ಬಸವಕಲ್ಯಾಣ :
ಬಸವಕಲ್ಯಾಣದಲ್ಲಿ ನಡೆಯುವ ೪೭ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೨೬ ನಿಮಿತ್ಯ ರಾಜ್ಯಮಟ್ಟದ ಶರಣರ ವಚನ ಕಂಠಪಾಠ ಸ್ಪರ್ಧೆ ಡಾ. ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ಜರುಗಿತು.
ಸಾನಿಧ್ಯ ವಹಿಸಿ, ಶರಣರ ವಚನಗಳು ನಮ್ಮ ಬದುಕಿಗೆ ಜೀವನ ಉತ್ಸಾಹ ತುಂಬುತ್ತವೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಎರಡು ಪೊಲೀಯೊ ಹನಿಗಳು ಹಾಕಿಕೊಂಡರೆ ಜೀವನ ಪರ್ಯಂತ ಶಾರೀರಿಕ ಅಂಗವಿಕಲತೆ ಬರುವುದಿಲ್ಲ. ಅದೇ ರೀತಿ ಚಿಕ್ಕವಯಸ್ಸಿನಲ್ಲಿ ವಚನಾಮೃತದ ಹನಿಗಳು ಸೇವಿಸಿದರೆ ಜೀವನ ಪರ್ಯಂತ ಮಾನಸಿಕ ದೌರ್ಬಲ್ಯ ನಕಾರಾತ್ಮಕ ವಿಚಾರಗಳು ಬರುವುದಿಲ್ಲ.

ಅದಕ್ಕಾಗಿ ಚಿಕ್ಕವಯಸ್ಸಿನಲ್ಲಿ ವಚನ ಕಂಠಪಾಠ ಮಾಡುವ ಮೂಲಕ ಮಾನಸಿಕ ಸಾಮರ್ಥ್ಯವನ್ನು ಗಳಿಸಿಕೊಳ್ಳುವ ಉದ್ದೇಶದಿಂದ ನಾವು ಪ್ರತಿವರ್ಷ ವಚನ ಕಂಠಪಾಠ ಸ್ಪರ್ಧೆ ಆಯೋಜಿಸುತ್ತಿದ್ದೇವೆ.
ಇಂದು ಮಕ್ಕಳು ವಚನ ಕಂಠಪಾಠ ಮಾಡುತ್ತಾರೆ. ಅವರು ದೊಡ್ಡವರಾದ ಮೇಲೆ ವಚನಗಳಲ್ಲಿದ್ದ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಆವಾಗ ಒಂದು ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂಬುದು ನಮ್ಮ ದೃಢವಾದ ನಂಬಿಕೆಯಾಗಿದೆ ಎಂದು ಪೂಜ್ಯರು ಆಶೀರ್ವಚನ ನೀಡಿದರು.
ಸಮಾರಂಭ ಉದ್ಘಾಟಿಸಿದ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸೈಯದ್ ಬಲೀಗುರ್ ರೆಹಮಾನ್ ಅವರು ಅನುಭವಮಂಟಪ ಉತ್ಸವದ ನಿಮಿತ್ಯ ಪೂಜ್ಯ ಶ್ರೀಗಳು ಆಯೋಜಿಸಿದ ಈ ಸ್ಪರ್ಧೆ ನಿಜಕ್ಕೂ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಹೆಚ್ಚಿಸುವ ದಿಶೆಯಲ್ಲಿ ಬಹಳ ಮಹತ್ವದ್ದಾಗಿದೆ.
ಜೀವನದಲ್ಲಿ ಗೆಲುವು ಅಷ್ಟೇ ಮುಖ್ಯವಲ್ಲ. ಆ ಗೆಲುವಿಗಾಗಿ ನಾವು ಮಾಡುವ ಪ್ರಯತ್ನಗಳು ಬಹಳ ಮಹತ್ವದ್ದು. ಅದಕ್ಕೆ ವಚನಗಳನ್ನು ಕಂಠಪಾಠ ಮಾಡುವ ಜೊತೆಗೆ ನಾವು ಅವುಗಳ ಅರ್ಥಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ವಚನ ಪ್ರಾರ್ಥನೆಯಲ್ಲಿ ಅದ್ಭುತ ಶಕ್ತಿ ಇದೆ. ಪ್ರಾರ್ಥನೆಯಿಂದ ನಾವು ಅಸಾಧ್ಯವಾದುದನ್ನು ಸಾಧ್ಯ ಮಾಡಬಹುದು ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ, ಹಣಮಂತರಾಯ ಕುಲಕರ್ಣಿ ಹಿರಿಯ ಶ್ರೇಣಿ ನ್ಯಾಯಾಧೀಶರು, ಶ್ರೇಯಾ ಸುನೀಲ ಉತ್ತೂರೆ ಸಿವಿಲ್ ನ್ಯಾಯಾಧೀಶರು, ಬಸವರಾಜ ಬಾಲೆರ್ ಆಡಳಿತಾಧಿಕಾರಿಗಳು, ಜಗನ್ನಾಥ ಚನ್ನಬಸಪ್ಪ ಖೂಬಾ, ಜಗದೀಶ ಪಾಟೀಲ, ಮೋಹನರೆಡ್ಡಿ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಗುರುಗಳಾದ ಬಾಬು ಬೆಲ್ದಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ಜುಬರೆ ನಿರೂಪಿಸಿದರು. ಅನುಭವಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ವಚನ ಗಾಯನ ಹಾಗೂ ವಚನ ಪ್ರಾರ್ಥನೆ ನಡೆಸಿಕೊಟ್ಟರು. ರಾಜ್ಯದ ಅನೇಕ ಜಿಲ್ಲೆಗಳಿಂದ ಈ ಸ್ಪರ್ಧೆಯಲ್ಲಿ ಸುಮಾರು ೧೫೦ ಸ್ಪರ್ಧಾಳುಗಳು ಭಾಗವಹಿಸಿದರು.
