ಬಸವನಬಾಗೇವಾಡಿ
ಸಮಾಜ ಸುಧಾರಕ, ದಾರ್ಶನಿಕ, ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಏಪ್ರಿಲ್ 20ರಂದು ನಾಡಿನಲ್ಲಿ ಆಚರಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಸವೇಶ್ವರರು ಜನ್ಮಸ್ಥಳ ಬಸವನಬಾಗೇವಾಡಿ ಪಟ್ಟಣದಲ್ಲಿ ಬಸವ ಜಯಂತಿ ಆಚರಣೆಗೆ ಕ್ಷಣಗಣನೆ ಶುರುವಾಗಿದೆ.
ಕಳೆದ ಕೆಲದಿನಗಳಿಂದ ಬಸವ ಜನ್ಮಸ್ಮಾರಕ, ಬಸವೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿರುವುದು ಕಂಡುಬಂತು. ಬಸವೇಶ್ವರ ದೇವಸ್ಥಾನ, ಬಸವ ಜನ್ಮಸ್ಮಾರಕ ಸೇರಿದಂತೆ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಯ ಸುತ್ತ ವಿದ್ಯುದ್ದೀಪದ ಅಲಂಕಾರ ಮಾಡಲಾಗಿದೆ.

ಬಸವ ಜನಿಸಿದ ಬಸವನಬಾಗೇವಾಡಿ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂದು ಬಹುವರ್ಷಗಳಿಂದ ಬಸವ ಭಕ್ತರ ಬೇಡಿಕೆಗೆ ಸ್ಪಂದಿಸಿ ಹಾಗೂ ಸಚಿವ ಶಿವಾನಂದ ಪಾಟೀಲ ಅವರ ಇಚ್ಛಾಶಕ್ತಿ ಮೇರೆಗೆ ಸರ್ಕಾರ ಬಸವ ಜನಿಸಿದ ಬಸವನಬಾಗೇವಾಡಿ ಸೇರಿದಂತೆ ವಿವಿಧ ಶರಣರ ಕ್ಷೇತ್ರಗಳ ಅಭಿವೃದ್ಧಿಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿ ಅಸ್ತಿತ್ವಕ್ಕೆ ಬಂದಿದೆ. ಕಳೆದ ವರ್ಷದ ಬಸವ ಜಯಂತಿಯ ಆಚರಣೆ ಮುನ್ನವೇ ಪ್ರತ್ಯೇಕ ಪ್ರಾಧಿಕಾರ ರಚನೆಯಾಗಿತ್ತು. ಈ ವರ್ಷದ ರಾಜ್ಯದ ಬಜೆಟ್ನಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡುವ ಆಶಾಭಾವನೆಯನ್ನು ಬಸವಭಕ್ತರು ಹೊಂದಿದ್ದರು. ಸಿಎಂ ಅವರು ಯಾವುದೇ ಅನುದಾನ ನೀಡದೇ ಇರುವುದು ನಿರಾಶೆಯಾಗಿದೆ. ಮುಂದಿನ ದಿನಗಳಲ್ಲಿಯಾದರೂ ಪ್ರಾಧಿಕಾರಕ್ಕೆ ವಿಶೇಷ ಅನುದಾನ ಸರ್ಕಾರ ನೀಡುವಂತಾಗಲೆಂದು ಬಸವ ಭಕ್ತರು ಆಶಯ ಹೊಂದಿದ್ದಾರೆ.
ಬಸವ ಜಯಂತಿ ಅಂಗವಾಗಿ ಏಪ್ರಿಲ್ 18 ರಿಂದ 20ರವರೆಗೆ ಮೂರು ದಿನಗಳ ಕಾಲ ಉಪನ್ಯಾಸ, ವಚನ ಸಂಗೀತ, ರೂಪಕ ಕಾರ್ಯಕ್ರಮವನ್ನು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಆಯೋಜನೆ ಮಾಡಿದೆ. ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮ ಈ ನೆಲದಲ್ಲಿ ನಡೆಯಬೇಕೆಂಬುವುದು ಬಸವ ಭಕ್ತರ ಬಹು ವರ್ಷಗಳ ಬೇಡಿಕೆಯಿದ್ದರೂ ಅದು ಸಾಕಾರಗೊಂಡಿಲ್ಲ. ಸರ್ಕಾರ ಇದರ ಕಡೆಗೆ ಗಮನ ಹರಿಸಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಬೇಕಿದೆ.
