ಹಂಜ್, ಭಟ್ಟ, ಬಿದರಿ, ಬಳಿಗಾರ ಪ್ರತಿಕೃತಿ ದಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

ಕಲಬುರಗಿ :

ನಗರದ ಜಗತ್ ವೃತ್ತದ ಬಳಿ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ‘ಬಸವ ಮಂಟಪ’ ಕೃತಿಯಲ್ಲಿ ರವಿ ಹಂಜ್, ಪ್ರಕಾಶಕ ವಿಶ್ವೇಶ್ವರ ಭಟ್ ಅವರು ವಿಶ್ವಗುರು ಬಸವಣ್ಣನವರ ಕುರಿತು ಮಾಡಿರುವ ಅವಹೇಳನಕಾರಿ ಹಾಗೂ ಆಧಾರರಹಿತ ಆರೋಪಗಳನ್ನು ಖಂಡಿಸಿ ತೀವ್ರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ರವಿ ಹಂಜ್, ಪತ್ರಕರ್ತ ವಿಶ್ವೇಶ್ವರ ಭಟ್ಟ, ಶಂಕರ್ ಬಿದರಿ ಹಾಗೂ ಮನು ಬಳಿಗಾರ ಅವರ ಪ್ರತಿಕೃತಿಗಳನ್ನು ದಹಿಸಿ ಧರಣಿ ನಿರತರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ವಿಶ್ವಗುರು ಬಸವಣ್ಣನವರದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿತ್ವವಲ್ಲ; ಅವರು ಇಡೀ ಮಾನವಕುಲಕ್ಕೆ ದಾರಿದೀಪವಾದ ಮಹಾನ್ ದಾರ್ಶನಿಕರು, ಮಹಾನ್ ವ್ಯಕ್ತಿತ್ವ. ಅಂತಹ ಮಹಾನ್ ವ್ಯಕ್ತಿತ್ವದ ಘನತೆ, ಗೌರವ ಮತ್ತು ವಿಚಾರಧಾರೆಗೆ ಮಸಿ ಬಳಿಯುವಂತಹ ಬೇಜವಾಬ್ದಾರಿಯುತ ಹಾಗೂ ಆಧಾರರಹಿತ ಬರವಣಿಗೆ ಬಸವಾಭಿಮಾನಿಗಳ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು‌ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವಗುರು ಬಸವಣ್ಣನವರ ಗೌರವ, ಘನತೆ ಮತ್ತು ತತ್ವಾದರ್ಶಗಳ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಬಸವಣ್ಣನವರ ವಿಚಾರಧಾರೆಗೆ ಅವಮಾನವಾಗುವ ಪ್ರಯತ್ನವನ್ನು ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಮಾರ್ಗದಲ್ಲಿ ಒಗ್ಗಟ್ಟಿನಿಂದ ತೀವ್ರವಾಗಿ ವಿರೋಧಿಸಲಾಗುವುದು ಎಂದು ತಿಳಿಸಿದರು.

ಅಖಿಲ‌ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಮೋದಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ, ಬಸವಪರ ಸಂಘಟನೆಗಳ ಒಕ್ಕೂಟದ ರವೀಂದ್ರ ಶಾಬಾದಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.‌ ಕಿರಣ ದೇಶಮುಖ, ಬಿಜೆಪಿ ಜಿಲ್ಲಾಧ್ಯಕ್ಷ ಚಂದು ಪಾಟೀಲ, ಶಾಸಕ ಅಲ್ಲಮಪ್ರಭು ಪಾಟೀಲ, ಬಿ.ಜಿ.‌ ಪಾಟೀಲ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ, ಅರುಣಕುಮಾರ ಪಾಟೀಲ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *