ತೋಂಟದಾರ್ಯ ಮಠದಲ್ಲಿ ‘ಸಮಾನತೆಯ ಹರಿಕಾರ ನಾರಾಯಣ ಗುರು’ ಪುಸ್ತಕ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಲಿಂಗಾಯತ ಪ್ರಗತಿಶೀಲ ಸಂಘದ ಅಡಿಯಲ್ಲಿ ಜರುಗಿದ ೨೮೧೧ನೆಯ ಶಿವಾನುಭವದ ಕಾರ್ಯಕ್ರಮದಲ್ಲಿ ‘ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು’ ಪುಸ್ತಕ ಬಿಡುಗಡೆಯಾಯಿತು.

ಪುಸ್ತಕ ಬರೆದ ಪರುಶುರಾಮ ಎಸ್. ಇಳಿಗೇರ ಕೃತಿಯನ್ನು ಪರಿಚಯಿಸಿ, ನಾರಾಯಣ ಗುರುಗಳ ಕುರಿತು ಮಾತನಾಡಿದರು.

ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ನಾರಾಯಣ ಗುರುಗಳ ಕುರಿತು ರಚಿತವಾದ ಕನ್ನಡದ ಪುಸ್ತಕ ಓದಿ ಅನುಸರಿಸುವಂತದ್ದು. ಎಲ್ಲರೂ ಈ ಕೃತಿಯನ್ನು ಓದಿರಿ ಎಂದರು.

ಭಾರತ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲಿಯೂ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ. ಈ ಆಧುನಿಕ ಯುಗದಲ್ಲಿಯೂ ಸಹಿತ ಅಸಮಾನತೆ, ಮೌಢ್ಯಾಚರಣೆಗಳು ನಮ್ಮ ದೇಶದಲ್ಲಿ ಬೇರೂರಿವೆ. ೨೧ನೇ ಶತಮಾನದಲ್ಲಿಯೂ ಸಮಾನತೆ ಸಾಧಿಸುವಲ್ಲಿ ನಾವು ವಿಫಲರಾಗಿದ್ದೇವೆ.

ಪ್ರಾಚೀನ ಕಾಲದಿಂದ ಮಹಾವೀರ, ಬುದ್ಧ, ಬಸವೇಶ್ವರ ಆದಿಯಾಗಿ ಶರಣರು, ನಾರಾಯಣ ಗುರುಗಳು, ಮಹಾತ್ಮಾ ಗಾಂಧೀಜಿ, ಬಾಬಾ ಸಾಹೇಬ ಅಂಬೇಡ್ಕರ್ ಅನೇಕ ದಾರ್ಶನಿಕರು, ಮಹನೀಯರು ಮನುಷ್ಯರ ಮಧ್ಯೆ ಸಮಾನತೆ ತರಲು ಸಮಾಜೋಧಾರ್ಮಿಕ ಆಂದೋಲನವನ್ನು ಮಾಡಿದ್ದಾರೆ.

ಮನುಷ್ಯರ ಮಧ್ಯೆ ಜಾತಿ, ಲಿಂಗ, ವರ್ಣಗಳ ತಾರತಮ್ಯದ ಅಂತರ ಇನ್ನೂ ಉಳಿದಿರುವುದು ಖೇದಕರ. ಭಕ್ತಿ ಭಂಡಾರಿ ಬಸವಣ್ಣನವರು ಸಮಾಜದಲ್ಲಿ ಸಮಾನತೆಯನ್ನು ತರಲು ಇಷ್ಟಲಿಂಗವನ್ನು ತಂದರು. ಇಷ್ಟಲಿಂಗದಾರಿಗಳಲ್ಲಿ ಮೇಲು -ಕೀಳು ಇಲ್ಲವೆಂದರು.

ಅದೇ ತೆರನಾಗಿ ಕೇರಳದಲ್ಲಿ ನಾರಾಯಣ ಗುರುಗಳು ಮನುಷ್ಯರ ಮಧ್ಯೆ ಸೃಷ್ಟಿಯಾಗಿದ್ದ ಅಸಮಾನತೆಯನ್ನು ತೊಡೆದು ಹಾಕಲು ಶ್ರಮಿಸಿದರು. ಮಹಾ ಮಾನವತಾವಾದಿಯಾದರು.

ಶರಣರು ಕಂಡ ಅನಾದಿ ಬಸವಣ್ಣ ಎಂಬ ವಿಷಯದ ಕುರಿತು ಪ್ರವಚನ ಮಾಡಿದ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಅವರು, ಬಸವಣ್ಣನವರು ಭಕ್ತಿ ಭಂಡಾರಿಯಾಗಿದ್ದಂತೆ, ವಿನಯ ಭಂಡಾರಿಯೂ ಆಗಿದ್ದರು. ಅವರು ನಮಗೆಲ್ಲ ನಡೆ-ನುಡಿ ಕಲಿಸಿದ ಪರಮಾರಾಧ್ಯರು ಎಂದರು.

ಪ್ರಗತಿಶೀಲ ಲಿಂಗಾಯತ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಗಂಗಾಧರ ಹಿರೇಮಠ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಗದಗ ನಗರಸಭೆಯ ಮಾಜಿ ಉಪಾಧ್ಯಕ್ಷರಾದ ಶಂಕರ ಹಾನಗಲ್ಲ ಭಾಗವಹಿಸಿ ಮಾತನಾಡಿ, ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮಠದಿಂದ ನಾರಾಯಣ ಗುರುಗಳ ಕುರಿತಾಗಿ ಪುರಾಣ ಕಾವ್ಯ ಬರೆಯಿಸಿದ್ದು ನಾವೆಲ್ಲ ಅಭಿಮಾನ ಪಡುವ ಸಂಗತಿ ಆಗಿದೆ ಎಂದು ಸ್ಮರಿಸಿದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಜೀವನ ನಟರಾಜ ಯಲ್ಬುರ್ಗಿ, ವಚನ ಚಿಂತನ ಮೇಘಾ ಮುದ್ದಿ, ದಾಸೋಹ ಸೇವೆಯನ್ನು ಕರವೀರಯ್ಯ ಶೇಖರಯ್ಯ ಕೋರಿಮಠ ಪರಿವಾರದವರು ಮತ್ತು ವಿನಾಯಕ ಮಾನ್ವಿ ಅವರು ವಹಿಸಿಕೊಂಡಿದ್ದರು.

ಪ್ರಾರಂಭದಲ್ಲಿ ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ನಿರೂಪಣೆ ಡಾ. ರಮೇಶ ಕಲ್ಲನಗೌಡರ ಮಾಡಿದರು.

ಶಿವಾನುಭವದಲ್ಲಿ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಶ್ರೀಮತಿ ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *