ಮರಣವೇ ಮಹಾನವಮಿ ಮಹೋತ್ಸವಕ್ಕೆ ಸಂಭ್ರಮದ ತೆರೆ

ಸತ್ಯ ಸ್ಥಾಪನೆಗೆ ಶರಣರಿಂದ ಪ್ರಾಣಾರ್ಪಣೆ: ಪರುಷಕಟ್ಟೆ ಚನ್ನಬಸವಣ್ಣ

ಬೀದರ :

ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂಬತ್ತು ದಿನಗಳ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವವು ಸಂಭ್ರಮದ ಮಧ್ಯೆ ತೆರೆ ಕಂಡಿತು.

ಕೊನೆಯ ದಿನ ನಡೆದ ಕಲ್ಯಾಣ ಕ್ರಾಂತಿ ವಿಜಯೋತ್ಸವ ಗೋಷ್ಠಿಯು ಕಲ್ಯಾಣ ಕ್ರಾಂತಿಯ ಮೇಲೆ ಬೆಳಕು ಚೆಲ್ಲಿತು.

ಬಲಿದಾನ ಮರೆಯಲಾಗದು :

ಸತ್ಯ ಸ್ಥಾಪನೆಗಾಗಿ ಶರಣರು ಪ್ರಾಣಾರ್ಪಣೆಗೈದರು. ಶರಣರ ತ್ಯಾಗ, ಬಲಿದಾನ ಎಂದೆಂದಿಗೂ ಮರೆಯಲಾಗದು ಎಂದು ಗೋಷ್ಠಿಯ ಸಾನಿಧ್ಯ ವಹಿಸಿದ್ದ ಪರುಷಕಟ್ಟೆ ಚನ್ನಬಸವಣ್ಣ ಹೇಳಿದರು.

ಬಸವಣ್ಣನವರ ಜನನದೊಂದಿಗೆ ಕಲ್ಯಾಣ ಕ್ರಾಂತಿ ಆರಂಭವಾಯಿತು. ಅವರು ಹುಟ್ಟಿದಾಕ್ಷಣವೇ ಓರ್ವ ಅಂತ್ಯಜನ ಶಿಕ್ಷೆ ರದ್ದಾಯಿತು ಎಂದು ತಿಳಿಸಿದರು.

ಅಕ್ಕನಿಗಿಲ್ಲದ ಜನಿವಾರ, ಧಾರ್ಮಿಕ ಸಂಸ್ಕಾರ ತನಗೂ ಬೇಡವೆಂದು ಬಾಲ್ಯದಲ್ಲಿಯೇ ಮನೆ ಬಿಟ್ಟ ಬಸವಣ್ಣ ಸರ್ವರಿಗೂ ಸಾಮಾಜಿಕ ನ್ಯಾಯ ಕೊಡಿಸಲು ಕಲ್ಯಾಣ ಕ್ರಾಂತಿಗೈದರು. ಹರಳಯ್ಯ ವಧುವರಸರ ಬಲಿದಾನ ಈ ಕ್ರಾಂತಿಗೆ ಕಳಸವಿಟ್ಟಂತಾಯಿತು ಎಂದು ಹೇಳಿದರು.

ಶರಣರು ಸಂಪ್ರದಾಯವಾದಿಗಳನ್ನು ಎದುರಿಸಿ ಉಳವಿಯ ಕಾಡಿನಲ್ಲಿ ವಚನಗಳನ್ನು ಉಳಿಸಿ ರಕ್ಷಿಸಿದರು. ಉಳವಿ ಕಾಡಿನಿಂದ ಮತ್ತೆ ನಾಡಿಗೆ ವಚನಗಳನ್ನು ತಂದ ಶ್ರೇಯಸ್ಸು ಅಕ್ಕನಾಗಮ್ಮ ಅವರಿಗೆ ಸಲ್ಲುತ್ತದೆ. ಇದರ ಸವಿ ನೆನಪಿಗಾಗಿಯೇ ಕಲ್ಯಾಣ ಕ್ರಾಂತಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಮಾನವೀಯ ಮೌಲ್ಯಗಳ ಆಗರವಾದ ವಚನಗಳಿಗೆ ಪರಮೋಚ್ಚವಾದ ಗೌರವ ಸಲ್ಲಿಸಬೇಕೆಂದು ಅಕ್ಕ ಅನ್ನಪೂರ್ಣತಾಯಿ ಅವರು ವಚನಗಳಿಗೆ ಪಟ್ಟಗಟ್ಟಿದರು. ಲಿಂಗಾಯತ ಧರ್ಮಗ್ರಂಥ ಗುರು ವಚನವೆಂದು ತಲೆ ಮೇಲೆ ಹೊತ್ತು ಮೆರೆಸಿದರು ಎಂದು ಹೇಳಿದರು.

ಅನುಭಾವ ಮಂಡಿಸಿದ ಡಾ. ದೇವಕಿ ನಾಗೂರೆ ಅವರು, ಮನುಕುಲದ ಇತಿಹಾಸದಲ್ಲಿ ಕಲ್ಯಾಣ ಕ್ರಾಂತಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಅಂದು ಕಲ್ಯಾಣ ಕೈಲಾಸಕ್ಕೆ ನಿಚ್ಚಣಿಕೆಯಾಗಿತ್ತು ಎಂದು ತಿಳಿಸಿದರು.

ವಿಶ್ವದ ಮೊದಲ ಸಂಸತ್ತು ಸ್ಥಾಪಿಸಿದ ಬಸವಣ್ಣ ಅಲ್ಲಿ ಎಲ್ಲರಿಗೂ ಸಮಾನವಾಗಿ ಕುಳಿತು ಚರ್ಚೆಗೆ ಅವಕಾಶ ಮಾಡಿದರು. ಶೋಷಿತರು, ಅಂತ್ಯಜರು, ಮಹಿಳೆಯರೆಂಬ ಭೇದವಿಲ್ಲದೆ ಎಲ್ಲರೂ ಚರ್ಚೆಯಲ್ಲಿ ಪಾಲ್ಗೊಂಡು ವಚನ ಬರೆದದ್ದು ಮತ್ತೆಲ್ಲಿಯೂ ಕಾಣಸಿಗದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಚೆನ್ನಮ್ಮ ಎಚ್. ಸ್ವಾಮಿ ಅವರು, ಎಲ್ಲರೂ ಮರಣಕ್ಕೆ ಭಯಪಡುವರು. ಆದರೆ, ಹರಳಯ್ಯ-ಮಧುವರಸರಾದಿಗಳು ಮರಣವೇ ಮಹಾನವಮಿ ಎಂದು ತತ್ವಕ್ಕಾಗಿ ನಗು ನಗುತ್ತಾ ಪ್ರಾಣ ತೆತ್ತರು ಎಂದು ಹೇಳಿದರು.

ಜ್ಯೋತಿ ಸಿ. ಪಾಟೀಲ ವಚನ ಪಠಣಗೈದು ಗೋಷ್ಠಿಯನ್ನು ಉದ್ಘಾಟಿಸಿದರು, ಲಲಿತಾ ಜಿ. ಮೋಳಕೆರೆ ಅಧ್ಯಕ್ಷತೆ ವಹಿಸಿದ್ದರು,ರೇಣುಕಾ ಬಿ. ಖಂಡ್ರೆ, ಸುನೀತಾ ಸೋಮನಾಥ ಪಾಟೀಲ, ವಿಜಯಲಕ್ಷ್ಮಿ ಗೋರ್ಟೆಕರ್ ಇದ್ದರು.

ವಚನಶ್ರೀ, ಗುರುಶ್ರೀ, ಶ್ಯಾಮಲಾ ಎಲಿ, ಮಲ್ಲಮ್ಮ ಹೆಬ್ಬಾಳೆ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ವೈಷ್ಣವಿ ಅಭಿಷೇಕ ಅವರ ಜಾನಪದ ನೃತ್ಯ ಆಕರ್ಷಕವಾಗಿತ್ತು.

ಉಷಾ ಬೆಳಕೋಟಿ ಸ್ವಾಗತಿಸಿದರು. ಲಾವಣ್ಯ ಹಂಗರಗಿ ನಿರೂಪಿಸಿದರು. ಸಂಗೀತಾ ರಾಜಶೇಖರ ಪಾಟೀಲ ಭಕ್ತಿ ದಾಸೋಹಗೈದರು.

ಕಾರ್ಯಕ್ರಮದ ಕೊನೆಯಲ್ಲಿ ಶರಣ-ಶರಣೆಯರು ವಚನಗಳ ಹಾಡಿನೊಂದಿಗೆ ಕುಣಿದು ಕುಪ್ಪಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *