‘ಪ್ರಾಣದ ಹಂಗು ತೊರೆದು ವಚನ ಸಾಹಿತ್ಯ ಸಂರಕ್ಷಿಸಿದ ಶರಣರು’

ಬಸವ ಮೀಡಿಯಾ
ಬಸವ ಮೀಡಿಯಾ

‘ಅಕ್ಕನ ಹುಣ್ಣಿಮೆ’ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ:

12 ಶತಮಾನದಲ್ಲಿ ಸಮಾಜದಲ್ಲಿದ್ದ ಶೋಷಣೆ, ವರ್ಗಭೇದ, ಮತ್ತು ದುಡಿಯುವ ವರ್ಗದ ಮೇಲಿನ ಗುಲಾಮಗಿರಿಯನ್ನು ನಿರ್ಮೂಲನೆಗೆ ಬಸವಣ್ಣ, ಸಿದ್ದರಾಮೇಶ್ವರ, ಚನ್ನಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣರು ವಚನ ಸಾಹಿತ್ಯದ ಮೂಲಕ ಸಾಂಸ್ಕೃತಿಕ ಕ್ರಾಂತಿ ನಡೆಸಿದರು ಎಂದು ಗೋಡೇಕೆರೆ ಸಂಸ್ಥಾನ ಮಠದ ಮೃತ್ಯುಂಜಯ ಪರದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಜೋಗಿಹಳ್ಳಿಯ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ‘ಅಕ್ಕಮಹಾದೇವಿ ಮಹಿಳಾ ಸಮಾಜ’ದಿಂದ ನಡೆದ ‘ಅಕ್ಕನ ಹುಣ್ಣಿಮೆ’ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಹನ್ನೆರಡನೇ ಶತಮಾನದ ಶರಣರು ವಚನ ಸಾಹಿತ್ಯ ಮತ್ತು ವಚನ ಚಳವಳಿ ಮೂಲಕ ಸಮಾಜದ ಹಿಂದುಳಿದ ವರ್ಗಗಳು ಹಾಗೂ ಕಾಯಕಯೋಗಿಗಳಿಗೆ, ಮಹಿಳೆಯರಿಗೆ ಸಾಮಾಜಿಕ ಸ್ವಾತಂತ್ರ್ಯ ಮತ್ತು ಸಮಾನತೆ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಶರಣರ ಚಳವಳಿ ತೀವ್ರಗೊಂಡಾಗ ಕೆಲ ಕಿಡಿಗೇಡಿಗಳು ಲಕ್ಷಕ್ಕೂ ಹೆಚ್ಚು ವಚನಗಳನ್ನು ಸುಟ್ಟುಹಾಕಿದರು. ಆದರೆ ಶರಣರು ತಮ್ಮ ಪ್ರಾಣದ ಹಂಗು ತೊರೆದು ಉಳಿದ ವಚನ ಸಾಹಿತ್ಯವನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾದರು ಎಂದು ಅವರು ನುಡಿದರು.

ಬಸವಣ್ಣನವರು ಅನುಭವ ಮಂಟಪದಲ್ಲಿ ಲೌಕಿಕ ಭೋಗಗಳನ್ನು ತ್ಯಜಿಸಿದ್ದಾರೆ. ಪರಮ ವೈರಾಗ್ಯದಿಂದ ಶರಣೆಯಾದ ಅಕ್ಕಮಹಾದೇವಿಯು ಮಾನವೀಯ ಮೌಲ್ಯ ಹಾಗೂ ಬದುಕಿನ ಸಾರವಿರುವ ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಶರಣರ ಈ ಕಾಯಕ ತತ್ವವನ್ನು ಅನುಸರಿಸಿ ಗೋಡೇಕೆರೆ ಮಠದಲ್ಲಿ ಕಾಯಕ ನಿಷ್ಠೆ ಮತ್ತು ಶ್ರಮದಾನದ ಮೂಲಕ ಅಳವಡಿಸಿಕೊಳ್ಳಲಾಗಿದೆ ಎಂದರು.

ತಹಶೀಲ್ದಾರ ಮಮತಾ ಅವರು ಮಾತನಾಡಿ, ಮಹಿಳೆ ಕುಟುಂಬ ಹಾಗೂ ಸಮಾಜದಲ್ಲಿ ನಡೆಯುವ ಶೋಷಣೆಗಳಿಂದ ಹೊರಬರಲು ಮಹಿಳಾ ಸಂಘಟನೆಗಳು ಪ್ರಮುಖ ವೇದಿಕೆಗಳಾಗುತ್ತವೆ. ಮಹಿಳೆಯರು ಸ್ವಾಭಿಮಾನದಿಂದ ಬದುಕಲು ತಮ್ಮ ಕಾನೂನಾತ್ಮಕ ಹಕ್ಕುಗಳ ಅರಿವು ಮೂಡಿಸಿಕೊಳ್ಳಬೇಕು. ಅಕ್ಕಮಹಾದೇವಿಯ ಸ್ವಾಭಿಮಾನದ ವ್ಯಕ್ತಿತ್ವ ಇಂದಿನ ಸ್ತ್ರೀ ಅಸ್ತಿತ್ವಕ್ಕೆ ಗಟ್ಟಿ ಬುನಾದಿಯಾಗಿದ್ದು, ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಹೆಚ್ಚಿನ ಪ್ರೋತ್ಸಾಹ ಮತ್ತು ಅವಕಾಶಗಳು ಸಿಗಬೇಕು ಎಂದು ಹೇಳಿದರು.

ಅಹಿಂಸಾ ಮಾರ್ಗದ ಮೂಲಕ ಪರಸ್ಪರ ಗೌರವಿಸುವ ಸಮಸಮಾಜ ನಿರ್ಮಾಣಕ್ಕೆ ಶರಣರ ವಚನ ದಾರಿದೀಪವಾಗಿವೆ. ಅನ್ನದಾಸೋಹ, ಕಾಯಕ ನಿಷ್ಠೆಗೆ ಆದ್ಯತೆ ನೀಡಿದ ಶರಣರ ತತ್ವವನ್ನು ಗೋಡೇಕೆರೆ ಮಠದ ಸ್ವಾಮೀಜಿ ಪ್ರಾಯೋಗಿಕವಾಗಿ ಶ್ರಮದಾನದ ಮೂಲಕ ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಸಿ. ದಿನೇಶ ಮಾತನಾಡಿದರು.

ಅಕ್ಕಮಹಾದೇವಿ ಮಹಿಳಾ ಸಮಾಜದ ನೂತನ ಅಧ್ಯಕ್ಷೆಯಾಗಿ ಸುಮಾ ಪ್ರವೀಣ, ಕಾರ್ಯದರ್ಶಿಯಾಗಿ ಕವಿತಾ ಚನ್ನಬಸವಯ್ಯ ಪದಗ್ರಹಣ ಮಾಡಿದರು.

ಸಂಸ್ಥಾಪನಾಧ್ಯಕ್ಷೆ ಪುಷ್ಪಾ ಶಿವಣ್ಣ, ಕುಪ್ಪರು ಗದ್ದಿಗೆ ಮಠದ ಆಡಳಿತಾಧಿಕಾರಿ ವಾಗೀಶ ಪಂಡಿತಾರಾಧ್ಯ, ನಿಕಟಪೂರ್ವ ಅಧ್ಯಕ್ಷೆ ಅನುಪಮ ನಾಗರಾಜು, ಅಂಕಿತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೀಣಾ ಶಂಕರ ಮಾತನಾಡಿದರು.

ಇನ್ನರ್‌ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಭವಾನಿ ಜಯರಾಂ, ರೂಪಾಂತರ ಮಹಿಳಾ ಸಂಘದ ಅಧ್ಯಕ್ಷೆ ರೂಪಶ್ರೀ, ಮಹಿಳಾ ಸಮಾಜದ ಶಿವಗಂಗಮ್ಮ, ಅಂಬಿಕಾ, ವಿವಿಧ ಮಹಿಳಾ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *