ಪ್ರವಚನ: ಕಲ್ಯಾಣಪುರ ಪ್ರವೇಶಿಸಿದ ಅಲ್ಲಮ ಸಿದ್ಧರಾಮರು

ಬಸವ ಮೀಡಿಯಾ
ಬಸವ ಮೀಡಿಯಾ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 20

ಕಲಬುರಗಿ:

ಕಲ್ಲ ಮನೆಯ ಮಾಡಿ, ಕಲ್ಲ ದೇವರ ಮಾಡಿ,

ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೊ?

ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರಾ

ಎನ್ನುವಂತೆ ಚರಜಂಗಮನಾಗಿರುವ ಅಲ್ಲಮರು ಕಲ್ಲು-ಮಣ್ಣಿನ ಮೂರ್ತಿಪೂಜೆ ಮತ್ತು ಬಾಹ್ಯ ಆಚರಣೆಗಳನ್ನು ಪ್ರಶ್ನಿಸಿ, ಅಂತರಂಗದ ಶುದ್ಧಿಯನ್ನು ಸಾರುವ ಮೂಲಕ ಸಿದ್ಧರಾಮನಿಗೆ ಸತ್ಯದ ದರ್ಶನ ಮಾಡಿಸುತ್ತಾರೆ.

ಕರ್ಮಯೋಗಿಯಾಗಿರುವ ಸಿದ್ಧರಾಮನಿಗೆ, ಈ ಹಿಂದೆ ಅಜ(ಆಡು)ಪಥವಾಗಿದ್ದ ಕಲ್ಯಾಣ ಬಸವಣ್ಣನ ಕಾರಣದಿಂದ ಇದೀಗ ಗಜಪಥ (ಆನೆ) ಆಗಿದೆ. ಅಲ್ಲೀಗ ಕಾಯಕ- ದಾಸೋಹ ಸಿದ್ಧಾಂತಗಳು ಮಿಳಿತಗೊಂಡಿವೆ ಎಂದು ಬಸವಣ್ಣ ಮಾಡಿದ ಕಲ್ಯಾಣ ಕಾರ್ಯ, ಶರಣರ ವಿಚಾರಗಳನ್ನು ವಿವರಿಸುತ್ತ, ಶಿವಯೋಗದ ಅದ್ಭುತ ಸಂದೇಶಗಳನ್ನು ಬೋಧಿಸುತ್ತ ಕಲ್ಯಾಣದೊಳಕ್ಕೆ ಕರೆ ತಂದರು. ಈ ಕಲ್ಯಾಣಪುರ ಆಗ ಹೇಗಿತ್ತು ಎಂಬುದನ್ನು ಚಾಮರಸ ಕವಿ ಹೀಗೆ ಹೇಳುತ್ತಾನೆ.

‘ಬಸವ ಮೊದಲಾಗಿರ್ದ ಭಕ್ತರಾ

ಸಮ ಅಲ್ಲಮ ಬಂದು ಕಂಡನು

ವಸುಮತಿಗೆ ಚಲುವಾಗಿರ್ದ ವರ

ಕಲ್ಯಾಣಪುರದೊಳಗೆ ಬಾವರಾಜನ ಚಾರು ಚರಿತೆಯನು….”

ಅದು ಕಲ್ಯಾಣದೊಳಗೆ ಅಡಗಿದ ವಿಶ್ವಕಲ್ಯಾಣ. ಹೊರಗೂ ಕಲ್ಯಾಣ. ಒಳಗೂ ಕಲ್ಯಾಣ. ಇದನ್ನು ನೋಡಿದ ಅಲ್ಲಮರು ಸಹ ಬೆರಗಾಗುತ್ತಾರೆ. ಕರ್ಮದ ವ್ಯವಸ್ಥೆಯಲ್ಲಿರುವ ನೀನು ಪ್ರಧಾನಿಯಾಗಿ ಬಸವಣ್ಣನವರ ಐದು ಸಿದ್ಧಾಂತಗಳನ್ನು (ಆಶ್ರಯ, ಅರಿವೆ, ಆಹಾರ, ಅರಿವು ಔಷಧಿ) ಕಣ್ಣಾರೆ ಕಾಣು. ಇದು ಸಾಕ್ಷಾತ್ ಭುವನ ಕಲ್ಯಾಣ. ಶಿವನ ಕಲ್ಯಾಣ. ಬಸವಣ್ಣನಿರುವ ಭಾಗ್ಯದ ಕಲ್ಯಾಣ ಎಂದು ಸಿದ್ಧರಾಮನಿಗೆ ತಿಳಿಸುತ್ತಾರೆ.

ಕಲ್ಯಾಣ ಕಾಣುವ ಕಾತುರದಲ್ಲಿದ್ದ ಸಿದ್ಧರಾಮ ಅಲ್ಲಮರಿಗೆ ಪುರ ಪ್ರವೇಶದ ಆರಂಭದಲ್ಲೇ ಚನ್ನಬಸವಣ್ಣನವರು ಕೆತ್ತಿದ ಶಿಲಾಶಾಸನ ಕಣ್ಣಿಗೆ ಬೀಳುತ್ತದೆ. ಅಗೋ ಅಲ್ಲಿ ನೋಡು ಅದುವೆ ಕಲ್ಯಾಣ ಎಂದು ಕೈ ಮಾಡಿ ತೋರಿಸುತ್ತಾರೆ ಅಲ್ಲಮರು. ಊರೊಳಗೆ ಬಂದಾಗ ವಿವಿಧ ಮೂಲೆಗಳಿಂದ ಆಗಮಿಸಿದ್ದ ವಿವಿಧ ಕಾಯಕದ ಶರಣರನ್ನು ಕಾಣುತ್ತಾರೆ.

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು ಪರತತ್ವದ ಅರಿವಿನ ಪಥ ತೋರಿದ ಬಸವಣ್ಣನವರು ನಿರ್ಮಿಸಿದ ಅನುಭವ ಮಂಟಪ, ಮಹಾಮನೆ ಮುಂತಾದ ಕಲ್ಯಾಣ ಕಾರ್ಯದ ಹೆಗ್ಗುರುತುಗಳು ಅಲ್ಲಿ ಕಾಣ ಸಿಗುತ್ತವೆ. ಇದನ್ನು ಅದೃಶ್ಯ ಶಕ್ತಿಯ ಅಲ್ಲಮ ಹಾಗೂ ದೃಶ್ಯ ಶಕ್ತಿಯ ಸಿದ್ಧರಾಮರು ಬೆರಗಿನಿಂದ ನೋಡುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *