ಬಿಜೆಪಿಗೆ ಸಮಸ್ಯೆಯಾಗಿರುವ ನಾಯಕರು
ಬೆಂಗಳೂರು
ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕಕ್ಕೆ ಯಡಿಯೂರಪ್ಪ ಪ್ರೀತಿಯ ಪುತ್ರ ಬಿ. ವೈ. ವಿಜಯೇಂದ್ರ ಮತ್ತು ಖಾಯಂ ಬಂಡುಕೋರ ರಾಜಕಾರಣಿ ಬಸನಗೌಡ ಪಾಟೀಲ್ ಯತ್ನಾಳ್ ಅತ್ಯಂತ ಭಾರದ ವಸ್ತುಗಳಾಗಿ ಪರಿಣಮಿಸಿದ್ದಾರೆ. ಕರ್ನಾಟಕದ ಬಿಜೆಪಿ ಎಂಬ ಮುಳುಗುವ ಹಡುಗನ್ನು ಸಂಪೂರ್ಣ ಮುಳುಗಿಸಿಯೇ ವಿರಮಿಸುತ್ತಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿ. ವೈ. ವಿಜಯೇಂದ್ರ -ಇಬ್ಬರಲ್ಲಿ ಕೆಲವು ಸಾಮ್ಯ ಗುಣಗಳಿವೆ. ಇಬ್ಬರೂ ಪರಮ ಸ್ವಾರ್ಥಿಗಳು. ಇಬ್ಬರಿಗೂ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿದೆ. ಯತ್ನಾಳ್ ಅತಿ ವಾಚಾಳಿ, ವಿಜಯೇಂದ್ರ ಗುಮ್ಮನಗುಸುಕ.
ಯತ್ನಾಳ್ ಸೂತ್ರದ ಬೊಂಬೆ
ಇಬ್ಬರಿಗೂ ಪಕ್ಷದಲ್ಲಿನ ಇನ್ನಿತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಗುಣಗಳಿಲ್ಲ. ಎಲ್ಲಕ್ಕೂ ಮೀರಿ ಇಬ್ಬರಿಗೂ ಸ್ವಂತ ಬುದ್ದಿಯಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಸೂತ್ರದ ಬೊಂಬೆ ಇದ್ದಂತೆ. ಆಡಿಸುವಾತನ ಕೈಚಳಕ ಯತ್ನಾಳ್ ನಡೆ ನುಡಿಯನ್ನು ನಿರ್ಧರಿಸುತ್ತದೆ. ಬಸನಗೌಡ ಯತ್ನಾಳ್ ಅವರನ್ನು ಮನಸೋ ಇಚ್ಛೆ ಆಡಿಸುವಾತ ಯಾರು ಎಂಬುದು ಸಮಸ್ತ ಕನ್ನಡಿಗರಿಗೆ ಗೊತ್ತಿರುವ ಸಂಗತಿ.
ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕರ್ನಾಟಕ ರಾಜ್ಯದ ಅಭಿವೃದ್ಧಿಯ ಕನಸುಗಳಿಲ್ಲ. ಅಷ್ಟೆ ಯಾಕೆ ಬಿಜಾಪುರ ಜಿಲ್ಲೆಯ ಕುರಿತು ಕನಿಷ್ಠ ಜ್ಞಾನ ಇಲ್ಲ. ಬಸನಗೌಡ ಯತ್ನಾಳ್ ಇಲ್ಲಿಯವರೆಗೂ ಒಮ್ಮೆಯಾದರೂ ಕರ್ನಾಟಕದ ನೀರಾವರಿ, ಕೃಷಿ, ಕೈಗಾರಿಕೆ, ನಿರುದ್ಯೋಗ, ಶಾಲಾ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸಮಸ್ಯೆಗಳ ಕುರಿತು ಪ್ರಬುದ್ಧವಾಗಿ ಮಾತನಾಡಿದ ನಿದರ್ಶನ ದೊರೆಯುವುದಿಲ್ಲ.
ಸಿದ್ದರಾಮಯ್ಯ ಅವರು ಮಂಡಿಸುವ ಆಯವ್ಯಯದ ಮೇಲೆ ಬಸನಗೌಡ ಯತ್ನಾಳ್ ಅರ್ಥಪೂರ್ಣವಾಗಿ ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೆ ಒಮ್ಮೆಯಾದರೂ ಮಾತನಾಡಿದ್ದಾರೆಯೇ. ಸಿದ್ದರಾಮಯ್ಯ ಅವರು ಎಲ್ಲವನ್ನೂ ಅಂಕಿ ಸಂಖ್ಯೆ ಜೊತೆಗೆ ಸಮರ್ಥಿಸಿಕೊಳ್ಳುತ್ತಾರೆ. ಅವರ ವಾದಕ್ಕೆ ಸಮರ್ಪಕ ಉತ್ತರ ಕೊಡುವ ಯೋಗ್ಯತೆ ಬಸನಗೌಡ ಮತ್ತು ವಿಜಯೇಂದ್ರ ಇಲ್ಲಿಯವರೆಗೂ ರೂಢಿಸಿಕೊಂಡಿಲ್ಲ. ವಿಜಯೇಂದ್ರ ಅತ್ಯುತ್ತಮ ಪುಸ್ತಕಗಳನ್ನು ಓದುವುದು ಒತ್ತಟ್ಟಿಗಿರಲಿ ದಿನಪತ್ರಿಕೆಗಳನ್ನು ಅತ್ಯಂತ ಶ್ರದ್ದೆಯಿಂದ ಓದಿ ತಿಳಿದುಕೊಳ್ಳುತ್ತಾರೆಂದು ಅನಿಸುವುದಿಲ್ಲ.
ತಂದೆಗೆ ತಕ್ಕ ಮಗ?
ವಿಜಯೇಂದ್ರ ಅವರಿಗೆ ತಂದೆಯ ಮಾರ್ಗದರ್ಶನ ಬಿಟ್ಟು ಬೇರೆ ತರಬೇತಿಯೇ ಇಲ್ಲ. ಅಪ್ಪ ಯಡಿಯೂರಪ್ಪ ನಡೆದುಬಂದ ದಾರಿಯನ್ನು ಅನುಸರಿಸಿದರೂ ವಿಜಯೇಂದ್ರ ಯಶಸ್ವಿ ರಾಜಕಾರಣಿಯಗುತ್ತಿದ್ದರು.
ವಿಜಯೇಂದ್ರ ಯಡಿಯೂರಪ್ಪ ಅವರ ಹೆಸರು ಮತ್ತು ಕೆಲವು ಸಲಹೆಗಳನ್ನು ಮಾತ್ರ ಬಳಸಿಕೊಳ್ಳುತ್ತಿರುವುದರಿಂದ ಜನನಾಯಕನಾಗಿ ರೂಪುಗೊಳ್ಳಲು ಸಾಧ್ಯವಾಗುತ್ತಿಲ್ಲ.
ಬಸನಗೌಡ ಪಾಟೀಲ್ ಯತ್ನಾಳ್ ತನ್ನಷ್ಟಕ್ಕೆ ಮಾಸ್ ಲೀಡರ್ ಎಂಬ ಭ್ರಮೆಯಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸನಗೌಡ ಯತ್ನಾಳ್ ಮತ್ತು ಕಿಚ್ಚ ಸುದೀಪ್ ಸಭೆಗಳಿಗೆ ಮಾತ್ರ ಹೆಚ್ಚು ಜನ ಸೇರುತ್ತಿದ್ದರು. ಆದರೆ ಕಿಚ್ಚ ಸುದೀಪ್ ಮತ್ತು ಬಸನಗೌಡ ಯತ್ನಾಳ್ ಸಭೆ ನಡೆಸಿದ ಮತಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ.
ಇದರರ್ಥ, ಕಿಚ್ಚ ಸುದೀಪ್ ಮತ್ತು ಬಸನಗೌಡ ಯತ್ನಾಳ್ ಅವರಿಗೆ ಜನರನ್ನು ಆಕರ್ಷಿಸುವ ಶಕ್ತಿ ಇದೆಯೇ ಹೊರತು ಮತ ಸೆಳೆಯುವ ವಿಶ್ವಾಸಾರ್ಹ ವ್ಯಕ್ತಿತ್ವ ಇಲ್ಲ. ಕಿಚ್ಚ ಸುದೀಪ್ ಅವರನ್ನು ಒಬ್ಬ ಜನಪ್ರಿಯ ನಟನೆಂದು, ಬಸನಗೌಡ ಯತ್ನಾಳ್ ಅವರನ್ನು ಕಾಮಿಡಿ ಪೀಸ್ ಎಂದು ಭಾವಿಸಿ ಅವರ ಸಭೆಗಳಿಗೆ ಜಮಾಯಿಸುತ್ತಾರೆ.
ಆದರೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನಾಕರ್ಷಣೆ ಇದೆ. ಜೊತೆಗೆ ಮತಗಳನ್ನು ಸೆಳೆಯುವ ಸಾಮರ್ಥ್ಯ ಇದೆ. ಆ ಕಾರಣಕ್ಕೆ ಅವರು ಪಕ್ಷಗಳಿಗೆ ಅನಿವಾರ್ಯ ಆಗುತ್ತಾರೆ.
ಇನ್ನೂ ವಿಜಯೇಂದ್ರ ಅವರಿಗೆ ಯುವಕರು ಸೇರಿದಂತೆ ಯಾರನ್ನೂ ಆಕರ್ಷಿಸುವ ಚಾರ್ಮ ಇಲ್ಲ. ಮತಗಳನ್ನು ಸೆಳೆಯುವುದು ದೂರದ ಮಾತು. ಅದಕ್ಕೆ ಕಾರಣ ವಿಜಯೇಂದ್ರ ಜೊತೆಗೆ ಇರುವ ಹಿಂಬಾಲಕರು. ದುಷ್ಟ ಹಿಂಬಾಲಕರನ್ನು ಇಟ್ಟುಕೊಂಡರೆ ಪಕ್ಷದ ನಾಯಕರು ಮತ್ತು ಸಾಮಾನ್ಯ ಕಾರ್ಯಕರ್ತ ಕೂಡಾ ಹತ್ತಿರ ಸುಳಿಯುವುದಿಲ್ಲ.
ನೀವು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆಗೆ ಮಾತನಾಡಿ ವಿಜಯೇಂದ್ರ ಹೇಗೆ ಎಂದು ವಿಚಾರಿಸಿದರೆ “ತಂಮೇಶ ಗೌಡನಂಥವರು ಅಲ್ಲಿರುವಾಗ ನಾವು ಹೋಗಾಕೆ ಆಗ್ತದೆಯೇ” ಎಂದು ವ್ಯಂಗವಾಗಿ ಮಾತನಾಡುತ್ತಾರೆ. ವಿಜಯೇಂದ್ರ ಜೊತೆಗೆ ಬಿಜೆಪಿಯ ಹಿರಿಯ ಲಿಂಗಾಯತ ನಾಯಕರು ಯಾರೂ ಇಲ್ಲ. ತಲೆ ಮೇಲಿನ ಮಾಸ ಆರದ ಉಡಾಳರೆ ಸುತ್ತುವರೆದಿರುತ್ತಾರೆ. ಕರ್ನಾಟಕದ ಸಮಸ್ತ ಲಿಂಗಾಯತ ಸಮುದಾಯ ವಿಜಯೇಂದ್ರನನ್ನು ಇವ ನಮ್ಮವ ಎಂದು ಭಾವನಾತ್ಮಕವಾಗಿ ಅಪ್ಪಿಕೊಂಡಿಯೇ ಇಲ್ಲ. ವೀರಶೈವ ಲಿಂಗಾಯತ ಸಂಘಟನೆಯ ಮುಖಂಡರು ಪಕ್ಷಾತೀತವಾಗಿ ಸಂಸದ ಬಿ. ವೈ. ರಾಘವೇಂದ್ರನನ್ನು ಇವ ನಮ್ಮವ ಎಂದು ಅಭಿಮಾನದಿಂದ ಒಪ್ಪಿಕೊಳ್ಳುತ್ತಾರೆ. ಆದರೆ ವಿಜಯೇಂದ್ರ ಹೆಸರು ಹೇಳಿದರೆ ಮೂಗು ಮುರಿಯುತ್ತಾರೆ.
