‘ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಶಿಕ್ಷಣ ಕ್ಷೇತ್ರದ ಕರ್ಮಯೋಗಿ’

ಮೈಸೂರು:

ಅಕ್ಷರಶಃ ‘ಶಿಕ್ಷಣ ಕ್ಷೇತ್ರದ ಕರ್ಮಯೋಗಿ’, ಅನ್ನದಾಸೋಹಿ, ಜ್ಞಾನ ದಾಸೋಹಿ, ಲಕ್ಷಾಂತರ ಬಡ ವಿದ್ಯಾರ್ಥಿಗಳ ಆಶಾಕಿರಣ, ಸ್ವತಃ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರವರಿಂದ ‘ರಾಜಗುರುತಿಲಕ’ ಎಂಬ ಬಿರುದಿಗೆ ಪಾತ್ರರಾದ, ಮರಣೋತ್ತರವಾಗಿ ಮೈಸೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪಡೆದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಎಂದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ, ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ನಗರದ ಲಕ್ಷ್ಮೀಪುರಂ ಜೆ ಎಸ್ ಎಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಪರಿಷತ್ತಿನ, ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ದತ್ತಿ, ಶ್ರೀ ಸಿದ್ಧೇಶ್ವರ ಸ್ವಾಮಿಗಳ ದತ್ತಿ ಹಾಗೂ ಕಲಾರತ್ನ ಲಿಂಗೈಕ್ಯ ಅಂಕಪ್ಪನವರ ದತ್ತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಿದ್ದರು.

 ಶಿಕ್ಷಣ ಪ್ರಸಾರವೇ ಶ್ರೀ ಗುರುವಿನ ಧರ್ಮಕಾರ್ಯವೆಂದೂ, ಶಿಕ್ಣಣ ನೀಡುವುದೇ ಸಂತನ ಸತ್ಯಾಚಾರವೆಂದೂ, ಆ ಮೂಲಕ ಸಮಾಜ ಸುದಾರಣೆ ಸಾಧ್ಯವೆಂದೂ ನಂಬಿದ್ದ ಶ್ರೀಗಳು, ವಸತಿ ನಿಲಯದ ಪ್ರಸಾದಕ್ಕಾಗಿ ಆರ್ಥಿಕ ಸಂಕಷ್ಟವೊದಗಿದಾಗ, ಭಕ್ತರು ತಮಗೆ ಕೊಟ್ಟಿದ್ದ ಬಂಗಾರದ ಕರಡಿಗೆ ಕೂಡಾ ಮಾರಿ ಹಣ ಹೊಂದಿಸಿದಂತಹ ಶ್ರೇಷ್ಠ ಜಗದ್ಗುರುವಾಗಿದ್ದರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೂಡಾ ಅವರ ದೂರದೃಷ್ಟಿಯ ಸತ್ಫಲವಾಗಿಯೇ ಅವರಿಂದಲೇ ಅಸ್ತಿತ್ವಕ್ಕೆ ಬಂದದ್ದು, ಅವರೇ ಇದಕ್ಕೆ ಪ್ರೇರಕ ಶಕ್ತಿ ಎಂದರು.

ಶ್ರೀ ಸಿದ್ಧೇಶ್ವರ ಸ್ವಾಮಿಗಳ ಬಗ್ಗೆ ಹೇಳುತ್ತಾ, ಜೇಬಿಲ್ಲದಂಗಿಯ ಮಹೋನ್ನತ ವ್ಯಕ್ತಿತ್ವದ ಬಿಳಿಬಟ್ಟೆಯ ಪ್ರಶಾಂತ ಸಂತ ಶ್ರೀ ಸಿದ್ಧೇಶ್ವರ ಸ್ವಾಮಿಗಳು ನಮ್ಮ ನಡುವಿನ ಮಾತಾಡುವ ದೇವರೆನಿಸಿದ್ದರು, ಪ್ರಜ್ಞೆಯೇ ಮೈವೆತ್ತಂತಿದ್ದ ಮುಕ್ತ ಮನೋಸ್ಥಿತಿಯಲ್ಲಿದ್ದ, ನಿರ್ಲಿಪ್ತತೆಯ ಮಂಗಳಮೂರ್ತಿಯೆನಿಸಿದ್ದ ಅವರನ್ನು ಕಾಣುವುದೇ ಪುಣ್ಯವೆನಿಸುತ್ತಿತ್ತು, ಕೇಂದ್ರ ಸರ್ಕಾರ ಕೊಡಲು ಬಂದ ಪದ್ಮಪ್ರಶಸ್ತಿ ಹಾಗೂ ಹಣವನ್ನೇ ತಿರಸ್ಕರಿಸಿದ್ದ, ಮುಕ್ತತೆಯ ಸಾಕಾರದಂತಿದ್ದ ಅವರನ್ನು ಹತ್ತಿರದಿಂದ ಕಂಡು, ಅವರ ಉಪನ್ಯಾಸ ಕೇಳಿದವರೆ ಧನ್ಯರು ಎಂದು ಕೊಂಡಾಡಿದರು.

ಲಿಂಗೈಕ್ಯ ಅಂಕಪ್ಪನವರ ಬಗ್ಗೆ ಮಾತಾದ ಅವರು, ಕರ್ನಾಟಕ ನಾಟಕ ಅಕಾಡೆಮಿಯಿಂದ “ಮಾಸ್ಟರ್ ಹಿರಣ್ಣಯ್ಯ ಪ್ರಶಸ್ತಿ” ಪಡೆದು, ವಿವಿಧ ವಾಧ್ಯಗಳಲ್ಲಿ ಪ್ರವೀಣರೆನಿಸಿ, ನೂರಾರು ನಾಟಕಗಳನ್ನು ಮಾಡಿ, ನಿರ್ದೇಶನ ಕೂಡಾ ನೀಡಿ, “ನಾಟಕ ಕಲಾರತ್ನ” ಬಿರುದಿಗೆ ಪಾತ್ರರಾದ, ತಮ್ಮ “ಶಿವನಿರುವುದೆಲ್ಲಿ” ಕವನ ಸಂಕಲನದಿಂದ ಪ್ರಖ್ಯಾತರಾಗಿ, “ಕಲ್ಲಿನಲ್ಲಿ ಕೆತ್ತಿದನು ಶಿಲ್ಪಿಯವ ಶಿವನ ದೇಗುಲದಿ ಕೂಡಿದನು ವೈದಿಕನು ಅವನ” ಎಂಬ ಅದ್ಭುತವಾದ ಪ್ರಜ್ಞಾಪೂರ್ಣವಾದ ಅಪೂರ್ವ ಗೀತೆಯನ್ನು ಸೃಜಿಸಿಕೊಟ್ಟ ಮಹಾನುಭಾವ ಶರಣ ಸಿ. ಅಂಕಪ್ಪನವರು ಕೂಡಾ ಸಂಸಾರದಲ್ಲಿದ್ದ ಶುದ್ಧ ಸಂತರೆನಿಸಿ, ಆದರ್ಶಮಯ ಬದುಕಿಗೆ ಹೆಸರಾದವರು.

ತಮ್ಮ ಕಾರ್ಯಕ್ಷೇತ್ರದಲ್ಲಿ ಸಂಪೂರ್ಣ ಸಮರ್ಪಣೆಯಿಂದಾಗಿ ಮಾದರಿಯಾದವರು ಎಂದು ಹೇಳುತ್ತಾ, ವಿದ್ಯಾರ್ಥಿಗಳೆ ತಮ್ಮೆಲ್ಲರಿಗೂ ಇಂತಹ ಮಹಾನ್‌ ರಸ ಋಷಿಗಳೂ, ಸಂತರೂ, ಚಿಂತಕ ಚೇತನರೂ ಆದರ್ಶವಾಗಬೇಕು, ಯಾರೋ ನಟನಟಿಯರಲ್ಲ ಎಂದು ಕಿವಿಮಾತನ್ನೂ ಹೇಳಿದರು.

ರಾಜೇಂದ್ರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡುವ ಮೂಲಕ ಪರಿಷತ್ತಿನ ಕಾರ್ಯದರ್ಶಿ ಬಿ.ಎನ್. ನಂದೀಶ್ವರ ಸಮಾರಂಭ ಉದ್ಘಾಟಿಸಿದರು.

ಅಪ್ರಚಲಿತ ವಚನಕಾರರ ಕುರಿತ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಹಾಗೂ ರಾಜೇಂದ್ರ ಶ್ರೀಗಳ ಕುರಿತ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಪರಿಷತ್ತಿನ ಉಪಾಧ್ಯಕ್ಷ ಎಂ ಚಿನ್ನಸ್ವಾಮಿ ಬಹುಮಾನ ವಿತರಣೆ ಮಾಡಿದರು.

ಗೌರವ ಉಪಸ್ಥಿತಿಯೊದಗಿಸಿದ್ದ ಜೆ ಎಸ್ ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ನಾಗೇಂದ್ರ ಪ್ರಸಾದ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ದತ್ತಿ ದಾಸೋಹಿಗಳಾದ ಹಿರಿಯ ಸಾಹಿತಿ, ನಿವೃತ್ತ ಉಪನ್ಯಾಸಕರೂ ಹಾಗೂ ಪರಿಷತ್ತಿನ ಉಪಾಧ್ಯಕ್ಷರೂ ಆದ ಶರಣೆ ಎಂ. ಎ. ನೀಲಾಂಬಿಕ ಮಕ್ಕಳಿಗೆ ಸಮಾರಂಭದಾಶಯ ತಿಳಿಸಿ, ಶುಭಕೋರಿದರು.

ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶೋಭಾರಾಣಿ ಜೈಪ್ರಕಾಶ, ನಿಕಟಪೂರ್ವ ಅಧ್ಯಕ್ಷರಾದ ಶಾರದಾ ಶಿವಲಿಂಗಸ್ವಾಮಿ, ಪರಿಷತ್ತಿನ ಖಜಾಂಚಿ ಡಾ. ಮುದ್ದುಮಲ್ಲೇಶ, ಸಂಚಾಲಕರಾದ ಡಾ. ಲೋಕೇಶಪ್ಪ, ಸಹಕಾರ್ಯದರ್ಶಿ ಮೈನಾ ಲೋಕೇಶ, ಸದಾಶಿವ, ವಸಂತಕುಮಾರಯ್ಯ,  ಬಿ ಡಿ ಎಂ ಕುಮಾರ, ಸಾಹಿತಿಗಳಾದ ಬಿ ಕೆ ಸ್ವಾಮಿ, ಮತ್ತಿತರರೊಂದಿಗೆ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *