ಗಾಂಧೀಜಿ, ಶಾಸ್ತ್ರೀಜಿ ವ್ಯಕ್ತಿತ್ವದ ಆದರ್ಶಗಳ ಅಳವಡಿಕೆ ಬದುಕಿಗೆ ಅವಶ್ಯಕ

ಕೆರೆ ಹಾಗೂ ಪುಷ್ಕರಣೆಗೆ ಬಾಗಿನ

ಸಾಣೇಹಳ್ಳಿ:

ಸಾಣೇಹಳ್ಳಿ ಕೆರೆ ಹಾಗೂ ಶ್ರೀಮಠದ ಸಿದ್ಧರಾಮೇಶ್ವರ ಪುಷ್ಕರಣೆಗೆ ಬಾಗಿನ ಹಾಗೂ ಮಹಾತ್ಮ ಗಾಂಧೀಜಿ, ಲಾಲಬಹದ್ದೂರ ಶಾಸ್ತ್ರೀಜಿ ಅವರ ಜಯಂತಿ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು; ಮಹಾತ್ಮ ಗಾಂಧೀಜಿ ಸತ್ಯ, ಅಹಿಂಸೆ, ಪ್ರೇಮ, ತ್ಯಾಗಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಸಣ್ಣ ಸಣ್ಣ ಕೆಲಸಗಳ ಮೂಲಕ ದೊಡ್ಡ ವ್ಯಕ್ತಿತ್ವ ಬೆಳೆಸಿಕೊಂಡ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು.

ಶೌಚಾಲಯ ತೊಳೆಯುವುದು, ಬೀದಿ ಕಸಗುಡಿಸುವುದನ್ನು ಹೆಮ್ಮೆಯಿಂದ ಮಾಡುತ್ತಿದ್ದರು. ಅವರ ಈ ಸರಳತೆ ಮತ್ತು ಶ್ರಮದ ಗೌರವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು.

ದೇಶ ಕಂಡ ಅಪರೂಪದ ಪ್ರಧಾನಿ ಲಾಲಬಹದ್ದೂರ ಶಾಸ್ತ್ರಿ ಅವರ ಸರಳತೆ ಮತ್ತು ಪ್ರಾಮಾಣಿಕತೆ ಸದಾ ಸ್ಮರಣೀಯ. ತಮಗೆ ಸಿಗುತ್ತಿದ್ದ ಅಲ್ಪ ವೇತನದಲ್ಲೂ ಉಳಿತಾಯ ಮಾಡುತ್ತಿದ್ದ ಅವರು, ಸಾರ್ವಜನಿಕ ಜೀವನದಲ್ಲಿ ಎಂತಹ ಉನ್ನತ ಮೌಲ್ಯಗಳನ್ನು ಕಾಯ್ದುಕೊಂಡಿದ್ದರು ಎಂಬುದಕ್ಕೆ ಅವರ ಜೀವನವೇ ಸಾಕ್ಷಿ.

ಸಮಾಜದಲ್ಲಿ ಸತ್ಯ, ನ್ಯಾಯಕ್ಕಾಗಿ ಹೋರಾಡಿದ ಮಹಾತ್ಮರ ಆಲೋಚನೆಗಳನ್ನು ಗಾಳಿಗೆ ತೂರಿ, ದುಷ್ಟತನವನ್ನು ಮೆರೆಯುತ್ತಿರುವ ಇಂದಿನ ವಾತಾವರಣದ ಕುರಿತು ಶ್ರೀಗಳು ತೀವ್ರ ಕಳವಳ ವ್ಯಕ್ತಪಡಿಸಿದರು.

ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ಇಡೀ ಕ್ಷೇತ್ರವನ್ನು ತಮ್ಮದೆಂದು ಭಾವಿಸಿ, ಯಾವುದೇ ತಾರತಮ್ಯವಿಲ್ಲದೆ ಸಮಾನತೆಯಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು.

ಸಾಣೇಹಳ್ಳಿ ಕೆರೆಗೆ ನೀರು ಬಂದಿರುವುದು ಮತ್ತು ಮಳೆಯಿಂದ ಕೆರೆ ತುಂಬಿ ಹರಿಯುತ್ತಿರುವುದು ಸಂತಸದ ವಿಷಯ. ಈ ಕಾರ್ಯಕ್ಕಾಗಿ ಶ್ರಮಿಸಿದ ರಾಜಕಾರಣಿಗಳು, ಧಾರ್ಮಿಕ ಧುರಿಣರು ಹಾಗೂ ಮುಖ್ಯವಾಗಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕೆರೆ ಹೂಳೆತ್ತುವ ಮತ್ತು ನೈರ್ಮಲ್ಯ ಕಾರ್ಯಗಳು ಸಮಾಜಮುಖಿಯಾದವು ಎಂದರು.

