ಬಸವಕಲ್ಯಾಣ ಕಾಲೇಜಿನಲ್ಲಿ ಉಪನ್ಯಾಸ
ಬಸವಕಲ್ಯಾಣ:
ನೈತಿಕ ಬದ್ಧತೆ, ಸಾಮಾಜಿಕ ಪ್ರಜ್ಞೆ, ವೈಚಾರಿಕ ಚಿಂತನೆ, ತಾತ್ವಿಕ ಆಲೋಚನೆಗಳು ಗಾಢವಾಗಿ ರೂಪಿಸಿದ ವಚನಕಾರರ ಚಳುವಳಿ ಎಂಥದೇ ಪ್ರಭುತ್ವವಿರಲಿ ಅದನ್ನು ಗಟ್ಟಿಯಾಗಿ ಪ್ರಶ್ನಿಸುವ ಗುಣ ಕಲಿಸಿದೆ. ಹೀಗಾಗಿ ವಚನ ಚಳುವಳಿ ಎಂದಿಗೂ ಪ್ರಸ್ತುತ ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಮಾಳಗೆ ಹೇಳಿದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೊದಲ ಸೆಮಿಸ್ಟರ್ ತರಗತಿಗಳ ಉದ್ಘಾಟನೆ ಪ್ರಯುಕ್ತ ಹಮ್ಮಿಕೊಂಡಿದ್ದ ‘ಶಿಕ್ಷಣ ಮತ್ತು ಪರಿಸರದ ಅರಿವು’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಯಾವುದನ್ನೂ ಸರಳವಾಗಿ, ಸಹಜವಾಗಿ ಒಪ್ಪದೇ ಎಲ್ಲವನ್ನೂ ಪ್ರಶ್ನಿಸುವ, ಪರೀಕ್ಷಿಸುವ, ಪರಾಮರ್ಶಿಸುವ ಜಾಯಮಾನ ವಚನಕಾರರಿದ್ದ ಈ ನೆಲದಿಂದ ನಮಗೆ ದಕ್ಕಿದೆ ಎಂದರು.

ಮಹಿಳೆಯನ್ನು ಹೊರಗಿಟ್ಟು ಯಾವ ಚಳುವಳಿಯೂ ನಡೆಸಲು ಸಾಧ್ಯವಿಲ್ಲವೆಂದು ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ನಮಗೆ ಹೇಳಿಕೊಟ್ಟಿದ್ದಾರೆ. ಭಾರತದ ಒಟ್ಟು ಚಳುವಳಿಗಳಲ್ಲಿ ಮಹಿಳೆಯರ ಹಾಜರಾತಿ ಬಹುಮುಖ್ಯವಾಗಿದೆ ಎಂದರು.
ಪರಿಸರವು ಮನುಷ್ಯನ ಆರೋಗ್ಯ, ಆದಾಯ, ಆರ್ಥಿಕತೆ, ಕೃಷಿ ಸೇರಿ ಒಟ್ಟು ಜೀವನಕ್ರಮ ನಿರ್ಧರಿಸುವ ಬಹುಮುಖ್ಯ ಅಂಶವಾಗಿದೆ. ಮಣ್ಣು, ನೀರು, ಸಸ್ಯ ಸಂಪತ್ತಿನ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದರು.
ನಾವಿರುವ ಪರಿಸರದ ಅರಿವು ನಮ್ಮಲ್ಲಿ ಮೊದಲು ಇರಬೇಕು. ಸ್ಥಳೀಯ ಪರಿಸರದ ಬಗೆಗೆ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನಾವು ಜೀವಿಸುವ ಪರಿಸರದ ಬಗೆಗೆ ನಮಗೆ ತಿಳಿಯದಿದ್ದರೆ ಜಾಗತಿಕ ತಾಪಮಾನ ಅರಿಯಲು ಸಾಧ್ಯವಿಲ್ಲ ಎಂದರು.
ಪ್ರೊ. ನಂಜುಂಡಪ್ಪ ವರದಿಯು ಕರ್ನಾಟಕದ ಭೌಗೋಳಿಕ ಸಮಸ್ಯೆಗಳಷ್ಟನ್ನೇ ಕಂಡುಹಿಡಿದಿಲ್ಲ. ಇಲ್ಲಿನ ಸಮಸ್ಯೆ ಮತ್ತು ಸವಾಲುಗಳಿಗೆ ಪರಿಹಾರವೂ ತಿಳಿಸಿದೆ. ಅದು ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಸರ್ಕಾರಗಳು ತರಬೇಕು. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಬೀದರ. ಈ ನೆಲದಲ್ಲಿ ಕಾಡನ್ನು ರಕ್ಷಿಸುವ ಜವಾಬ್ದಾರಿ ಎಲ್ಲರಲ್ಲೂ ಇರಬೇಕು ಎಂದರು.
ನಮ್ಮ ಮನೆಯ ಪಕ್ಕದಲ್ಲಿ ಅಥವಾ ಹೊಲಗಳಲ್ಲಿ ಇರುವ ಒಂದೊಂದು ಗಿಡ ಮರಗಳು ನಮ್ಮ ಪರಿಸರ ಸ್ವಾಸ್ಥ್ಯ ಮತ್ತು ದಿಕ್ಸೂಚಿ ನಿರ್ಧರಿಸುತ್ತವೆ. ಮರ ಗಿಡಗಳ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಾಗಿದೆ. ನೀರನ್ನು ಸಂಗ್ರಹಿಸುವ, ಸದುಪಯೋಗ ಮಾಡಿಕೊಳ್ಳುವ, ನೀರಿನ ಮೂಲ ಕಾಪಾಡುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅನಿಲಕುಮಾರ ರಗಟೆ ಅವರು ಮಾತನಾಡಿ, ನಿಸರ್ಗ ನಮಗೆ ನಮ್ಮ ಹಿರಿಯರಿಂದ ಪಾರಂಪರಿಕ ಬಳುವಳಿ ಬಂದ ಬಹುದೊಡ್ಡ ನಿಧಿ. ಅದನ್ನು ಕಾಪಾಡುವ, ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಿಸರ್ಗ ಹೊರತು ಜಗತ್ತಿನ ಯಾವ ಸಂಗತಿಗಳೂ ಇಲ್ಲ ಎಂದರು.
ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಕಾಡು, ನೆಲ, ನೀರು ಸೇರಿ ಪರಿಸರಕ್ಕೆ ಅಸ್ತಿತ್ವ ಒದಗಿಸಿವೆ. ಪರಿಸರದಲ್ಲಿ ಮನುಷ್ಯನೂ ಸೇರಿದಂತೆ ಇಡೀ ಜೀವ ಸಂಕುಲದ ಸಾವಯವ ಸಂಬಂಧಗಳಿವೆ. ಮನುಷ್ಯನ ಹಪಾಹಪಿ, ಆಮಿಷಗಳು ನಿಸರ್ಗದೊಂದಿಗೆ ಕ್ರೂರವಾಗಿ ನಡೆದುಕೊಳ್ಳುವ ರೀತಿಯಿಂದ ಪ್ರಾಕೃತಿಕ ವಿಕೋಪದ ಪರಿಣಾಮಗಳು ಇಂದು ಎದುರಾಗಿವೆ ಎಂದರು.
ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್, ಪಶ್ಚಿಮ ಘಟ್ಟದ ಉಳಿವಿಗಾಗಿ ಹೋರಾಟ ನಡೆಸಿದ ಪರಿಸರವಾದಿ ಮಾಧವ ಗಾಡ್ಗೀಳ್ ಮೊದಲಾದವರ ಚಿಂತನೆಗಳು ವಿದ್ಯಾರ್ಥಿಗಳು ಅರಿಯಬೇಕು ಎಂದರು.
ಕನ್ನಡದಲ್ಲಿ ಕವಿರಾಜಮಾರ್ಗಕಾರ ನದಿ, ನೆಲಗಳ ಮೂಲಕ ಕನ್ನಡದ ಭೌಗೊಳಿಕತೆ ಗುರುತಿಸಿದ್ದಾನೆ. ಪಂಪ, ವಚನಕಾರರು ಸೇರಿ ಹಲವರು ತಮ್ಮ ಕಾವ್ಯ ಕಟ್ಟಲು ಪ್ರಕೃತಿಗೆ ಆಕರವಾಗಿ ಪರಿಗಣಿಸಿದ್ದಾರೆ. ಕುವೆಂಪು, ತೇಜಸ್ವಿ ಮೊದಲಾದವರು ಪರಿಸರವಾದವನ್ನು ತಮ್ಮ ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿದ್ದಾರೆ.
ಚಂದ್ರಶೇಖರ ನಂಗಲಿ, ವಿಕ್ರಮ ವಿಸಾಜಿ, ಮಹಾಂತೇಶ ಪಾಟೀಲ ಮೊದಲಾದವರು ಪರಿಸರವಾದಿ ವಿಮರ್ಶೆಯಲ್ಲಿ ತೊಡಗಿದ್ದಾರೆ ಎಂದರು.

ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕಾರ್ಯದರ್ಶಿ ಅಶೋಕಕುಮಾರ ನಾಗರಾಳೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಪತ್ರಕರ್ತ ಬಾಲಾಜಿ ಕುಂಬಾರ, ಪರಿಸರವಾದಿ ಹರ್ಷವರ್ಧನ ರಾಠೋಡ, ಸಂದೀಪ ಮುಕಿಂದೆ, ತಾಲೂಕು ಕಸಾಪ ಅಧ್ಯಕ್ಷ ಡಾ. ರುದ್ರಮಣಿ ಮಠಪತಿ, ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ, ಐಕ್ಯುಎಸಿ ಸಂಯೋಜಕ ಪವನಕುಮಾರ ಪಾಟೀಲ, ಪ್ರಿಯಾ ಚೌಹಾಣ, ನಾಗವೇಣಿ ಬಿರಾದಾರ, ಎಂ.ಡಿ. ಜಬಿ, ವೀರೇಶ ಸ್ವಾಮಿ, ಗಂಗಾಧರ ಸಾಲಿಮಠ, ನಾಗರಾಜ ನಾಸೆ, ಐಶ್ವರ್ಯಾ ಖರೋಣೆ, ಡಾ. ಬಸವರಾಜ ಖಂಡಾಳೆ, ವಿವೇಕಾನಂದ ಶಿಂಧೆ ಮೊದಲಾದವರು ಇದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
