ರಾಯಚೂರು:
ನಗರದ ಬಸವ ಕೇಂದ್ರದಲ್ಲಿ ಲಿಂಗಾಯತ ನಿಜಾಚಾರಣೆ ತರಬೇತಿ ನಡೆಯಿತು.
ಅನುಭಾವಿ ಪಿ. ರುದ್ರಪ್ಪ, ಜಿಲ್ಲಾಧ್ಯಕ್ಷರು, ಜಾ. ಲಿಂ. ಮಹಾಸಭಾ, ರಾಯಚೂರು ಇವರು ಕ್ರಿಯಾಮೂರ್ತಿಗಳ ಸಭೆಯಲ್ಲಿ ಅನುಭಾವ ಹಂಚಿಕೊಂಡರು.

ಅವರು ಮಾತನಾಡುತ್ತ, ರಾಯಚೂರಿನ ಬಸವ ಕೇಂದ್ರ ನಗರದ ಪ್ರತಿಷ್ಠಿತ ಬಡಾವಣೆ ಬಸವೇಶ್ವರವನಗರದಲ್ಲಿ ಇಂದು ಸುಸಜ್ಜಿತ ಸ್ವಂತ ಕಟ್ಟಡವನ್ನ ಹೊಂದಿ, ಶರಣರ ನೆನಹು, ಪ್ರತಿ ಭಾನುವಾರ ಶರಣ ಸಂಗಮ, ವಚನ ಪ್ರಾರ್ಥನೆ, ಅನುಭಾವಿಗಳಿಂದ ಪ್ರವಚನ ಇತ್ಯಾದಿ ಕಾರ್ಯಕ್ರಮ ನಡೆಯುತ್ತ ಬರುತ್ತಿದೆ.
ಇಂದು ಒಂದು ಹೊಸ ಹೆಜ್ಜೆ ಬಸವ ಪ್ರಣೀತ ನಿಜಾಚರಣೆಯ ಕ್ರಿಯಾಮೂರ್ತಿಗಳ ತಯಾರಿ ಕಾರ್ಯಕ್ರಮ.
1 ನಿಜಾಚರಣೆ ಎಂದರೇನು?
2 ನಿಜಚಾರಣೆಗಳಲ್ಲಿ ಸಂಸ್ಕೃತ ಶ್ಲೋಕಗಳನ್ನು ಏಕೆ ಬಳಸಲಾಗದು.
3 ವಚನಗಳು ಮುಂದಿನ ಬದುಕಿಗೆ ಹೇಗೆ ಮಾರ್ಗದರ್ಶಿ ಆಗುತ್ತವೆ?
4 ಕ್ರಿಯಾಮೂರ್ತಿಗಳಲ್ಲಿ ಇರಬೇಕಾದ ತತ್ವ ಬದ್ಧತೆ.
5 ಅನ್ಯ ಆಚರಣೆಗಳ ಬಗ್ಗೆ ಕ್ರಿಯಾಮೂರ್ತಿಗಳ ನಿಲುವು.
6 ನಿಜಾಚರಣೆಗಳು ಬಸವ ತತ್ವ ವಿಸ್ತಾರಕ್ಕೆ ಹೇಗೆ ಪೂರಕ.
7 ನಿಜಾಚಾರಣೆಗಳ ಭವ್ಯತೆ ದಿವ್ಯತೆಗಳ ಬಗ್ಗೆ ಚರ್ಚೆ ನಡೆಯಿತು.
ನಿಜ ಎಂದರೆ ಸತ್ಯವಸ್ತು. ಆ ಪರಶಿವ ಶಕ್ತಿಯೇ ನಿಜ. ಆ ಶಕ್ತಿಯನ್ನು ಆಧಾರಿಸಿ ಮಾಡುವ ಕ್ರಿಯೆಗಳೆಲ್ಲ ಪರಶಿವನಿಗೆ ಪ್ರಿಯವಾದ ನಿಜಾಚರಣೆಗಳು.

ಬಸವ ಸಿದ್ಧಾಂತವನ್ನು ಒಪ್ಪಿ ನಡೆವ ಭಕ್ತ ಕುಟುಂಬಗಳು ತಮ್ಮ ತಮ್ಮ ಮನೆಗಳಲ್ಲಿ ನಡೆಯುವ ಜನನ, ಕಲ್ಯಾಣ ಮಹೋತ್ಸವ, ಸೀಮಂತ, ಗುರುಪ್ರವೇಶ, ಅಂತ್ಯಕ್ರಿಯೆ ಇತ್ಯಾದಿಗಳನ್ನು ವಚನಧಾರಿತವಾಗಿ ಹೇಗೆ ಮಾಡಬೇಕು? ಎನ್ನುವ ವಿಚಾರಗಳ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.
ಕುಟುಂಬದ ಯಾವುದೇ ಕಾರ್ಯಕ್ರಮಗಳಲ್ಲಿ ಬಳಸುವ ಸಂಸ್ಕೃತ ಶ್ಲೋಕಗಳಲ್ಲಿ ದೇವತೆಗಳನ್ನು ಆರಾಧಿಸುವದಾಗಿದೆ. ಪುರಾಣಗಳಲ್ಲಿ ಬರುವ ಪುರುಷರ ಆರಾಧನೆ ಮಾಡುವ ಅರ್ಥಗಳಿವೆ. ಲಿಂಗಾಯತರು ಶಿವನಿಂದ ಫಲ ಪದವಿ ಪಡೆದು ಇಂದ್ರ, ವರುಣ, ಬ್ರಹ್ಮ, ವಿಷ್ಣು, ರುದ್ರ, ಸೂರ್ಯ, ಚಂದ್ರ, ಇತ್ಯಾದಿ ದೇವತೆಗಳು ಹುಟ್ಟು ಸಾವಿಗೆ ಒಳಗಾಗುವವರು, ಅವರಿಗೆ ಮುಕ್ತಿ ಸಾಧ್ಯವಾಗಿಲ್ಲ, ಹಾಗಾಗಿ ಲಿಂಗಾಯತರಿಗೆ ಅವರು ದೇವರು ಅಲ್ಲ.

ಸಾಕಾರ ನಿರಾಕಾರದ ಅಸ್ತಿತ್ವ ಮೀರಿದ ನಿರವಯ ಸ್ವರೂಪ ಶಿವ ಎಂದು, ಆ ಶಿವನನ್ನು ಕರಸ್ಥಳಕ್ಕೆ ತಂದು ಪೂಜಿಸಿದವರು ಲಿಂಗಾಯತರು. ಅಂಥವರು ಮನೆಯ ಕಾರ್ಯಕ್ರಮಗಳಲ್ಲಿ ಹುಟ್ಟು ಸಾವಿಗೆ ಒಳಗಾದ ದೇವತೆಗಳನ್ನು ಭಜಿಸುವ ಶ್ಲೋಕ, ಮಂತ್ರ ಹೇಳಿದರೆ ದ್ವಂದ್ವ ಭಾವ ಉಂಟಾಗಿ ಜ್ಞಾನ ಕ್ರಿಯೆಗಳ ಮಧ್ಯೆ ಅಂತರ ಉಂಟಾಗುತ್ತದೆ. ಹಾಗಾಗಿ ಲಿಂಗಾಯತರ ನಿಜಾಚರಣೆಗಳಲ್ಲಿ ಸಂಸ್ಕೃತ ಶ್ಲೋಕ, ಮಂತ್ರಗಳ ಉಪಯೋಗ ಮಾಡಲಾಗದು.
ಶಿವನ ಸ್ವರೂಪಿ ಶರಣರ ವಚನಗಳೇ ಸರ್ವಶ್ರೇಷ್ಠ ಎಂದು ಅರಿತು ವಚನಗಳನ್ನೇ ಬಳಸುವದು ರೂಢಿಯಲ್ಲಿದೆ. ನಮ್ಮ ಶರಣರ ವಚನಗಳ ಅಧ್ಯಯನಕ್ಕೆ ಶತ ರುದ್ರಯಾಗ, ಪುರಾಣ, ಗಾಯತ್ರಿ ಜಪ ಯಾವವು ಸಮಬಾರದು ಎಂದು ಶರಣರೇ ಹೇಳಿದ್ದಾರೆ.
ಶರಣರ ವಚನಗಳಲ್ಲಿ ಅವರ ಸಾಧನೆಯ ಬೆಳಕು ಇದೆ. ಅವುಗಳನ್ನು ಉಚ್ಚರಿಸುವ ಮೂಲಕ ಆ ಅನುಗ್ರಹ ಆ ಮನೆಯಲ್ಲಿ ಹರಿದು ಪವಿತ್ರ ನೆಲೆ ಉಂಟಾಗುತ್ತದೆ. ಇದುವೇ ವಚನಗಳ ದಿವ್ಯತೆ ಭವ್ಯತೆ.
ವಚನಗಳಲ್ಲಿ ಕೇವಲ ಆಧ್ಯಾತ್ಮಿಕತೆ ಇಲ್ಲ, ಅಲ್ಲಿ ಬದುಕಿನ ಮಾರ್ಗ ಇದೆ. ವಚನಗಳ ನೆನಹು ಸಾರ್ಥಕ ಬದುಕಿಗೆ ಪ್ರೇರಣೆ ನೀಡುತ್ತದೆ. ಕುಟುಂಬದಲ್ಲಿ ಪರಸ್ಪರ ಪ್ರೇಮ ಸಂಬಂಧಗಳು ಬೆಸೆಯುತ್ತವೆ, ಕುಟುಂಬ ಜೀವನ ಸುಂದರವಾಗುತ್ತದೆ.
ವಚನಾಧಾರಿತ ನಿಜಾಚರಣೆಗಳು ಶರಣರ ಬದುಕಿನ ರೀತಿಯನ್ನು ವಿವರಿಸುವ ಕಾರಣ ಅವುಗಳನ್ನು ಮಾಡುವ ಮೂಲಕ, ಶರಣರ ಆಶಯದ ಮರೆತು ಹೋದ ಶಿವಾಚಾರದ ಘನವನ್ನು ಜನಮಾನಸಕ್ಕೆ ಪರಿಣಾಮಕಾರಿಯಾಗಿ ಮುಟ್ಟಿಸುವ ಕೆಲಸ ನಡೆಯುತ್ತದೆ.
ಈ ಸಂಧರ್ಭದಲ್ಲಿ ಕ್ರಿಯಾಮೂರ್ತಿಗಳಲ್ಲಿ ಇರಬೇಕಾದ ತತ್ವಬದ್ಧತೆ ಶುದ್ಧ ಬದುಕಿನ ಬಗ್ಗೆ ಚರ್ಚಿಸಲಾಯಿತು.
ಕ್ರಿಯಾಮೂರ್ತಿಗಳು ಶರಣತತ್ವದ ಅನ್ವಯ ಪವಿತ್ರ ಬದುಕು ನಡೆಸಿ 21ನೇ ಶತಮಾನದ ಚರ ಜಂಗಮರಾಗಬೇಕು.
ನಿಜಾಚರಣೆ ಮಾಡುವಾಗ ಅನ್ಯ ಆಚರಣೆಗಳ, ಅನ್ಯ ದೇವತೆಗಳ, ಅನ್ಯ ಧರ್ಮ ಮಾರ್ಗಗಳ ಚರ್ಚೆ, ಟೀಕೆ ಮಾಡಬಾರದು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು. ಟೀಕೆ ತರ್ಕಗಳು ಆ ಸ್ಥಳದಲ್ಲಿ ಋಣಾತ್ಮಕ ವಲಯವನ್ನು ನಿರ್ಮಿಸುವ ಕಾಲಹರಣವಾಗಿ ಮತ್ತು ಪವಿತ್ರ ವಾತಾವರಣ ಕೆಡುತ್ತದೆ ಎನ್ನುವ ಎಚ್ಚರಿಕೆಯನ್ನು ನೆನಪಿಸಿಕೊಳ್ಳಲಾಯಿತು.
ಕೊನೆಯಲ್ಲಿ ನಿಜಾಚಾರಣೆ ಮಾಡುವ ಮನೆಯ ಬಳಗದಲ್ಲಿ ಇರುವ ಸಂಭ್ರಮಕ್ಜೆ ಧಕ್ಕೆ ಬಾರದಂತೆ ಅಲ್ಲಿ ಮೌಢ್ಯ ತೂರದಂತೆ ಎಚ್ಚರ ವಹಿಸಿ, ಕಾರ್ಯಕ್ರಮ ಮಂಗಲ ಮಾಡಬೇಕು.
ಅಂತ್ಯಕ್ರಿಯೆಯಂಥ ಸಂಧರ್ಭದಲ್ಲಿ ಕ್ರಿಯಾಮೂರ್ತಿಗಳು ಕ್ರಿಯೆ ಮಾಡುವಾಗ ಯಾವುದೇ ಭಯಕ್ಕೆ ಒಳಗಾಗಬಾರದು. ಮನೆಯವರಿಗೆ ಧೈರ್ಯ ತುಂಬಬೇಕು. ಪತಿಯನ್ನು ಕಳೆದುಕೊಂಡ ಹೆಣ್ಣುಮಗಳ ಮನಸ್ಸಿಗೆ ಆಘಾತ ಉಂಟುಮಾಡುವ, ಸಾರ್ವಜನಿಕವಾಗಿ ಬಳೆ ಒಡೆಯುವದು, ತಾಳಿ ಕಿತ್ತುವದು, ಕಂಬಳಿ ಹೊದಿಸುವ ಹೀಗೆ ಅವಮಾನ ಮಾಡುವ ಯಾವುದೇ ಕಾರ್ಯ ಜರುಗದಂತೆ ಮನ ಒಲಿಸಬೇಕು.
ಕಲ್ಯಾಣ ಮಹೋತ್ಸವ ಮತ್ತು ಇತರ ಮಂಗಳ ಕಾರ್ಯಗಳಲ್ಲಿ ವಿಧವೆ ಎನಿಸಿಕೊಂಡ ಮಹಿಳೆಯರಿಗೆ ಸಮಾನ ಅವಕಾಶ ಮಾಡಿಕೊಡಬೇಕು. ಎಲ್ಲರೊಳಗಿರುವ ಗಂಡನ ನೆನಹು ಮಾಡಿಕೊಟ್ಟು ವಾತಾವರಣ ಶುದ್ಧಗೊಳಿಸಬೇಕು. ಹೀಗೆ ಕ್ರಿಯಾಮೂರ್ತಿಗಳಿಗೆ ಹಲವು ಸೂಚನೆಗಳನ್ನು ನೀಡಲಾಯಿತು.
ಪ್ರಾರಂಭದಲ್ಲಿ ಮಕ್ಕಳಿಗೆ ವಚನ ಪಾಠಶಾಲೆಯನ್ನು ಡಾ. ಪ್ರಿಯಾಂಕ ಗದ್ವಾಲ ನಡೆಸಿಕೊಟ್ಟರು. ವಚನ ಗಾಯನವನ್ನು ವೆಂಕಣ್ಣ ಆಶಾಪುರ, ನಾಗೇಶ್ವರಪ್ಪ ನಡೆಸಿಕೊಟ್ಟರು. ಸಾಮೂಹಿಕ ಬಸವ ಪ್ರಾರ್ಥನೆ ಪಾರ್ವತಿ ಪಾಟೀಲ ಮಾಡಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡರು ಮಾಡಿದರು.
ಕಾರ್ಯಕ್ರಮದಲ್ಲಿ ಚನ್ನಬಸವ ಇಂಜಿನಿಯರ್, ಎಸ್ ಶಂಕರಗೌಡ, ಸರೋಜಾ ಮಾಲಿಪಾಟೀಲ, ಮುಕ್ತಾ ನರಕಲದಿನ್ನಿ, ತಾಯಮ್ಮ ಯಲ್ಲನಗೌಡ, ಚನ್ನಬಸವಣ್ಣ ಮಹಾಜನಶೆಟ್ಟಿ, ಜಗದೇವಿ ಚನ್ನಬಸವ, ಚಿನ್ಮಯಿ ಮಾಚನೂರ ಮುಂತಾದ ಶರಣರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

Excellent, this is the need of the hour. We must not spend time in criticising other religion practices. Instead we must focus on strengthening Basava principles and practices to every Lingayat household with devotion and compassion.