ವಚನ ಶ್ರಾವಣ: ಗದಗದಲ್ಲಿ ಸಿದ್ದರಾಮೇಶ್ವರರ ವಚನ ನಿರ್ವಚನ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಸಿದ್ಧಾಂತಿಯ ಜ್ಞಾನ ಸಾಧನೆಯಲ್ಲಿ ಹೋಯಿತ್ತು

ಗದಗ :

೧೨ನೇ ಶತಮಾನದ ಅನುಭವ ಮಂಟಪದಲ್ಲಿ ಶರಣರ ಬಳಗದಲ್ಲಿ ಸಿದ್ಧರಾಮೇಶ್ವರರು ಅನುಭವ ಮಂಟಪದ ಮುಕುಟ ಮಣಿಯಂತಿದ್ದರು.

ಅವರು ಶೂನ್ಯಸಿಂಹಾಸನದ ೨ನೇ ಪೀಠಾಧ್ಯಕ್ಷರಾಗಿ ಇಡೀ ಶರಣ ಸಮುದಾಯಕ್ಕೆ ನೀಡಿದ ಮಾರ್ಗದರ್ಶನ ಅನುಪಮವಾದುದು.

ಅವರ ಬಗೆಗೆ ಹರಿಹರನ ರಗಳೆಯಲ್ಲಿ ಬರುವ ಬಾಲ್ಯದ ಬದುಕು, ಸಿದ್ಧರಾಮರು ತನ್ನ ದೇವರು ಮಲ್ಲಯ್ಯನನ್ನು ಹುಡುಕಾಡುತ್ತಾ ಸಾಗಿ ಕೊನೆಯಲ್ಲಿ ಎಂತಹ ತ್ಯಾಗಕ್ಕೂ ಸಿದ್ಧರಾಗಿ ಬೆಟ್ಟದಿಂದ ಬೀಳಲು ಹೋದಾಗ ಶಿವ ಅವರನ್ನೆತ್ತಿಕೊಂಡ ಘಟನೆಯು ಮನೋಜ್ಞವಾದುದು.

ವಾಸ್ತವಿಕವಾಗಿ ಅದು ಬರೀ ಕತೆಯಾದರೂ ಸಿದ್ಧರಾಮೇಶ್ವರರು ಬಾಲ್ಯದ ಘಟನೆ ಮನಕಲುಕುವಂತೆ ಹರಿಹರ ಬರೆದಿದ್ದಾನೆಂದು ಶರಣತತ್ವ ಚಿಂತಕಿ ವಾಣಿ ಅರುಣ ಗೋಧಿಯವರು ನುಡಿದರು.

ಅವರು ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಮನೆ, ಮನೆಗಳಲ್ಲಿ ‘ವಚನ ಶ್ರಾವಣ’ ಕಾರ್ಯಕ್ರಮ ಕಳಕಪ್ಪ ಜಿ. ವ್ಯಾಪಾರಿ ಇವರ ಮನೆಯಲ್ಲಿ ನಡೆದ ವಚನ ನಿರ್ವಚನದಲ್ಲಿ ಶರಣ ಸಿದ್ದರಾಮೇಶ್ವರರ ವಚನ “ಸಿದ್ಧಾಂತಿಯ ಜ್ಞಾನ ಸಾಧನೆಯಲ್ಲಿ ಹೋಯಿತ್ತು, ವೇದಾಂತಿಯ ಜ್ಞಾನ ವಾದದಲ್ಲಿ ಹೋಯಿತ್ತು, ಕ್ರಿಯಾವಂತನ ಜ್ಞಾನ ನುಡಿಯಲ್ಲಿ ಹೋಯಿತ್ತು, ವ್ಯವಹಾರಿಕನ ಜ್ಞಾನ ದ್ರವ್ಯಾರ್ಜನೆಯಲ್ಲಿ ಹೋಯಿತ್ತು, ಇವೆಲ್ಲ ಭವಕ್ಕೆ ಕಾರಣವಲ್ಲದೆ, ಭವರಹಿತ ಜ್ಞಾನವು ಸಾಧ್ಯವಾಗುವುದು ದುಲರ್ಭವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.”

ಈ ವಚನ ನಿರ್ವಚನ ಗೈಯುತ್ತಾ ಮೇಲಿನಂತೆ ಮಾತನಾಡಿದರು.

ಇಲ್ಲಿ ಸಿದ್ಧಾಂತಿ ಎಂದರೆ ಬೇರೆಯವರ ಬಗೆಗೆ ಹೇಳುವುದಾಗಿದೆ. ಯಾವುದೇ ಒಂದು ತತ್ವಗಳಿಗೆ ಅಂಟಿಕೊಂಡಾತನನ್ನು ಸಿದ್ಧಾಂತಿ ಎನ್ನುವರು. ಆದರೆ ಸತ್ಯದ ಮೂಲವನ್ನು ಬಿಟ್ಟು, ಅನವಶ್ಯಕವಾದುದರ ಬೆನ್ನು ಹತ್ತಿದರೆ, ಆತ ತನ್ನ ವಿಚಾರಗಳೇ ಶ್ರೇಷ್ಠವೆಂದು ವಾದಿಸುತ್ತಾ ಕುಳಿತರೆ, ಅವೇ ಅಂತಿಮವೆಂಬ ಭ್ರಮೆಯಲಿ ಬರೀ ಪುರಾಣ, ಪುಣ್ಯಕತೆಯೆಂದು ಹೇಳುತ್ತ ವಾಸ್ತವ ಮರೆತರೆ ಆತನ ಬದುಕು ಅಲ್ಲಿಯೇ ಮುಗಿದು ಹೋಗುತ್ತದೆ. ಯಾವುದೇ ಸಾಧನೆ ಸಾಧ್ಯವಿಲ್ಲ.

ಹಾಗೆಯೇ ಕ್ರಿಯಾವಂತನ ಬಗೆಗೆ ಶರಣರು ಹೀಗೆ ಹೇಳುವರು. ಇಲ್ಲಿ ಕ್ರಿಯೆ ಎಂದರೆ ಕೆಲಸವಾಗಿದೆ. ಇಲ್ಲಿ ಕ್ರಿಯಾವಂತನ ಬದುಕು ಹಾಗೆಯೇ ಇರುತ್ತದೆ. ತಾನಾಯಿತು, ತನ್ನ ಕೆಲಸವಾಯಿತು. ಈ ರೀತಿ ತನ್ನ ಲೋಕದಲ್ಲೇ ತಾನಿರುವನು. ಆದರೆ ಬಸವಾದಿ ಶರಣರು ಇಲ್ಲಿ ಭಿನ್ನವಾಗಿ ಆಲೋಚಿಸುವರು. ಅವರಿಗೆ ವ್ಯಕ್ತಿಗಿಂತ ಸಮಷ್ಟಿಯ ಹಿತವೇ ಮುಖ್ಯವಾಗಿರುವದು. ತಮ್ಮಿಂದ ಈ ಲೋಕಕ್ಕೆ ಸಂದ ಸಹಾಯವಾದರೂ ಏನು ಎಂಬ ಬಗ್ಗೆ ಚಿಂತಿಸುವರು.

ಇನ್ನು ವ್ಯವಹಾರಿಕರ ಬಗ್ಗೆ ಶರಣರು ಈ ರೀತಿ ಹೇಳುವರು. ಇಂಥವರಲ್ಲಿ ಬರೀ ವ್ಯವಾಹರದ ಬುದ್ಧಿಯೇ ತುಂಬಿರುವುದು. ಅವರೆಲ್ಲ ತಮಗೆ ಬರುವ ಲಾಭ-ನಷ್ಟದ ಬಗೆಗಿನ ಚಿಂತನೆಯಲ್ಲೇ ಮುಳುಗಿ ಹೋಗಿರುವರು. ಅವರಲ್ಲಿ ಹಣದ ವ್ಯಾಮೋಹದ ಹೊರತಾಗಿ ಮತ್ತೇನು ಇರಲಾರದು. ಆದರೆ ಇದು ಬಸವತತ್ವಕ್ಕೆ ವಿರುದ್ಧವಾದುದು.

ಇಲ್ಲಿ ಶರಣರು ದುಡಿಯಬಾರದು, ಗಳಿಸಬಾರದೆಂದೇನು ಹೇಳಿಲ್ಲ. ಆದರೆ ಸತ್ಯಶುದ್ಧ ಕಾಯಕದಿಂದ ಬಂದ ಹಣದಲ್ಲಿ ತುಸು ಪಾಲನ್ನಾದರೂ ಜಂಗಮಕ್ಕೆ ಅಂದರೆ ಸಮಾಜಕ್ಕೆ ಅರ್ಪಿತವಾಗಬೇಕೆನ್ನುವರು.

ಮೇಲಿನ ಅಂದರೆ ಸಿದ್ಧಾಂತಿ, ವೇದಾಂತಿ, ಕ್ರಿಯಾವಂತ, ವ್ಯವಹಾರಿಕವಂತ ಈ ನಾಲ್ಕು ವರ್ಗಗಳ ಜನರ ಬದುಕು ತಾವು, ತಮ್ಮದು, ತಮ್ಮವರು ಈ ರೀತಿ ತಮ್ಮದೇ ಲೋಕದ ಭವದಲ್ಲಿ ಕಳೆದು ಹೋಗುವರು.  ಇಲ್ಲಿ ‘ಭವ’ ಎಂದರೆ ಲೌಕಿಕ ಜಗತ್ತು, ಸಂಸಾರಮಯ ಪ್ರಪಂಚ ಎಂದಾಗುವುದು.

ಈ ಭವ ಅಂದರೆ ಸಗಣಿಯಲ್ಲಿ ಹುಳು ಹುಟ್ಟಿ ಅಲ್ಲಿಯೇ ಸಂಸಾರ ನಡೆಸಿ ಕೊನೆಗೆ ಆ ಸಗಣಿ ಬಿಟ್ಟು ಹೊರಬರಲಾರದೇ ಅಲ್ಲಿಯೇ ಸತ್ತು ಹೋಗುವ ರೀತಿಯಲ್ಲೇ ಮನುಷ್ಯ ಜೀವನ ಕಳೆದು ಹೋಗಬಾರದು. ಇಂಥ ಭವನಿಗೆ ಏನೊಂದು ಮಾಡಲು, ಸಾಧಿಸಲು ಸಾಧ್ಯವಾಗದು.

ಮನುಷ್ಯ ಜನ್ಮವೆತ್ತಿ ಬಂದಾತ ತನ್ನ ಬದುಕನ್ನು ಶರಣ ಮಾರ್ಗದತ್ತ ನಡೆಸಿ ತನ್ನ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂಬುದು ಶರಣರ ಸದಾಶಯವಾಗಿದೆ ಎಂದರು.

ಮತ್ತೋರ್ವ ಶರಣರಾದ ಎಸ್. ಎ. ಮುಗದರವರು ಇದೇ ವಚನ ನಿರ್ವಚನ ಮಾಡಿದರು. ಇದೇ ಸಂದರ್ಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಪೂಜ್ಯ ಪ್ರಭುರಾಜೇಂದ್ರ ಮಹಾಸ್ವಾಮಿಗಳು ಸುತ್ತೂರಮಠ ಇವರ ೧೧೧ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ವೇದಿಕೆಯ ಮೇಲೆ ಬಸವದಳದ ಗಣ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ವಚನ ಪ್ರಾರ್ಥನೆಯನ್ನು ಬಸವದಳದ ಶರಣೆಯರು ಮಾಡಿದರು. ಸ್ವಾಗತ ಶಾಂತಲಾ ವ್ಯಾಪಾರಿ, ನಿರೂಪಣೆ ಬಸವದಳದ ಸದಸ್ಯರು, ಬಸವದಳದ ಶರಣೆಯರಿಂದ ವಚನ ಮಂಗಲ ಜರುಗಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *