ಪ್ರಭುಲಿಂಗಲೀಲೆ: ಒಂದು ಸಮಗ್ರ ಚಿಂತನೆ 26
‘ಪ್ರಭುಲಿಂಗಲೀಲೆಯ ಶಾಸ್ತ್ರೀಯ ಸಂಪಾದನೆಯ ಹಿಂದೆ ಬಸವನಾಳರು ಅನುಸರಿಸಿದ ಪರಿಶ್ರಮದ ವ್ಯಾಪ್ತಿ ಎಷ್ಟೊಂದು ವಿಸ್ತಾರವಾಗಿತ್ತೆಂಬುದಕ್ಕೆ ಕೃತಿಯ ಮುದ್ರಣ ಮತ್ತು ಸಿದ್ಧತಾ ಪ್ರಕ್ರಿಯೆಗಳು ಸಾಕ್ಷಿಯಾಗಿವೆ. ಕಾವ್ಯದ ಅಚ್ಚಿನ ಪ್ರತಿಯನ್ನು ಸಿದ್ಧಪಡಿಸುವ ಕಾರ್ಯವನ್ನು ಕೆ. ಎಸ್. ಪಾಟೀಲ ಮಾಸ್ತರರು ನಿರ್ವಹಿಸಿದ್ದರೆ, ಅದರೊಂದಿಗೆ ಬಸವನಾಳರು ರಚಿಸಿದ ದೀರ್ಘವೂ ವಿದ್ವತ್ಪೂರ್ಣವೂ ಆದ ಪ್ರಸ್ತಾವನೆ ಕೃತಿಯ ಸಂಪಾದನಾ ಕಾರ್ಯಕ್ಕೆ ಒಂದು ವಿಶಿಷ್ಟವಾದ ಬೌದ್ಧಿಕ ಆಯಾಮವನ್ನು ನೀಡುತ್ತದೆ. ‘ಪ್ರಭುಲಿಂಗಲೀಲೆ’ಯ ಶುದ್ಧಪಾಠವನ್ನು ಸಿದ್ಧಪಡಿಸುವುದರ ಜೊತೆಗೆ ಅದರ ಅರ್ಥಗ್ರಹಣಕ್ಕೆ ಅಗತ್ಯವಾದ ಕೋಶಸಿದ್ಧತೆಯಲ್ಲಿಯೂ ವಿ.ರು. ಕೊಪ್ಪಳ, ಸ.ಸ. ಮಾಳವಾಡ, ಬುದ್ಧಯ್ಯ ಪುರಾಣಿಕ, ಶಂಕರನಾರಾಯಣ ಕೇಪು ಮೊದಲಾದ ವಿದ್ವಾಂಸರು ಅಮೂಲ್ಯವಾದ ಸಲಹೆ-ಸಹಕಾರವನ್ನು ನೀಡಿದ್ದಾರೆ. ಹೀಗೆ ನೋಡಿದಾಗ ಈ ಮಹತ್ವದ ಕೃತಿಯ ಸಂಪಾದನೆ ಒಬ್ಬ ಸಂಪಾದಕನ ಏಕಾಂಗ ಪ್ರಯತ್ನದ ಫಲವಲ್ಲ; ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ವಿದ್ವಾಂಸರ ಸಹಕಾರದಿಂದ ರೂಪುಗೊಂಡ ಒಂದು ಸುವ್ಯವಸ್ಥಿತ ಸಾಮೂಹಿಕ ಜ್ಞಾನಪ್ರಕ್ರಿಯೆಯಾಗಿರುವುದು ಸ್ಪಷ್ಟವಾಗುತ್ತದೆ.
