ಬೆಮೆಲ್ ಬಸವ ಬಳಗದ ಸಂಭ್ರಮದ’ ಸುವರ್ಣ ಮಹೋತ್ಸವ’

ಅಶೋಕ್ ಜಿ ಲೋಣಿ
ಅಶೋಕ್ ಜಿ ಲೋಣಿ

‘ಸುವರ್ಣ ಬಸವಸಿರಿ’ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ‘ಬೆಮೆಲ್ ಬಸವ ಶ್ರೀ’ ಪ್ರಶಸ್ತಿ ಪ್ರದಾನ

ಬೆಂಗಳೂರು:

ಮಹಾನಗರದ ಜೀವನಭೀಮಾ ನಗರದಲ್ಲಿರುವ ಸ್ನೇಹ ಸಭಾಭವನದಲ್ಲಿ ಈಚೆಗೆ ‘ಬಸವ ಬಳಗ’ದ 50ನೇ ವರ್ಷದ ‘ಸುವರ್ಣ ಮಹೋತ್ಸವ’ ಸಮಾರಂಭವು ಅತ್ಯಂತ ಅದ್ಧೂರಿಯಾಗಿ ಜರುಗಿತು.

ಕಾರ್ಯಕ್ರಮದ ಸಾನಿಧ್ಯವನ್ನು ಬೆಂಗಳೂರಿನ ಬೇಲಿಮಠ ಮಹಾಸಂಸ್ಥಾನದ ಪೂಜ್ಯ ಶಿವರುದ್ರ ಮಹಾಸ್ವಾಮಿಗಳು ವಹಿಸಿದ್ದರು. ತಮ್ಮ ಅಮೃತ ಹಸ್ತದಿಂದ ‘ಸುವರ್ಣ ಬಸವಸಿರಿ’ ಎಂಬ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡುತ್ತ, ಸಮಾಜದಲ್ಲಿ ಬಸವತತ್ವಗಳ ಅಳವಡಿಕೆಯ ಅಗತ್ಯತೆಯನ್ನು ತಿಳಿಸಿದರು.

ಸಮಾರಂಭದ ಉದ್ಘಾಟನೆಯನ್ನು ಬೆಮೆಲ್ (BEML) ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶಿವಕುಮಾರ ಹೆಚ್.ಜಿ. ಅವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಮಹೇಶ ಎಂ. ಅವರು ವಹಿಸಿದ್ದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಪ್ರೊ. ಸಾಸಲು ಜೈ ವಿಶ್ವನಾಥ್ ಅವರು ಬಸವತತ್ವಗಳು ಹಾಗೂ ವಚನ ಸಾಹಿತ್ಯದ ಕುರಿತು 40 ನಿಮಿಷಗಳ ಕಾಲ ಸುದೀರ್ಘ ಹಾಗೂ ಮೌಲಿಕ ಉಪನ್ಯಾಸ ನೀಡಿದರು.

ಸುದೀರ್ಘ ಕಾಲದ ಸಮಾಜ ಸೇವೆ ಹಾಗೂ ಬಿ.ಇ.ಸಿ.ಎಸ್ (BECS) ಸೊಸೈಟಿಯಲ್ಲಿ ಉಪಾಧ್ಯಕ್ಷರಾಗಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಗುರುರಾಜ ಟಿ.ಎಸ್. ಅವರಿಗೆ ಪ್ರತಿಷ್ಠಿತ ‘ಬೆಮೆಲ್ ಬಸವ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

1977 ರಲ್ಲಿ ಪ್ರಾರಂಭವಾದ ಬಸವ ಬಳಗವು ಯಶಸ್ವಿಯಾಗಿ 50 ವಸಂತಗಳನ್ನು ಪೂರೈಸಿ ಸುವರ್ಣ ಸಂಭ್ರಮದಲ್ಲಿದೆ. ಸಂಸ್ಥೆಯ ಸ್ಥಾಪಕರಾದ ಗುರು ನಂಜಪ್ಪನವರನ್ನು ಕೃತಜ್ಞತೆಯಿಂದ ಗೌರವಿಸಿ ಅಂದಿನಿಂದ ಇಂದಿನವರೆಗೂ ಸಂಸ್ಥೆಯನ್ನು ಮುನ್ನಡೆಸಿದ ಎಲ್ಲಾ ಹಿರಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಿರಿಯ ಚೇತನಗಳಿಗೆ ಗೌರವಪೂರ್ವಕವಾಗಿ ಕೃತಜ್ಞತೆ ಸಲ್ಲಿಸಲಾಯಿತು.

ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರ ಸಮ್ಮುಖದಲ್ಲಿ

ವಚನ ಗಾಯನ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ,

ವಚನ ಗಾಯನ ಮತ್ತು ರಂಗೋಲಿ ಸ್ಪರ್ಧೆ ಗಳಲ್ಲಿ ವಿಜೇತರಾದ ಮಹಿಳೆಯರಿಗೆ,

ಪುರುಷರಿಗೆ: ವಚನ ಗಾಯನ, ಪ್ರಬಂಧ ಸ್ಪರ್ಧೆ ಹಾಗೂ ವಚನ ವಿಶ್ಲೇಷಣೆಯಲ್ಲಿ ವಿಜೇತರಾದ ಪುರುಷರಿಗೆ ಬಹುಮಾನ ವಿತರಿಸಲಾಯಿತು.

ಸಂಜೆ ಬೆಮೆಲ್ ಕಲಾವಿದರಿಂದ ಅರ್ಥಪೂರ್ಣ ‘ಕಲ್ಯಾಣ ಕ್ರಾಂತಿ’ ನಾಟಕ ಪ್ರದರ್ಶನಗೊಂಡಿತು. ಬಂದಂತಹ ಅತಿಥಿ ಮಹೋದಯರನ್ನು ಸನ್ಮಾನಿಸಿ, ಸಮಾರಂಭಕ್ಕೆ ಆಗಮಿಸಿದ ಸರ್ವ ಭಕ್ತಾದಿಗಳಿಗೆ ಪ್ರಸಾದ (ದಾಸೋಹ) ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಐತಿಹಾಸಿಕ ಸಮಾರಂಭದಲ್ಲಿ ಕೆಜಿಎಫ್ ಬಸವ ಸಮಿತಿ, ಅಕ್ಕನ ಬಳಗ, ಮೈಸೂರು ಬಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಬೆಂಗಳೂರು ಸಂಕೀರ್ಣದ ಬಸವ ಬಳಗದ ಸರ್ವಸದಸ್ಯರು ಕುಟುಂಬ ಸಮೇತರಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *