‘ಅನುಭಾವದೆಡೆಗೆ’ ಕಾರ್ಯಕ್ರಮ
ಸಾಣೇಹಳ್ಳಿ:
ಇಲ್ಲಿನ ಹಳೆಮನೆ ಶ್ರೀಮತಿ ಸುವರ್ಣಮ್ಮ ಹಾಗೂ ಗಂಗಣ್ಣನವರ ಮನೆಯಂಗಳದಲ್ಲಿ ‘ಅನುಭಾವದೆಡೆಗೆ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ವಚನ ಸಂಸ್ಕೃತಿಯ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು. ಪ್ರತಿಯೊಂದು ಊರಿನಲ್ಲೂ ‘ಅಕ್ಕನ ಬಳಗಗಳ ಮೂಲಕ ವಚನ ಗಾಯನ ಮತ್ತು ವಚನ ಸಾಹಿತ್ಯದ ಪಸರಿಸುವಿಕೆ ಹೆಚ್ಚಾಗಬೇಕು. ಸಾವಿರಾರು ಸಂಖ್ಯೆಯ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಒಗ್ಗೂಡಿ ವಚನ ಗಾಯನ ನಡೆಸುವಂತಹ ಕಾರ್ಯಕ್ರಮಗಳು ಪ್ರತಿಯೊಂದು ಜಿಲ್ಲೆ, ತಾಲ್ಲೂಕು, ಊರುಗಳಲ್ಲಿ ಹಮ್ಮಿಕೊಳ್ಳುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.
ಮನುಷ್ಯ ಈ ಲೋಕಕ್ಕೆ ಬಂದಮೇಲೆ ಅವನ ಬದುಕು ಪಕ್ಕದವರಿಗೆ ಮಾರ್ಗದರ್ಶಿಯಾಗಬೇಕು. ತಾನೂ ಕೆಡದೆ, ಇತರರಿಗೂ ತೊಂದರೆ ಕೊಡದೆ ಬದುಕುವುದೇ ವ್ಯಕ್ತಿಗೆ ನಿಜವಾದ ಗೌರವವನ್ನು ತಂದುಕೊಡುವುದು.

“ಜಗತ್ತಿನಲ್ಲಿ ಪ್ರತಿಯೊಬ್ಬರೂ ಚೆನ್ನಾಗಿದ್ದರೆ ನಾನು ಚೆನ್ನಾಗಿರುತ್ತೇನೆ ಎಂಬ ಲೋಕಚಿಂತನೆ ಬಸವಣ್ಣನವರಲ್ಲಿತ್ತು. ‘ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು’ ಎಂಬ ವಚನದಂತೆ ಸುತ್ತಮುತ್ತಲಿನ್ವರ ನೋವು-ನಲವುಗಳನ್ನು ನಮ್ಮದೆಂದು ಭಾವಿಸುವುದೇ ನಿಜವಾದ ದೇವಪೂಜೆ. ಆದರೆ, ಇಂದಿನ ದಿನಗಳಲ್ಲಿ ಧರ್ಮ ಮತ್ತು ದೇವರ ಹೆಸರಿನಲ್ಲಿ ಬೃಹತ್ ವ್ಯಾಪಾರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
“ಮನುಷ್ಯ ತನ್ನ ಸ್ವಾಭಿಮಾನ ಹಾಗೂ ಆತ್ಮಸಾಕ್ಷಿಯನ್ನು ಮಾರಿಕೊಂಡರೆ ಅವನ ಬದುಕು ನರಕವಾಗುತ್ತದೆ. ಇತಿಹಾಸದಲ್ಲಿ ನಾವು ಸ್ವಾರ್ಥ, ಅಧಿಕಾರ ಮತ್ತು ಲಾಭಕ್ಕಾಗಿ ದೇಶದ್ರೋಹ ಬಗೆದು ಗುಲಾಮಗಿರಿ ಅನುಭವಿಸಿದ್ದೇವೆ. ಪ್ರಸ್ತುತ ದೇಶಕ್ಕೆ ಭಾಷಣ ಮಾಡುವ ದೇಶಭಕ್ತರಿಗಿಂತ ಅಚಲ ಚಾರಿತ್ರ್ಯವುಳ್ಳ ನೈಜ ಪ್ರಜೆಗಳ ಅಗತ್ಯವಿದೆ.
“ಮನೆ ಕಟ್ಟುವಾಗ ಹೊಗೆ ಹಾಕುವುದು ಹಾಗೂ ಹೋಮ-ಹವನಗಳನ್ನು ಮಾಡುವುದು ದುರ್ಬಲ ಮನಸ್ಸಿನ ಸಂಕೇತ. ಬಾಹ್ಯದ ಜಡಮೂರ್ತಿಗಳನ್ನು ಪೂಜಿಸುವುದಕ್ಕಿಂತ ನಮ್ಮಂತರಂಗದ ದೇವನನ್ನು ಅರಿತು, ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ.
ಆಡಂಬರ ಮತ್ತು ಸ್ಪರ್ಧೆಯ ವೈಭವಕ್ಕಿಂತ ಸರಳತೆಯಲ್ಲಿಯೇ ನೈಜ ಸೌಂದರ್ಯವಿದೆ. ಕಾಯಕ ಶ್ರದ್ಧೆ ಕಡಿಮೆಯಾಗಿ ದುಶ್ಚಟಗಳು ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಅಜ್ಞಾನದಿಂದ ಹೊರಬರಬೇಕು.

ಮುಖ್ಯ ಅತಿಥಿಗಳಾಗಿ ಆಗಮಿಸಿ ನಿವೃತ್ತ ಮುಖ್ಯಶಿಕ್ಷಕ ಆದ್ರಿಕಟ್ಟೆ ಬಸವರಾಜಪ್ಪನವರು ಮಾತನಾಡಿ; ಮನುಷ್ಯ ಅನಗತ್ಯ ಆಚರಣೆಗಳು ಹಾಗೂ ಮೌಢ್ಯಗಳನ್ನು ಬಿಟ್ಟು, ಕಾಯಕ ನಿಷ್ಠೆ, ಶ್ರಮಜೀವನ ಮತ್ತು ಸರಳತೆಯನ್ನು ಅಳವಡಿಸಿಕೊಂಡಾಗ ಮಾತ್ರ ಆರ್ಥಿಕ ಅಭಿವೃದ್ಧಿ ಹಾಗೂ ನೆಮ್ಮದಿಯ ಜೀವನ ಸಾಧ್ಯ.
ಮುಂದಿನ ಪೀಳಿಗೆ ಅರಿವಿನಿಂದ ಜೀವಿಸಬೇಕು ಎಂಬ ಸಂದೇಶವನ್ನು ನೀಡುವ ಉದ್ದೇಶದಿಂದ ಈ ಮನೆಗೆ ‘ಅರಿತು ಬಾಳು’ ಎಂದು ಹೆಸರಿಟ್ಟಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.
ಬಸವಣ್ಣನವರು ನೀಡಿದ ಇಷ್ಟಲಿಂಗ ಪೂಜೆಯ ಹಕ್ಕು ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ತಮ್ಮ ದೈವವನ್ನು ಪೂಜಿಸುವ ಅರ್ಹತೆ ನೀಡಿದೆ. ಮಹಿಳೆಯರಿಗೆ ಧಾರ್ಮಿಕ ಸಮಾನತೆ ನೀಡಿದ ಶ್ರೇಷ್ಠ ಪರಂಪರೆ ನಮ್ಮದು.
ದೇವಸ್ಥಾನಗಳ ಮುಂಭಾಗಕ್ಕಿಂತ ಗ್ರಂಥಾಲಯಗಳ ಮುಂದೆ ನಿಂತರೆ ಜ್ಞಾನ ಲಭಿಸುತ್ತದೆ ಎಂಬ ಅಂಬೇಡ್ಕರ್ ಅವರ ಮಾತು ಸದಾ ಸ್ಮರಣೀಯ. ಗೃಹಪ್ರವೇಶಗಳ ಹೆಸರಿನಲ್ಲಿ ಅನಗತ್ಯ ಪೌರೋಹಿತ್ಯ, ಹೋಮ-ಹವನ ಹಾಗೂ ಧಾನ್ಯ ಧ್ವಂಸ ಮಾಡುವ ಕಂದಾಚಾರಗಳನ್ನು ಬಿಟ್ಟು ಸರಳವಾಗಿ ಕಾರ್ಯಕ್ರಮಗಳನ್ನು ನಡೆಸಬೇಕು.
ಕಾಯಕವೇ ಕೈಲಾಸ ಎಂಬ ತತ್ತ್ವದಂತೆ ಶ್ರಮಪಟ್ಟು ದುಡಿಯುವುದೇ ನಿಜವಾದ ವಿರಾಮ ಹಾಗೂ ಆರೋಗ್ಯಕ್ಕೆ ದಾರಿ. ಸ್ವಯಂ ಉದ್ಯೋಗ ಮತ್ತು ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎಸ್.ಆರ್. ಚಂದ್ರಶೇಖರಯ್ಯ, “ಮನೆಮನೆ ಗಂಗಣ್ಣನವರು ಕೇವಲ ಶಿಸ್ತಿನ ವ್ಯಾಪಾರಿಯಷ್ಟೇ ಅಲ್ಲದೆ, ಉತ್ತಮ ಕಲಾವಿದರೂ ಆಗಿದ್ದಾರೆ. ‘ಶಿವಕುಮಾರ ಕಲಾ ಸಂಘ’ದ ಮೂಲಕ ಅನೇಕ ನಾಟಕಗಳಲ್ಲಿ ಅಭಿನಯಿಸಿ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ. ಶ್ರೀಮಠದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಷ್ಟಪಟ್ಟು ಬೆವರಿನ ಹನಿಯಿಂದ ಗಳಿಸುವ ಕಾಯಕವೇ ಶ್ರೇಷ್ಠ ಎಂಬುದನ್ನು ತಮ್ಮ ಜೀವನದಲ್ಲಿ ತೋರಿಸಿಕೊಟ್ಟಿದ್ದಾರೆ,” ಎಂದು ಶ್ಲಾಘಿಸಿದರು.
ನಾಗರಾಜ ವಚನಗೀತೆ ಹಾಗೂ ಕಲ್ಯಾಣಗೀತೆ ಹಾಡಿದರು. ಶಿಕ್ಷಕ ಪ್ರಕಾಶ ಎಸ್. ಎಸ್. ನಿರೂಪಿಸಿದರು. ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
