ಸಮಾನತೆ ಸಾರಿದ ಬುದ್ಧ, ಬಸವ, ಅಂಬೇಡ್ಕರ್: ಅಲ್ಲಮಪ್ರಭು ಪಾಟೀಲ

ಕಲಬುರಗಿ :

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ‘ವಚನ ಸಾಹಿತ್ಯ ಸಂವಿಧಾನ ಮಹಿಳಾ ಸಬಲೀಕರಣ ಮತ್ತು ಸವಾಲುಗಳು’ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ ಅವರು, ಈ ನೆಲದ ಮೇಲೆ ಮನುಷ್ಯನಾದವನು ಹುಟ್ಟೋದು ಸಾಯೋದು ಸಹಜ, ಆದರೆ ಕೆಲವು ಜನರು ಸತ್ತರೂ ಸಾಧಕ ಮತ್ತು ಪೂಜ್ಯರಾಗಿ ಅಮರರಾಗಿರುತ್ತಾರೆ. ಅವರ ಸಾಲಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರು ಯಾವತ್ತೂ ಮುಂದೆ ಇರುತ್ತಾರೆ. ಅವರ ಆದರ್ಶಗಳು ನಮ್ಮ ಜೀವನಕ್ಕೆ ಸದಾ ದಾರಿದೀಪವಾಗಿವೆ.

ಯಾರು ಶಾಕ್ಯ ವಂಶದ ರಾಜಮನೆತನದಲ್ಲಿ ಜನಿಸಿ ರಾಜಭೋಗವನ್ನು ಅನುಭವಿಸಬೇಕಿದ್ದವರು ಸಮಾಜದಲ್ಲಿನ ವೃದ್ಧ, ರೋಗಿ, ಹೆಣ, ಸನ್ಯಾಸಿ, ದುಃಖ – ದುಮ್ಮಾನ, ರೋಗ – ರುಜಿನ ಅಸಮಾನತೆ ಇವುಗಳನ್ನು ಕಂಡು ವಿಚಲಿತನಾಗಿ 27ನೇ ವಯಸ್ಸಿಗೆ ಮನೆಯನ್ನು ತೊರೆದ ಸಿದ್ದಾರ್ಥ.

ಮಾನವನ ದುಃಖಕ್ಕೆ ಕಾರಣ ಮತ್ತು ಪರಿಹಾರ ಹುಡುಕಲು ಲೋಕಜ್ಞಾನದ ಸಂಚಾರ ಮಾಡಿ, ಹಲವು ವರ್ಷಗಳ ಕಠಿಣ ತಪಸ್ಸು ಮತ್ತು ಧ್ಯಾನದ ನಂತರ ಅರಳಿಮರದ ಕೆಳಗೆ ಜ್ಞಾನೋದಯವಾಗಿ, ಅಂದಿನಿಂದ ಆತ ‘ಬುದ್ಧ’ ನಾಗಿ ಆಸೆ ಅಥವಾ ದುರಾಸೆಯೇ ದುಃಖಕ್ಕೆ ಮೂಲ ಕಾರಣ ಎಂದು ಅಷ್ಟಾಂಗ ಮಾರ್ಗವನ್ನು ಬೋಧಿಸಿದನು.

ಒಳ್ಳೆಯ ದೃಷ್ಟಿ, ಒಳ್ಳೆಯ ನಿರ್ಧಾರ, ಒಳ್ಳೆಯ ಮಾತು,

ಒಳ್ಳೆಯ ನಡೆ/ಕೆಲಸ, ಪ್ರಾಮಾಣಿಕ ಬದುಕು,

ಒಳ್ಳೆಯ ಪ್ರಯತ್ನ,

ಒಳ್ಳೆಯ ಆಲೋಚನೆ,

ಏಕಾಗ್ರತೆಯ ಧ್ಯಾನ ಜೊತೆಗೆ ಸಮಾಜದಲ್ಲಿನ ಜಾತಿ ತಾರತಮ್ಯ, ಮೂಢನಂಬಿಕೆ ವಿರುದ್ಧ, ಮಹಿಳಾ ಸಮಾನತೆಗೆ ದ್ವನಿಯಾದನು.

ಮುಂದೆ 12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ವಿಶ್ವದ ಪ್ರಥಮ ಪ್ರಜಾಪ್ರಭುತ್ವ ಸಂಸತ್ತು ನಿರ್ಮಾಣ ಮಾಡಿ ಕುಲಕೊಬ್ಬ ಶರಣರು ಎಂಬಂತೆ ತುಳಿತಕ್ಕೆ ಒಳಗಾದ ನೂರಾರು ಜನರನ್ನು, ಮಹಿಳೆಯರನ್ನು ಸೇರಿಸಿ ಅವರ ಕಾಯಕದ ಜೊತೆಗೆ ಅಕ್ಷರ ಕಲಿಸಿ ಜಾತಿ, ಅಸ್ಪೃಶ್ಯತೆ ಆಚರಣೆ, ಮಹಿಳಾ ಶೋಷಣೆ ತಾರತಮ್ಯ, ಮೂಢನಂಬಿಕೆ ವಿರುದ್ಧ ವಚನಗಳನ್ನು ಬರೆದು ಸಮಾಜದಲ್ಲಿ ಜಾಗೃತಿ ಮೂಡಿಸಿ ಸಮಾನತೆ, ಸಹೋದರತೆ, ಜಾತಿ ವ್ಯವಸ್ಥೆ ಹೋಗಲಾಡಿಸಲು ದೊಡ್ಡ ಕ್ರಾಂತಿ ನಡೆಸಿದರು.

ಇಂದು ಆಧುನಿಕ ಭಾರತದ ಸಮಯದಲ್ಲಿ ಭಾರತವು ಬ್ರಿಟಿಷರ ಗುಲಾಮಿತನದಿಂದ ಹೊರಬಂದಾಗ ದೇಶದಲ್ಲಿ ಪ್ರಾಂತೀಯ ಸಂಘರ್ಷಗಳು, ಜಾತಿ-ಧರ್ಮದ ಸಂಘರ್ಷಗಳು, ಅಸ್ಪೃಶ್ಯತೆ, ಮಹಿಳಾ ಅಸಮಾನತೆ, ಬಡತನ, ದಾರಿದ್ರ್ಯ, ಮೂಢನಂಬಿಕೆ ಮನುಷ್ಯ – ಮನುಷ್ಯನ್ನಾಗಿ ಕಾಣದೆ ಇರುವ ದೇಶದಲ್ಲಿ ಹಲವಾರು ಸಮಸ್ಯೆಗಳು ಸವಾಲುಗಳು ಇದ್ದವು. ಈ ಸಂದರ್ಭದಲ್ಲಿ ನೆಹರು ಗಾಂಧಿಯವರು ಡಾ. ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯಲು ಜವಾಬ್ದಾರಿ ನೀಡಿದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಲವಾರು ದೇಶಗಳನ್ನು ಸುತ್ತಿ ಅಪಾರ ಜ್ಞಾನ, ಎಲ್ಲಾ ವಿಷಯದಲ್ಲಿಯೂ ಆಳವಾದ ಅಧ್ಯಯನ ಹೊಂದಿದವರು.

ದೇಶದ ಸರ್ವಜನಾಂಗ, ಸರ್ವ ಜಾತಿ -ಧರ್ಮ ಮಹಿಳಾ ಸಮಾನತೆ ಅಭಿವೃದ್ಧಿ ಶೀಲ ವಿಶ್ವ ಶ್ರೇಷ್ಠ ಪ್ರಜಾಪ್ರಭುತ್ವದ ಸಂವಿಧಾನ ನೀಡಿದರು.

ಅಂದು ಗೌತಮ ಬುದ್ಧರು ಪ್ರೀತಿ, ಮಮಕಾರದಿಂದ ನೆಟ್ಟಿದ ಮರಕ್ಕೆ ಬಸವಣ್ಣನವರು ನೀರು ಹಾಕಿ ಬೆಳೆಸಿದರು. ಬಾಬಾಸಾಹೇಬ ಅಂಬೇಡ್ಕರ್ ಅವರ ಬಂದು ಆ ಮರಕ್ಕೆ ಹಣ್ಣಾಗಿಸಿ ನಮಗೆಲ್ಲ ತಿನಿಸಿದ್ದಾರೆ. ಈ ಮೂವರು ಮಹಾತ್ಮರು ಸಮಾನತೆಯ ಹಣ್ಣು ತಿನಿಸಿದ್ದಾರೆ ಎಂದು ಹೇಳಿದರು.

ಡಾ. ಜಯದೇವಿ ಗಾಯಕವಾಡ ಅವರು ವಚನ ಸಾಹಿತ್ಯ ಸಂವಿಧಾನ ಮಹಿಳಾ ಸಬಲೀಕರಣ ಮತ್ತು ಸವಾಲುಗಳು ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾದ ಸಂವಿಧಾನ ಸಂರಕ್ಷಣಾ ಸಮಿತಿಯ ಮುಖಂಡರಾದ ಭೀಮರಾವ್ ಟಿ.ಟಿ., ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್‌.ಜಿ. ಶೆಟಕಾರ, ಮಹಾನಗರ ಪಾಲಿಕೆ ಸದಸ್ಯರಾದ ಲತಾ ರಾಥೋಡ, ಕಾಲೇಜು ಸುಧಾರಣಾ ಸಮಿತಿ ಸದಸ್ಯರಾದ ಲಾಲಅಹ್ಮದ್  ಸೇಟ್, ಅಶೋಕ ವೀರನಾಯಕ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ನಾಗೇಂದ್ರ ಜವಳಿ, ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕರಾದ ಮೈಲಾರಿ ದೊಡ್ಮನಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಕಾಶ್ ಮೋರಗೆ ಅಧ್ಯಕ್ಷತೆ ವಹಿಸಿದ್ದರು. ಡಾ. ಪದ್ಮಾವತಿ ಧನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಭಾಗ್ಯಜ್ಯೋತಿ ಪಾಟೀಲ ನಿರೂಪಣೆ ಮಾಡಿದರು. ಡಾ. ಪ್ರಿಯದರ್ಶಿನಿ ಸ್ವಾಗತಿಸಿದರು.

ಕಾರ್ಯಕ್ರಮದ ಸಂಚಾಲಕ ಸುನೀಲ ಮಾನಪಡೆ ವಂದನಾರ್ಪಣೆ ಮಾಡಿದರು.

ಕೊನೆಗೆ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *