನು ತಾಯಿ ಅಂತ ಒಪ್ಪಿಕೊಂಡಿದ್ದೀವಿ,” ಎಂದರು.
ಇಷ್ಟಾದ ಮೇಲೆ ಮೇಲೆ ನಮಗೆ ಮತ್ತೆ ಮೈಕ್ ಬರಲಿಲ್ಲ. ಸಂಘ ಪರಿವಾರದವರಿಗೆ ಮಾತ್ರ ಮಾತನಾಡಲು ಅವಕಾಶ ಸಿಕ್ಕಿತು. ಅವರು ಲಿಂಗಾಯತರು ಧರ್ಮ ಒಡೆಯುತ್ತಿದ್ದಾರೆ, ಬಾಂಗ್ಲಾದೇಶದ ಬಗ್ಗೆ ಮಾತನಾಡುವುದಿಲ್ಲ, ಎಂದು ಹೇಳಿದರು.
ಬಸವಣ್ಣ ಬ್ರಾಹ್ಮಣ ಆದರೂ ಅವರನ್ನ ಲಿಂಗಾಯತರು ಅವರಿಗೆ ಮಾತ್ರ ಸೀಮಿತ ಮಾಡಿಕೊಂಡಿದ್ದಾರೆ. ವಚನ ದರ್ಶನ ಬೇರೆಯವರಿಗೂ ಬಸವಣ್ಣನವರನ್ನು ಪರಿಚಯ ಮಾಡಿಕೊಡುವಂತಹ ಪ್ರಯತ್ನ. ಅದನ್ನ ಅವರು ತಡೆಯುತ್ತಾ ಇದ್ದಾರೆ, ಎಂದೆಲ್ಲಾ ಹೇಳಿದರು.
ಸದಾಶಿವಾನಂದ ಶ್ರೀ ಕೂಡ ನಮ್ಮನ್ನು ಟಾರ್ಗೆಟ್ ಮಾಡಿ ಕೆಲವು ಮಾತು ಆಡಿದರು. ಅವುಗಳಿಗೆ ಪ್ರತಿಕ್ರಿಯೆ ಕೊಡಲು ಮೈಕ್ ನಮ್ಮ ಹತ್ತಿರ ಬರಲೇ ಇಲ್ಲ. ಆದ್ದರಿಂದ ಬೇಸತ್ತು ವಚನ ದರ್ಶನ ಪುಸ್ತಕಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುತ್ತ, ಪುಸ್ತಕ ಹರಿಯಲು ಹೋದೆ. ಅಲ್ಲಿದ್ದವರೆಲ್ಲ ಬಂದು ತಡೆದರು, ಅಷ್ಟರಲ್ಲಿ ಒಂದು ಪುಟ ಹರಿದಿದ್ದೆ.

ಅಷ್ಟು ಮಾಡಿ ಎದ್ದು ಬಂದು ಸುವರ್ಣ ಟಿವಿ ಬಿಲ್ಡಿಂಗ್ ಆಚೆ ನಿಂತು ಸದಾಶಿವಾನಂದ ಶ್ರೀ ಬಂದರೆ ಘೇರಾವ್ ಮಾಡೋಣ ಅಂತ ಕಾದು ಕುಳಿತಿದ್ದೆವು. ೨೦ ನಿಮಿಷವಾದರೂ ಅವರು ಬರಲಿಲ್ಲ. ಸಂಘ ಪರಿವಾರದವರು ದೂರ ನಿಂತಿದ್ದರು. ಸುವರ್ಣ ಟಿವಿಯಲ್ಲಿ ಕೆಲಸ ಮಾಡುತ್ತಿರುವವರೂ ಆಚೆ ಬಂದು ನೋಡುತ್ತಿದ್ದರು. ನಾವೆಲ್ಲ ಮತ್ತೇ ಘೋಷಣೆ ಕೂಗಿ ಬೈಕ್ ಹತ್ತಿ ಹೊರಟೆವು.
ಒಂದು ವಿಷಯ ಹೇಳಲು ಮರೆತೆ.
ನಮ್ಮ ಮುಂದೆ ಕೂತಿದ್ದ ವೀರಶೈವ ಸಂಘಟನೆಯವರನ್ನು ತೋರಿಸಿ ಅಜಿತ್ ಅವರು ನಿಮ್ಮ ನಿಮ್ಮಲ್ಲೇ ಒಗ್ಗಟ್ಟಿಲ್ಲ, ನೀವು ಬೇರೆ ಧರ್ಮ ಬೇರೆ ಕೇಳ್ತೀರಾ ಎಂದರು. ಆಗ ನಾನು ವೀರಶೈವರ ಕಿವಿಯಲ್ಲಿ, “ಸರ್ ನಿಮ್ಮ ಬಗ್ಗೆ ನಮಗೆ ಏನೂ ಸಮಸ್ಯೆಯಿಲ್ಲ. ನೀವು ಬಸವಣ್ಣನವರನ್ನ ಒಪ್ಪಿಕೊಂಡರೆ ಸಾಕು,” ಎಂದೆ. ಅದಕ್ಕವರು “ಸರ್ ನಾವೆಲ್ಲಾ ಬಸವಣ್ಣನವರನ್ನು ಒಪ್ಪಿಕೊಳ್ತೀವಿ,” ಹೇಳಿದರು.
ಚೌಡಯ್ಯಾರ ವಚನ ಪಾಲಿಸುವದು ಲಿಂಗಾಯತರ ಕರ್ತವ್ಯ. ತಮ್ಮನ್ನು ತಾನು ಮತ್ತು ಸ್ವಾರ್ಥಕ್ಕಾಗಿ ತನ್ನ ತಾಯಿನ್ನ ಮಾರಿಕೊಳ್ಳುವ ಕಾವಿ ಗಳಿಗೆ ಪಾಠ ಕಲಿಸಿ.
ಲಿಂಗಾಯತ ಧರ್ಮ ಬೇಕು ಅನ್ನೋರಿಗೆ ನನ್ನ ಅತ್ತಿರ 100 ಪ್ರಶ್ನೆಗಳಿದ್ದವೇ ಯಾರಿಗಾದರೂ ಧಮ್ಮ್ ಇದೆಯಾ ಉತ್ತರ ಕೊಡಲು ಮುಂದೆ ಬನ್ನಿ.
ಕೇಳಿ