ಕಲಬುರಗಿ :
ಜಗತ್ತಿನಲ್ಲಿ ಅಸಂಖ್ಯಾತ ಕ್ರಾಂತಿಗಳು ಸಂಭವಿಸಿವೆ. ಆದರೆ, ಕೇವಲ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆದ ಏಕೈಕ ಕ್ರಾಂತಿ ಎಂದರೆ ಅದು ೧೨ನೇ ಶತಮಾನದ ಕಲ್ಯಾಣ ಕ್ರಾಂತಿ. ವಿಶ್ವಗುರು ಬಸವಣ್ಣನವರು ಜಗತ್ತಿನ ಅದ್ಭುತ ಪುರುಷರಾಗಿದ್ದು, ಅವರು ನೀಡಿದ ‘ಕಾಯಕವೇ ಕೈಲಾಸ’ ಎಂಬ ತತ್ವ ಇಂದಿಗೂ ಸಾರ್ವಕಾಲಿಕ ಪ್ರಸ್ತುತವಾಗಿದೆ ಎಂದು ಅರಣ್ಯ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರು ಅಭಿಪ್ರಾಯಪಟ್ಟರು.

ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬಸವಣ್ಣನವರ ೮೯೩ನೇ ಜಯಂತಿ ಅಂಗವಾಗಿ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಲಿಂಗಾಯತ ಧರ್ಮದ ಮೂಲ ತತ್ವಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಪ್ರತಿಪಾದಿಸಿದರು.
ನೂತನ ಅನುಭವ ಮಂಟಪ ಲೋಕಾರ್ಪಣೆ:
ಬಸವಕಲ್ಯಾಣದಲ್ಲಿ ಸುಮಾರು ೭೪೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ನೂತನ ಅನುಭವ ಮಂಟಪ’ದ ಕಾರ್ಯವು ಅಂತಿಮ ಹಂತದಲ್ಲಿದೆ. ಸುಮಾರು ೭೭೦ ಶರಣರ ಕಂಬಗಳ ಮೇಲೆ ಅವರ ಹೆಸರು ಮತ್ತು ವಚನಗಳನ್ನು ಕೆತ್ತಲಾಗುತ್ತಿದೆ. “ಬರುವ ಏಪ್ರಿಲ್ ೨೦ರ ಒಳಗಾಗಿ ಈ ಐತಿಹಾಸಿಕ ಅನುಭವ ಮಂಟಪವನ್ನು ಲೋಕಾರ್ಪಣೆ ಮಾಡುವ ದೃಢ ಸಂಕಲ್ಪವನ್ನು ನಾವು ಹೊಂದಿದ್ದೇವೆ. ಇದು ಕೇವಲ ಧಾರ್ಮಿಕ ಕೇಂದ್ರವಷ್ಟೇ ಅಲ್ಲದೆ, ಇಡೀ ವಿಶ್ವಕ್ಕೆ ಶಾಂತಿ ಮತ್ತು ಸಮಾನತೆಯ ಸಂದೇಶ ನೀಡುವ ತಾಣವಾಗಲಿದೆ ಎಂದು ಸಚಿವರು ಘೋಷಿಸಿದರು.

ಹಾದಿ ತಪ್ಪುತ್ತಿರುವ ಯುವಜನತೆ:
ಇಂದಿನ ಯುವ ಪೀಳಿಗೆಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಖಂಡ್ರೆ ಅವರು, “ದೇಶದ ಆಧಾರಸ್ತಂಭಗಳಾದ ಯುವಕರು ಇಂದು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಶೇ. ೩೦ರಷ್ಟು ಯುವಕರು ವ್ಯಸನಿಗಳಾಗುತ್ತಿದ್ದರೆ, ಇನ್ನುಳಿದವರು ಮೊಬೈಲ್ ಮತ್ತು ರೀಲ್ಸ್ಗಳ ಜಗತ್ತಿನಲ್ಲಿ ಕಳೆದುಹೋಗುತ್ತಿದ್ದಾರೆ. ಇದರಿಂದ ಅವರು ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಇವರನ್ನು ಸರಿದಾರಿಗೆ ತರಲು ವಚನ ಸಾಹಿತ್ಯ ಮತ್ತು ಶರಣರ ತತ್ವಗಳ ಅಧ್ಯಯನ ಅನಿವಾರ್ಯವಾಗಿದೆ ಎಂದರು.

ಇದೇ ವೇಳೆ ಬೆಂಗಳೂರಿನಲ್ಲಿ ೧೫೦ ಎಕರೆ ಜಾಗದಲ್ಲಿ ೨೫೦ ಕೋಟಿ ವೆಚ್ಚದಲ್ಲಿ ಬಸವಣ್ಣನವರ ಹೆಸರಿನಲ್ಲಿ ಬೃಹತ್ ಜೀವವೈವಿಧ್ಯ ಉದ್ಯಾನವನ ನಿರ್ಮಿಸುವ ಡಿಪಿಆರ್ ಸಿದ್ಧವಾಗಿದೆ ಎಂಬ ಮಾಹಿತಿ ನೀಡಿದರು.
ಜಿಲ್ಲಾ ಜಯಂತೋತ್ಸವ ಸಮಿತಿ ಅಧ್ಯಕ್ಷ ಬಿ.ಆರ್. ಪಾಟೀಲ್ ಮಾತನಾಡಿ, ಕಲಬುರಗಿಯಲ್ಲಿ ನಾವೆಲ್ಲರೂ ಅತೀವ ಸಂತೋಷದಿಂದ ಒಗ್ಗೂಡಿ ಬಸವ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಬಸವಣ್ಣನವರು ಮಾನವ ಕೋಟಿಯ ಉದ್ಧಾರಕ್ಕಾಗಿ ಜನ್ಮತಾಳಿ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಮಹಾಪುರುಷ. ಅವರು ಅಂದು ಆರಂಭಿಸಿದ ವಚನ ಚಳುವಳಿಯ ಫಲವಾಗಿ ಇಂದು ಸಮಾಜದಲ್ಲಿ ಸಮಾನತೆ ಸಾಧ್ಯವಾಗಿದೆ. ಶರಣರು ವೈಜ್ಞಾನಿಕವಾಗಿ ಸಮಾಜವನ್ನು ಕಟ್ಟುವ ಮಹತ್ತರ ಕೆಲಸ ಮಾಡಿದ್ದಾರೆ ಎಂದರು.

ನಮ್ಮನ್ನು ನಾವು ಅರಿತುಕೊಳ್ಳಲು ಆಧ್ಯಾತ್ಮದ ಅವಶ್ಯಕತೆ ಇದೆ. ಹೀಗಾಗಿ ನಾವೆಲ್ಲರೂ ಶರಣರು ಹಾಕಿಕೊಟ್ಟ ದಾರಿಯಲ್ಲಿ ನಡೆಯೋಣ. ಮುಂದಿನ ದಿನಗಳಲ್ಲಿ ಬಸವ ಜಯಂತಿಯನ್ನು ಇನ್ನುಳಿದ ಪ್ರದೇಶಗಳಲ್ಲಿಯೂ ಅತ್ಯಂತ ಅದ್ಧೂರಿಯಾಗಿ ಆಚರಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾ ವಹಿಸಿ, ಶಾಂತಿಯಿಂದ ಕ್ರಾಂತಿ ಮೂಡಿಸಿದವರು ಬಸವಣ್ಣನವರು. ಲಿಂಗ ಪೂಜೆಯ ಮೂಲಕ ದೇಹ ಮತ್ತು ಆತ್ಮ ಶುದ್ಧೀಕರಿಸಿಕೊಂಡು ನವರಾಷ್ಟ್ರ ಕಟ್ಟೋಣ ಎಂದು ಹರಸಿದರು.

ಬಸವ ಸಮಿತಿಯ ಕಾರ್ಯಾಧ್ಯಕ್ಷ ಬಿ.ಜಿ. ಪಾಟೀಲ ಸ್ವಾಗತಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ವಂದಿಸಿದರು.
ಈ ವೇಳೆ ಶರಣಬಸವಪ್ಪ ದರ್ಶನಾಪುರ, ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್, ಶಾಸಕರಾದ ಎಂ.ವೈ. ಪಾಟೀಲ, ಬಸವರಾಜ ಮತ್ತಿಮಡು, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರಮುಖರಾದ ಡಾ. ಭೀಮಾಶಂಕರ ಬಿಲಗುಂದಿ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ರಾಜಾ ಭೀಮಳ್ಳಿ, ಚಂದು ಪಾಟೀಲ, ನೀಲಕಂಠರಾವ ಮೂಲಗೆ, ಸಂಗಮೇಶ ನಾಗನಳ್ಳಿ, ಆರ್.ಜಿ. ಶೆಟಗಾರ, ರವೀಂದ್ರ ಶಾಬಾದಿ, ಸೋಮಶೇಖರ ಗೋನಾಯಕ, ಸೋಮಶೇಖರ ಹಿರೇಮಠ, ಶರಣಬಸಪ್ಪ ಕಾಮರೆಡ್ಡಿ, ಶರಣಬಸವಪ್ಪ ಪಪ್ಪಾ, ನೀಲಕಂಠರಾವ ಅವಟಿ, ಸಂತೋಷ ಲಂಗರ್, ಡಾ. ಸುಧಾ ಹಾಲಕಾಯಿ, ಗೌರಿ ಚಿಚಕೋಟಿ, ಸಾವಿತ್ರಿ ಕುಳಗೇರಿ, ಅಶೋಕ ಪಾಟೀಲ, ಚೇತನ್ ಗೋನಾಯಕ, ಅಶೋಕ ಬಗಲಿ, ಶಿವರಾಜ ಪಾಟೀಲ ರದ್ದೇವಾಡಗಿ, ಸೇರಿ ಅನೇಕ ಬಸವಾಭಿಮಾನಿಗಳು ಉಪಸ್ಥಿತರಿದ್ದರು.
ಸಚಿವ ಈಶ್ವರ ಖಂಡ್ರೆಗೆ ವಿಶೇಷ ಸನ್ಮಾನ:

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆ, ಸಚಿವ ಈಶ್ವರ ಖಂಡ್ರೆ ಅವರಿಗೆ ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ವಿಶೇಷ ಸನ್ಮಾನ ಮಾಡಲಾಯಿತು.
ಶರಣ ವಚನಗಳಲ್ಲಿ ಬದುಕಿನ ಸಕಲ ಮೌಲ್ಯ:
ಶರಣರ ತತ್ವಗಳು ಬದುಕನ್ನು ಬೆಳಗುವ ಜ್ಯೋತಿಯಿದ್ದಂತೆ. ಬಸವಣ್ಣನವರ ಚಿಂತನೆಯಲ್ಲಿ ಜಾತಿ, ಭೇದಗಳಿಗೆ ಸ್ಥಾನವಿಲ್ಲ. ಭಕ್ತಿ ಎಂದರೆ ಕೇವಲ ಪೂಜೆಯಲ್ಲ, ಎಲ್ಲರನ್ನೂ ಏಕಭಾವದಿಂದ ಒಗ್ಗೂಡಿಸುವುದೇ ನಿಜವಾದ ಭಕ್ತಿ ಎಂದು ಅವರು ತೋರಿಸಿಕೊಟ್ಟಿದ್ದಾರೆ. ಜಗತ್ತಿನ ಮೊಟ್ಟಮೊದಲ ಸ್ವತಂತ್ರ ವಿಚಾರವಾದಿ ಬಸವಣ್ಣನವರ ವಚನಗಳನ್ನು ಇಂದಿನ ಪೋಷಕರು ಮಕ್ಕಳಿಗೆ ಕಲಿಸಬೇಕು. ಬದುಕು ಬಂಗಾರವಾಗುವುದಕ್ಕಿಂತ, ಬದುಕು ಬಸವಣ್ಣನ ತತ್ವದಂತೆ ಬೆಳಗುವುದು ಇಂದಿನ ಕಾಲಘಟ್ಟಕ್ಕೆ ಅತ್ಯಗತ್ಯವಾಗಿದೆ. ಶರಣರ ವಚನಗಳಲ್ಲಿ ಬದುಕಿನ ಸಕಲ ಮೌಲ್ಯಗಳು ಅಡಗಿವೆ. ಎಂದು ಶರಣ ಸಾಹಿತ್ಯ ಚಿಂತಕ ದೇವನೂರು ಶಂಕರ್ ಅವರ ವಿಶೇಷ ಉಪನ್ಯಾಸ ನೀಡಿದರು.
ಸಚಿವ ಡಾ. ಶರಣಪ್ರಕಾಶ್ ಪಾಟೀಲ ಮಾತನಾಡಿ, ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ವಿನೂತನವಾಗಿ ಬಸವ ಜಯಂತಿ ಆಚರಿಸಲಾಗುತ್ತಿದೆ. ಮುಂದಿನ ಪೀಳಿಗೆಗೆ ಶರಣರ ಕಾಯಕ-ದಾಸೋಹ ಸಂಸ್ಕೃತಿ ಮತ್ತು ಅಷ್ಟಾವರಣ, ಪಂಚಾಚಾರಗಳ ಅರಿವು ಮೂಡಿಸಬೇಕಿದೆ. ಲಿಂಗ ಪೂಜೆಯ ಹಿಂದೆ ಬಲವಾದ ವೈಜ್ಞಾನಿಕ ಹಿನ್ನೆಲೆಯಿದೆ. ವಚನ ಸಾಹಿತ್ಯವನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಅವರ ಭವಿಷ್ಯದ ಜೀವನ ಹಾದಿಯನ್ನು ಸುಗಮಗೊಳಿಸಬೇಕು. ಬಸವ ಧರ್ಮದಿಂದ ಮಾತ್ರ ಸಮಾಜದಲ್ಲಿ ನೆಮ್ಮದಿ ಮತ್ತು ಸಮಾನತೆ ತರಲು ಸಾಧ್ಯವಿದೆ. ಕೆಳಗೆ ಬಿದ್ದವರನ್ನು ಮೇಲೆತ್ತುವ ಕೆಲಸವೇ ನಿಜವಾದ ಬಸವ ತತ್ವವಾಗಿದೆ ಎಂದರು.
ಡಾ. ದಾಕ್ಷಾಯಣಿ ಎಸ್. ಅಪ್ಪಾ ಅವರು ಮಾತನಾಡುತ್ತ, ಲಿಂಗ, ಜಾತಿ ಮತ್ತು ವರ್ಗ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ನೀಡಿದ ಬಸವಣ್ಣನವರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾವು ಇಂದಿನ ಪೀಳಿಗೆಗೆ ದಾಟಿಸಬೇಕಿದೆ. ಬಸವ ಸಮಿತಿಯ ಈ ಕಾರ್ಯ ಶ್ಲಾಘನೀಯವಾಗಿದ್ದು, ಸರ್ವರೂ ಒಗ್ಗೂಡಿ ಶರಣರ ತತ್ವ ಸಿದ್ಧಾಂತ ಹಾಗೂ ಶಾಂತಿ ಸಂದೇಶವನ್ನು ಜಗತ್ತಿಗೆ ಸಾರೋಣ. ಬಸವಣ್ಣನವರ ತತ್ವ ಅಳವಡಿಸಿಕೊಂಡು ದೇಶ ಮತ್ತು ಧರ್ಮವನ್ನು ಕಟ್ಟುವ ಕೆಲಸಕ್ಕೆ ನಾವೆಲ್ಲರೂ ಮುಂದಾಗೋಣ ಎಂದರು.
ಸಮಾರಂಭದಲ್ಲಿ ಸಾವಿರಾರು ಬಸವಭಕ್ತರು, ಬಸವಾಭಿಮಾನಿಗಳು ಭಾಗಿಯಾಗಿದ್ದರು.
