ಬೆಳಗಾವಿ:
ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ಸಮಿತಿ ವತಿಯಿಂದ ಬಸವ ಜಯಂತಿ ಅಂಗವಾಗಿ ರವಿವಾರ ಬೆಳಿಗ್ಗೆ ‘ಸಮಾನತೆಗಾಗಿ ಬೃಹತ್ ಬೈಕ್ ರ್ಯಾಲಿ’ ನಡೆಯಿತು.
ನಗರದ ಶಹಪೂರ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ, ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ಚಾಲನೆ ನೀಡಿದರು. ಮಹಾಪೌರರಾದ ಪ್ರೀತಿ ಕಾಮಕರ, ಉಪಮಹಾಪೌರ ಹನಮಂತ ಕೊಂಗಾಲಿ ಉಪಸ್ಥಿತರಿದ್ದರು.

ಸುಮಾರು 2 ಸಾವಿರ ಬೈಕ್ ಗಳನ್ನು ಚಲಾಯಿಸುತ್ತ ಮಹಿಳಾ ಮತ್ತು ಪುರುಷ ಬಸವಭಕ್ತರು ಭಾಗವಹಿಸಿ, ಬಸವಪರ ಜಯಘೋಷಣೆಗಳೊಂದಿಗೆ ನಗರದಲ್ಲಿ ಸುಮಾರು 2೦ ಕಿ.ಮೀ. ದಾರಿ ಕ್ರಮಿಸಿದರು.
ಟಿಳಕವಾಡಿ, ಶಹಾಪುರ, ಅನಿಗೋಳ, ಖಾಸಭಾಗ್ ಹಿಂದವಾಡಿ, ಸದಾಶಿವ ನಗರ, ಶಿವಬಸವ ನಗರ, ಮಹಾಂತೇಶ ನಗರ, ಆಂಜನೇಯ ನಗರ, ರಾಮತೀರ್ಥ ನಗರ ಮುಂತಾದ ಬಡಾವಣೆಗಳಲ್ಲಿ ರ್ಯಾಲಿ ಆಕರ್ಷಕವಾಗಿ ಸಾಗಿತು.

ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಉತ್ಸವ ಸಮಿತಿ ಮುಖ್ಯ ಸಂಚಾಲಕರಾದ ಬಸವರಾಜ ರೊಟ್ಟಿ, ಸಹಸಂಚಾಲಕರಾದ ರತ್ನಪ್ರಭಾ ಬೆಲ್ಲದ, ಅಶೋಕ ಬೆಂಡಿಗೇರಿ, ರಮೇಶ ತುಬಚಿ, ಶಂಕರ ಗುಡಸ, ಆನಂದ ಗುಡಸ, ಗುರು ಪಾಟೀಲ, ಕೆ. ಶರಣಪ್ರಸಾದ, ರಮೇಶ ಕಳಸನ್ನವರ, ಸತೀಶ ಪಾಟೀಲ, ಮುರುಗೇಂದ್ರ ಪಾಟೀಲ, ಮನೋಹರ ಪುಡಕಲಕಟ್ಟಿ, ಗುಂಡು ಪಾಟೀಲ, ಶಿವಾನಂದ ತಂಬಾಕೆ, ಪ್ರೇಮ್ ಚೌಗಲಾ, ವಿ.ಕೆ. ಪಾಟೀಲ, ಸರಳ ಹೇರೇಕರ, ಜ್ಯೋತಿ ಬದಾಮಿ, ಭಾರತಿ ಪಟ್ಟಣಶೆಟ್ಟಿ ಒಳಗೊಂಡಂತೆ ಅನೇಕರು ನೇತೃತ್ವ ವಹಿಸಿದ್ದರು.
ರ್ಯಾಲಿ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ಮಧ್ಯಾಹ್ನ ತಲುಪಿ ಅಲ್ಲಿಯೇ ಮುಕ್ತಾಯವಾಯಿತು. ಉತ್ಸವ ಸಮಿತಿ ವತಿಯಿಂದ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಬರುವ 26 ರಂದು ಜರುಗುವ ಜಗಜ್ಯೋತಿ ಬಸವಣ್ಣನವರ ಮುಖ್ಯವಾದ ಬೃಹತ್ ಮೆರವಣಿಗೆಯಲ್ಲಿ ಸರ್ವರೂ ಪಾಲ್ಗೊಳ್ಳಲು ಇದೇ ಸಂದರ್ಭದಲ್ಲಿ ಮತ್ತೊಮ್ಮೆ ಸಮಿತಿ ವತಿಯಿಂದ ಕೋರಲಾಯಿತು.