ಶಾಸಕ ಗೋವಿಂದಪ್ಪ ಹಾಗೂ ಇಂಜಿನಿಯರ್ ಸುರೇಶ ಅವರ ಕರ್ತವ್ಯಪ್ರಜ್ಞೆ ಮತ್ತು ಸಾರ್ವಜನಿಕರ ಮೇಲಿನ ಕಾಳಜಿ ಮೆಚ್ಚುವಂಥದ್ದು, ರಾಜಕಾರಣಿಗಳು ತಮ್ಮ ಅಧಿಕಾರವನ್ನು ಜನರ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ; ಕಳೆದ ಎರಡು ವಾರಗಳಿಂದ ಚಾನಲ್‌ನಲ್ಲಿ ನೀರು ಹರಿಯುತ್ತಿದ್ದು, ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಭಗವಂತನ ಕೃಪೆ ಹಾಗೂ ಮಳೆಯಿಂದಾಗಿ ನಾಡಿನಲ್ಲಿ ಸಮೃದ್ಧಿ ನೆಲೆಸಿದೆ. ಈ ಶುಭ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಮತ್ತು ಪಂಡಿತಾರಾಧ್ಯ ಶ್ರೀಗಳ ಸಮ್ಮುಖದಲ್ಲಿ ಕೆರೆಗೆ ಹಾಗೂ ಸಿದ್ಧರಾಮೇಶ್ವರ ಪುಷ್ಕರಣಿಗೆ ಬಾಗಿನ ಅರ್ಪಿಸಿ ಗಂಗಾಪೂಜೆ ಸಲ್ಲಿಸಲಾಗಿದೆ. 

ಈ ಯೋಜನೆಯು ಕಳೆದ ಸುಮಾರು 70 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿದೆ. 1962ರ ನಿಜಲಿಂಗಪ್ಪನವರ ಕಾಲದಿಂದಲೂ ನಡೆದುಬಂದ ಹೋರಾಟಗಳು, ಎಸ್‌.ಎಂ. ಕೃಷ್ಣ ಹಾಗೂ ಟಿ.ಬಿ. ಜಯಚಂದ್ರ ಅವರ ಪ್ರಯತ್ನಗಳು ಹಾಗೂ 2016ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ಶಂಕುಸ್ಥಾಪನೆ ನೆರವೇರಿಸಿದ್ದರು.

ಈ ಯೋಜನೆಯು ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಸೇರಿದಂತೆ 4 ಜಿಲ್ಲೆಗಳಿಗೆ ಒಳಪಡುವ ಬೃಹತ್ ಯೋಜನೆಯಾಗಿದೆ. ಪ್ರಸ್ತುತ ಹೊಸದುರ್ಗ, ಹೊಸಹಳ್ಳಿ, ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. 

ಎರಡು ವಿದ್ಯುತ್ ಸಬ್‌ಸ್ಟೇಷನ್‌ಗಳು ಹಾಗೂ ಮೋಟಾರ್ ಪಂಪ್‌ಗಳ ಕೆಲಸಗಳು ಪೂರ್ಣಗೊಂಡಿದ್ದು, ವಿದ್ಯುತ್ ಲೈನ್ ಸಂಪರ್ಕ ಪ್ರಕ್ರಿಯೆ ಮುಗಿದ ತಕ್ಷಣ ಉಳಿದ 21 ಟಿಎಂಸಿ ನೀರನ್ನು ಹರಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಮುಂದಿನ ತಿಂಗಳು ಅಧಿಕೃತವಾಗಿ ನೀರು ಹರಿಸುವ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕೆರೆಗಳಿಗೆ ಹರಿಯುವ ನೀರನ್ನು ಹಂತ ಹಂತವಾಗಿ ಎಲ್ಲರೂ ಅನುಸರಿಸಿಕೊಂಡು, ಯಾವುದೇ ಪೋಲಾಗದಂತೆ ಹಿತಮಿತವಾಗಿ ಹಾಗೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. 

ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಸುರೇಶ್ ಮಾತನಾಡಿ; ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯ ಹಾಗೂ ಶಾಸಕರಾದ ಶ್ರೀ ಗೋವಿಂದಪ್ಪ ಅವರ ನಿರಂತರ ಬೆಂಬಲ ಮತ್ತು ಪ್ರಯತ್ನದಿಂದಾಗಿ ಈ ನೀರಾವರಿ ಯೋಜನೆ ಪೂರ್ಣಗೊಂಡಿದೆ. 

ಯೋಜನೆಯ ಹಿನ್ನೆಲೆ: ಡಿಸೆಂಬರ್ 30, 2014 ರಂದು ಹೊಸದುರ್ಗ ಹಾಗೂ ಚಿತ್ರದುರ್ಗ ಭಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೆಲವೊಂದು ತಾಂತ್ರಿಕ ತೊಡಕುಗಳು ಹಾಗೂ ಜಮೀನು ಭೂಸ್ವಾಧೀನದ ಸಮಸ್ಯೆಗಳಿಂದ ನೀರು ಹರಿಯುವುದು ತಡವಾಗಿದ್ದರೂ, ಮಾನ್ಯ ಮುಖ್ಯಮಂತ್ರಿಗಳ ಭೇಟಿ ಹಾಗೂ ಅಧಿಕಾರಿಗಳ ಶ್ರಮದಿಂದ ಪರಿಹಾರ ಕಂಡುಕೊಳ್ಳಲಾಯಿತು. 

ತಾಲ್ಲೂಕಿನಲ್ಲಿ ಸುಮಾರು 57 ರಿಂದ 60 ಕಿಲೋಮೀಟರ್ ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ಪ್ರಸ್ತುತ ಮೊದಲ ಹಂತದಲ್ಲಿ ಸುಮಾರು 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲಾಗಿದೆ. 

ಈ ಯೋಜನೆಯ ಪೈಪ್‌ಲೈನ್ ಹಾಗೂ ಮಾರ್ಗ ವಿನ್ಯಾಸದ ಸಮಯದಲ್ಲಿ ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ನೀಡಿದ ಸಂಪೂರ್ಣ ಸಹಕಾರದಿಂದ ಯೋಜನೆ ಯಶಸ್ವಿಯಾಗಿದೆ. 

ಇನ್ನು ಶೇಕಡಾ 50 ರಷ್ಟು ನೀರು ಬರಲಿದ್ದು, ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಒಟ್ಟು 128 ಕೆರೆಗಳನ್ನು ಭರ್ತಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಚಂದ್ರಶೇಖರ್ ಮಾತನಾಡಿ; “ಸಾಣೇಹಳ್ಳಿ ಗ್ರಾಮಸ್ಥರ ಹಾಗೂ ಒಕ್ಕೂಟದ ಸದಸ್ಯರ ಆಶಯದಂತೆ ಈ ಕೆರೆಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಕೆರೆಯಿಂದ ಸುಮಾರು 18,000 ಲೋಡ್‌ಗೂ ಅಧಿಕ ಮಣ್ಣನ್ನು ಹೊರತೆಗೆಯಲಾಗಿದ್ದು, ಹಿಟಾಚಿ ಬಾಡಿಗೆ ಸೇರಿದಂತೆ ಒಟ್ಟು ₹13 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕೆರೆಯನ್ನು ಸಂಪೂರ್ಣವಾಗಿ ಹೂಳೆತ್ತಿ ಅಭಿವೃದ್ಧಿಪಡಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ಹಸ್ತಾಂತರಗೊಂಡ ಕೆಲವೇ ತಿಂಗಳಲ್ಲಿ ಕೆರೆ ನೀರು ತುಂಬಿರುವುದು ಸಂತಸ ತಂದಿದೆ” ಎಂದು ತಿಳಿಸಿದರು.

ಕಾರ್ಯಪಾಲಕ ಮುಖ್ಯ ಅಭಿಯಂತಕರಾದ ಪ್ರಕಾಶ, ಪಿಡಿಓ ಲಿಂಗರಾಜ, ಸಾಣೇಹಳ್ಳಿ ಕೆರೆಯ ವ್ಯಾಪ್ತಿಯ ಆಡಳಿತಾಧಿಕಾರಿ ಸುನೀಲ, ಸಾಣೇಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು. ಎಸ್. ಆರ್. ಚಂದ್ರಶೇಖರಯ್ಯ ಸ್ಚಾಗತಿಸಿದರೆ, ಶಿಕ್ಷಕ ಪ್ರಕಾಶ ನಿರೂಪಿಸಿದರು. ಅಕ್ಕನಬಳಗದವರು ವಚನ ಗೀತೆಗಳ ಮೂಲಕ ಪ್ರಾರ್ಥಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *