ಚಿತ್ರದುರ್ಗ:
ಮಧ್ಯಕರ್ನಾಟಕದಲ್ಲಿ ನಾಯಕನಹಟ್ಟಿ ತಿಪ್ಪೇಸ್ವಾಮಿಯವರ ಮಹಿಮೆ ಅಪಾರ. ಇವರ ಜನ್ಮ ನಿಖರವಾಗಿಲ್ಲ. ಸಮಾಜದಲ್ಲಿನ ಅಸಮಾನತೆ ಅಸ್ಪೃಶ್ಯತೆ ದಬ್ಬಾಳಿಕೆ ವಿರುದ್ಧ ಹೋರಾಟ ಮಾಡುತ್ತ, ಅಂದಿನ ಕಾಲದ ಜನರ ಕಷ್ಟ ನೋಡಿ ೫ ಕೆರೆಗಳನ್ನು ನಿರ್ಮಿಸಿದರು.
ಕೆಲಸಗಾರರಲ್ಲಿದ್ದ ತಾರತಮ್ಯವನ್ನು ನಿವಾರಿಸಲು ಮರಳಿನಲ್ಲಿ ಬೆತ್ತ ಇಡುವ ಮೂಲಕ ಮಾಡಿದಷ್ಟು ನೀಡು ಭಿಕ್ಷೆ ಎಂಬ ಆಶೀರ್ವದಿಂದ ತಾವು ಮಾಡಿದ ಕೆಲಸಕ್ಕೆ ಸರಿಯಾದ ವೇತನ ಸಿಗುವಂತೆ ಮಾಡಿದರು ಎಂದು ಪತ್ರಕರ್ತ ಜಡೇಕುಂಟೆ ಮಂಜುನಾಥ ತಿಳಿಸಿದರು.
ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಏರ್ಪಡಿಸಿರುವ ಅನುಭಾವ ಶ್ರಾವಣ: ಶರಣ ಚಿಂತನ ಮಾಲಿಕೆಯಲ್ಲಿ ಮಂಗಳವಾರ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆದ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿಗಳು ಹಾಗೂ ನಾಗಗೊಂಡನಹಳ್ಳಿ ಶ್ರೀ ಚೆಲುಮೆ ರುದ್ರಸ್ವಾಮಿಗಳವರ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾವು ಕಡಿದ ಮಗುವನ್ನು ಬದುಕಿಸಿದ್ದು, ಕುಷ್ಟರೋಗ ನಿರ್ಮೂಲನೆ, ಮೂಕನಿಗೆ ಮಾತು ಬರುವಂತೆ ಮಾಡುವುದು ಇತ್ಯಾದಿ ಕಾರ್ಯಗಳಿಂದ ತಿಪ್ಪೇಸ್ವಾಮಿಯವರ ಹೆಸರು ಮನೆ ಮಾತಾಗಿ ಮಕ್ಕಳಿಗೂ ಸಹ ಈ ಹೆಸರನ್ನು ನಾಮಾಂಕಿತ ಮಾಡಿದ್ದಾರೆ. ಇವರು ನಾಯಕನಹಟ್ಟಿಯ ಹೊರಮಠದಲ್ಲಿ ಲಿಂಗೈಕ್ಯರಾಗಿದ್ದಾರೆ.
ಕೊಪ್ಪಳದ ಜಾತ್ರೆ ಬಿಟ್ಟರೆ ಈ ಭಾಗದಲ್ಲಿ ಅತಿದೊಡ್ಡ ಎರಡನೇ ಜಾತ್ರೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ ಆಗಿದೆ. ಹೈದರಾಲಿ ಒಂದು ಗಂಡುಮಗುವಿಗಾಗಿ ಇಲ್ಲಿಗೆ ಬಂದು ನಡೆದುಕೊಂಡ ಇತಿಹಾಸವಿದೆ ಎಂದರು.
ಶ್ರೀ ಚೆಲುಮೆ ರುದ್ರಸ್ವಾಮಿಯವರು ಚಳ್ಳಕೆರೆಯ ಪ್ರಾಂತ್ಯದವರು. ಭೀಕರ ಬರಗಾಲ ಬಂದಾಗ ಅಲ್ಲಿ ಕುಡಿಯುವ ನೀರಿನ ಗುಂಡಿಗಾಗಿ ಚಿಲುಮೆ ತೋಡಿದಾಗ ನೀರು ಬರುತ್ತದೆ. ಇಂತಹ ಪುಣ್ಯವ್ಯಕ್ತಿಗಳ ಸಾಧನೆ ಅದ್ವಿತೀಯವಾದುದು ಎಂದು ತಿಳಿಸಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಎರಡು ರೀತಿಯ ಅನುಸಂಧಾನವಿದೆ. ಪಂಚಗಣಾಧೀಶರ ಪರಂಪರೆ ಮತ್ತು ಶಿವಯೋಗಿ ಪರಂಪರೆ.
ತಿಪ್ಪೇಸ್ವಾಮಿಯವರ ಮಾಡಿದಷ್ಟು ನೀಡು ಭಿಕ್ಷೆ ಎಂಬ ಕಾಯಕ ತತ್ವ ಪವಾಡದ ರೂಪದಲ್ಲಿ ಕಂಡುಬಂದಿತು. ಶರಣರ ವಾಣಿ ಮುಖವಾಣಿಯಾಗಬೇಕು.
ನಾಯಕನಹಟ್ಟಿ ತಿಪ್ಪೇಸ್ವಾಮಿಯವರು ಮುಖಾಭಾಷಿಯಾಗಿದ್ದಾರೆ. ವಿಭಿನ್ನ ರೀತಿಯ ವ್ಯಕ್ತಿಗಳು ತಮ್ಮದೇ ಆದ ಪವಾಡ ಮಾಡಿದ್ದಾರೆ.
ಎಲ್ಲಾ ಕಡೆ ಸಾಮಾನ್ಯ ಭಕ್ತರು ಇಲ್ಲಿನ ಒಕ್ಕಲಾಗಿದ್ದಾರೆ. ಇವರು ಶರಣ ಪರಂಪರೆಯ ಅನರ್ಗ್ಯ ರತ್ನಗಳು. ಆತ್ಮಕಲ್ಯಾಣದ ಪರಂಪರೆ ಶಿವಯೋಗಿಗಳದ್ದಾಗಿದೆ. ಕಾಯಕ ಜೀವಿಗಳ ಜೊತೆ ಇರುವವರು ಪಂಚಗಣಾಧೀಶ್ವರರಾಗಿದ್ದಾರೆಂದು ತಿಳಿಸಿದರು.
ಬಸವ ಬೃಂಗೇಶ್ವರ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮದ ಅನುಭೂತಿ ಪಡೆದು ಶಿವಾನುಭೂತಿ ಪಡೆದವರು. ಜನರ ಕಷ್ಟವನ್ನು ನಿರ್ಮೂಲನೆ ಮಾಡಿದವರು. ಯಾರಲ್ಲಿ ಆಸ್ತಿಕ ಭಾವ ಇರುತ್ತದೆಯೋ ಅವರಲ್ಲಿ ಕಷ್ಟಗಳು ದೂರವಾಗುತ್ತವೆ. ಮನುಷ್ಯ ಬಾಗುವುದನ್ನು ಕಲಿತರೆ ಭವಬಾಧೆಗಳು ದೂರವಾಗುತ್ತವೆ ಎಂದು ನುಡಿದರು.
ಗುರುಮಠಕಲ್ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ವೇದಿಕೆಯಲ್ಲಿದ್ದರು. ವಿಶ್ವನಾಥ ದೇವರು ಮಾತನಾಡಿದರು. ಗೌರಮ್ಮನವರು ತಿಪ್ಪೇಸ್ವಾಮಿಯವರ ಕುರಿತ ಗೀತೆ, ಕೊಲ್ಲಾಪುರದ ಶಿವಾನಂದ ಸ್ವಾಮಿಗಳು ವಚನ ಗೀತೆ ಹಾಡಿದರು. ಉಮೇಶ ಪತ್ತಾರ ವಚನ ಪ್ರಾರ್ಥನೆ ಮಾಡಿದರು. ಶಿಕ್ಷಕ ಬಿ.ಸಿ. ಪ್ರಕಾಶ ಸ್ವಾಗತಿಸಿದರು. ಶಿಕ್ಷಕ ನಾಗಾನಾಯ್ಕ ನಿರೂಪಿಸಿದರು. ಎಸ್.ಎಂ. ಪುಟ್ಟಸ್ವಾಮಿ ವಂದಿಸಿದರು.
