ಗದಗದಲ್ಲಿ ಶರಣ ಸಂಗಮ ಕಾರ್ಯಕ್ರಮ, ಬಸವಾಂಕುರ ಸಂಭ್ರಮ

ಗದಗ:

೧೨ನೇ ಶತಮಾನದಲ್ಲಿ ಹಲವರನ್ನು ಹೊರತುಪಡಿಸಿ ಬಹುತೇಕ ಶರಣರು ಸಂಸಾರಿಗಳೇ ಆಗಿದ್ದರು. ಕೌಟುಂಬಿಕ ಬದುಕಿನ ಎಲ್ಲ ಸುಖ-ದುಃಖಗಳನ್ನು ಅರಿತವರೇ ಆಗಿದ್ದರು. ಬಸವಣ್ಣ ಮತ್ತು ನೀಲಾಂಬಿಕೆ, ಗಂಗಾಂಬಿಕೆ, ಜೇಡರ ದಾಸಿಮಯ್ಯ ಮತ್ತು ದುಗ್ಗಳೆ, ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ, ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ, ಮೋಳಿಗೆ ಮಾರಯ್ಯ ಮತ್ತು ಮಹಾದೇವಿ ಸೇರಿದಂತೆ ಬಹಳಷ್ಟು ಶರಣ ದಂಪತಿಗಳು ಅಂದು ಅನುಭವ ಮಂಟಪದಲ್ಲಿದ್ದು ಶರಣ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು, ಎಂದು ಶರಣತತ್ವ ಚಿಂತಕಿ ಗೌರಕ್ಕ ಬಡಿಗಣ್ಣವರ ಹೇಳಿದರು.

ಅವರು ಚಿಂತಕ ಅಶೋಕ ಬರಗುಂಡಿ ಅವರ ಮನೆಯಲ್ಲಿ ಜರುಗಿದ ಈರಣ್ಣ ಹಾಗೂ ಶಿಲ್ಪಾ ಬಡಿಗಣ್ಣವರ ಹಾಗೂ ರಾಜೇಶ್ವರಿ, ಶ್ರವಣಕುಮಾರ ಶ್ರೀಗಣ್ಣವರ ದಂಪತಿಗಳ ಸೀಮಂತ ಕಾರಣ ‘ಬಸವಾಂಕುರ ಸಂಭ್ರಮ’ ಕಾರ್ಯಕ್ರಮ ಹಾಗೂ ಬಸವದಳದ ೧೭೦೨ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ “ಬಸವಾದಿ ಶರಣರ ವಚನಗಳಲ್ಲಿ ಕೌಟುಂಬಿಕ ಮೌಲ್ಯಗಳು” ಕುರಿತ ಉಪನ್ಯಾಸ ನೀಡುತ್ತ ಮೇಲಿನಂತೆ ತಿಳಿಸಿದರು.

ಶರಣರು ಸಂಸಾರಿಕರಿಗೆ ಮೌಲ್ಯಯುತವಾಗಿ ಬದುಕಲು ಅಮೂಲ್ಯ ಸಲಹೆಗಳನ್ನು ವಚನಗಳಲ್ಲಿ ನೀಡಿದ್ದಾರೆ. ಇಲ್ಲಿ ಶರಣರು ಕುಟುಂಬವೆಂದರೆ ಬರೀ ಗಂಡ-ಹೆಂಡತಿ-ಮಕ್ಕಳೆಂದು ಪರಿಗಣಿಸುವುದಿಲ್ಲ. ಅವರ ದೃಷ್ಠಿ ವ್ಯಾಪಕವಾದುದು. ಇಲ್ಲಿ ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಮ್ಮ-ಚಿಕ್ಕಪ್ಪ ಹೀಗೆ ಸರ್ವರೂ ಒಳಗೊಳ್ಳುವರು.

ಸರ್ವರೂ ಸಮರಸದಿಂದ ಬದುಕುವುದನ್ನು ಶರಣರು ಹೇಳುವರು. ಕುಟುಂಬದಲ್ಲಿ ಮನಸ್ಸು ಕಹಿಯಾಗುವಂತಹ ಕಟುಮಾತು ಎಂದೂ ಬರಬಾರದು ಎಂಬುದು ಶರಣರ ನಿಲುವಾಗಿತ್ತು. ‘ಮೃದು ವಚನವೇ ಸಕಲ ಜಪಂಗಳಯ್ಯ, ಮೃದು ವಚನವೇ ಸಕಲ ತಪಂಗಳಯ್ಯ….’ ಎಂಬುದು ಬಸವಣ್ಣನವರ ಪ್ರಸಿದ್ಧ ವಚನ. ನಾವು ಆಡುವ ಮೃದು ಮಾತು ಎಲ್ಲಾ ರೀತಿಯ ಜಪ-ತಪಗಳಿಗೂ ಸಮನಾದುದು, ಶ್ರೇಷ್ಠವಾದುದೆನ್ನುವರು.

‘ಮಾತೆಂಬುದು ಜ್ಯೋತಿರ್ಲಿಂಗ..’ ಈ ವಚನವೂ ಅದೇ ಭಾವಾರ್ಥ ನೀಡುತ್ತದೆ. ಇಲ್ಲಿ ಮಾತೆಂಬುದನ್ನು ಶರಣರು ಜ್ಯೋತಿರ್ಲಿಂಗಗಳಿಗೆ ಹೋಲಿಸಿದ್ದಾರೆ. ಮೃದು ಮಾತುಗಳು ಮೌಲಿಕವಾದವೆನ್ನುವರು.

ಸಂಸಾರಸ್ಥರು ಇವನ್ನು ಅಳವಡಿಸಿಕೊಂಡರೆ ಸಂಘರ್ಷಕ್ಕೆ ಕಾರಣವೇ ಇರುವುದಿಲ್ಲ.

ಮನೆಯ ಬಾಗಿಲಿಗೆ ವೈರಿಗಳೂ ಬಂದರೂ ಅವರನ್ನು ಪ್ರೀತಿಯಿಂದ ಒಳಗೆ ಬರಹೇಳಬೇಕೆನ್ನುವರು. ಅದೇ ರೀತಿ ಶರಣರು ಹೇಳುವಂತೆ ‘ಏನಿ ಬಂದಿರಿ ಹದುಳವಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೇ?… ಕುಳ್ಳಿರೆಂದರೆ ನೆಲ ಕುಳಿ ಹೋಹುದೇ?…’  ಈ ವಚನವಂತೂ ಮಾರ್ಮಿಕವಾಗಿದೆ.

ಹಲವರ ಬಗ್ಗೆ ಕಹಿ ನೆನಹುಗಳನ್ನು ಮನದಲ್ಲಿ ತುಂಬಿಕೊಂಡಂತಹ ಸಂದರ್ಭದಲ್ಲಿ ಅವರೇ ಮನೆಗೆ ಬಂದರೆ ನೋಡಿಯೂ ನೋಡದಂತೆ ಇರುವ ಬದಲಿಗೆ ‘ಒಳಗೆ ಬರ‍್ರಿ, ಕುಳಿತುಕೊಳ್ಳಿ, ಆರಾಮಾಗಿದ್ದಿರಾ’ ಎಂದರೆ ಎಂತಹ ವೈರಿಯ ಮನವೂ ಕರಗಿ ಅಲ್ಲಿ ಪ್ರೀತಿ ಅರಳುತ್ತದೆ.

ಶರಣರು ಬರೀ ಅಧ್ಯಾತ್ಮವಷ್ಟೇ ಅಲ್ಲ ಕೌಟುಂಬಿಕ ಬದುಕಿಗೂ ಹೆಚ್ಚಿನ ಮಹತ್ವ ನೀಡಿದ್ದರು.

ಶಿವಯೋಗ ಮನಸ್ಸನ್ನು ನಿಯಂತ್ರಣದಲ್ಲಿಡುತ್ತದೆ. ಅದೇ ರೀತಿ ಮಾತು ಮುತ್ತಿನ ಹಾರದಂತಿದ್ದರೆ ಆ ಮನೆ ಸಂತಸದ ಅರಮನೆ ಆಗಿರುತ್ತದೆನ್ನುವರು. ‘ನುಡಿಯಲ್ಲಿ ಕರ್ಕಶವಿಲ್ಲದೆ ನಡೆಯಲ್ಲಿ ಬೇಸರವೋಗದೆ…’ ನಾವು ಆಡುವ ಮಾತುಗಳು ಕರ್ಕಶತೆ, ಹಾಕ್ಯಾಟ ಮುಂತಾದವಳಿಗೆ ಕಡಿವಾಣ ಹಾಕಿಕೊಂಡಿದ್ದರೆ ಖಂಡಿತ ನೆಮ್ಮದಿ ತುಂಬಿರುತ್ತದೆ.

ಶರಣರು ಕುಟುಂಬದ ಹಿರಿಯರಿಗೆ ಗೌರವ ನೀಡಬೇಕೆನ್ನುವರು. ಅವರು ಸಂಸಾರಿಕ ಸಂಬಂಧಗಳಿಗೆ ಆಧ್ಯಾತ್ಮಿಕ ಸ್ವರೂಪ ನೀಡಿದ್ದಾರೆ.

‘ಶ್ರೀಗುರುವೇ ತಾಯಿ, ತಂದೆಯಾಗಿ, ಲಿಂಗವೇ ಪತಿಯಾಗಿ, ಜಂಗಮವೇ ಅತ್ತೆ-ಮಾವಂದಿರಾಗಿ, ಶಿವಭಕ್ತರೆ ಬಾಂಧವರಾಗಿ….’  ಶಿವಮಯವಾದ ಈ ಜಗತ್ತು ಸಂಸಾರಿಯ ಬದುಕಿನಲ್ಲೂ ಇದೆ, ಇಲ್ಲಿ ಸರ್ವರೂ ಸಮಾನರೆನ್ನುವರು. ಹಲವು ಸಂದರ್ಭದಲ್ಲಿ ಮನೆಯಲ್ಲಿ ನಡೆಯುವ ಹಲವು ಗಂಭೀರ ಕಲಹಗಳು ಮನವನ್ನು ಮುದುಡಿಸಿ ಬಿಡುವವು. ಆಗ ಶರಣರು ಹೇಳಿದ ಮಾತು ‘ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?… ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜತುಂಬಿ…’ ಇದು ಅದ್ಭುತ ವಚನ. ಮನೆ-ಮನ ಎರಡನ್ನೂ ಶರಣರು ಒಂದೇಯಾಗಿ ನೋಡುವರು. ಮನೆ ಸ್ವಚ್ಚವಾಗಿರಬೇಕು ಅದೇ ರೀತಿ ಮನದಲ್ಲಿ ಶಾಂತಿ, ಜ್ಞಾನ ತುಂಬಿರಬೇಕು. ಆಗಲೇ ಆ ಮನೆ ಸುಖಮಯವಾಗಿರುತ್ತದೆನ್ನುವರು.

 ಸಾಂಪ್ರದಾಯಿಕವಾಗಿರುವಂತೆ ಗಂಡನೆ ಹೆಚ್ಚು, ಹೆಂಡತಿ ಇತರರು ಕಡಿಮೆ ಎಂಬ ಭಾವ ಶರಣರಲ್ಲಿರಲಿಲ್ಲ. ಎಷ್ಟೋ ಸಂದರ್ಭದಲ್ಲಿ ಶರಣ ದಂಪತಿಗಳಲ್ಲಿ ಹೆಂಡತಿಯೇ ಗಂಡನಿಗೆ ಬುದ್ದಿ ಹೇಳುವಷ್ಟು ಪ್ರಬುದ್ಧರಾಗಿದ್ದರು. ‘ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯ, …. ಈಸಕ್ಕಿಯಾಸೆ ನಿಮಗೇಕೆ…’ ಈ ವಚನದಲ್ಲಿ ಧಾನ್ಯ ಆಯುವ ಕಾಯಕ ಮಾಡುತ್ತಿದ್ದ ಮಾರಯ್ಯ ಅಂದು ತುಸು ಧಾನ್ಯ ಜಾಸ್ತಿ ಆಯ್ದುಕೊಂಡು ಬಂದಿದ್ದನ್ನು ಪ್ರಶ್ನಿಸಿ, ಗಂಡನ ತಪ್ಪನ್ನು ಪತ್ನಿ ಲಕ್ಕಮ್ಮ ತಿಳಿ ಹೇಳಿದ್ದ ವಚನ ಮಾರ್ಮಿಕವಾಗಿದೆ ಎಂದು ಗೌರಕ್ಕ ಬಡಿಗಣ್ಣನವರ ತಮ್ಮ ಅಭ್ಯಾಸ ಪೂರ್ಣ ಉಪನ್ಯಾಸಗೈಯುತ್ತ, ಈ ಸಂದರ್ಭದಲ್ಲಿ ಅನೇಕ ವಚನಗಳನ್ನು ಉದಾಹರಿಸುತ್ತ ಮಾತನಾಡಿದರು.

ಆರಂಭದಲ್ಲಿ ಅಶೋಕ ಬರಗುಂಡಿಯವರು ಸರ್ವರನ್ನು ಸ್ವಾಗತಿಸಿ, ಲಿಂಗಾಯತರಲ್ಲಿ ನಿಜಧರ್ಮ ಅರುಹಲು ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಮಾತಾಜಿಯವರು ಬಸವದಳ ಸ್ಥಾಪಿಸಿ ವಾರಕ್ಕೊಮ್ಮೆ ಶರಣ ಸಂಗಮದಂತಹ ಕಾರ್ಯಕ್ರಮಗಳನ್ನು ರೂಪಿಸಿ ಅಲ್ಲಿ ವಚನಗಳ ಮುಖೇನ ಧರ್ಮದ ಚರ್ಚೆ, ನಿಜದ ಆಚರಣೆ ತರಲು ಯತ್ನಿಸಿದರು. ಆ ಬಸವದಳಗಳೇ ಇಂದು ರಾಜ್ಯಾದ್ಯಂತ ಸ್ಥಾಪನೆಯಾಗಿ ಲಿಂಗಾಯತರಲ್ಲಿ ಜಾಗೃತಿಯನ್ನುಂಟು ಮಾಡುತ್ತಿವೆ. ಲಿಂಗಾಯತ ಧರ್ಮ ಬರೀ ಭಕ್ತಿಯ ಧರ್ಮವಲ್ಲ, ಇದು ಆತನಲ್ಲಿ ಅರಿವು ತುಂಬಿ ಆತ ಹಂತ ಹಂತವಾಗಿ ತನ್ನ ಅವಗುಣಗಳನ್ನು ಕಳೆದುಕೊಳ್ಳುವಂತಹ ಧರ್ಮವೆಂದರು.

ಶಿಲ್ಪಕ್ಕ ನಾರನಾಳರು ಕೂಡಾ ಸಾಂದರ್ಭಿಕವಾಗಿ ಮಾತನಾಡಿದರು. ಶಿಲ್ಪಕ್ಕ ಅವರ ಮಧುರಮಯ ವಚನ ಹಾಡುವಿಕೆ ಅಲ್ಲಿದ್ದ ಸರ್ವ ಶರಣ ಬಳಗವನ್ನು ಮನಸೂರೆಗೊಂಡಿತು.

ಇದೇ ಸಂದರ್ಭದಲ್ಲಿ ಬಸವತತ್ವದಂತೆ ಸೀಮಂತ ಕಾರಣ ಜರುಗಿತು. ಶಿಲ್ಪಾ ಈರಣ್ಣ ಬಡಿಗಣ್ಣವರ ಹಾಗೂ  ರಾಜೇಶ್ವರಿ, ಶ್ರವಣಕುಮಾರ ಶ್ರೀಗಣ್ಣವರ ದಂಪತಿಗಳಿಗೆ ಬಸವತತ್ವದ ಸಂಪ್ರದಾಯದಂತೆ ವಿವಿಧ ಸಂಸ್ಕಾರಗಳನ್ನು ಜರುಗಿಸಿ ಕಾರ್ಯಕ್ರಮ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕ್ರಿಯಾಮೂರ್ತಿಗಳಾಗಿ ರೂಪಾ ಪರಮೇಶ್ವರ ಬಾಳಿಕಾಯಿ ಹಾಗೂ ಮುಕ್ತಾ ಫಕ್ಕೀರೇಶ ಬಾಳಿಕಾಯಿ ಅವರು ಕಾರ್ಯ ನಿರ್ವಹಿಸಿದರು. ಜೊತೆಯಲ್ಲಿ ಶಿಲ್ಪಾ ಉಮೇಶ ನಾರನಾಳ ಅವರು ವಚನಗಳನ್ನು ಹಾಡುವ ಮೂಲಕ ಸಾಥ್ ನೀಡಿದರು.

ಪ್ರಾರಂಭದಲ್ಲಿ ವಚನ ಪ್ರಾರ್ಥನೆ ಬಸವದಳದ ಶರಣೆಯರಿಂದ ಜರುಗಿತು. ಪ್ರಕಾಶ ಅಸುಂಡಿಯವರು ಕಾರ್ಯಕ್ರಮ ನಿರೂಪಿಸಿದರು. ಅನ್ನಪೂರ್ಣಕ್ಕ ಬರಗುಂಡಿ ಶರಣು ಸಮರ್ಪಣೆ ಗೈದರು.

ಸಭೆಯಲ್ಲಿ ಬಸವದಳದ ಸರ್ವ ಶರಣರು ಭಾಗಿಗಳಾಗಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಪ್ರಸಾದದ ದಾಸೋಹವನ್ನು ಅಶೋಕ ಅನ್ನಪೂರ್ಣಕ್ಕ ಬರಗುಂಡಿ ದಂಪತಿಗಳು ಹಾಗೂ ಅವರ ಕುಟುಂಬ ವರ್ಗದವರು ವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
1 Comment
  • ಎಲ್ಲಾ ಶರಣಬಂಧುಗಳು ಇ ರೀತಿಯ ಕಾರ್ಯಕ್ರಮ ಮಾಡಿ ದರೆ ಮತ್ತೆ ಬಸವ ಮಯ ಆಗಲು ನಿಸ್ಸ್ ಂದೆಹ

Leave a Reply

Your email address will not be published. Required fields are marked *