ಯುವ ಸಮೂಹಕ್ಕೆ ವಚನ ಸಾಹಿತ್ಯ ತಲುಪಿಸಿ: ಅಲ್ಲಮಪ್ರಭು ನಾವದಗೆರೆ

ಶೂನ್ಯ ಲಿಂಗ ವಿವೇಚನೆ ಭಾಗ-5 ಕೃತಿ ಬಿಡುಗಡೆ

ಕಲಬುರಗಿ:

ಕಾಯಕದಿಂದ ಉತ್ಪಾದನೆ ಮಾಡಿ ಎಲ್ಲ ಕಡೆ ವಿತರಣೆ ಮಾಡುವ ಶರಣ ಸಂಸ್ಕೃತಿ ಬಿತ್ತುವ, ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದು ಬೀದರ ವಚನ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೆಶಕ ಅಲ್ಲಮಪ್ರಭು ನಾವದಗೆರೆ ತಿಳಿಸಿದರು.

ಶಹಾಬಾದ ಬಸವ ಸಮಿತಿ (ಅಲ್ ಸ್ಟಾಮ್ ಕಾಲೋನಿ) ವತಿಯಿಂದ ಭಂಕೂರಿನ ಶಾಂತನಗರ ಬಸವ‌ ಮಂಟಪದಲ್ಲಿ ಸೋಮವಾರ ನಡೆದ ಬಸವರಾಜ ವೆಂಕಟಾಪುರ ಶರಣರು ರಚಿಸಿದ ಶೂನ್ಯಲಿಂಗ ವಿವೇಚನೆ (ಫ.ಗು. ಹಳಕಟ್ಟಿ ಸಂಪಾದಿತ ವಚನಶಾಸ್ತ್ರ ಸಾರ ಭಾಗ-೧ರ ವಚನ ವಿವೇಚನೆ ಭಾಗ-೫) ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯುವ ಸಮೂಹಕ್ಕೆ ವಚನ ಸಾಹಿತ್ಯದ ಪರಿಚಯ ಮಾಡಿಕೊಡಬೇಕಾಗಿದೆ ಎಂದರು.

ಪುಸ್ತಕ ಕುರಿತು ಶರಣ ಚಿಂತಕ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ವಚನಶಾಸ್ತ್ರ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಪಾದಿತ ವಚನ ಶಾಸ್ತ್ರ ಸಾರದ ಮೊದನೆ ಸಂಪುಟದ ಇಲ್ಲಿನ ವಚನ ವಿಶ್ಲೇಷಣೆ ಆನುಭಾವಿಕ ನೆಲೆಯಲ್ಲಿ ಶಬ್ದಾರ್ಥ ಸಹಿತವಾಗಿ, ಸರಳ ಭಾಷೆಯಲ್ಲಿ, ಎಲ್ಲರಿಗೂ ಅರ್ಥವಾಗುವ ಹಾಗೆ ವಚನ ವ್ಯಾಖ್ಯಾನ ಮಾಡಿದ್ದಾರೆ.

ವಚನ ವ್ಯಾಖ್ಯಾನ ಮಾಡುವುದು ಸಾಮಾನ್ಯ ಕಾರ್ಯವಲ್ಲ. ವಚನಗಳ ಆಂತರ್ಯದ, ಒಳಾರ್ಥ ಗ್ರಹಿಸಲು ನಿರಂತರ ಅಧ್ಯಯನ ಅನುಭಾವ ಬೇಕು. ಶೂನ್ಯ ಲಿಂಗ ವಿವೇಚನೆಯ ನಾಲ್ಕು ಭಾಗಗಳನ್ನು ಓದುಗರಿಗೆ ನೀಡಿರುವ ಬಸವರಾಜ ವೆಂಕಟಾಪುರ ಶರಣರ ಈ ಕೃತಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಮಹತ್ವದ ಕೃತಿ ಎಂದರು.

ಪುಸ್ತಕ ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಚನಗಳು ಬದುಕಿಗೆ ಬೆಳಕು ನೀಡಬಲ್ಲವು. ಹಣದಿಂದ ಶ್ರೀಮಂತರಾಗುವುದಕ್ಕಿಂತ ಹೃದಯ ಶ್ರೀಮಂತಿಕೆ ಹೇಳಿಕೊಡುವ ವಚನಗಳು ಬದುಕಿನ ದಾರಿದೀಪಗಳಾಗಿವೆ. ಕಲುಷಿತಗೊಂಡಿರುವ ಇಂದಿನ ವಾತಾವರಣಕ್ಕೆ ಹೃದಯವಂತರ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.‌

ಅಧ್ಯಕ್ಷತೆ ವಹಿಸಿದ್ದ ಭಂಕೂರ ಬಸವ ಸಮಿತಿ ಅಧ್ಯಕ್ಷ ಅಶೋಕ ವಿ. ಘೂಳಿ ಮಾತನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ವೇದಿಕೆ ಮೇಲ್ಲಿದ್ದರು.

ರಾಜೋಳ ಬಸವ ಭಾರತಿ ಯೋಗಧಾಮದ ಲೋಕೇಶ ಗುರೂಜಿ, ಬಸವರಾಜ ವೆಂಕಟಾಪುರ ಶರಣರು ಸಾನಿಧ್ಯ ವಹಿಸಿದ್ದರು.‌

ಪಂಪಾಪತಿ ಮೇಟಿ ನಿರೂಪಿಸಿದರು. ಬಸವ ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನ ಎಸ್. ಪದ್ಮಾಜಿ ಸ್ವಾಗತಿಸಿದರು. ಎಚ್.ಬಿ. ತೀರ್ಥೆ ಶರಣು ಸಮರ್ಪಿಸಿದರು.

ರೇವಣಸಿದ್ದಪ್ಪ ಮುಸ್ತಾರಿ, ಕಂಟೆಪ್ಪ ಬಿರಾದಾರ, ಶಿವಪುತ್ರ ಕುಂಬಾರ, ಅಮೃತ ಮಾನಕರ, ಶಿವಶರಣಪ್ಪ ಜಟ್ಟೂರಕರ, ಗುರುಲಿಂಗಪ್ಪ ಪಾಟೀಲ ಇತರರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *