ತನುವ ತೋಟವ ಮಾಡಿದ ಗೊಗ್ಗಯ್ಯನ ಪ್ರಸಂಗ 5

ಬಸವ ಮೀಡಿಯಾ
ಬಸವ ಮೀಡಿಯಾ

ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 5

ಸುಳಿದು ಸುಖದಲಿ ತನ್ನ ಲೀಲೆಯ

ಬೆಳೆಸ ಬೇಕೆಂದೊಂದು ವೇಷದ

ಹೊಳಹಿನಲಿ ಬರುತಿರಲಿ ಕಟ್ಟಿದಿರಿನಲಿ ಚೆಲುವಾಗಿ

ತಳಿದ ಕೆಂದಾವರೆಯ ನೆಯ್ದಿಲು

ಗೊಳಿನ ನಾನಾಪರಿಯ ಪೂಗಿಡು

ಗಳ ಲತಾಮಂಟಪದ ತೋಟವ ಕಂಡನಲ್ಲಮನು

ದಿವ್ಯತೆಯಿಂದ ಅವತರಿಸಿದ ಈ ನಿರಂಜನ, ನಿರ್ಮಾಯದ ಜಂಗಮ ಅಲ್ಲಮಲಿಂಗನು ತನ್ನ ಸದ್ಗುರುವೆಂದು ಭಾವಿಸಿ ಗೊಗ್ಗಯ್ಯನು ಅವನ ಕಡೆಗೆ ನಡೆದು ಬರುತ್ತಿದ್ದ. ಮುಂದೆ ಒಂದು ತೋಟ ಕಾಣಿಸಿತು. ಕಣ್ಣಿಗೆ ಹಬ್ಬ ಕೊಡುವ ಬಣ್ಣಬಣ್ಣದ ಹೂಗಳು, ಮೂಗಿಗೆ ಪರಿಮಳದ ಜಾತ್ರೆ. ಅಂಥ ಸುಂದರ ತೋಟವೊಂದನ್ನು ಅಲ್ಲಮ ನೋಡುತ್ತಿದ್ದ. ಆ ತೋಟದಲ್ಲಿ ಗೊಗ್ಗಯ್ಯನೆಂಬ ಭಕ್ತನು ಕೃಷಿ ಕಾಯ್ಕದಿಂದ ದುಡಿದು ಬಂದ ಹಣವನ್ನು ಗುರುಲಿಂಗ ಜಂಗಮನಿಗೆ ಸೇವೆ ಮಾಡಿ, ಸಿಕ್ಕಿದ್ದನ್ನೆಲ್ಲ ದಾಸೋಹಕ್ಕೆ ಅರ್ಪಿಸಿ, ಅದನ್ನೇ ಸುಖದ ಭಕ್ತಿಮಾರ್ಗ ಅಂತ ತಿಳ್ಕೊಂಡು ಜೀವನದ ಪರಮಾರ್ಥವಾದ ಲಿಂಗವನ್ನು ತನ್ನೊಳಗೇ ಕಂಡುಕೊಳ್ಳಬೇಕು, ಅದನ್ನೇ ಮುಟ್ಟಬೇಕು ಅನ್ನೋ ‘ಲಿಂಗಮಾರ್ಗ’ದ ಮೇಲೆ ಗಟ್ಟಿಯಾಗಿ ನಂಬಿಕೆ ಇಟ್ಟಿದ್ದ. ಗುರುಲಿಂಗ ಜಂಗಮನ ದಾಸೋಹ ಮಾಡ್ತಿದ್ದ ಗೊಗ್ಗಯ್ಯನಲ್ಲಿ ಭಕ್ತಿ ಇತ್ತು, ದಾಸೋಹದ ಭಾವನೂ ಇತ್ತು. ಆದ್ರೂ ಆ ಭಕ್ತಿಭಾವ ಸುಜ್ಞಾನದ ಜ್ಯೋತಿಯ ಬೆಳಕಿನಿಂದ ಇನ್ನೂ ಪ್ರಕಾಶಮಾನವಾಗಿರಲಿಲ್ಲ. ಇದನ್ನ ಗಮನಿಸಿದ ಪ್ರಭುದೇವನಿಗೆ ಆಶ್ಚರ್ಯವೂ ಆಯ್ತು, ಮರುಕವೂ ಬಂತು. ಗೊಗ್ಗಯ್ಯನಿಗೆ ಲೋಕದ ಕೃಷಿ ಕಾಯ್ಕದ ಜೊತೆಗೆ ಅಧ್ಯಾತ್ಮದ ಕೃಷಿಯ ಮಹತ್ವವನ್ನೂ ತಿಳಿಸಬೇಕು ಅಂತ ಅಲ್ಲಮ ನಿರ್ಧರಿಸಿದ. ಹೊಲದಲ್ಲಿ ಬೀಜ ಬಿತ್ತಿ ಬೆಳೆ ಬೆಳೆಸೋದು ಹೇಗೋ, ಹಾಗೇ ಮನಸ್ಸಿನ ಹೊಲದಲ್ಲೂ ಸುಜ್ಞಾನದ ಬೀಜ ಬಿತ್ತಿ ಆತ್ಮಜ್ಞಾನ ಬೆಳೆಸಬೇಕು ಅಂತ ಗೊಗ್ಗಯ್ಯನಿಗೆ ಒಳಗಿನ ಕೃಷಿಯ ಮಾರ್ಗ ತೋರಿಸತೊಡಗಿದ.

“ಸಿಕ್ಕಿದ್ದೆಲ್ಲ ಲೋಕವೀಪರಿ, ಕಕ್ಕುಲಿಸಿಯೊಡಲಾಸೆಗಿರಿವನು, ಲೆಕ್ಕಿಸದೆ ಯಕಟೆನೊಳಗಲ್ಲಮ ತನೊಳಗಿಂತ” ಅನ್ನೋ ಭಾವದ ಮೂಲಕ ಅಲ್ಲಮ ಗೊಗ್ಗಯ್ಯನ ಮನಸ್ಸಿನೊಳಗಿನ ಅಜ್ಞಾನ, ಆಸೆ ಮತ್ತು ಅಹಂಕಾರವನ್ನ ತೋರಿಸಿಕೊಟ್ಟ. ಗೊಗ್ಗಯ್ಯನ ಹೃದಯದ ಹೊಲದಲ್ಲಿ ಸುಜ್ಞಾನದ ಬೀಜ ಬಿತ್ತೋಕೆ ತಕ್ಕ ಗರ್ಭವಾಗಿತ್ತು. ತೋಟಿಗನ ಬುದ್ಧಿಗೆ ತಿಳಿವಿನ ತೀಡು ಬೇಕು ಅಂತ ಗೊಗ್ಗಯ್ಯ ಇದ್ದ ಜಾಗಕ್ಕೇ ಅಲ್ಲಮ ಬಂದು, “ಶರಣಾರ್ಥಿ” ಅಂತ ಹೇಳಿದ. ಅದಕ್ಕೆ ಗೊಗ್ಗಯ್ಯನು, “ನೀನು ಅಲ್ಲಮ” ಅಂತ ತಿಳಿದು ಪ್ರತಿಶರಣು ಹೇಳಿ, ತಾನು ಕೃಷಿ ಕಾಯ್ಕದ ಗೊಗ್ಗಯ್ಯ ಅಂತ ಪರಿಚಯ ಮಾಡ್ಕೊಂಡ. ಹೀಗೆ ಲೋಕದ ಹೊಲದಲ್ಲಿ ದುಡಿದು ಬೆಳೆ ಬೆಳೆಸುತ್ತಿದ್ದ ಗೊಗ್ಗಯ್ಯನಿಗೆ ಅಲ್ಲಮನು ಒಳಗಿನ ಹೊಲದ ಕೃಷಿಯನ್ನೂ, ಸುಜ್ಞಾನದ ಬೆಳೆಯನ್ನೂ, ಆತ್ಮಜ್ಞಾನದ ಫಲವನ್ನೂ ತಿಳಿಸಿಕೊಡಲು ಮುಂದಾದ.

ಆವ ಬೆವಸಾಯವನು ಮಾಡಲು

ಜೀವ ವಧೆಗಳು ತಪ್ಪವದರಲಿ

ದೇವನೊಲಿವನೆ ನೋವು ನಿಲುವುದೆ ಸಾವು ಹಿಂಗುವುದೆ

ಧಾವತಿಯೆ ಕಡೆತನಕ ತಪ್ಪದು

ಭಾವಿಸುವೊಡದು ಭವಿಗಳಂಗವಿ

ದಾವುದಲ್ಲದ ಮತವನೆಲೆ ಗೊಗ್ಗಯ್ಯ ಕೇಳು

ನಾನಾ ಪ್ರಕಾರದ ಉದ್ಯೋಗಗಳಲ್ಲಿ ಕಾಯಕದ ಕೌಶಲ್ಯವನ್ನು ತೋರಿಸಿ ಮೈಮುರಿದು ದುಡಿಯಬೇಕು. ದುಡಿದು ಗಳಿಸಿದ ಹಣವನ್ನು ಗುರುಲಿಂಗ ಜಂಗಮನಿಗೆ ಸಲ್ಲಿಸಬೇಕು. ಅದರಿಂದ ಬಂದ ಪ್ರಸಾದವನ್ನು ಸ್ವೀಕರಿಸಿ, ಅದನ್ನೇ ಜೀವನದ ಸುಖವೆಂದು ತಿಳಿದು ತೃಪ್ತಿಪಡಬೇಕು. ಇದೇ ಶಿವಭಕ್ತಿಯ ಹೃದಯ, ಇದೇ ಕಾಯಕದ ಮರ್ಮ ಅಂತ ಗೊಗ್ಗಯ್ಯ ತಿಳ್ಕೊಂಡಿದ್ದ. ಆದರೆ ಇದಕ್ಕಿಂತ ಮಿಗಿಲಾದದ್ದು ಇನ್ನೇನಿದೆ ಅಂತ ಅವನು ಅಲ್ಲಮನನ್ನು ಕೇಳ್ತಾನೆ. ಆಗ ಅಲ್ಲಮ ಅವನಿಗೆ, “ಓ ಗೊಗ್ಗಯ್ಯ, ನೀನು ಹೊರಗಿನ ಹೊಲದಲ್ಲಿ ಎಷ್ಟೇ ಚೆನ್ನಾಗಿ ಕೃಷಿ ಮಾಡಿದ್ರೂ, ನಿನ್ನ ಒಳಗಿನ ಹೊಲ ಬಂಜರಾಗಿದ್ದರೆ ಅದರಿಂದ ಏನು ಪ್ರಯೋಜನ? ಜೀವನ ನಡೆಸೋಕೆ ದುಡಿಯೋದು ಬೇಕು, ದುಡಿದು ಗಳಿಸೋದು ಬೇಕು, ದಾಸೋಹ ಮಾಡೋದು ಬೇಕು. ಆದರೆ ಇವೆಲ್ಲದರ ಜೊತೆಗೆ ಮನಸ್ಸಿನೊಳಗಿನ ಅಜ್ಞಾನ, ಆಸೆ, ಅಹಂಕಾರಗಳನ್ನೂ ಕಳೆದು ಆತ್ಮಜ್ಞಾನವನ್ನು ಬೆಳೆಸಿಕೊಳ್ಳಬೇಕು” ಅಂತ ತಿಳಿಸುತ್ತಾನೆ.

ಬಂಧನ ಉಂಟುಮಾಡುವ ಬರೀ ಬಾಹ್ಯ ಕಾಯಕವನ್ನೇ ಭಕ್ತಿ ಅಂತ ತಿಳ್ಕೊಂಡು, ಅದರಿಂದ ಗಳಿಸಿದ ಸಂಪತ್ತನ್ನ ಗುರುಲಿಂಗ ಜಂಗಮನಿಗೆ ಅರ್ಪಿಸಿ, ಪ್ರಸಾದವಾಗಿ ಸಿಕ್ಕಿದ್ದನ್ನ ಸೇವಿಸಿ, ಅದೇ ಭಕ್ತಿಯ ಪರಮಾವಧಿ ಅಂತ ಭಾವಿಸಿದ್ರೆ ಸಾಲದು. ಹೀಗೆ ಬದುಕುತ್ತಾ ಹೋದ್ರೆ ಹಸಿವು ಕಡಿಮೆಯಾಗಬಹುದು, ದೇಹದ ನೋವು ಸ್ವಲ್ಪ ದೂರವಾಗಬಹುದು, ಸಂಪತ್ತು ಸಿಗಬಹುದು. ಆದರೆ ಒಳಗಿನ ಅಶಾಂತಿ ಹೋಗೋದಿಲ್ಲ. ಜೀವನದ ನಿಜವಾದ ಸುಖವೂ ಸಿಗೋದಿಲ್ಲ. ಸಾವಿನ ಭಯವೂ ಅಳಿಯೋದಿಲ್ಲ. ಆದ್ದರಿಂದ ಸುಜ್ಞಾನವಿಲ್ಲದ, ಬಂಧನಕಾರಕವಾದ ಬರೀ ಬಾಹ್ಯ ಕಾಯಕದಿಂದ ಭವಬಂಧನದಿಂದ ಮುಕ್ತಿಯಾಗೋಕೆ ಆಗೋದಿಲ್ಲ ಅಂತ ಪ್ರಭು ಗೊಗ್ಗಯ್ಯನಿಗೆ ತಿಳಿಸಿಕೊಡ್ತಾನೆ.

ಗೊಗ್ಗಯ್ಯನ ಭಕ್ತಿಯಲ್ಲಿ ಕೊರತೆ ಇರಲಿಲ್ಲ. ಅವನಿಗೆ ಗುರುಲಿಂಗ ಜಂಗಮನ ಮೇಲೆ ಅಪಾರವಾದ ನಂಬಿಕೆ ಇತ್ತು. ದಾಸೋಹದ ಭಾವನೆಯೂ ಇತ್ತು. ಆದರೆ ನಿಜವಾದ ಭಕ್ತಿಯ ಸ್ವರೂಪ ಏನು, ಗುರು-ಲಿಂಗ-ಜಂಗಮದ ಅಂತರಂಗದ ತತ್ತ್ವ ಏನು ಅನ್ನೋದನ್ನ ಅವನು ಇನ್ನೂ ಸಂಪೂರ್ಣವಾಗಿ ಅರಿತಿರಲಿಲ್ಲ. ಅದಕ್ಕಾಗಿ ಪ್ರಭು ಅವನಿಗೆ ಪ್ರಾಣಲಿಂಗದ ಅನುಸಂಧಾನದ ಶಿವಾದ್ವೈತ ಮಾರ್ಗವನ್ನು ಬೋಧಿಸುತ್ತಾನೆ. ಪ್ರಭುವಿನ ಮಾತುಗಳು ಗೊಗ್ಗಯ್ಯನ ಮನಸ್ಸಿನೊಳಗಿನ ನಿಜವಾದ ಭಕ್ತಿಯ ಅರಿವಿನ ಹಂಬಲವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಗುರು, ಲಿಂಗ ಮತ್ತು ಜಂಗಮದ ನಿಜವಾದ ಸ್ವರೂಪವನ್ನು ತಿಳ್ಕೊಳ್ಳಬೇಕು, ನೈಜ ಭಕ್ತಿಯ ಅರ್ಥವನ್ನು ಅರಿಯಬೇಕು ಅಂತ ಗೊಗ್ಗಯ್ಯ ಪ್ರಭುವನ್ನು ಬೇಡಿಕೊಳ್ಳುತ್ತಾನೆ.

ಆಗ ಪ್ರಭು ಅವನಿಗೆ ಒಂದು ದೃಷ್ಟಾಂತವನ್ನು ತೋರಿಸಿ ಸನ್ಮಾರ್ಗದ ಕಡೆಗೆ ಕರೆದೊಯ್ಯಬೇಕೆಂದು ತೀರ್ಮಾನಿಸುತ್ತಾನೆ. ತಾನು ತೋರಿಸಬೇಕಾದ ಸತ್ಯವನ್ನು ಗೊಗ್ಗಯ್ಯನಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಲು, ಅವನ ಮನಸ್ಸಿನಲ್ಲೇ ಅರಿವಿನ ಬಾಗಿಲು ತೆಗೆಯುವಂಥ ಮಾತುಗಳನ್ನು ಆಡುತ್ತಾನೆ. ಹೀಗೆ ಗೊಗ್ಗಯ್ಯನಿಗೆ ಹೊರಗಿನ ಕಾಯಕದ ಜೊತೆಗೆ ಒಳಗಿನ ಆತ್ಮಕಾಯಕವೂ ಮುಖ್ಯ ಅಂತ ಮನವರಿಕೆ ಮಾಡಿಕೊಡುತ್ತಾನೆ.

ಆಮೇಲೆ ಪ್ರಭು ಗೊಗ್ಗಯ್ಯನಿಗೆ ಒಂದು ಅದ್ಭುತ ದೃಷ್ಟಾಂತವನ್ನು ತೋರಿಸುತ್ತಾನೆ. ಅಗುಳ ಕಿತ್ತ ಹಂಟೆಯ ಕೆಳಗೆ ಹೊಂಗಳಸವನ್ನು ತೋರಿಸಿ, ಅದರ ಸುತ್ತಲೂ ಅಗ್ನಿಯಿದ್ದರೂ ಅದರೊಳಗೆ ಇರುವ ಸಮಾಧಿ ಸ್ಥಾನವನ್ನು ಕಾಣುವಂತೆ ಮಾಡುತ್ತಾನೆ. ಆ ದೃಶ್ಯವನ್ನು ಕಂಡ ಗೊಗ್ಗಯ್ಯನ ಮನಸ್ಸು ಸಂತೋಷದಿಂದ ಪುಳಕಿತವಾಗುತ್ತದೆ. ಹೊರಗಿನ ಕಣ್ಣಿಗೆ ಕಾಣದ ಒಳಗಿನ ಸತ್ಯವನ್ನು ಅರಿತುಕೊಳ್ಳುವ ಹೊಸ ದಾರಿ ಅವನ ಮುಂದೆ ತೆರೆದುಕೊಳ್ಳುತ್ತದೆ. ಆ ಕ್ಷಣದಿಂದ ಗೊಗ್ಗಯ್ಯನಿಗೆ ಕಾಯಕವೆಂದರೆ ಬರೀ ಹೊಟ್ಟೆಪಾಡಿಗಾಗಿ ಮಾಡುವ ದುಡಿಮೆ ಅಲ್ಲ, ಅದು ಆತ್ಮಶುದ್ಧಿಗೆ ದಾರಿಯಾಗಬೇಕು; ದಾಸೋಹವೆಂದರೆ ಬರೀ ಕೊಡುವ ಕೆಲಸವಲ್ಲ, ಅದು ಅಹಂಕಾರವನ್ನು ಬಿಡುವ ಸಾಧನೆಯಾಗಬೇಕು; ಭಕ್ತಿಯೆಂದರೆ ಬರೀ ಆಚರಣೆ ಅಲ್ಲ, ಅದು ತನ್ನೊಳಗಿನ ಶಿವತತ್ತ್ವವನ್ನು ಅರಿಯುವ ಮಾರ್ಗವಾಗಬೇಕು ಅನ್ನೋ ಅರಿವು ಮೂಡತೊಡಗುತ್ತದೆ.

ಮೌನದಿಂ ನಿಬ್ಬೆರಗು ಹೊಡೆದವ

ಧಾನದ ನಿಮಿಷದೃಷ್ಟಿ ಲಿಂಗ

ಧ್ಯಾನದಂಗವ ಕಂಡರಾ ಗೊಗ್ಗಯ್ಯನಲ್ಲಮನು

ಅಂತರಂಗ ಹೊಕ್ಕು ನೆರೆ ನಿ

ಶ್ಚಿಂತ ನಿಲವನು ನೋಡುವನುಭವಿ

ಯಂತೆ ಗುಹೆಯೊಳಗೊಂದು ಲಿಂಗಪ್ರಾಣತನುಮಯದ

ಜಂತ್ರಗಿಟಿಗಿಟಿಯಾದ ಲಿಂಗದ

ಚಿಂತೆಯಲಿ ಮರವಟ್ಟ ಮೆಯ್ಯ ಮ

ಹಂತನನು ಗೊಗ್ಗಯ್ಯನಲ್ಲಮ ಸಹಿತ ನೆರೆಕಂಡು

ಮೌನದಲ್ಲಿ ಕುಳಿತಿದ್ದ ಅನಿಮಿಷಯೋಗಿಯ ಧ್ಯಾನದ ಆಳವನ್ನು ಅಲ್ಲಮಪ್ರಭು ಗೊಗ್ಗಯ್ಯನಿಗೆ ತೋರಿಸುತ್ತಾನೆ. ಅನಿಮಿಷಯೋಗಿಯು ಸ್ವಸ್ಥವಾಗಿ ಪದ್ಮಾಸನ ಹಾಕಿಕೊಂಡು, ಕರಸ್ಥಳದಲ್ಲಿ ಇಷ್ಟಲಿಂಗವನ್ನು ಹಿಡಿದುಕೊಂಡು, ತನ್ನ ಕರಣಚತುಷ್ಟಯವನ್ನೆಲ್ಲ ಆ ಲಿಂಗದಲ್ಲಿ ನೆಲೆಗೊಳಿಸಿದ್ದ. ಅವನ ಮನಸ್ಸಿನಲ್ಲಿ ‘ನಾನು-ನೀನು’ ಅನ್ನೋ ಭೇದವೇ ಇರಲಿಲ್ಲ. ಜೀವಭಾವ, ಶಿವಭಾವ, ಶಿವಜೀವೈಕ್ಯ ಭಾವ ಇವೆಲ್ಲವನ್ನೂ ಮೀರಿ ಅವನು ನಿರ್ಭಾವದ ಸ್ಥಿತಿಯಲ್ಲಿ ನಿಂತಿದ್ದ. ಕರಸ್ಥಳದಲ್ಲಿದ್ದ ಇಷ್ಟಲಿಂಗದ ಮೇಲೆ ಅವನ ದೃಷ್ಟಿ ಒಂದೇ ಕಡೆ ನೆಟ್ಟಿತ್ತು. ಕಣ್ಣು ಮಿಟುಕಿಸದೇ ಲಿಂಗವನ್ನು ನೋಡುತ್ತಾ, ಹೊರಗಿನ ಲೋಕವನ್ನೇ ಮರೆತು ತನ್ನೊಳಗಿನ ಶಿವತತ್ತ್ವದಲ್ಲಿ ಲೀನನಾಗಿದ್ದ. ಗುಹೆಯೊಳಗೆ ಒಂದು ಲಿಂಗಪ್ರಾಣತತ್ತ್ವವೇ ತುಂಬಿಕೊಂಡಿರುವಂತೆ, ಅವನ ದೇಹ-ಮನಸ್ಸು ಸಂಪೂರ್ಣವಾಗಿ ಲಿಂಗಚಿಂತನೆಯಲ್ಲೇ ಮುಳುಗಿತ್ತು.

ಇದನ್ನ ನೋಡಿದ ಗೊಗ್ಗಯ್ಯ ಬೆರಗಾಗಿಬಿಟ್ಟ. ಅನಿಮಿಷಯೋಗಿಯ ನಿಜವಾದ ಸಹಜ ಸಮಾಧಿಯ ಸ್ಥಿತಿಯನ್ನು ಕಂಡು ಅವನಿಗೆ ತನ್ನ ಭಕ್ತಿಯ ಮಿತಿಯ ಅರಿವಾಯಿತು. ಇಷ್ಟು ದಿನ ತಾನು ಕಾಯಕ ಮಾಡೋದು, ಹಣ ಗಳಿಸೋದು, ಗುರುಲಿಂಗ ಜಂಗಮನಿಗೆ ಅರ್ಪಿಸೋದು, ಪ್ರಸಾದ ಸ್ವೀಕರಿಸೋದು ಇವನ್ನೇ ಭಕ್ತಿಯ ಪರಮಾವಧಿ ಅಂತ ತಿಳ್ಕೊಂಡಿದ್ದ. ಆದರೆ ಅನಿಮಿಷಯೋಗಿಯ ಸ್ಥಿತಿಯಲ್ಲಿ ದೇಹದ ಕಾಯಕಕ್ಕಿಂತ ಮಿಗಿಲಾದ ಅಂತರಂಗದ ಕಾಯಕವಿತ್ತು. ಮನಸ್ಸಿನ ಎಲ್ಲ ಚಂಚಲತೆ ನಿಂತು, ಜೀವ ಮತ್ತು ಶಿವ ಒಂದೇ ಅನ್ನೋ ಅನುಭವ ಅವನಲ್ಲಿ ಮೂಡಿತ್ತು.

ಆಗ ಪ್ರಭು ಹೇಳುತ್ತಾನೆ:

ಇದೇ ಕಠಿಣ ಶಿವಲಿಂಗ ಭಕ್ತಿಯ

ಹೃದಯವನು ಸಾಧಿಸುವ ಪರಿ ಭಾ

ವದಲಿ ನೆರೆ ನಟ್ಟಾಲಿಯಲಿ ನಿಬ್ಬೆರಗಿನಂದದಲಿ

 “ಇದೇ ಕಠಿಣ ಶಿವಲಿಂಗಭಕ್ತಿಯ ಹೃದಯವನ್ನು ಸಾಧಿಸುವ ಪರಿ. ಭಕ್ತಿಯ ನಿಜವಾದ ಮಾರ್ಗದಲ್ಲಿ ನಿಂತು, ಅಂತರಂಗವನ್ನು ಶುದ್ಧಪಡಿಸಿಕೊಂಡು, ಲಿಂಗದ ಮೇಲೆ ಅಚಲವಾದ ನಿಷ್ಠೆ ಇಟ್ಟು ಸಾಧನೆ ಮಾಡಬೇಕು.” ಬರೀ ಹೊರಗಿನ ಆಚರಣೆಗಳನ್ನು ಮಾಡುತ್ತಾ ಜೀವನವನ್ನೆಲ್ಲ ಕಳೆದುಬಿಟ್ಟರೆ ಪ್ರಯೋಜನವಿಲ್ಲ. ಒಳಗಿನ ಮನಸ್ಸನ್ನು ಗೆದ್ದು, ಶಿವತತ್ತ್ವವನ್ನು ಅರಿತುಕೊಳ್ಳುವುದೇ ನಿಜವಾದ ಸಾಧನೆ ಅಂತ ಗೊಗ್ಗಯ್ಯನಿಗೆ ಮನವರಿಕೆ ಮಾಡಿಕೊಡುತ್ತಾನೆ.

ಗುರುವೆ ಕರುಣಿಸು ಭಕ್ತಿಭಾವದ

ಗುರುವೆ ಕರುಣಿಸು ಲಿಂಗನಿಷ್ಠೆ

ಗುರುವೆ ಕರುಣಿಸು ಕರುಣಿಸೆನುತನಿಮಿಷನ ಕೊಂಡಾಡಿ

ಅನಿಮಿಷಯೋಗಿಯಂಥ ಮಹಾಯೋಗಿಯ ಮುಂದೆ ಗೊಗ್ಗಯ್ಯನ ಮನಸ್ಸು ಮತ್ತಷ್ಟು ವಿನಮ್ರವಾಗುತ್ತದೆ. ತನ್ನನ್ನು ಶಿಷ್ಯನೆಂದು ಭಾವಿಸಿ, ಅನಿಮಿಷಯೋಗಿಯನ್ನೇ ಗುರುಸ್ಥಾನದಲ್ಲಿ ಕಂಡು ಭಕ್ತಿಯಿಂದ ಪ್ರಾರ್ಥಿಸುತ್ತಾನೆ: “ಗುರುವೇ, ನನ್ನ ಭಕ್ತಿಭಾವವನ್ನು ಕರುಣಿಸಿ; ಗುರುವೇ, ಲಿಂಗನಿಷ್ಠೆಯನ್ನು ಕರುಣಿಸಿ; ಗುರುವೇ, ನಿಮ್ಮ ಕರುಣೆಯಿಂದ ಈ ಅನಿಮಿಷನನ್ನು ಕೊಂಡಾಡುವ ಭಾಗ್ಯವನ್ನು ನನಗೆ ಕೊಡಿ” ಅಂತ ಅನನ್ಯಭಾವದಿಂದ ಭಜಿಸುತ್ತಾನೆ.

ಆ ಸಂದರ್ಭದಲ್ಲಿ ಗೊಗ್ಗಯ್ಯನಿಗೆ ಒಂದು ಅದ್ಭುತ ಅನುಭವವಾಗುತ್ತದೆ. ಸೂಜಿಗಲ್ಲಿನ ಹತ್ತಿರ ಹೋದ ಕಬ್ಬಿಣದ ಸೂಜಿಯಂತೆ, ಸಚ್ಚಿದಾನಂದದ ನಿತ್ಯಪೂರ್ಣತೆಯ ಒಂದು ಅಂಶವಾಗಿರುವ ಅಲ್ಲಮಪ್ರಭುವಿನ ದಿವ್ಯಸ್ವರೂಪವನ್ನು ಅನಿಮಿಷಯೋಗಿಯ ಕೈಯಲ್ಲಿದ್ದ ಲಿಂಗದ ಕಾಂತಿ ಸೆಳೆದುಕೊಳ್ಳುತ್ತದೆ. ಆ ಲಿಂಗದ ದಿವ್ಯಕಾಂತಿ ಪ್ರಭುವಿನ ದೇಹದೊಳಗೆ ಪ್ರವೇಶಿಸುವಂತೆ ಕಾಣುತ್ತದೆ. ಇದು ಗೊಗ್ಗಯ್ಯನಿಗೆ ಸಾಮಾನ್ಯ ದೃಶ್ಯವಾಗಿರಲಿಲ್ಲ. ಅವನ ಕಣ್ಣೆದುರಿಗೇ ನಡೆದ ಈ ಮಹಾಘಟನೆಯಿಂದ ಅವನು ಸಂಪೂರ್ಣವಾಗಿ ಬೆರಗಾಗುತ್ತಾನೆ.

ಈ ಮಹಾಘಟನೆಯ ಮಹತ್ವವನ್ನು ಚೆನ್ನಬಸವಣ್ಣನವರು ತಮ್ಮ ವಚನಗಳಲ್ಲಿ ತುಂಬ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.

ಅಂಗ ಸಂಸಾರವಿರಹದೊಳು ಸವೆದು,

ಲಿಂಗವು ಅವಗ್ರಹಿಸಿಕೊಂಡ ಮೃತ್ತಿಕಾ ಪಂಜರದೊಳಗೆ,

ಭುಜಂಗ ತಲೆಯೆತ್ತಿ ನೋಡಲು,

ಥಳಥಳನೆ ಹೊಳೆವ ಮಾಣಕ್ಯದ ಬೆಳಗುಗಳೆಸೆಯೆ

ಸದ್ಯೋಜಾತನ ಜಟಾಮಕುಟವ ಸುತ್ತಿರ್ದ ಫಣೀಂದ್ರನಲ್ಲದೆ

ಮತ್ತಾರೂ ಅಲ್ಲವೆಂದು ಶಿಖರವ ಮೊದಲುಗೊಂಡಗುಳಿಸಲು,

ಸುತ್ತಿರ್ದ ಫಣಿಸೂತ್ರವ ಕಂಡು ಚಕ್ಕನೆ ಕದವ ತೆರೆಯಲು

ದೃಷ್ಟಿದೃಷ್ಟವಾದ ಅನಿಮಿಷನ ಕರಸ್ಥಲವ ಕಂಡು

ಧೃಷ್ಟತನದಲ್ಲಿ ಲಿಂಗವ ತೆಗೆದುಕೊಂಡಡೆ

ಸಂದು ಕಳಾಸಂಗಳು ತಪ್ಪಿ ಅಸ್ಥಿಗಳು ಬಳಬಳನುದುರಲು

ಆತನ ಬೆರಗು ನಿಮ್ಮ ಹೊಡೆದು

ಖ್ಯಾತಿಯಾಯಿತ್ತು ನೋಡಯ್ಯಾ,

ಅಲ್ಲಮಪ್ರಭುವೆಂಬ ನಾಮ ನಿಮಗೆ!

ಭಕ್ತಿದಳದುಳದಿಂದ ಬಂದಿಕಾರರಾಗಿ ಬಂದು ಹೊಕ್ಕಡೆ

ಬದನೆಯ ಕಾಯಿಗಳು ಬಾಣಲಿಂಗವಾಗವೆ

ನಮ್ಮ ಬಸವಣ್ಣನ ದೃಷ್ಟಿತಾಗಲು? ಇದು ಕಾರಣ,

ಕೂಡಲಚೆನ್ನಸಂಗನಲ್ಲಿ ಅನಿಮಿಷಪ್ರಭುವಿಂಗೆ

ಬಸವಣ್ಣ ಗುರುವಾದ ಕಾರಣ

ನಾನು ನಿಮಗೆ ಚಿಕ್ಕ ತಮ್ಮ ಕೇಳಾ ಪ್ರಭುವೆ.

 ಸಂಸಾರದಿಂದ ವಿರಹಗೊಂಡು, ಲಿಂಗವನ್ನು ಅರಗಿಸಿಕೊಂಡ ಮೃತ್ತಿಕಾ ಪಂಜರದೊಳಗೆ, ಭುಜಂಗನ ತಲೆ ಎತ್ತಿ ನೋಡಿದಾಗ ಮಣಿಕ್ಯದ ಬೆಳಕು ಹೊಳೆಯುವಂತೆ ಕಾಣುತ್ತದೆ. ಸದ್ಯೋಜಾತನ ಜಟಾಮಕುಟವನ್ನು ಸುತ್ತಿಕೊಂಡಿರುವ ಫಣೀಂದ್ರನ ಹೊರತು ಮತ್ತಾರೂ ಇಲ್ಲವೆಂಬಂತೆ, ಆ ದಿವ್ಯತತ್ತ್ವವು ಶಿಖರದಿಂದ ಕೆಳಗೆ ಇಳಿಯುತ್ತದೆ. ಫಣಿಸೂತ್ರವನ್ನು ಕಂಡು ಬಾಗಿಲು ತೆರೆದಾಗ, ಕಣ್ಣಿಗೆ ಕಾಣುವ ಅನಿಮಿಷನ ಕರಸ್ಥಳದಲ್ಲಿದ್ದ ಲಿಂಗವನ್ನು ಗೊಗ್ಗಯ್ಯ ಕಾಣುತ್ತಾನೆ.

ಆ ದೃಶ್ಯದಿಂದ ಧೈರ್ಯಗೊಂಡ ಗೊಗ್ಗಯ್ಯ ಲಿಂಗವನ್ನು ತೆಗೆದುಕೊಳ್ಳುತ್ತಾನೆ. ಆ ಕ್ಷಣದಲ್ಲಿ ಅವನೊಳಗಿನ ಭಾವನೆಗಳು ಉಕ್ಕಿ ಬರುತ್ತವೆ. ಅವನ ಬೆರಗು ಎಲ್ಲೆಡೆ ಹರಡುತ್ತದೆ. ತನ್ನ ಕಣ್ಣೆದುರಿಗೆ ನಡೆದ ಈ ಅದ್ಭುತವನ್ನು ಕಂಡು ಅವನು ಅಲ್ಲಮಪ್ರಭುವಿನ ಮಹಿಮೆಯನ್ನು ಅರಿಯುತ್ತಾನೆ. “ಅಲ್ಲಮಪ್ರಭುವೆಂಬ ಈ ಹೆಸರು ನಿಮಗೆ ಯಾಕೆ ಬಂದಿತು?” ಎಂಬ ಪ್ರಶ್ನೆಯೇ ಅವನ ಮನಸ್ಸಿನಲ್ಲಿ ಮೂಡುತ್ತದೆ. ಭಕ್ತಿಯ ದಳದೊಳಗಿಂದ ಬಂದಿಕಾರರಾಗಿ ಬಂದು ಪ್ರವೇಶಿಸಿದಾಗ, ಬಂಧನೆಯ ಕಾಯಿಗಳು ಬಾಣಲಿಂಗವಾಗುವಂಥ ಮಹಿಮೆ ಅಲ್ಲಮನದು. ನಮ್ಮ ಬಸವಣ್ಣನ ದೃಷ್ಟಿಗೆ ಇದು ಗೋಚರವಾದದ್ದು. ಅದಕ್ಕೆ ಕಾರಣವೇನು ಎಂದರೆ, ಕೂಡಲಚೆನ್ನಸಂಗಮನಲ್ಲಿ ಅನಿಮಿಷಪ್ರಭುವಿಗೆ ಬಸವಣ್ಣನೇ ಗುರುವಾದ ಕಾರಣವೇ ಈ ಮಹಾತತ್ತ್ವದ ರಹಸ್ಯ ನಮಗೆ ತಿಳಿಯುತ್ತದೆ.

ನೋಟವೇ ಪ್ರಾಣ ಸ್ವರೂಪಿನ

ಮಾಟವಾದ ನಿಮಿತ್ತ ಲಿಂಗದ

ಕೂಡದೊಡನಾದ ನಿಮಿಷಯ್ಯನ ಜೀವಕಳೆ ಬಂದು

ನಾಟಿತೀತನ ದಿವ್ಯ ದೇಹದ

ಕೋಟರದೊಳೇನೆಂಬೆನೈಕ್ಯದ

ಕೂಟದಲಿ ಮನುಕರಿಸಿ ಮಕರಿಸಿ ಮೆರೆದನಲ್ಲಮನು

ಹೀಗೆ ಅಲ್ಲಮಪ್ರಭುವಿನ ದಿವ್ಯಜ್ಞಾನ, ಅನಿಮಿಷಯೋಗಿಯ ಸಹಜಸಮಾಧಿ ಮತ್ತು ಲಿಂಗದ ಮಹಿಮೆಯನ್ನು ಕಂಡ ಗೊಗ್ಗಯ್ಯನ ಭಕ್ತಿ ಇನ್ನಷ್ಟು ಗಾಢವಾಗುತ್ತದೆ. ಹೊರಗಿನ ಕಾಯಕದಿಂದ ಒಳಗಿನ ಕಾಯಕದ ಕಡೆಗೆ, ಆಚರಣೆಯಿಂದ ಅನುಭವದ ಕಡೆಗೆ, ಸಾಮಾನ್ಯ ಭಕ್ತಿಯಿಂದ ಶಿವಜೀವೈಕ್ಯದ ಅರಿವಿನ ಕಡೆಗೆ ಅವನ ಮನಸ್ಸು ಸಾಗುತ್ತದೆ. ಅಲ್ಲಮನ ಸದ್ಬೋಧೆಯಿಂದ ಗೊಗ್ಗಯ್ಯನ ಬದುಕಿನಲ್ಲಿ ಭಕ್ತಿಯ ಹೊಸ ಅಧ್ಯಾಯ ಆರಂಭವಾಗುತ್ತದೆ.

ಬಸವಣ್ಣನವರು ಪೂರ್ವದಲ್ಲಿ ಅಲ್ಲಮಪ್ರಭುವಿಗೂ, ಅಲ್ಲಮನ ಗುರುವಾದ ಅನಿಮಿಷಯೋಗಿಗೂ ಗುರುಗಳಾಗಿದ್ದರು ಅನ್ನೋದನ್ನ ಈ ವಚನ ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಅನಿಮಿಷಯೋಗಿಯ ಪ್ರಾಣಕಳೆ ಅಲ್ಲಮನ ದಿವ್ಯದೇಹದಲ್ಲಿ ಬೆರೆತು ಒಂದಾಗುವ ಸಂದರ್ಭದಲ್ಲಿ ಗೊಗ್ಗಯ್ಯ ಅದನ್ನ ಕಣ್ಣಾರೆ ನೋಡುತ್ತಾ ನಿಂತಿದ್ದ. “ನೋಟವೇ ಪ್ರಾಣಸ್ವರೂಪಿನ, ಮಾತಾದ ನಿಮಿತ್ತ ಲಿಂಗದ, ಕೂಡದೊಡನಾದ ಅನಿಮಿಷಯ್ಯನ ಜೀವಕಳೆ ಬಂದು ನಾಟೀವತನ ದಿವ್ಯದೇಹದ ಕೋಟರದೊಳೇ ನಾನೆಂಬ ಐಕ್ಯದ ಕೂಟದಲ್ಲಿ ಮನಕರಿಸಿ ಮಕರಿಸಿ ಮೆರೆದನಲ್ಲಮನು” ಅನ್ನೋ ವಚನದ ಭಾವ ಇದೇ.

ಅನಿಮಿಷಯೋಗಿಯ ಪ್ರಾಣಕಳೆಯೂ ಪ್ರಭುವಿನ ದಿವ್ಯದೇಹದಲ್ಲಿ ಬೆರೆತು ಒಂದಾಗುವುದನ್ನ ಗೊಗ್ಗಯ್ಯ ಬೆರಗಿನಿಂದ ನೋಡುತ್ತಾನೆ. ಆ ಅದ್ಭುತ ದೃಶ್ಯದಿಂದ ಅಲ್ಲಮನೇ ಸಾಮಾನ್ಯ ಮನುಷ್ಯನಲ್ಲ, ಅಪರೂಪದ ಮಹಾತ್ಮ, ಜಗದ್ಗುರು ಅನ್ನೋ ಸತ್ಯ ಗೊಗ್ಗಯ್ಯನಿಗೆ ಮನವರಿಕೆಯಾಗುತ್ತದೆ. ತಾನು ಕಂಡ ಅನುಭವದಿಂದಲೇ ಅರಿವನ್ನ ಪಡೆದುಕೊಂಡ ಗೊಗ್ಗಯ್ಯ, ಅಲ್ಲಮನನ್ನು ಹಲವು ರೀತಿಯಲ್ಲಿ ಕೊಂಡಾಡುತ್ತಾನೆ. ಗುರೂಪದೇಶದಿಂದ ಧನ್ಯನಾದ ಅವನು, ಲಿಂಗಭಾವದಲ್ಲಿ ನೆಲೆಗೊಂಡು, ನೇರವಾದ ದೃಷ್ಟಿಯಿಂದ ಲಿಂಗವನ್ನು ಕಾಣುವ ಸಾಧನೆಯನ್ನು ತಿಳಿದುಕೊಳ್ಳುತ್ತಾನೆ. ಆಮೇಲೆ ಪ್ರತಿದಿನವೂ ಅದನ್ನೇ ಸಾಧನೆ ಮಾಡ್ತಾ ತನ್ನ ಒಳಗಿನ ಭಕ್ತಿಯನ್ನು ಗಟ್ಟಿಮಾಡಿಕೊಳ್ಳಲು ಆರಂಭಿಸುತ್ತಾನೆ.

ಇಲ್ಲಿಂದ ಅಲ್ಲಮಪ್ರಭುವಿನ ಲೋಕಕಲ್ಯಾಣದ ಯಾತ್ರೆ ಮುಂದುವರಿಯುತ್ತದೆ. ಅವರ ಪ್ರಯಾಣ ಬರೀ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗೋ ಪ್ರಯಾಣ ಅಲ್ಲ. ಜನರೊಳಗಿನ ಅಜ್ಞಾನವನ್ನು ಕಳೆದು, ಆತ್ಮಜ್ಞಾನದ ಬೆಳಕನ್ನು ಹಚ್ಚುವ ಜ್ಞಾನಯಾತ್ರೆ ಅದು.

ಶೂನ್ಯಸಂಪಾದನೆಯಲ್ಲಿಯೂ ಈ ಪ್ರಸಂಗ ಬಹಳ ರೋಚಕವಾಗಿ ಮೂಡಿಬಂದಿದೆ. ಅಲ್ಲಮಪ್ರಭುವಿನ ಪ್ರಸಿದ್ಧ ವಚನವೊಂದೂ ಇದೇ ಸಂದರ್ಭದಲ್ಲಿ ಬರುತ್ತದೆ.

ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ

ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ.

ಒಡೆದು ಸಂಸಾರದ ಹೆಂಟೆಯ,

ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.

ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ,

ಸುಷುಮ್ನನಾಳದಿಂದ ಉದಕವ ತಿದ್ದಿ.

ಬಸವಗಳೈವರು ಹಸಗೆಡಿಸಿಹವೆಂದು

ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,

ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು

ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.

 “ತನು ತೋಟವ ಮಾಡಿ, ಮನವ ಗುದ್ದಲಿ ಮಾಡಿ, ಅಗೆದು ಕಳೆದೆನಯ್ಯ ಭ್ರಾಂತಿಯ ಬೇರು” ಅನ್ನೋ ಭಾವದಲ್ಲಿ ಅಲ್ಲಮನು ಹೊರಗಿನ ಕೃಷಿಯ ಉದಾಹರಣೆಯ ಮೂಲಕ ಒಳಗಿನ ಆತ್ಮಕೃಷಿಯನ್ನ ವಿವರಿಸುತ್ತಾನೆ.

ತನ್ನ ದೇಹವನ್ನೇ ಹೊಲವನ್ನಾಗಿ ಮಾಡಿಕೊಳ್ಳಬೇಕು. ಮನಸ್ಸನ್ನ ಗುದ್ದಲಿಯನ್ನಾಗಿ ಮಾಡಿಕೊಂಡು, ಅದರೊಳಗೆ ಬೆಳೆದಿರುವ ಭ್ರಮೆ, ಅಜ್ಞಾನ, ಆಸೆ, ಅಹಂಕಾರಗಳ ಬೇರುಗಳನ್ನು ಅಗೆದು ಹೊರಗೆ ಹಾಕಬೇಕು. ಸಂಸಾರವೆಂಬ ಹಂಟೆಯನ್ನು ಒಡೆದು, ಅದರೊಳಗೆ ಬ್ರಹ್ಮಜ್ಞಾನವೆಂಬ ಬೀಜವನ್ನು ಬಿತ್ತಬೇಕು. ದೇಹದೊಳಗಿನ ಸೂಕ್ಷ್ಮ ಮಾರ್ಗವನ್ನು ಸರಿಯಾಗಿ ಬಳಸಿಕೊಂಡು, ಆತ್ಮಜ್ಞಾನದ ನೀರಿನಿಂದ ಆ ಬೀಜಕ್ಕೆ ನೀರುಣಿಸಬೇಕು. ಸಮತೆ ಮತ್ತು ಸಹನೆಯನ್ನ ಬೇಲಿಯನ್ನಾಗಿ ಹಾಕಿಕೊಂಡು, ಒಳಗಿನ ಬೆಳೆ ಯಾರಿಂದಲೂ ಹಾಳಾಗದಂತೆ ಕಾಪಾಡಬೇಕು. ಹೀಗೆ ಮಾಡಿದಾಗ ದೇಹವೆಂಬ ತೋಟದಲ್ಲಿ ಆತ್ಮಜ್ಞಾನದ ಸಸಿ ಬೆಳೆದು, ಕೊನೆಗೆ ಶಿವಾನುಭವದ ಫಲ ಸಿಗುತ್ತದೆ.

ಅಲ್ಲಮಪ್ರಭು ಗೊಗ್ಗಯ್ಯನಿಗೆ ಇದೇ ವಿಷಯವನ್ನ ಅವನಿಗೆ ಪರಿಚಿತವಾದ ಕೃಷಿಯ ಭಾಷೆಯಲ್ಲೇ ತಿಳಿಸಿಕೊಡುತ್ತಾನೆ. ಗೊಗ್ಗಯ್ಯನಿಗೆ ಕೃಷಿ ಅಂದ್ರೆ ಚೆನ್ನಾಗಿ ಗೊತ್ತು. ಬೀಜ ಬಿತ್ತೋದು, ಹೊಲ ಹದ ಮಾಡೋದು, ನೀರು ಹಾಯಿಸೋದು, ಬೇಲಿ ಹಾಕೋದು, ಬೆಳೆಯನ್ನ ಕಾಪಾಡೋದು ಇವೆಲ್ಲ ಅವನ ದಿನನಿತ್ಯದ ಬದುಕಿನ ಭಾಗ. ಅದಕ್ಕೇ ಅಲ್ಲಮನು ಅವನಿಗೆ “ಹೊರಗಿನ ಹೊಲದಲ್ಲಿ ಬೆಳೆ ಬೆಳೆಸೋದು ನಿನಗೆ ಗೊತ್ತಿದೆ. ಈಗ ನಿನ್ನ ದೇಹವನ್ನೇ ಹೊಲ ಅಂತ ತಿಳ್ಕೊಂಡು, ಅದರೊಳಗೆ ಆತ್ಮಜ್ಞಾನದ ಬೆಳೆ ಬೆಳೆಸು” ಅಂತ ಸರಳವಾಗಿ ಬೋಧಿಸುತ್ತಾನೆ.

ಹೀಗೆ ಕೃಷಿಯ ಪ್ರತಿಯೊಂದು ಹಂತಕ್ಕೂ ಆತ್ಮಸಾಧನೆಯ ಅರ್ಥವನ್ನು ಜೋಡಿಸಿ ಅಲ್ಲಮನು ಗೊಗ್ಗಯ್ಯನಿಗೆ ಒಳಗಿನ ಕೃಷಿಯ ಮಾರ್ಗ ತೋರಿಸುತ್ತಾನೆ. ಭ್ರಾಂತಿಯ ಬೇರು ಕೀಳೋದು, ಸಂಸಾರದ ಹಂಟೆ ಒಡೆಯೋದು, ಬ್ರಹ್ಮಬೀಜ ಬಿತ್ತೋದು, ಆತ್ಮಜ್ಞಾನದ ನೀರು ಹಾಯಿಸೋದು, ಸಮತೆ-ಸಹನೆಯ ಬೇಲಿ ಹಾಕೋದು ಇವೆಲ್ಲವೂ ಆತ್ಮಶುದ್ಧಿಯ ಹಂತಗಳು. ಈ ರೀತಿಯಾಗಿ ಅಲ್ಲಮಪ್ರಭು ಗೊಗ್ಗಯ್ಯನಿಗೆ ಕಾಯಕದ ಜೊತೆ ಜ್ಞಾನವನ್ನೂ, ಬಾಹ್ಯಕೃಷಿಯ ಜೊತೆ ಅಧ್ಯಾತ್ಮಕೃಷಿಯನ್ನೂ ಬೆಳೆಸಿಕೊಳ್ಳಬೇಕು ಅನ್ನೋದನ್ನ ಮನವರಿಕೆ ಮಾಡಿಕೊಡುತ್ತಾನೆ.

ಗೊಗ್ಗಯ್ಯನಿಗೆ ಈ ಬೋಧನೆ ಹೊಸದಾಗಿದ್ದರೂ, ಅವನಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿತ್ತು. ಯಾಕಂದ್ರೆ ಅಲ್ಲಮನು ದೊಡ್ಡ ದೊಡ್ಡ ತತ್ತ್ವದ ಮಾತುಗಳನ್ನ ಮಾತ್ರ ಆಡಲಿಲ್ಲ. ಗೊಗ್ಗಯ್ಯನ ದಿನನಿತ್ಯದ ಬದುಕಿನ ಕೃಷಿಯನ್ನೇ ಉದಾಹರಣೆಯಾಗಿ ತೆಗೆದುಕೊಂಡು, ಅದೇ ಭಾಷೆಯಲ್ಲಿ ಆತ್ಮತತ್ತ್ವವನ್ನ ವಿವರಿಸಿದ. ಅದಕ್ಕೇ ಈ ಬೋಧನೆ ಅವನ ಮನಸ್ಸಿಗೆ ನೇರವಾಗಿ ತಟ್ಟಿತು. ಹೊರಗಿನ ಹೊಲದಲ್ಲಿ ದುಡಿದ ಕೈಗಳು ಈಗ ಒಳಗಿನ ಹೊಲವನ್ನೂ ಹದಗೊಳಿಸಲು ಸಿದ್ಧವಾದವು. ಹೀಗೆ ಗೊಗ್ಗಯ್ಯನ ಕಾಯಕ ಕ್ರಮೇಣ ಆತ್ಮಕಾಯಕವಾಗಿ, ಕೃಷಿ ಕ್ರಮೇಣ ಅಧ್ಯಾತ್ಮಕೃಷಿಯಾಗಿ ರೂಪಾಂತರಗೊಳ್ಳುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *