ಬಸವ ಭಾಷೆ : ‘ಹರಭಕ್ತರನು ಉದಾಸೀನದಿ ನುಡಿಯದಿಹ ಭಾಷೆ’

(ಕೊಪ್ಪಳದಲ್ಲಿ ನಡೆಯುತ್ತಿರುವ ಪೂಜ್ಯ ಪ್ರಭುದೇವ ಸ್ವಾಮೀಜಿಯವರ ‘ಬಸವ ಭಾಷೆ ‘ಪ್ರವಚನದ ಮುಖ್ಯಾಂಶಗಳು)

ಕೊಪ್ಪಳ :

13.04.2026

ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು, ಲಿಂಗಾಯತ ಮಹಾಮಠ, ಬೀದರ

ಉದಾಸೀನ ಎಂದರೆ ಅಲಕ್ಷಿಸುವುದು, ನಯವಾದ ತಿರಸ್ಕಾರ ಅಥವಾ ಕಡೆಗಣಿಸುವಿಕೆ. ಈ ವರ್ತನೆಯ ಪರಿಣಾಮ ಮೇಲ್ನೋಟಕ್ಕೆ ಕಂಡುಬರದು. ಆದರೆ ಉದಾಸೀನತೆಗೊಳಪಟ್ಟವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ.

ನೀವಿದ್ದರೆ ಲಾಭವಿಲ್ಲ ಇಲ್ಲದಿದ್ದರೆ ಹಾನಿಯಿಲ್ಲ ಎಂಬ ಉದಾಸೀನ ಭಾವದಂಥ ನೋವು ಮತ್ತೊಂದಿಲ್ಲ. ಉದಾಸೀನ ದೀರ್ಘಕಾಲ ಮುಂದುವರಿದರೆ ವ್ಯಕ್ತಿಯ ಜೀವನದ ಮೇಲೆ ಗಂಭೀರವಾದ ದುಷ್ಪರಿಣಾಮಗಳನ್ನು ಬೀರುತ್ತದೆ. ಅಜ್ಞಾನ ಆವರಿಸುತ್ತದೆ. ಜೀವನದಲ್ಲಿ ನಿರಾಸಕ್ತಿ ಉಂಟಾಗುವುದು. ಸ್ವತಃ ಏನು ಮಾಡಬೇಕು ಎಂದು ದಿಕ್ಕು ತೋಚದ ಸ್ಥಿತಿ ಬರುತ್ತದೆ. ಸದಾ ಆಲಸ್ಯ ಆವರಿಸುತ್ತದೆ. ಮಾನಸಿಕ ಒತ್ತಡ, ಅಪರಾಧ ಪ್ರಜ್ಞೆ ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಎಲ್ಲಿಯೇ ಆಗಲಿ, ಯಾರಿಂದಲೇ ಆಗಲಿ ಅಪಮಾನ ಅಥವಾ ಅಲಕ್ಷ್ಯವಾದರೆ ಅಸಹನೀಯವಾಗುತ್ತದೆ. ಕರುಳು ಕಿವುಚಿದಂತಾಗುತ್ತದೆ.

ಕಲ್ಲು ಮಣ್ಣಿನ ಮೂರ್ತಿಗಳಲ್ಲಿ ದೇವರನ್ನು ಕಾಣಬಯಸಿ, ಉಣಿಸಿ-ತಿನಿಸಿ ಒಲಿಸುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿರುವ ಮಾನವ, ತನ್ನೆದುರಿಗೆ ಹಸಿದು ಬಂದು ತುತ್ತನ್ನಕ್ಕಾಗಿ ಬಾಯ್ದಿಡುವ ದೀನರು, ಅಂಗವಿಕರಲನ್ನು ಉದಾಸೀನ ಮಾಡಿ ಮುಂದೆ ನಡೆಯುತ್ತಾನೆ. ಇದು ಶರಣರಿಗೆ ಒಪ್ಪಿತವಾಗದು.

ಉದಾಸೀನ ಮಾಡುವಂಥವರು ಎಷ್ಟೇ ಪೂಜೆ ಅನುಭಾವ ಮಾಡಿದರೂ ವ್ಯರ್ಥ. ಅವರ ಶ್ರಮ ಕರಿಯ ಇದ್ದಿಲನ್ನು ತಿಕ್ಕಿ ತೊಳೆದು-ಬಿಳಿದಾಗಿಸುವೆನೆಂದಂತೆ. ತಿಕ್ಕಿದಷ್ಟು ಕಪ್ಪು ಹೊಳೆಯ ತೊಡಗುವುದೇ ವಿನಃ ಬೆಳ್ಳಗಾಗದು. ಸರ್ವರೂ ದೇವರ ಅಂಶವೆಂಬ ಭಾವ ಬಲಿಯದ ಹೊರತು, ಮೇಲು-ಕೀಳು, ಬಡವ-ಸಿರಿವಂತ ಪಂಡಿತ-ಪಾಮರ ಸ್ತ್ರೀ-ಪುರುಷ, ಸುಂದರ-ಕುರೂಪಿ ಎಂಬ ಭಾವ ದೂರಾಗದು. ಪರಸ್ಪರ ಹೀಗಳೆಯುವ, ಉದಾಸೀನಗೈಯುವ ಪ್ರವೃತ್ತಿ ತಾನೇ ಶ್ರೇಷ್ಠವೆಂಬ ಅಹಂಕಾರದಿಂದಲೇ ಘಟಿಸುತ್ತದೆ.

ಇನ್ನು ಕೆಲವರಂತೂ ಮುತ್ತಿನ ಸತ್ತಿಗೆಯವರ ಕಂಡರೆ ಅಡ್ಡಬೀಳುವ, ಬಡಭಕ್ತರು ಬಂದರೆ ಅತ್ತ ಸನ್ನಿಯೆಂಬ ಅಸಡ್ಡೆ ಮನೋಭಾವ ಹೊಂದಿರುತ್ತಾರೆ. ಇಂತಹ ಭೇದ ಮಾಡುವವರನ್ನು ಕಂಡು ಬಸವಣ್ಣನವರು ಕೆಂಡವಾಗುತ್ತಾರೆ.

ಉದಾಸೀನಕ್ಕೆ ಒಳಗಾದವರಿಗೆ ಒಂದೆರಡು ಪ್ರೀತಿಯ ಮಾತುಗಳು ಅವರನ್ನು ಸಂತೋಷದಲ್ಲಿ ಇಡಬಲ್ಲವು. ಎಲ್ಲಿಯೇ ಆಗಲಿ ನಮ್ಮನ್ನು ಗಮನಿಸುವವರಿದ್ದಾರೆ ಎಂಬ ಭಾವವೇ ಸಂತಸ ತರುತ್ತದೆ. ಸುಖ ಸೌಲಭ್ಯಗಳಿಗಿಂತ ಅವರ ಅಸ್ತಿತ್ವವನ್ನು ಗೌರವಿಸುವುದನ್ನು ನಿರೀಕ್ಷಿಸುತ್ತಾರೆ. ವಿಶ್ವದಲ್ಲಿಯ ಪ್ರತಿಯೊಂದು ಜೀವಿ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸಲು ಬಯಸುತ್ತದೆ. ಎಲ್ಲರ ಗಮನ ತನ್ನತ್ತ ಸೆಳೆಯುಲಿಚ್ಛಿಸುತ್ತದೆ.

ಬಸವಣ್ಣನವರ ದೃಷ್ಟಿ ಬಹು ಸೂಕ್ಷ್ಮ. ಪ್ರತಿಯೊಬ್ಬರ ಭಾವನೆಯನ್ನು ಗೌರವಿಸಬೇಕೆಂದು ಅವರು ಹೇಳವುದಷ್ಟೇ ಅಲ್ಲ, ನಡೆದು ತೋರಿದರು.

