ಶ್ರಾವಣಮಾಸ : ಮುರುಘಾ ಪರಂಪರೆಯ ಮಹಾಸ್ವಾಮಿಗಳ ಸ್ಮರಣೆ
ಚಿತ್ರದುರ್ಗ:
ಶೂನ್ಯಪೀಠ ಪರಂಪರೆಯ ಚಿತ್ರದುರ್ಗ ಬೃಹನ್ಮಠ ಮಹಾಸಂಸ್ಥಾನವು ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ನೆಲೆಸಿದ ಮೇಲೆ ತನ್ನದೇ ಆದ ಪ್ರಭಾವ ಬೀರಿತು. ಅವರು ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತರಾಗದೆ, ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲೂ ಉನ್ನತಿಯನ್ನು ಸಾಧಿಸಿದರೆಂಬುದಕ್ಕೆ ಅನೇಕ ಸಾಹಿತ್ಯ ಕೃತಿಗಳು ಸಾಕ್ಷಿಯಾಗಿವೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಡಾ. ಬಸವಕುಮಾರ ಸ್ವಾಮೀಜಿ ಅವರು ಪರಂಪರೆಯ ಐತಿಹ್ಯವನ್ನು ಸ್ಮರಿಸಿದರು.
ಅವರಿಂದು ಬೆಳಗಾ ಮುಂಜಾನೆ ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಶ್ರಾವಣಮಾಸದ ಪ್ರಯುಕ್ತ ಏರ್ಪಡಿಸಿದ್ದ ವಚನಾಭಿಷೇಕ ಹಾಗೂ ಮುರುಘಾ ಪರಂಪರೆಯ ಮೂಲಕರ್ತೃ ಮುರಿಗೆ ಶಾಂತವೀರ ಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಮುರುಘರಾಜೇಂದ್ರ ಮಹಾಸ್ವಾಮಿಗಳನ್ನು ಸ್ಮರಣೆ ಮಾಡುವುದೇ ಒಂದು ಸುದೈವ. ಅವರು ಈ ನಾಡಿಗೆ ಕೊಟ್ಟಿರುವ ಅನುಪಮ ಸೇವೆ ಬಣ್ಣನೆಗೆ ನಿಲುಕದ್ದು. ಅವರ ತಪಸ್ಶಕ್ತಿ, ಪ್ರಖರ ಪಾಂಡಿತ್ಯ ಹಾಗೂ ಶಿವಯೋಗದ ಬಲದಿಂದ ಮುಂದಾಗುವ ಸನ್ನಿವೇಶಗಳನ್ನು ತಿಳಿಸುವ ರೀತಿ ಅವರಿಗಷ್ಟೇ ಸಾಧ್ಯ ಎನ್ನುವುದಕ್ಕೆ ಈ ನಾಡಿನ ರಾಜ ಪರಂಪರೆಯಲ್ಲಿ ಬಂದ ಭರಮಣ್ಣ ನಾಯಕರೇ ಸಾಕ್ಷಿ.
ದನಗಾಹಿಯೊಬ್ಬ ರಾಜನಾಗುವುದೆಂದರೆ ಅದು ಗುರುಗಳ ತಪಸ್ಶಕ್ತಿಯ ಫಲ ಎಂದು ನುಡಿದರು.
ಇಂತಹ ಅನೇಕ ಗುರುಗಳು ಪೀಠದ ಘನತೆಯನ್ನು ಎತ್ತಿಹಿಡಿದಿದ್ದಾರೆ. ಅವರುಗಳ ಸ್ಮರಣೆ ಈ ಶ್ರಾವಣಮಾಸದಲ್ಲಿ ನಿತ್ಯ ನಡೆಯಲಿದೆ ಮತ್ತು ಸಂಜೆ ಚಿತ್ರದುರ್ಗ ನಗರ, ಶ್ರೀಮಠದಲ್ಲಿ ಪುಣ್ಯಪುರುಷರ ಚಿಂತನ ಮಾಲಿಕೆಯಲ್ಲಿ ಜೀವನ ಸಾಧನೆಯ ಉಪನ್ಯಾಸ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಬಸವ ಮುರುಘೇಂದ್ರ ಶ್ರೀಗಳು, ವಚನಾಭಿಷೇಕ ನಡೆಸಿಕೊಟ್ಟ ಸೇವಾಕರ್ತರಾದ ಗುತ್ತಿನಾಡು ಜಿ.ಎಂ. ಪ್ರಕಾಶ ಕುಟುಂಬದವರು, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಜೆ.ಎಸ್. ಮುರುಘೇಶ, ಶ್ರೀಮಠದ ದಾಸೋಹದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ, ಗುರುಕುಲ ಸಾಧಕರು ಭಾಗವಹಿಸಿದ್ದರು.
