ಬಸವಕಲ್ಯಾಣ :
ನಗರದ ವಿಶ್ವಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ವತಿಯಿಂದ ನವೆಂಬರ್ 28 ಮತ್ತು 29 ರಂದು ನಡೆಯುವ 47ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ನಿಮಿತ್ತ ಪ್ರಚಾರ ರಥಕ್ಕೆ ಅನುಭವ ಮಂಟಪ ಉತ್ಸವ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಶಾಸಕ ಶರಣು ಸಲಗರ ಅವರಿಂದ ಚಾಲನೆ ನೀಡಲಾಯಿತು.
ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅನುಭವ ಮಂಟಪ ಉತ್ಸವ ಬಸವಾದಿ ಶರಣರ ದಿವ್ಯ ತತ್ವ ಸಂದೇಶಗಳನ್ನು ಜನಮಾನಸದಲ್ಲಿ ಮುಟ್ಟಿಸುವ ಉತ್ಸವ. ಇದನ್ನು ವೈಭವದಿಂದ ಅಷ್ಟೇ ಅರ್ಥಪೂರ್ಣವಾಗಿ ನೆರವೇರಿಸಬೇಕಾಗಿದೆ. ನಾಡಿನ ಸಮಸ್ತ ಸದ್ಭಕ್ತರು ಆಗಮಿಸಬೇಕು. ಆದ್ದರಿಂದ ಉತ್ಸವದ ಪ್ರಚಾರ ಎಲ್ಲಾ ಕಡೆ ಸಂಚಾರ ಮಾಡಿ ಪ್ರಚಾರಪಡಿಸುತ್ತದೆ.
ಬಸವಾದಿ ಶರಣರ ಸಂದೇಶಗಳನ್ನು ಹೊತ್ತು ಸಾಗುವ ಈ ರಥಕ್ಕೆ ಎಲ್ಲ ಕಡೆಯೂ ತಮ್ಮ ಊರುಗಳಲ್ಲಿ ಸ್ವಾಗತಿಸಿಕೊಂಡು ಬಸವಣ್ಣನವರ ಮೂರ್ತಿಗೆ ಮತ್ತು ರಥಕ್ಕೆ ಗೌರವಿಸಬೇಕೆಂದು ವಿನಂತಿಸಿದರು.
ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಬಸವಾದಿ ಶರಣರ ಭಕ್ತಿಯ ಭವ್ಯ ಉತ್ಸವ. ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಪ್ರಚಾರಪಡಿಸಲು ಬಸವ ರಥ ಸಿದ್ಧಗೊಂಡಿದೆ. ಎಲ್ಲಾ ಊರುಗಳಲ್ಲಿಯೂ ಈ ಧರ್ಮ ಪ್ರಚಾರ ರಥಕ್ಕೆ ಸ್ವಾಗತಿಸಿಕೊಂಡು ಗೌರವ ಸಮರ್ಪಣೆ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದರು.

ಪ್ರಚಾರ ರಥಕ್ಕೆ ಚಾಲನೆ ನೀಡಿದ ಅನುಭವ ಮಂಟಪ ಉತ್ಸವ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಶಾಸಕ ಶರಣು ಸಲಗರ ಮಾತನಾಡಿ, ಬಸವಾದಿ ಶರಣರ ತತ್ವ ಸಂದೇಶಗಳನ್ನು ಸಾರುವ ಮತ್ತು ಜಗತ್ತಿನ ಪ್ರಥಮ ಸಂಸತ್ತಾದ ಅನುಭವ ಮಂಟಪದ ವಿಶೇಷತೆಗಳನ್ನು ಸಾರುವ ಅನುಭವ ಮಂಟಪ ಉತ್ಸವವನ್ನು ಯಶಸ್ವಿಯಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದರ ಒಂದು ಭಾಗವಾಗಿ ಧರ್ಮ ಪ್ರಚಾರ ರಥಕ್ಕೆ ಚಾಲನೆ ನೀಡುವ ಅವಕಾಶ ದೊರೆತದ್ದು ನನ್ನ ಭಾಗ್ಯ. ಎಲ್ಲ ಸದ್ಭಕ್ತರು ಈ ರಥ ವನ್ನು ತಮ್ಮ ಊರುಗಳಲ್ಲಿ ಸ್ವಾಗತಿಸಿಕೊಂಡು ಗೌರವ ಸಮರ್ಪಣೆ ಮಾಡಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.
ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಶಿವಾನಂದ ಸ್ವಾಮಿಗಳು, ಹೊಳಲ್ಕೆರೆಯ ಪೂಜ್ಯ ತಿಪ್ಪೇರುದ್ರ ಸ್ವಾಮಿಗಳು, ಪೂಜ್ಯ ಚನ್ನಬಸವಾನಂದ ಸ್ವಾಮಿಗಳು, ನಾಗರಾಜ ಗೋರನಾಳೆ, ಬಾಬು ಲಾಧಾ, ಸಚಿನ್ ಕೌಟೆ ಮತ್ತಿತರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