ಕೇವಲ ಮಾನವರಷ್ಟೇ, ಅಲ್ಲ ಸಕಲ ಜೀವರಾಶಿಗಳ ಅಸ್ತಿತ್ವವನ್ನು ಗೌರವಿಸುವ ಹೃದಯ ವೈಶಾಲ್ಯ ಬಸವಣ್ಣನವರದ್ದಾಗಿತ್ತು.

‘ಉದಾಸೀನ’ ಪದ ಅವರ ಹತ್ತಿರ ಸುಳಿಯುತ್ತಿರಲಿಲ್ಲ.

ಬಸವಣ್ಣನವರು ಪ್ರತಿಯೊಬ್ಬರ ಸಾಮರ್ಥ್ಯವನ್ನು ಗುರುತಿಸಿ, ಆದರಿಸುವುದರಿಂದಾಗಿ, ವಿದೇಶ, ದೇಶಾದ್ಯಂತ, ರಾಜ್ಯಾದ್ಯಂತ ನಾಡಿನ ಎಲ್ಲೆಡೆಯ ಸಾಧಕರು ಕಲ್ಯಾಣದತ್ತ ಗುಣಗ್ರಾಹಿಕತ್ವದಿಂದಲೇ ಆಕರ್ಷಿತರಾದರು.

ಭೂಮಿಯ ಗುರುತ್ವಾಕರ್ಷಣೆ ವಲಯದಲ್ಲಿ ಒಳಪಡುವ ವಸ್ತುಗಳೆಲ್ಲ ಭೂಮಿಯತ್ತ ಬರುವಂತೆ, ದಿಕ್ಕು ದಿಕ್ಕಿನಿಂದ ಜನಸಮೂಹ ಕಲ್ಯಾಣದ ಅನುಭವ ಮಂಟಪಕ್ಕೆ ಹರಿದು ಬಂತು. ಸಮಾಜದ ಅತ್ಯಂತ ಕೆಳಸ್ತರದಲ್ಲಿದ್ದವರೂ ಬಸವ ಸಮಾನ ಗೌರವಾದರಗಳನ್ನು ಪಡೆದು ಮಹಾಮಾನವತಾವಾದಿಯಾದರು.

ಬಸವತತ್ತ್ವದ ಪ್ರಕಾರ ಈ ಜಗತ್ತೆಲ್ಲವೂ ದೇವಮಯ. ಇಲ್ಲಿ ಯಾವುದೂ ಕೆಟ್ಟದ್ದಿಲ್ಲ. ಯಾರೂ ಕೆಟ್ಟವರಿಲ್ಲ. ಮೊದಲು ನಮ್ಮ ದೃಷ್ಟಿ ಬದಲಾದರೆ, ಸೃಷ್ಟಿಯೆಲ್ಲವೂ ದೇವಮಯ. ದೇವದೃಷ್ಟಿಯಿಂದಲೇ ಗುರುದೇವರಿಗೆ ಕಳ್ಳನಲ್ಲಿ, ಕೊಲೆಗಡುಕನಲ್ಲಿಯೂ ಕೂಡಾ ದೇವನನ್ನು ಕಾಣಲು ಸಾಧ್ಯವಾಯಿತು.

ಅವರ ಈ ಅಸಾಮಾನ್ಯ ದೃಷ್ಟಿ, ಕಳ್ಳ-ಕೊಲೆಗಡುಕರ ಕ್ರೂರತನ ದೂರವಾಗಿಸಿ, ಪರಿವರ್ತನೆಗೈದಿತು. ಅವರಲ್ಲಿರುವ ದಯೆ ಶಾಂತಿ ಪ್ರೀತಿಗಳನ್ನು ಬಡಿದೆಬ್ಬಿಸಿತು. ಕಳ್ಳ ಕೊಲೆಗಡುಕರು ಶರಣರಾಗಿ ಉನ್ನತದ ಬದುಕು ಬಾಳುವಂತೆ ಮಾಡಿತು. ಬಸವಾದಿ ಶರಣರು ಉದಾಸೀನ ಬದುಕನ್ನು ಅಲ್ಗಳೆದು, ಇಡೀ ವಿಶ್ವವನ್ನೇ ದೇವಮಯವಾಗಿ ಕಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *