ಬಸವ ಭಾಷೆ : ‘ಪರವಧುವನು ಮಹಾದೇವಿಯೆಂಬ ಭಾಷೆ’

ಕೊಪ್ಪಳ

ಪ್ರವಚನ
ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು,
ಲಿಂಗಾಯತ ಮಹಾಮಠ, ಬೀದರ

ದಿನಾಂಕ 18.04.2026

ಸಮಾಜದ ಹಿತದೃಷ್ಟಿಯಿಂದ ಮಹಿಳೆಯರ ಗೌರವದ ದೃಷ್ಟಿಯಿಂದ ಬಸವಣ್ಣನವರ “ಪರವಧುವನು ಮಹಾದೇವಿಯೆಂಬ ಭಾಷೆ” ಬಹು ಮಹತ್ವದ್ದು. 12 ನೇ ಶತಮಾನದಲ್ಲಿ ಸಮಾಜದ ಅರ್ಧಭಾಗವಾದ ಮಹಿಳೆಯರನ್ನು ಸೂಕ್ತವಾಗಿ ಗೌರವಿಸಿ ಮುಖ್ಯವಾಹಿನಿಗೆ ತರುವುದು ಈ ಭಾಷೆಯಿಂದ ಸಾಧ್ಯವಾಯಿತು.

ಆದಿ ಕಾಲದಿಂದಲೂ ಸ್ತ್ರೀಯರನ್ನು ಹತ್ತಿಕ್ಕುವ ಪ್ರಯತ್ನಗಳು ನಿರಂತರವಾಗಿವೆ. ತತ್ಪಲವಾಗಿಯೇ ಆಕೆ ವಿದ್ಯೆ, ಅಧಿಕಾರ, ಸ್ವತಂತ್ರತೆ, ಸಮಾನತೆಗಳಿಂದ ವಂಚಿತಳಾದಳು. ಸ್ತ್ರೀಯನ್ನು ಕೇವಲ ಭೋಗದ ವಸ್ತುವಾಗಿ ಕಂಡರು. ಕವಿಗಳು ಆಕೆಯನ್ನು ಕಾವ್ಯದ ವಿಷಯವಾಗಿಸಿದರು. ಪುರಾತನ ಚರಿತ್ರೆಯಲ್ಲೆಲ್ಲ ಅವಳ ಶೋಷಣೆಯಾಯಿತು. ಅವಳನ್ನು ಶೂದ್ರವರ್ಗಕ್ಕೆ ಸೇರಿಸಿದ್ದವು. ದೇವರನ್ನು ಪೂಜಿಸುವ ಹಕ್ಕು ಅವಳಿಗಿರಲಿಲ್ಲ, ಹೆಣ್ಣು ಮಾಯೆ, ಸಾಧನಾ ಪಥದಲ್ಲಿಯ ಅಡಚಣೆ ಎಂದೇ ನಿರ್ಧರಿಸಿ ಅವಳನ್ನು ದೂರವಿಟ್ಟರು. ಶತ ಶತಮಾನಗಳು ಕಳೆದ ನಂತರ ಅವಳ ಬಾಳಿನ ಕಾರ್ಗತ್ತಲೆಯನ್ನು ಕಳೆಯಲು ಹನ್ನೆರಡನೆಯ ಶತಮಾನದಲ್ಲಿ ಮಾನವತಾವಾದಿ ಬಸವಣ್ಣನವರು ಬರಬೇಕಾಯಿತು. ಸ್ತ್ರೀಯರ ಹೀನಾಯ ಸ್ಥಿತಿ ಕಂಡು ಮಮ್ಮಲ ಮರುಗಿದರು.

“ಎಲ್ಲಿ ನೋಡಿದಡಲ್ಲಿ ಮನವೆಳಸಿದಡೆ ಆಣೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಪರವಧುವನು ಮಹಾದೇವಿಯೆಂಬೆ ಕೂಡಲಸಂಗಮದೇವಾ”, ಇದು ಬಸವಣ್ಣನವರ ಭಾಷೆ. ಪರಸತಿಯನೊಲ್ಲೆನೆಂಬ ಛಲವಿರಬೇಕು. ಪರಸತಿ ಪಾರ್ವತಿಯೆಂಬುದು ಅವರ ಉದ್ಘೋಷ. ಇದು ಶರಣರ ನೈತಿಕ ಸಮಾಜ ನಿರ್ಮಾಣದ ನಡೆಯಾಯಿತು. ಮನುಕುಲದಲ್ಲಿ ಈ ನುಡಿ ಹೊಸ ಸಂಚಲನವನ್ನುಂಟು ಮಾಡಿತು. ಸ್ತ್ರೀಯರಿಗೆ ಪುರುಷ ಸಮಾನ ಸ್ಥಾನಮಾನಗಳು ಲಭ್ಯವಾದವು. ಎಲ್ಲೆಲ್ಲಿಯೂ ಆಕೆ ಆದರಕ್ಕೆ ಪಾತ್ರಳಾದಳು. ಆಕೆಯೂ ನಿರ್ಭಯಳಾಗಿ ಸ್ವತಂತ್ರ ಚಿಂತನೆಯಲ್ಲಿ ತೊಡಗಿದಳು. ಮಹಾದೇವಿ ಎಂದಡೆ ಜಗನ್ಮಾತೆ. ಸಕಲರಿಂದ ಗೌರವಕ್ಕೆ ಅರ್ಹಳಾದವಳು ಎಂದರ್ಥ. ‘ಹೆಣ್ಣು ಹೆಣ್ಣಲ್ಲ. ಹೆಣ್ಣು ರಕ್ಕಸಿಯಲ್ಲ. ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂದು ಅವಳನ್ನು ಪರಮಾತ್ಮನ ಮಟ್ಟಕ್ಕೆ ಎತ್ತರಿಸಿದರು ಶರಣರು.
ಬಸವಣ್ಣನವರ ಕಾಲದಲ್ಲಿ ಹೆಣ್ಣು ದೇವ ಸ್ವರೂಪವೇ ಆದಳು. ಆಗ ಸ್ತ್ರೀಯು ಗೌರವದ ಉತ್ತುಂಗ ಸ್ಥಿತಿಯನ್ನು ತಲುಪಿದ್ದನ್ನು ಸಾಕ್ಷೀಕರಿಸುತ್ತದೆ.

ಮಾನವ ಸೃಷ್ಟಿಯ ಆದಿಯಿಂದಲೇ ಶೋಷಣೆಗೊಳಪಟ್ಟು ಸ್ತ್ರೀ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಧಾರ್ಮಿಕ ಸಂಸ್ಕಾರಗಳಿಗೆ ಅರ್ಹಳಾದಳು. ಶರಣರ ಕ್ರಾಂತಿಯ ಫಲವಾಗಿ ಅಷ್ಟೇ ಅಲ್ಲ, ಅವಳೇ ಧಾರ್ಮಿಕ ಸಂಸ್ಕಾರ ನೀಡುವಂಥ ಗುರುವಿನ ಸ್ಥಾನಕ್ಕೂ ಏರಿದಳು. ಮೊದಲ ಪ್ರಯೋಗ ಬಸವಣ್ಣನವರ ಸಹೋದರಿ ಅಕ್ಕನಾಗಮ್ಮಳಿಂದಲೇ ಪ್ರಾರಂಭವಾಯಿತು. ಅಕ್ಕನಾಗಮ್ಮನವರು, ಘನಲಿಂಗ ರುದ್ರಮುನಿಗೆ ಇಷ್ಟಲಿಂಗ ದೀಕ್ಷೆಯನ್ನಿತ್ತು ಮುಂದೆ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಾಳೇಹೊನ್ನೂರಿನ ಧರ್ಮಪ್ರಸಾರ ಕೇಂದ್ರಕ್ಕೆ ನೇಮಿಸಿದುದು ಅಕ್ಕನಾಗಮ್ಮನ ಗುರುತ್ವಕ್ಕೆ ಸಾಕ್ಷಿಯಾಗಿದೆ. ಬಸವಣ್ಣನವರ ಸೂಚನೆಯಂತೆ ಗುಡ್ಡಾಪುರದ ದಾನಮ್ಮ ಸಾವಿರಾರು ಭಕ್ತರಿಗೆ ಇಷ್ಟಲಿಂಗದೀಕ್ಷೆಯನ್ನು ಕರುಣಿಸಿದ್ದು ಜನಜನಿತವಾಗಿದೆ. ಬಸವ ಕ್ರಾಂತಿಯ ನಂತರ ಇಷ್ಟಲಿಂಗಧಾರಿಗಳ ಪರಂಪರೆಯನ್ನು ಉಳಿಸಿ ಬೆಳೆಸಿದ ಕೀರ್ತಿ ದಾನಮ್ಮ ಶರಣೆಯದು. ಸ್ವತಃ ಲಿಂಗಾಂಗ ಸಾಮರಸ್ಯದ ಸಾಧನೆಗೈದು ಗುರುವಾಗಿ ಮಾರ್ಗದರ್ಶನ ಮಾಡಿದ್ದು ಶರಣ ಧರ್ಮದ ಮಹತ್ವವನ್ನು ತಿಳಿಸುತ್ತದೆ. 21ನೇ ಶತಮಾನದಲ್ಲಿಯೂ ಪ್ರಗತಿಪರವೆಂದು ಕರೆಸಿಕೊಳ್ಳುವ ಧರ್ಮಗಳಲ್ಲಿ ಕೂಡಾ ಇಂದಿನರೆಗೆ, ಸ್ತ್ರೀಗೆ ಗುರುಸ್ಥಾನ ನೀಡಲು ಸಾಧ್ಯವಾಗಿಲ್ಲ. ಒಂಭತ್ತು ನೂರು ವರ್ಷಗಳ ಹಿಂದೆಯೇ ಬಸವಣ್ಣನವರು ಈ ಸಾಧನೆ ಮಾಡಿದ್ದು ಅವರ ಪ್ರಗತಿಪರ ನಿಲುವು ಹಾಗೂ ಸ್ತ್ರೀಪರ ಕಳಕಳಿಯ ದ್ಯೋತಕವಾಗಿದೆ.

ಹದಿನಾರು ಸಾವಿರ ಪರವಧುವನು ಮಹಾದೇವಿ ಎಂಬ ಶರಣರ ನಿಲುವು ಹೊಸ ನೈತಿಕ ಯುಗವೊಂದಕ್ಕೆ ನಾಂದಿಯಾಯಿತು. ಕಲ್ಯಾಣದ ಪಣ್ಯಾಂಗನೆಯರು (ವೇಶ್ಯೆಯರು/ದೇವದಾಸಿಯರು) ಪುಣ್ಯಾಂಗನೆಯರಾಗಿ (ಶರಣೆಯರಾಗಿ) ಪರಿವರ್ತಿತರಾದರು. ತನ್ಮೂಲಕ ಸಾವಿರಾರು ಕುಟುಂಬಗಳು ನೀತಿಯ ನೆರಳಿನಡಿಯಲ್ಲಿ ಸುಖಿ ಕುಟುಂಬಗಳಾದವು. ಒಟ್ಟಿನಲ್ಲಿ ಸ್ತ್ರೀ ಸುರಕ್ಷಿತಳಾದಳು. ಸಮರ್ಥಳಾದಳು, ಸಾಧಕಳಾಗಿ ಅಧ್ಯಾತ್ಮಿಕ ಔನ್ನತ್ಯಕ್ಕೇರಿದಳು.

ಪ್ರಸ್ತುತ ಭಾರತದಲ್ಲಿ ಶೇಕಡಾ 50% ಅಲ್ಲಾ, ಶೇಕಡಾ 33% ಮೀಸಲಾತಿ ಕೊಡಲು ಸಾಧ್ಯವಾಗುತ್ತಿಲ್ಲ. ಇದು ಇಂದಿನ ಪುರುಷ ಪ್ರಧಾನ ವ್ಯವಸ್ಥೆಗೆ ಕೈಗನ್ನಡಿಯಾಗಿದೆ. ಸ್ತ್ರೀಸಮಾನತೆಯ ಬಗ್ಗೆ ಸಂವಿಧಾನ ಸ್ಪಷ್ಟ ಅವಕಾಶ ನೀಡಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಗೆ ಕಾನೂನು ಇವೆ. ಆದರೆ ಅವೆಲ್ಲಾ ಅನುಷ್ಠಾನ ಆಗದಿರುವುದು ದುರಂತವಾಗಿದೆ. ಪುರುಷರ ಉದಾಸೀನತೆಗೆ ಜ್ವಲಂತ ಸಾಕ್ಷಿಯಾಗಿದೆ. ಬಸವಣ್ಣನವರ ಲಿಂಗಸಮಾನತೆಯ ಸಾಧನೆಯು, ಇಂದಿನ ರಾಜಕೀಯ ವ್ಯವಸ್ಥೆಗೆ ಪ್ರೇರಣೆಯಾಗಲಿ ಮತ್ತು ಮಹಿಳೆಯರಿಗೆ ಶೇ. 50% ಮೀಸಲಾತಿ ಎಲ್ಲ ರಂಗಗಳಲ್ಲಿ ಸಿಗುವಂತಾಗಲಿ ! ಇದುವೇ ‘ಮಹಿಳೆ ಮಹಾದೇವಿ’ ಎಂಬುದನ್ನು ಸಾಧಿಸಿದಂತಾಗುತ್ತದೆ.

ಹೀಗೆ ಸಮಾಜದ ಸರ್ವಾಂಗೀಣ ಉನ್ನತಿಯ ಸೂತ್ರ “ಪರವಧುವನು ಮಹಾದೇವಿ ಎನ್ನುವ ಬಸವ ಭಾಷೆ”ಯಾಗಿದೆ. ಇದು ಭಾರತವಷ್ಟೇ ಅಲ್ಲ, ವಿಶ್ವದ ಪ್ರಜೆಗಳ ಪ್ರತಿಜ್ಞೆಯಾಗಬೇಕು. ಆಗ ಮಾತ್ರ ಆರೋಗ್ಯವಂತ ನೀತಿಯುಕ್ತ ಸಶಕ್ತ ಜಗತ್ತು ನಿರ್ಮಾಣವಾಗುತ್ತದೆ.

“ಲಿಂಗಸಮಾನತೆಯ ಮಹಿಳಾ ಸಮಾವೇಶ”

ಇಂದು ಬಸವಣ್ಣನವರ ಸ್ತ್ರೀಕುಲೋದ್ಧಾರದ ಪ್ರಯುಕ್ತ “ಲಿಂಗಸಮಾನತೆ ಮಹಿಳಾ ಸಮಾವೇಶ”ವನ್ನು ಏರ್ಪಡಿಸಲಾಗಿತ್ತು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಶರಣತತ್ವ ಚಿಂತಕರಾದ ಮಹಾರಾಷ್ಟ್ರ, ಪೂನಾದ ಯೋಗಶಿಕ್ಷಕಿ ಪ್ರಿಯಾಂಕಾ ಸಂಜುಕುಮಾರ ಬಿರಾದಾರ ಅವರು, ಬಸವಣ್ಣನವರಿಂದಾಗಿ ಮುಟ್ಟೆಂಬುದು ನೈಸರ್ಗಿಕ ಕ್ರಿಯೆ. ಸ್ನಾನಮಾಡಿ ಶುಚಿರ್ಭೂತಳಾಗಿ ಮನೆಯವರೊಂದಿಗೆ ಬೆರೆಯುವಂತಾಯಿತು. ದೇವ ಪೂಜೆಗೆ ಅರ್ಹಳಾಗುವಂತಾಯಿತು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತಾಯಿತು. ಆಧ್ಯಾತ್ಮಿಕ ಸಾಧಕಳಾಗುವಂತಾಯಿತು. ಜಗತ್ತಿನಲ್ಲಿ ನಡೆದ ಲಿಂಗ ಸಮಾನತೆಯಲ್ಲಿ ಮತ್ತು ಸಮಾಜ ಸುಧಾರಣೆಯಲ್ಲಿ ಇದೊಂದು ದೊಡ್ಡ ಕ್ರಾಂತಿಯಾಗಿದೆಯೆಂದು ನುಡಿದರು.

ಮುಖ್ಯ ಅತಿಥಿಗಳಾಗಿದ್ದ ಶರಣತತ್ವ ಚಿಂತಕರು ಮತ್ತು ಸಂಗೀತ ವಿದೂಷಿ ಗುರುಶ್ರೀ ಶಾಂತಲಿಂಗಯ್ಯ ಮಠಪತಿಯವರು, ಹುಟ್ಟಿನಿಂದ ಸಾವಿನವರೆಗೆ ಪುರುಷನ ಅವಿಭಾಜ್ಯ ಅಂಗವಾಗಿರುವ ಸ್ತ್ರೀಯನ್ನು ದೂರ ಸರಿಸಲು ಸಾಧ್ಯವಿಲ್ಲ. ಅವಳಿಲ್ಲದ ಪ್ರಪಂಚ ಊಹಿಸಲಾಗದು. ಆದ್ದರಿಂದ ಅವಳಿಗೂ ಪುರುಷನ ಸಮಾನವಾದ ಸ್ವಾತಂತ್ರ್ಯ, ಅಧಿಕಾರ ಬೇಕು. ಹೀಗಾಗಬೇಕಾದರೆ ಪುರುಷನ ದೃಷ್ಟಿ ಬದಲಾಗಬೇಕು. ದೃಷ್ಟಿಯಂತೆ ಸೃಷ್ಟಿ, ಸ್ತ್ರೀ ಮಾಯೆ ಎಂಬ ಭಾವ ಬಿಟ್ಟು ಮಾತೆಯಾಗಿ ಸ್ವೀಕರಿಸಬೇಕು.

ಭಾವವೇ ಸರ್ವ ಕ್ರಿಯೆಗಳ ಮೂಲವಾದ ಕಾರಣ ಭಾವ ಉದಾತ್ತೀರಕಣಗೊಂಡರೆ, ಆಕೆ ನಮ್ಮೆದುರು ಸಾಧನಾ ಪಥದಲ್ಲಿ ಪ್ರೇರಕ ಮಾಯೆಯಾಗಿ ಕಾಣದೆ ತಾಯಿಯಾಗಿ ಶಕ್ತಿಯಾಗುತ್ತಾಳೆಂದರು.

ಮಾಜಿ ನಗರಸಭಾ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ, ವಿವಿಧ ಮಹಿಳಾ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಮುಖಂಡರಾದ ; ಶಾರದಾ ಪಾನಗಂಟಿ, ಭೈರವಿ ಅಗಡಿ, ಲಕ್ಷ್ಮಿದೇವಿ ವಿ. ಸಿ, ಕಿಶೋರಿ ಬೂದನೂರ, ನಿರ್ಮಲಾ ಬಳ್ಳೊಳ್ಳಿ, ಸುಜಾತ ಹಲಗೇರಿ, ಡಾ. ಉಮಾ ಪಾಟೀಲ, ಮಧುಮತಿ ಪಾವಲಿಶೆಟ್ಟರ, ಮಹಾದೇವಿ ಮಿಟ್ಲಕೋಡ, ಸೌಮ್ಯ ನಾಲವಾಡ, ರೇಖಾ ಮೆಳ್ಳಿಕೇರಿ, ಹೇಮಲತಾ ಬೊಮ್ಮನಾಳ, ಜ್ಯೋತಿ ಗೊಂಡಬಾಳ, ಅರುಣಾ ನರೇಂದ್ರ, ಜಯಶ್ರೀ ಕೊಟ್ರೇಶ, ಭಾರತಿ ಸಾಳುಂಕೆ, ವೀಣಾ ಹೊಳಗುಂದಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅರ್ಚನಾ ಸಸಿಮಠ ಕಾರ್ಯಕ್ರಮ ನಿರ್ವಹಿಸಿದರು. ನೀಲಮ್ಮ ಪಾಟೀಲ ಸ್ವಾಗತಿಸಿದರು. ಶ್ರೀದೇವಿ ಇಂಗಳದಾಳ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *