ಮಾನವಿ:
ವೈಚಾರಿಕ ಸಾಹಿತಿ ಚನ್ನಬಸವಪ್ಪ ಬೆಟ್ಟದೂರು ರೈತರ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಡೆಸಿದ ಹೋರಾಟಗಳನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದು ಶರಣತತ್ವ ಚಿಂತಕ ತಿಮ್ಮನಗೌಡ ಚಿಲ್ಕರಾಗಿ ಹೇಳಿದರು.
ಪಟ್ಟಣದ ಬಿ.ವಿ.ಆರ್. ವಸತಿ ನಿಲಯ ಸಭಾಂಗಣದಲ್ಲಿ ಅಮರಮ್ಮ ಚೆನ್ನಬಸವಪ್ಪ ಪ್ರತಿಷ್ಠಾನ ಹಾಗೂ ಬಸವಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಲಿಂಗೈಕ್ಯ ಚನ್ನಬಸವಪ್ಪ ಬೆಟ್ಟದೂರು ಅವರ 18ನೇ ಪುಣ್ಯಸ್ಮರಣೋತ್ಸವ ಹಾಗೂ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚನ್ನಬಸವಪ್ಪ ಬೆಟ್ಟದೂರು ನೀರಾವರಿ ಸೇರಿದಂತೆ ಅನೇಕ ರೈತ ಹೋರಾಟಗಳನ್ನು ಮಾಡಿ ರೈತ ಮುಖಂಡರಾಗಿದ್ದರು. ರೈತ ಚಳುವಳಿಯ ಜೊತೆಗೆ ಬಸವಣ್ಣನವರ ಶರಣ ಸಾಹಿತ್ಯದ ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಭಕ್ತಿ ಎಂದರೆ ಪ್ರೀತಿ, ಬಸವಣ್ಣ ಮನಸ್ಸನ್ನು ನಿಗ್ರಹಿಸಲು ಇಷ್ಟಲಿಂಗ ಕೊಟ್ಟರು. ಇಷ್ಟಲಿಂಗ ಧರಿಸಿದವರು ಯಾರೇ ಇರಲಿ ಅವರು ಲಿಂಗಾಯತರು. ಎಲ್ಲರನ್ನು ಪ್ರೀತಿಸಿರಿ, ಅದೇ ಭಕ್ತಿ. ಬಸವಣ್ಣ ನುಡಿದಂತೆ ನಡೆಯಲು ಕಲಿಸಿದ ಎಂದು ತಿಮ್ಮನಗೌಡ ಚಿಲ್ಕರಾಗಿ ನುಡಿದರು.
ಶರಣರು ದೇವಾಲಯಕ್ಕೆ ಹೋಗುವುದನ್ನು ಒಪ್ಪಿಲ್ಲ. ‘ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ’ ಎಂಬುದು ಶರಣರ ವಿಚಾರ. ಕಾಯಕ ಸತ್ಯ, ಶುದ್ಧವಾಗಿರಬೇಕು. ಸತ್ಯ-ಶುದ್ಧವಾದ ಕಾಯಕ, ಕೃಷಿ, ಸಾಹಿತ್ಯ, ಸುಜ್ಞಾನ, ಚಿಂತನೆ ಮುಖ್ಯ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡು ಎನ್ನುವುದು ಶರಣರ ತತ್ವ ಎಂದು ತಿಳಿಸಿದರು.
ರೈತ ಹೋರಾಟಗಾರ ಬಸವರಾಜ ಬಲ್ಲಟಗಿ ಮಾತನಾಡಿ, ಚೆನ್ನಬಸವಪ್ಪ ಬೆಟ್ಟದೂರು ಈ ಭಾಗದಲ್ಲಿ ರೈತಸಂಘ ಕಟ್ಟಲು ಕಾರಣರಾದರು. 1983ರಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಸುಂದರೇಶ ಮುಂತಾದ ರೈತ ಪ್ರಮುಖರನ್ನು ಈ ಭಾಗಕ್ಕೆ ಕರೆತಂದು ಬಲ್ಲಟಗಿಯಲ್ಲಿ ರೈತಸಂಘ ಸ್ಥಾಪಿಸಿ ಪಾದಯಾತ್ರೆ ಮಾಡಿದರು.
ಮಂತ್ರಿ, ಶಾಸಕರಿಗೆ, ಅಧಿಕಾರಿಗಳಿಗೆ ಈ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟದ ಮೂಲಕ ಮನವಿ ಅರ್ಪಿಸಿ ಎಡದಂಡೆ ಕಾಲುವೆಯ ಕೊನೆ ಭಾಗಕ್ಕೆ ನೀರು ಮುಟ್ಟಿಸುವಂತೆ, ಕಾಲುವೆ ಬಲಪಡಿಸುವಂತೆ ಒತ್ತಾಯಿಸಿದರು. ರಾಸಾಯನಿಕ ಗೊಬ್ಬರದ ವಿರುದ್ಧವೂ ಹೋರಾಟ ನಡೆಸಿದರು ಎಂದು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವೈದ್ಯರು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ಬಸವಪ್ರಭು ಪಾಟೀಲ ಬೆಟ್ಟದೂರು ವಹಿಸಿದ್ದರು. ಈ ಸಂದರ್ಭದಲ್ಲಿ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಈ ಚಾಮರಸ ಮಾಲಿಪಾಟೀಲ, ನಾಗಲಾಂಬಿಕೆ ಸಹಕಾರಿ ಅಧ್ಯಕ್ಷೆ ನಾಗರತ್ನಮ್ಮ ಬಿ. ಪಾಟೀಲ, ತಾಲೂಕ ಕಸಾಪ ಅಧ್ಯಕ್ಷ ಶರಣಬಸವ ನೀರಮಾನ್ವಿ, ಬಸವ ಕೇಂದ್ರದ ಅಧ್ಯಕ್ಷ ಶರಣಬಸವ ಬೆಟ್ಟದೂರು, ಡಾ. ಜಯಪ್ರಕಾಶ ಪಾಟೀಲ, ಡಾ. ಸಕಲೇಶ ಪಾಟೀಲ್, ಮಾಜಿ ಅಧ್ಯಕ್ಷ ರಂಗಪ್ಪ ಮೇದಾರ, ದೇವೇಂದ್ರ ದುರ್ಗದ, ಕೇಶವಯ್ಯಶೆಟ್ಟಿ, ವಿಶ್ವನಾಥಸ್ವಾಮಿ ಸೇರಿದಂತೆ ಅನೇಕ ಬಸವಾಭಿಮಾನಿಗಳು, ರೈತ ಮುಖಂಡರು ಭಾಗವಹಿಸಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