ಗ್ರಂಥಪರಿಷ್ಕರಣ ಕಾರ್ಯದಲ್ಲಿ ನೆರವಾದ ಪ್ರತಿಯೊಬ್ಬರ ವಿವರಗಳನ್ನು ಬಸವನಾಳರು ತಮ್ಮ ಪ್ರಸ್ತಾವನೆಯಲ್ಲಿ ಪ್ರಮಾಣಿಕವಾಗಿ ದಾಖಲಿಸಿರುವುದು ಅವರ ಸಂಪಾದನೆ ಪ್ರಾಮಾಣಿಕತೆಗೆ ಅತ್ಯುತ್ತಮ ನಿದರ್ಶನವಾಗಿದೆ. ಸಾಮಾನ್ಯವಾಗಿ ಒಂದು ಕೃತಿಯ ಸಂಪಾದನೆಯ ಹಿಂದೆ ಅಡಗಿರುವ ಸಹಾಯಕ ಕೈಗಳು ಮುದ್ರಿತ ಕೃತಿಯ ಅಂತಿಮ ರೂಪದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಬಸವನಾಳರು ತಮ್ಮ ಕೃತಿಯ ಸಿದ್ಧತೆಯಲ್ಲಿ ನೆರವಾದ ವ್ಯಕ್ತಿಗಳ ಕೊಡುಗೆಯನ್ನು ಮರೆಯದೆ ದಾಖಲಿಸುವ ಮೂಲಕ ಗ್ರಂಥಸಂಪಾದನೆಯ ಸ್ವರೂಪವೇ ಒಂದು ಸಾಮೂಹಿಕ ಬೌದ್ಧಿಕ ಪ್ರಕ್ರಿಯೆ ಎಂಬ ಸತ್ಯವನ್ನು ಪ್ರಕಟಿಸಿದ್ದಾರೆ. ಇದರಿಂದ ಅವರ ಸಂಪಾದಕತ್ವದ ಎರಡು ಪ್ರಮುಖ ಗುಣಗಳು ಗೋಚರಿಸುತ್ತವೆ-ಒಂದೆಡೆ ಪಾಠದ ವಿಷಯದಲ್ಲಿ ವೈಜ್ಞಾನಿಕ ನಿಷ್ಠೆ, ಮತ್ತೊಂದೆಡೆ ಸಹಕರಿಸಿದ ವಿದ್ವಾಂಸರ ಬಗ್ಗೆ ಕೃತಜ್ಞತೆ ಮತ್ತು ಪಾರದರ್ಶಕತೆ.
‘ಪ್ರಭುಲಿಂಗಲೀಲೆ’ಯ ವೈಶಿಷ್ಟ್ಯವನ್ನು ಮತ್ತಷ್ಟು ಹೆಚ್ಚಿಸುವ ಅಂಶವೆಂದರೆ ಕೃತಿಯಲ್ಲಿ ಸಂದರ್ಭೋಚಿತವಾಗಿ ಅಳವಡಿಸಲಾಗಿರುವ ಚಿತ್ರಗಳು. ಕಾವ್ಯವು ಮೂಲತಃ ಶಬ್ದದ ಮೂಲಕ ರೂಪುಗೊಂಡ ಕಲಾಲೋಕವಾದರೂ, ಅದರ ಕಥಾವಸ್ತು, ಪಾತ್ರಗಳು, ಕ್ಷೇತ್ರಗಳು ಮತ್ತು ಧಾರ್ಮಿಕ-ಆಧ್ಯಾತ್ಮಿಕ ಸಂಕೇತಗಳನ್ನು ದೃಶ್ಯರೂಪದಲ್ಲಿ ಪರಿಚಯಿಸುವ ಚಿತ್ರಗಳು ಓದುಗರ ಅನುಭವವನ್ನು ಇನ್ನಷ್ಟು ಸಮೃದ್ಧಗೊಳಿಸುತ್ತವೆ. ಕೃತಿಯಲ್ಲಿ ಅಳವಡಿಸಿರುವ ಚಿತ್ರಗಳಲ್ಲಿ ‘ಪ್ರಭು ಮಾಯೆಗೆ ಸಿಕ್ಕಿ ಹೋದದ್ದು’, ಬನವಾಸಿಯ ಮಧುಕೇಶ್ವರ ದೇವಾಲಯ, ಬಳ್ಳಿಗಾವೆಯ ಪ್ರಭುದೇವರ ದೇವಾಲಯ, ಬಳ್ಳಿಗಾವೆಯ ಮಾಯಾದೇವಿಯ ವಿಗ್ರಹ, ಅನಿಮಿಷ ದೇವಾಲಯದ ಒಳಭಾಗ, ಸೊಲ್ಲಾಪುರದಲ್ಲಿ ಪ್ರಭುದೇವರು ಸಿದ್ಧರಾಮನಿಗೆ ದರ್ಶನ ನೀಡಿದ ಸ್ಥಳ, ಗೋರಕ್ಷನನ್ನು ಪ್ರಭುದೇವರು ಕತ್ತಿಯಿಂದ ಇರಿದ ದೃಶ್ಯ, ಮಹಾನುಭಾವ ಬಸವಣ್ಣನವರ ಚಿತ್ರ, ತತ್ವಶಿಖಾಮಣಿ ಮಹಾದೇವಿ ಅಕ್ಕನವರ ಚಿತ್ರ ಹಾಗೂ ಬನವಾಸಿಯ ಪ್ರಭುದೇವರ ದೇವಾಲಯ ಮೊದಲಾದವು ಸೇರಿವೆ. ಈ ಚಿತ್ರಗಳು ಕಾವ್ಯದ ಕಥನವನ್ನು ಅಲಂಕರಿಸುವ ಅಲಂಕಾರಿಕ ಸಾಧನಗಳಷ್ಟೇ ಅಲ್ಲ; ಅವು ಕಾವ್ಯದಲ್ಲಿ ಉಲ್ಲೇಖವಾಗುವ ವ್ಯಕ್ತಿ, ಸ್ಥಳ, ದೇವಾಲಯ ಮತ್ತು ಆಧ್ಯಾತ್ಮಿಕ ಪ್ರಸಂಗಗಳಿಗೆ ಒಂದು ದೃಶ್ಯಾತ್ಮಕ ಸಾಕ್ಷೀಕರಣ ನೀಡುತ್ತವೆ.
ಈ ಎಲ್ಲ ಪ್ರಯತ್ನಗಳ ಪರಿಪಾಕವಾಗಿ ‘ಪ್ರಭುಲಿಂಗಲೀಲೆ’ಗೆ ಬಸವನಾಳರು ಸುಮಾರು ಇಪ್ಪತ್ತೇಳು ಪುಟಗಳಷ್ಟು ಸುದೀರ್ಘವಾದ ಪ್ರಸ್ತಾವನೆಯನ್ನು ರಚಿಸಿದ್ದಾರೆ. ಸಾಮಾನ್ಯವಾಗಿ ಕಾವ್ಯದ ಪ್ರಸ್ತಾವನೆ ಎಂದರೆ ಕೃತಿಯ ಹಿನ್ನೆಲೆ, ಕರ್ತೃ ಮತ್ತು ಕಥಾವಸ್ತುವಿನ ಸಂಕ್ಷಿಪ್ತ ಪರಿಚಯಕ್ಕೆ ಸೀಮಿತವಾಗಿರುತ್ತದೆ. ಆದರೆ ಬಸವನಾಳರ ಪ್ರಸ್ತಾವನೆ ಈ ಸಾಂಪ್ರದಾಯಿಕ ಮಿತಿಯನ್ನು ಮೀರಿ ನಿಂತಿದೆ. ಅದು ‘ಪ್ರಭುಲಿಂಗಲೀಲೆಯ ಅಂತಃಸತ್ವ ಮತ್ತು ಬಹಿರಂಗ ಸ್ವರೂಪ ಎರಡನ್ನೂ ತೆರೆದು ತೋರಿಸುವ ವಿಮರ್ಶಾತ್ಮಕ ಹಾಗೂ ವಿದ್ವತ್ಪೂರ್ಣ ಅಧ್ಯಯನವಾಗಿದೆ. ಕೃತಿಯ ಮೌಲ್ಯವನ್ನು ಕೇವಲ ಅದರ ಕಥಾನಕದ ಆಕರ್ಷಣೆಯಲ್ಲಿ ಹುಡುಕದೆ, ಅದರ ರಚನಕಾರ, ಆತನ ಕಾಲ, ಪರಿಸರ, ಭಾಷೆ, ಶೈಲಿ, ಕಥಾವಿನ್ಯಾಸ, ಆಧ್ಯಾತ್ಮಿಕ ಆಶಯ ಮತ್ತು ಸಾಹಿತ್ಯಿಕ ಸ್ಥಾನಮಾನಗಳ ಹಿನ್ನೆಲೆಯಲ್ಲಿ ಪರಿಶೀಲಿಸುವ ಪ್ರಯತ್ನವನ್ನು ಬಸವನಾಳರು ಮಾಡಿದ್ದಾರೆ. ಹೀಗಾಗಿ ಈ ಪ್ರಸ್ತಾವನೆಯೇ ‘ಪ್ರಭುಲಿಂಗಲೀಲೆ’ಯನ್ನು ಅರ್ಥಮಾಡಿಕೊಳ್ಳಲು ಒಂದು ಸ್ವತಂತ್ರ ಆಕರವಾಗಿದೆ.
ಪ್ರಸ್ತಾವನೆಯಲ್ಲಿ ಬಸವನಾಳರು ಮೊದಲು ಗ್ರಂಥಕರ್ತನ ವಿಚಾರವನ್ನು ಕೈಗೆತ್ತಿಕೊಳ್ಳುತ್ತಾರೆ. ನಂತರ ಚಾಮರಸನ ಚರಿತ್ರೆ, ಚಾಮರಸನ ಕಾಲ, ‘ಪ್ರಭುಲಿಂಗಲೀಲೆ’ಯ ಕಥೆ, ಕೃತಿಯ ವಿಮರ್ಶೆ, ಚಾಮರಸನ ಚರಿತ್ರೆಯ ನಿರೂಪಣೆ, ಭಾಷೆ ಮತ್ತು ಶೈಲಿಯ ವೈಶಿಷ್ಟ್ಯ, ‘ಪ್ರಭುಲಿಂಗಲೀಲೆ’ಯ ಭಾಷಾಂತರಗಳು ಎಂಬ ಕ್ರಮದಲ್ಲಿ ವಿಷಯಗಳನ್ನು ಚರ್ಚಿಸುತ್ತಾರೆ. ಈ ವಿನ್ಯಾಸವನ್ನು ಗಮನಿಸಿದರೆ ಬಸವನಾಳರ ಉದ್ದೇಶ ಕೇವಲ ಕೃತಿಯ ಸಂಪಾದಿತ ಪಾಠವನ್ನು ಓದುಗರ ಮುಂದಿಡುವುದಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೃತಿಯನ್ನು ಅದರ ಸಮಗ್ರ ಸಾಹಿತ್ಯಿಕ, ಐತಿಹಾಸಿಕ, ಭಾಷಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಪರಿಚಯಿಸುವುದು ಅವರ ಪ್ರಧಾನ ಆಶಯವಾಗಿತ್ತು. ಅಂದರೆ ಪಠ್ಯವನ್ನು ಓದುಗರ ಕೈಗೆ ಕೊಡುವ ಮೊದಲು, ಆ ಪಠ್ಯವನ್ನು ಹೇಗೆ ಓದಬೇಕು, ಯಾವ ಹಿನ್ನೆಲೆಯೊಳಗೆ ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಸಾಹಿತ್ಯಿಕ ಮಹತ್ವವನ್ನು ಯಾವ ಮಾನದಂಡಗಳಿಂದ ಗ್ರಹಿಸಬೇಕು ಎಂಬುದಕ್ಕೆ ಬೇಕಾದ ಬೌದ್ಧಿಕ ಸಿದ್ಧತೆಯನ್ನು ಕೂಡ ಅವರು ಮಾಡಿಕೊಟ್ಟಿದ್ದಾರೆ.
ಬಸವನಾಳರ ಪ್ರಸ್ತಾವನೆಯ ಮತ್ತೊಂದು ಮಹತ್ವದ ಸಾಧನೆಯೆಂದರೆ, ಅವರು ‘ಪ್ರಭುಲಿಂಗಲೀಲೆ’ಯ ಕರ್ತೃ ಚಾಮರಸನೇ ಎಂಬುದನ್ನು ಕೇವಲ ಪರಂಪರಾಗತ ನಂಬಿಕೆಯ ಆಧಾರದ ಮೇಲೆ ಒಪ್ಪಿಕೊಂಡು ನಿಲ್ಲದೆ, ಬಾಹ್ಯ ಪ್ರಮಾಣಗಳ ನೆರವಿನಿಂದ ಸಮರ್ಥವಾಗಿ ನಿರ್ಣಯಿಸಿರುವುದು. ಕೃತಿಕರ್ತನ ಪ್ರಶ್ನೆ ಯಾವುದೇ ಪ್ರಾಚೀನ ಕಾವ್ಯದ ಅಧ್ಯಯನದಲ್ಲಿ ಅತ್ಯಂತ ಸೂಕ್ಷö್ಮವಾದ ಮತ್ತು ನಿರ್ಣಾಯಕವಾದ ವಿಚಾರ. ಕೃತಿಯ ಕಾಲ, ಕರ್ತೃ, ಪಾಠಪರಂಪರೆ ಮತ್ತು ಅದರ ಸಾಹಿತ್ಯಿಕ ಸ್ಥಾನ ಇವುಗಳಲ್ಲಿ ಯಾವುದನ್ನೂ ಖಚಿತವಾಗಿ ನಿರ್ಧರಿಸದೆ ಕೇವಲ ಕಾವ್ಯದ ಆಶಯವನ್ನು ಆಧರಿಸಿ ವಿಮರ್ಶೆ ನಡೆಸಿದರೆ ಅದರ ಫಲಿತಾಂಶ ಅಪೂರ್ಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಸವನಾಳರು ‘ಪ್ರಭುಲಿಂಗಲೀಲೆ’ಯ ಕರ್ತೃ ಚಾಮರಸನೇ ಎಂಬುದನ್ನು ಬಾಹ್ಯ ಪ್ರಮಾಣಗಳ ಮೂಲಕ ಸ್ಥಾಪಿಸಿರುವುದು ಅವರ ಸಂಶೋಧನಾತ್ಮಕ ದೃಷ್ಟಿಗೆ ನಿದರ್ಶನವಾಗಿದೆ.
ಇದರೊಂದಿಗೆ ಅವರು ಚಾಮರಸ ಚಿತ್ರಿಸಿರುವ ಅಲ್ಲಮಪ್ರಭುವಿನ ನೈಜ ವ್ಯಕ್ತಿತ್ವವನ್ನು ವಿಶಿಷ್ಟ ರೀತಿಯಲ್ಲಿ ಪರಿಚಯಿಸಿದ್ದಾರೆ. ಚಾಮರಸನ ದೃಷ್ಟಿಯಲ್ಲಿ ಅಲ್ಲಮಪ್ರಭು ಕೇವಲ ಒಬ್ಬ ಶರಣ, ಧಾರ್ಮಿಕ ವ್ಯಕ್ತಿ ಅಥವಾ ಪವಾಡಪುರುಷನಾಗಿ ಕಾಣಿಸಿಕೊಳ್ಳುವುದಿಲ್ಲ; ಅವರು ಆಧ್ಯಾತ್ಮಿಕ ಅನುಭವದ ಪರಮಾವಧಿಯನ್ನು ಪ್ರತಿನಿಧಿಸುವ ವಿಲಕ್ಷಣ ವ್ಯಕ್ತಿತ್ವವಾಗಿ ರೂಪುಗೊಳ್ಳುತ್ತಾರೆ. ಈ ಸೂಕ್ಷ್ಮವಾದ ವ್ಯಕ್ತಿತ್ವವನ್ನು ಗುರುತಿಸಿ, ಅದರ ವೈಶಿಷ್ಟ್ಯವನ್ನು ಓದುಗರಿಗೆ ಮನದಟ್ಟಾಗುವಂತೆ ವಿವರಿಸುವಲ್ಲಿ ಬಸವನಾಳರ ಪ್ರಸ್ತಾವನೆ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲಮಪ್ರಭುವಿನ ವ್ಯಕ್ತಿತ್ವದ ಸುತ್ತ ಹೆಣೆದುಕೊಂಡಿರುವ ಆಧ್ಯಾತ್ಮಿಕತೆ, ಅನುಭವ, ಜ್ಞಾನ ಮತ್ತು ವೈರಾಗ್ಯಗಳ ಸಂಕೀರ್ಣ ಸಂಬಂಧವನ್ನು ಅವರು ಬಿಡಿಸಿ ತೋರಿಸುವ ಮೂಲಕ ಚಾಮರಸನ ಕಾವ್ಯಪ್ರತಿಭೆಯನ್ನೂ ಅದರ ಒಳನೋಟವನ್ನೂ ಪರಿಚಯಿಸುತ್ತಾರೆ.
ಚಾಮರಸನ ಚರಿತ್ರೆಯ ನಿರೂಪಣೆಯಲ್ಲಿಯೂ ಬಸವನಾಳರು ಕೇವಲ ಮಾಹಿತಿಸಂಗ್ರಹದ ಮಟ್ಟಕ್ಕೆ ನಿಲ್ಲದೆ. ಚಾಮರಸನ ಜೀವನ, ಅವನ ಕಾಲಪರಿಸರ ಮತ್ತು ಅವನ ಸಾಹಿತ್ಯಸೃಷ್ಟಿಯ ನಡುವಿನ ಸಂಬಂಧವನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಒಬ್ಬ ಕವಿಯ ಕಾವ್ಯವನ್ನು ಅವನ ಕಾಲದಿಂದ ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ. ಕವಿಯ ಅನುಭವಲೋಕ, ಧಾರ್ಮಿಕ-ಸಾಮಾಜಿಕ ಪರಿಸರ, ಸಮಕಾಲೀನ ಸಾಹಿತ್ಯಧಾರೆಗಳು ಮತ್ತು ಅವನ ವೈಯಕ್ತಿಕ ಸೃಜನಶೀಲತೆ-ಇವೆಲ್ಲವೂ ಸೇರಿ ಕಾವ್ಯದ ರೂಪವನ್ನು ನಿರ್ಧರಿಸುತ್ತವೆ. ಈ ಅರಿವಿನಿಂದಲೇ ಬಸವನಾಳರು ಚಾಮರಸನ ಕಾಲವನ್ನು ಪರಿಶೀಲಿಸಿ, ‘ಪ್ರಭುಲಿಂಗಲೀಲೆ’ಯ ಸೃಷ್ಟಿಗೆ ಕಾರಣವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಪರಿಚಯಿಸಿದ್ದಾರೆ. ಹೀಗಾಗಿ ಚಾಮರಸನ ಚರಿತ್ರೆ ಅದು ಕವಿಯ ಸೃಜನಶೀಲತೆಯನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಸಾಹಿತ್ಯಿಕ ಪೂರ್ವಪೀಠಿಕೆಯಾಗಿದೆ.
ಇದಕ್ಕಿಂತಲೂ ಮುಖ್ಯವಾಗಿ ಅವರು ‘ಪ್ರಭುಲಿಂಗಲೀಲೆ’ಯ ವಿಮರ್ಶೆಯನ್ನು ನಡೆಸುವಾಗ ಕೃತಿಯ ಗುಣದೋಷಗಳನ್ನು ನಿರ್ದಿಷ್ಟ ಸಾಹಿತ್ಯಿಕ ಮಾನದಂಡಗಳ ಹಿನ್ನೆಲೆಯಲ್ಲಿ ಪರಿಶೀಲಿಸುತ್ತಾರೆ. ಚಾಮರಸನ ಕಾವ್ಯಪ್ರತಿಭೆ, ಕಥನಸಾಮರ್ಥ್ಯ, ಭಾಷೆಯ ಬಳಕೆ, ಶೈಲಿಯ ವೈಶಿಷ್ಟö್ಯ, ಪಾತ್ರಚಿತ್ರಣ, ಆಧ್ಯಾತ್ಮಿಕ ಆಶಯ ಮತ್ತು ಕಾವ್ಯಸೌಂದರ್ಯ-ಇವುಗಳನ್ನೆಲ್ಲ ಪರಿಗಣಿಸಿ ಕೃತಿಯ ಮೌಲ್ಯವನ್ನು ನಿರ್ಣಯಿಸುವ ಪ್ರಯತ್ನ ಅವರ ಪ್ರಸ್ತಾವನೆಯಲ್ಲಿ ಕಾಣಿಸುತ್ತದೆ. ಹೀಗಾಗಿ ಬಸವನಾಳರ ವಿಮರ್ಶೆ ಭಕ್ತಿಭಾವದಿಂದ ಮಾತ್ರ ರೂಪುಗೊಂಡ ಪ್ರಶಂಸೆಯಲ್ಲ; ಅದು ಕೃತಿಯ ಸಾಹಿತ್ಯಿಕ ಸಾಮರ್ಥ್ಯವನ್ನು ಅಳೆಯುವ ವಿವೇಚನಾಶೀಲ ಪ್ರಯತ್ನವಾಗಿದೆ. ಈ ವಿಮರ್ಶಾತ್ಮಕ ದೃಷ್ಟಿಯೇ ಅವರ ಪ್ರಸ್ತಾವನೆಗೆ ವಿದ್ವತ್ಪೂರ್ಣತೆಯನ್ನು ತಂದುಕೊಟ್ಟಿದೆ.
ಬಸವನಾಳರ ಪ್ರಸ್ತಾವನೆಯ ಇನ್ನೊಂದು ವಿಶಿಷ್ಟ ಅಂಶವೆಂದರೆ ಚಾಮರಸ ಮತ್ತು ಕುಮಾರವ್ಯಾಸರ ಕಾವ್ಯಶೈಲಿಗಳ ತೌಲನಿಕ ವಿಮರ್ಶೆ. ಕನ್ನಡ ಸಾಹಿತ್ಯದ ಎರಡು ಮಹತ್ವದ ಕಾವ್ಯಪರಂಪರೆಗಳನ್ನು ಪರಸ್ಪರ ಎದುರು ನಿಲ್ಲಿಸಿ ಅವುಗಳ ಸಾಮ್ಯ-ವೈಷಮ್ಯಗಳನ್ನು ಗುರುತಿಸುವ ಮೂಲಕ ಬಸವನಾಳರು ಚಾಮರಸನ ಸಾಹಿತ್ಯಿಕ ಸ್ಥಾನವನ್ನು ಹೆಚ್ಚು ಸ್ಪಷ್ಟವಾಗಿ ನಿರ್ಧರಿಸಲು ಪ್ರಯತ್ನಿಸಿದ್ದಾರೆ. ಒಂದೆಡೆ ಕುಮಾರವ್ಯಾಸನ ಕಾವ್ಯದಲ್ಲಿ ಕಾಣುವ ಮಹಾಕಾವ್ಯಾತ್ಮಕ ವ್ಯಾಪ್ತಿ, ಮಾನವೀಯ ಭಾವಜಗತ್ತು ಮತ್ತು ಭಾಷೆಯ ವೈಭವವಿದ್ದರೆ, ಮತ್ತೊಂದೆಡೆ ಚಾಮರಸನ ಕಾವ್ಯದಲ್ಲಿ ಆಧ್ಯಾತ್ಮಿಕ ಅನುಭವ, ಶರಣತತ್ವ ವಿವೇಚನೆ ಮತ್ತು ಅನುಭಾವದ ಆಂತರಿಕ ತೀವ್ರತೆ ಮುಖ್ಯವಾಗುತ್ತದೆ. ಈ ವಿಭಿನ್ನ ಕಾವ್ಯಪ್ರವೃತ್ತಿಗಳನ್ನು ತೌಲನಿಕವಾಗಿ ಪರಿಶೀಲಿಸುವುದರಿಂದ ಚಾಮರಸನ ವೈಶಿಷ್ಟö್ಯವನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಎಲ್ಲಾ ಚರ್ಚೆಗಳ ಅಂತಿಮ ಪರಿಣಾಮವಾಗಿ ಬಸವನಾಳರು ಕನ್ನಡ ಸಾಹಿತ್ಯದಲ್ಲಿ ‘ಪ್ರಭುಲಿಂಗಲೀಲೆ’ಗೆ ಒಂದು ನಿರ್ದಿಷ್ಟ ಸ್ಥಾನವನ್ನು ಕಲ್ಪಿಸಿದ್ದಾರೆ. ಒಂದು ಕೃತಿಯ ಮಹತ್ವವನ್ನು ಅದರ ಜನಪ್ರಿಯತೆ ಅಥವಾ ಧಾರ್ಮಿಕ ಗೌರವದಿಂದ ಮಾತ್ರ ನಿರ್ಧರಿಸಲಾಗದು; ಅದರ ಭಾಷೆ, ಶೈಲಿ, ಕಲ್ಪನಾಶಕ್ತಿ, ಕಥನಸಾಮರ್ಥ್ಯ, ತಾತ್ವಿಕಆಳ ಮತ್ತು ಸಾಹಿತ್ಯಪರಂಪರೆಯ ಮೇಲೆ ಅದರ ಪ್ರಭಾವ ಇವುಗಳನ್ನೂ ಪರಿಗಣಿಸಬೇಕು. ಬಸವನಾಳರ ಪ್ರಸ್ತಾವನೆ ಈ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ‘ಪ್ರಭುಲಿಂಗಲೀಲೆ’ಯ ಸಾಹಿತ್ಯಿಕ ಮೌಲ್ಯವನ್ನು ಸ್ಥಾಪಿಸುವ ಪ್ರಯತ್ನವಾಗಿದೆ.
ಇದರಿಂದ ಬಸವನಾಳರ ಸಂಪಾದನಾ ಕಾರ್ಯದ ವ್ಯಾಪ್ತಿ ಮತ್ತೊಮ್ಮೆ ಸ್ಪಷ್ಟವಾಗುತ್ತದೆ. ಅವರು ಪಾಠವನ್ನು ಶುದ್ಧೀಕರಿಸಿ ಪ್ರಕಟಿಸುವ ಸಂಪಾದಕರಾಗದೆ, ಕರ್ತೃನಿರ್ಣಯ ಮಾಡುವ ಸಂಶೋಧಕ, ಚರಿತ್ರೆಯನ್ನು ಕಟ್ಟಿಕೊಡುವ ಇತಿಹಾಸದೃಷ್ಟಿಯ ಲೇಖಕ, ಕಾವ್ಯದ ಮೌಲ್ಯವನ್ನು ಪರಿಶೀಲಿಸುವ ವಿಮರ್ಶಕ, ಭಾಷೆ ಮತ್ತು ಶೈಲಿಯನ್ನು ವಿಶ್ಲೇಷಿಸುವ ಸಾಹಿತ್ಯಜ್ಞ ಹಾಗೂ ಓದುಗರಲ್ಲಿ ಕೃತಿಯ ಬಗ್ಗೆ ಆಸಕ್ತಿ ಮೂಡಿಸುವ ಸಮರ್ಥ ಪರಿಚಯಕಾರ-ಈ ಎಲ್ಲ ಪಾತ್ರಗಳನ್ನೂ ಏಕಕಾಲದಲ್ಲಿ ನಿರ್ವಹಿಸಿದ್ದಾರೆ. ‘ಪ್ರಭುಲಿಂಗಲೀಲೆ’ಯನ್ನು ಸಂಪಾದಿಸುವ ಮೂಲಕ ಅವರು ಒಂದು ಕೃತಿಯನ್ನು ಉಳಿಸಿದಷ್ಟೇ ಅಲ್ಲ, ಆ ಕೃತಿಯನ್ನು ಓದುವ ಹೊಸ ದೃಷ್ಟಿಯನ್ನೂ ರೂಪಿಸಿದರು. ಅವರ ಪ್ರಸ್ತಾವನೆ ಓದುಗರ ಗಮನವನ್ನು ಕೃತಿಯ ಕಡೆಗೆ ತೀವ್ರವಾಗಿ ಹರಿಸುವಂತಿದ್ದು, ಸಾಹಿತ್ಯಾಸಕ್ತರ ಮನಸ್ಸಿನಲ್ಲಿ ‘ಪ್ರಭುಲಿಂಗಲೀಲೆ’ಯ ಕುರಿತು ಕುತೂಹಲ, ಗೌರವ ಮತ್ತು ಅಧ್ಯಯನಾಸಕ್ತಿಯನ್ನು ಉಂಟುಮಾಡುತ್ತದೆ.
