(ಕೊಪ್ಪಳದಲ್ಲಿ ನಡೆಯುತ್ತಿರುವ ಪೂಜ್ಯ ಪ್ರಭುದೇವ ಸ್ವಾಮೀಜಿಯವರ ‘ಬಸವ ಭಾಷೆ ‘ಪ್ರವಚನದ ಮುಖ್ಯಾಂಶಗಳು)
16.04.2026
ಕೊಪ್ಪಳ :
ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು, ಲಿಂಗಾಯತ ಮಹಾಮಠ, ಬೀದರ
ಜನ ಗಳಿಸಿ ಕೂಡಿಡುವರು. ವಜ್ರವೈಢೂರ್ಯ ಚಿನ್ನಾಭರಣಗಳನ್ನು ಕಾಣದಂತೆ ಮುಚ್ಚಿಡುವರು. ನಿರೀಕ್ಷೆಗೂ ಮೀರಿ ಹಣದ ನೋಟುಗಳನ್ನು ಇಡಬಾರದ ಸ್ಥಲಗಳಲ್ಲಿ ಕೂಡಿಡುವರು. ರೈತ ಹಗೆಯಲ್ಲಿ ಹೇರಳವಾಗಿ ಜೋಳ ದವಸಧಾನ್ಯಗಳನ್ನು ಸಂಗ್ರಹಿಸುವನು. ಆದರೆ ಹಸಿದು ಬಂದವರಿಗೆ ಅನ್ನ ನೀಡುವುದಿಲ್ಲ. ಕಲ್ಲಿಗೆ ಹಾಲನ್ನು ಎರೆಯುತ್ತಾರೆ. ಆದರೆ ಉಣ್ಣುವ ಭಿಕ್ಷುಕ ಬಂದರೆ ಮುಂದೆ ಹೋಗೆನ್ನುವರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡದೇ ಇರುವರು.
ಬದುಕು ನೀರ ಮೇಲಿನ ಗುಳ್ಳೆಯಂತೆ, ಗಾಳಿಗಿಟ್ಟ ದೀಪದಂತೆ ಕ್ಷಣಿಕ. ಇದನ್ನರಿಯದ ಮನುಜರು ಇಂದೇನುಣ್ಣಲಿ, ನಾಳಿಗೇನುಣ್ಣಲಿ ಎಂದು ಭಕ್ಷ್ಯ ಭೋಜನಗಳ ಭೋಗದ ಮಾತುಗಳಲ್ಲಿ ವೃಥಾ ವಿಲಾಸ ವೈಭೋಗಗಳಲ್ಲಿ ಮೈಮರೆಯುತ್ತಿರುವರು. ಕಾಡ್ಗಿಚ್ಚಿನಲ್ಲಿ ಸಿಲುಕಿ ಮೈ ಸುಟ್ಟುಕೊಂಡ ನರಿ ನೋವಿನಿಂದ ಊಳಿಡುವಂತೆ, ಸಾವು ಧುತ್ತೆಂದು ಬಂದುನಿಂತಾಗ ದುಃಖಿಸುತ್ತಾ ಪಾರಾಗುವ ದಾರಿ ಹುಡುಕುತ್ತಾ ಅಲೆಯುತ್ತಾರೆ.

“ಸಮಯಕ್ಕೊದಗಿದ ಸಾಸಿವೆ ಸಾವಿರ ಹೊನ್ನಿಗಿಂತ ಶ್ರೇಷ್ಠ”, “ಸಮಯಕ್ಕಾದವರೇ ಸಂಬಂಧಿಕರು”, “ಸಮಯಕ್ಕೊದಗಿದವರು ಸತ್ತವರು ಎದ್ದಂತೆ” ಇಂತಹ ಅನೇಕ ನಾಣ್ಣುಡಿಗಳು ಜೀವನಾನುಭವದ ಹೊನ್ನುಡಿಗಳು. ಬದುಕಿನ ಅವಲೋಕನದ ಕನ್ನಡಿಗಳು.
ಜೀವನದಲ್ಲಿ ಸಮಯ ಮುಖ್ಯ ಅಂಶ. ಮರುಭೂಮಿಯಲ್ಲಿ ನಡೆದು ನಡೆದು ಬಾಯಾರಿ ಬಸವಳಿದು, ನೀರಿಗಾಗಿ, ಅಸುನೀಗುವಂತಾಗಿ, ಪರಿತಪಿಸುತ್ತಿರುವವರಿಗೆ ಯಾರಾದರೂ ಒಂದು ಲೋಟ ನೀರು ಕೊಡುವಂತಾದರೆ, ತನ್ನೆಲ್ಲ ಆಸ್ತಿ ನೀಡಲು ಸಿದ್ಧನಾಗುವನಲ್ಲವೇ ? ಆಪತ್ತಿನ ಸಮಯದಲ್ಲಿ ದೊರೆತ ಸಹಾಯಕ್ಕೆ ಮೌಲ್ಯ ಕಟ್ಟಲಾಗುವುದಿಲ್ಲ. ಆ ತಕ್ಷಣದ ಅವಶ್ಯಕತೆ ಪೂರೈಕೆಯಿಂದ ಒಬ್ಬರ ಪ್ರಾಣ ಉಳಿಯಬಹುದು.

ಬಯಸಿದೊಡವೆಗಳನು ಅಡಿಯಿಡದೀವ ಭಾಷೆ ಎಂದರೆ, ಬೇಡಿದೊಡನೆಯೆ ಈವ ಭಾಷೆಯಾಗಿದೆ. ಇದರಲ್ಲಿ ಮೂರು ಪ್ರಮುಖ ಅಂಶಗಳಿವೆ. ಒಂದನೆಯದು ಬಯಸಿದವರಿಗೆ ಆ ವಸ್ತು ತಕ್ಷಣದ ಅವಶ್ಯಕತೆಯಾಗಿದ್ದರೆ, ಮರುದಿನ ಅದು ಅವರಿಗೆ ಬೇಡವಾಗಬಹುದು. ಎರಡನೆಯದು ಕೇಳಿದಾಕ್ಷಣ ‘ಅಯ್ಯೋ ಪಾಪ ಸಹಾಯ ಮಾಡೋಣ’ ಎಂಬ ಮನಸ್ಸು, ಕಾಲ ಸರಿದಂತೆ ಬದಲಾಗಬಹುದು. ಮೂರನೆಯದು ನಾಳೆ ಕೊಡಬೇಕೆಂದರೆ ನಾಳೆ ಎಂಬುದು ನಮ್ಮ ಜೀವನದಲ್ಲಿ ಬರುವುದೋ ಇಲ್ಲವೋ. ಈ ಸತ್ಯವನ್ನರಿತ ಬಸವಣ್ಣನವರು ಬೇಡಿದಾಗ ತಡೆಯದೇ ನೀಡುವೆನೆಂಬ ಭಾಷೆ ನೀಡಿದ್ದಾರೆ.
ಶರಣರು ಪ್ರತಿಪಾದಿಸಿದ ಆಚಾರಗಳಲ್ಲಿ ಮುಖ್ಯವಾದುದು, ಸಮಯ ಏನನ್ನು ಬಯಸುವುದೋ ಅದನ್ನು ಅರ್ಪಣಾ ಭಾವದಿಂದ ತತ್ಕಾಲಕ್ಕೆ ನೀಡುವುದು. ಅಗತ್ಯವಿರುವುದನ್ನು ತಕ್ಷಣ ನೀಡುವುದು ನಿಜಾರ್ಪಣ. ಆಪತ್ತಿನಲ್ಲಾದ ಆಪದ್ಭಾಂದವರಂತೆ ಇದು ದೇವನಿಗೆ ಅರ್ಪಿತ.
