ಜೇವರಗಿ:
ಸ್ಥಳೀಯ ಷಣ್ಮುಖ ಶಿವಯೋಗಿ ಬ್ರಿಗೇಡ್ ವತಿಯಿಂದ ವಿಶ್ವಗುರು ಬಸವಣ್ಣ ಅವರ 893ನೇ ಜಯಂತ್ಯುತ್ಸವವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ವಿವಿಧ ಕಲಾತಂಡಗಳ ಪ್ರದರ್ಶನ, ಬಸವಣ್ಣ ಹಾಗೂ ಷಣ್ಮುಖ ಶಿವಯೋಗಿಗಳ ಭಾವಚಿತ್ರಗಳ ಮೆರವಣಿಗೆ ಮತ್ತು ಭಕ್ತರ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ವಿಶೇಷ ಮೆರುಗು ಪಡೆಯಿತು.
ಪಟ್ಟಣದ ಷಣ್ಮುಖ ಶಿವಯೋಗಿಗಳ ವಿರಕ್ತಮಠದ ಆವರಣದಲ್ಲಿ ಬಸವಣ್ಣನವರ ಮೂರ್ತಿ ಹಾಗೂ ಷಣ್ಮುಖ ಶಿವಯೋಗಿಗಳ ಭಾವಚಿತ್ರವನ್ನು ಪ್ರತ್ಯೇಕ ವಾಹನಗಳಲ್ಲಿ ಅಲಂಕರಿಸಿ ಮೆರವಣಿಗೆ ನಡೆಸಲಾಯಿತು.

ಸೊನ್ನ ವಿರಕ್ತಮಠದ ಪೂಜ್ಯ ಶಿವಾನಂದ ಸ್ವಾಮೀಜಿ ಹಾಗೂ ಯಡ್ರಾಮಿಯ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ವಿರಕ್ತಮಠದಿಂದ ಆರಂಭವಾದ ಮೆರವಣಿಗೆಯು ಅಂಚೆ ಕಚೇರಿ, ಅಖಂಡೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಾಂತನಗರ ಕ್ರಾಸ್ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಸಂಚರಿಸಿತು.

ಸುಮಾರು 1.5 ಕಿಲೋಮೀಟರ್ ದೂರ ನಡೆದ ಮೆರವಣಿಗೆಯಲ್ಲಿ ಹಲಿಗೆ, ಡೊಳ್ಳು, ನಾಸಿಕ್ ಡೋಲು, ಡಿಜೆ, ಗೊಂಬೆಗಳ ಪ್ರದರ್ಶನ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡು ಜನರ ಗಮನ ಸೆಳೆದವು.
ಬಸವಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಸವಣ್ಣನವರ, ಷಣ್ಮುಖ ಶಿವಯೋಗಿಗಳ ಜಯಘೋಷ ಮೊಳಗಿಸಿದರು.

ಮಠದ ಆವರಣದಲ್ಲಿ ಭಾಗವಹಿಸಿದ ಭಕ್ತರಿಗೆ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಶಿವಾನಂದ ಸ್ವಾಮೀಜಿ, “12ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಸಾಮಾಜಿಕ, ಧಾರ್ಮಿಕ ಮತ್ತು ಮಾನವೀಯ ಸಾಧನೆ ಇಂದಿಗೂ ಪ್ರಸ್ತುತವಾಗಿದೆ.

ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳು ಎಲ್ಲ ಸಮುದಾಯಗಳಲ್ಲೂ ಪಾಲನೆಯಾಗಬೇಕು. ಅವರ ವಚನ ಸಾಹಿತ್ಯ ವಿಶ್ವಕ್ಕೆ ಮಾದರಿಯಾಗಿದ್ದು, ಬಸವೇಶ್ವರರು ತಮ್ಮ ವಿಚಾರಧಾರೆಯ ಮೂಲಕ ವಿಶ್ವಮಾನವರಾಗಿದ್ದಾರೆ”ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ, ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿ ರಾಜಶೇಖರ ಸೀರಿ, ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ, ಮಹಾಸಭಾ ತಾಲ್ಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿ, ಗುಂಡು ಸಾಹು ಗೋಗಿ, ವಿಶ್ವನಾಥ ಇಮ್ಮಣ್ಣಿ, ರವಿ ಕೋಳಕೂರ, ಅನೀಲ ರಾಂಪೂರ, ಬಾಪುಗೌಡ ಪಾಟೀಲ ಬಿರಾಳ, ಬಸವ ಕೇಂದ್ರದ ಶರಣಬಸವ ಕಲ್ಲಾ, ಮಹಾಂತಯ್ಯ ಹಿರೇಮಠ, ಗುರುಬಸಯ್ಯ ಸ್ಥಾವರಮಠ, ನೀಲಕಂಠ ಅವಂಟಿ, ಈರಯ್ಯಸ್ವಾಮಿ ಘಂಟಿಮಠ, ಮಲ್ಲಿಕಾರ್ಜುನ ಬಿರಾದಾರ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ವಿಶ್ವನಾಥ ಹಳಿಮನಿ, ಆಕಾಶ ಕೋಳಕೂರ, ಗುಂಡು ಹಿರೇಗೌಡ, ಗುರುಗೌಡ ಮಾಲಿಪಾಟೀಲ, ಆನಂದ ಕಲ್ಲಾ, ಸಿದ್ದು ಸಾಹು ಮದರಿ, ಸಂತೋಷ ಮದರಿ, ಸಂಗನಗೌಡ ಪಾಟೀಲ ಅವರಾದ, ಬಸವರಾಜ ಸಾಸಾಬಾಳ, ರಾಜೇಶ ಸಜ್ಜನ, ರೇವಣಸಿದ್ದಪ್ಪ ಅಂಕಲಕೋಟಿ, ಶಾಂತಗೌಡ ಚಾಮನೂರ, ಈರಣ್ಣ ಅವರಾದ, ಮಹಾಂತೇಶ ಪವಾರ, ಧರ್ಮರಾಜ ಜೋಗೂರ, ಸಿದ್ದಣ್ಣ ಗಡ್ಡದ, ಸತೀಶ ಕಲ್ಲಾ ಸೇರಿದಂತೆ ಅನೇಕ ಗಣ್ಯರು ಹಾಗೂ ಬಸವಾಭಿಮಾನಿಗಳು ಭಾಗಿಯಾಗಿದ್ದರು.
