‘ಸ್ವಾವಲಂಬಿ ಬದುಕಿಗೆ ಶರಣರ ವಚನಗಳು ದಾರಿದೀಪ’

ಸುಪ್ರೀತ ಪತಂಗೆ
ಸುಪ್ರೀತ ಪತಂಗೆ

ಲಿಂಗಾಯತ ಮಹಾಮಠದಲ್ಲಿ ಶರಣ ಸಂಗಮ ಕಾರ್ಯಕ್ರಮ

ಬೀದರ:

ಕೈ ಚಾಚಿ ಬೇಡುವ ಸಂಸ್ಕೃತಿ ನಮ್ಮದಲ್ಲ ಕೈ ಎತ್ತಿ ನೀಡುವ ಸಂಸ್ಕೃತಿ ನಮ್ಮದು. ದುಡಿಮೆಗೆ ಮಹತ್ವ ನೀಡಿದವರು ಶರಣರು. ಸ್ವಾವಲಂಬಿ ಬದುಕಿನಿಂದ ಮನುಷ್ಯ ಸ್ವಾಭಿಮಾನಿಯಾಗುತ್ತಾನೆ. ಅಂತೆಯೇ ಗುರು ಬಸವಣ್ಣನವರು ಕಾಯಕವೇ ಕೈಲಾಸ ಎಂದು ನುಡಿದರು. ಈ ತತ್ವಾದರ್ಶನಗಳು ಜನಮಾನಸಕ್ಕೆ ಮುಟ್ಟಿಸುವ ಕಾರ್ಯ ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಮಾಡುತ್ತಿದ್ದಾರೆ ಎಂದು ಡಾ. ಶಂಕರಗೌಡ ತಿಳಿಸಿದರು.

ಗೋರಟಾ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಭೌತಿಕ ಅನುಭವ ಮಂಟಪದೊಂದಿಗೆ ತಾತ್ವಿಕ ಅನುಭವ ಮಂಟಪ ನಿರ್ಮಾಣಗೊಳ್ಳುವುದು ಅತಿ ಅವಶ್ಯಕ. ಪೂಜ್ಯರಾದವರು ಧರ್ಮ ಪ್ರಚಾರಕ್ಕೆ ಮಹತ್ವ ಕೊಟ್ಟು ತಾತ್ವಿಕ ಅನುಭವ ಮಂಟಪ ನಿರ್ಮಿಸಬೇಕು. ಅಂತಹ ಮಹತ್ತರ ಕಾರ್ಯ ಗೋರ್ಟಾ ಗ್ರಾಮದಲ್ಲಿ ಪೂಜ್ಯರು ಮಾಡುತ್ತಿರುವುದು ಶ್ಲಾಘನೀಯ.

ಮಕ್ಕಳಿಗಾಗಿ, ಮಹಿಳೆಯರಿಗಾಗಿ, ಹಿರಿಯರಿಗಾಗಿ, ವೇದಿಕೆ ಕಲ್ಪಿಸಿ ಕೊಟ್ಟು ಅವರ ಮುಖಾಂತರವೇ ತತ್ವ ಚಿಂತನೆ ಮಾಡಿಸುತ್ತಿರುವುದು ರಾಜ್ಯಕ್ಕೆ ಮಾದರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅನುಭಾವ ನೀಡಿದ ಡಾ. ಅನಿತಾ ಮಹಾಜನ್ ಅವರು, ಒತ್ತಡದ ಬದುಕಿನಲ್ಲಿ ನಾವು ಆರೋಗ್ಯವನ್ನು ಲಕ್ಷವಹಿಸದೆ ಇರುವ ಕಾರಣ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಕ್ಯಾನ್ಸರ್ ನಂತಹ ಭಯಾನಕ ರೋಗಗಳು ದೇಶವನ್ನೇ ಬೆಚ್ಚಿ ಬೀಳಿಸುತ್ತಿವೆ, ಕಾರಣ ಕಲುಷಿತ ಆಹಾರ ಮತ್ತು ಒತ್ತಡದ ಬದುಕು. ಒತ್ತಡದ ಬದುಕಿನಿಂದ ಹೊರಬಂದು ಶರಣರ ಚಿಂತನೆ ಪ್ರಾರ್ಥನೆ ಮಾಡುವ ಮುಖಾಂತರ ಸಮಾಧಾನದ ಬದುಕು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಹುಲಸೂರು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀದೇವಿ ರಾಜಕುಮಾರ ನಿಡೋದೆ ಅವರು, ಮನೆಯ ಆಧಾರ ಸ್ತಂಭ ಮಹಿಳೆಯರು ತಾವು ಸಂಸ್ಕಾರವಂತರಾಗಿ ಮಕ್ಕಳಲ್ಲಿ ಸಂಸ್ಕಾರ ಬಿತ್ತುವುದು ಅವಶ್ಯಕ. ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಮನೆಯಿಂದ ಸಂಸ್ಕಾರ ಪ್ರಾರಂಭವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೂರ್ ಅಹಮದ್ ಮಾತನಾಡಿ, ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟವರು ಬಸವಾದಿ ಶರಣರು. ಇವನಾರವ ಇವನಾರವ ಎಂದು ಯಾರನ್ನು ದೂರ ತಳ್ಳದೇ ಇವ ನಮ್ಮವ ಇವ ನಮ್ಮವ ಎಂದು ಎಲ್ಲರನ್ನು ಅಪ್ಪಿಕೊಂಡರು ಎಂದು ತಿಳಿಸಿದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರಾಜಕುಮಾರ ನಿಡೋದೆ ಅವರು, ಪೂಜ್ಯರಾದ ಅಕ್ಕ ಅನ್ನಪೂರ್ಣ ತಾಯಿಯವರು ಅನೇಕರ ಬಾಳಿಗೆ ಬೆಳಕಾದವರು. ಬಸವ ತತ್ವವೇ ಉಸಿರಾಗಿಸಿಕೊಂಡ ಅಕ್ಕನವರು ಕೊನೆಯ ಜೀವನದವರೆಗೆ ತತ್ವ ಪ್ರಸಾರ ಮಾಡಿದವರು.

ಅಕ್ಕನವರ ಆಶಯದಂತೆ ಅವರ ಸಂಕಲ್ಪವನ್ನು ಹೊತ್ತು ತಮ್ಮ ಪ್ರವಚನಗಳ ಮುಖಾಂತರ ಪೂಜ್ಯರಾದ ಪ್ರಭುದೇವ ಮಹಾಸ್ವಾಮೀಜಿ ಇಂದು ನಾಡಿನಾದ್ಯಂತ ಸಂಚರಿಸಿ ತತ್ವ ಪ್ರಸಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಕಲಬುರಗಿಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುರೇಶ ಅಕ್ಕಣ್ಣರವರಿಗೆ ಹಾಗೂ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕರುಣಾದೇವಿ ಕಣಜೆ ಅವರಿಗೆ ಪೂಜ್ಯರ ಸನ್ನಿಧಾನದಲ್ಲಿ ಗ್ರಾಮಸ್ಥರೆಲ್ಲ ಸೇರಿ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಸುಭಾಷ ಪತಂಗೆ ವಹಿಸಿದರು. ಗುರು ಪೂಜೆ ಪದ್ಮಾವತಿ ಕರಬಸಪ್ಪಾ ಅಕ್ಕಣ್ಣ ನೆರವೇರಿಸಿದರು. ಭಕ್ತಿ ದಾಸೋಹ ಕಮಲಾಬಾಯಿ ಕರಬಸಪ್ಪ ಅಕ್ಕಣ್ಣ ನಡೆಸಿಕೊಟ್ಟರು. ಶಿವರಾಜ ಕನಕಟ್ಟೆ ಸ್ವಾಗತ ಕೋರಿದರು. ಸೋಮನಾಥಪ್ಪ ರಾಜೇಶ್ವರೆ ಅವರು ನಿರೂಪಣೆಗೈದರು.

ಶ್ರಾವಣ ಮಾಸದ ಒಂದು ತಿಂಗಳ ಪರ್ಯಂತರ ಚಿಂತನೆಗೈದ ಶರಣ ಶರಣೆಯರಿಗೆ ಲಿಂಗಾಯತ ಮಹಾಮಠದಿಂದ ಅಭಿನಂದನೆ ಸಲ್ಲಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *