ಚಿತ್ರದುರ್ಗ :
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಮಾತನಾಡಿ, ಪ್ರತಿವರ್ಷ ನಿಮ್ಮಗಳ ನಿರಾಶ್ರಿತರ ಕೇಂದ್ರದಲ್ಲಿ ಬಸವ ಜಯಂತಿಯನ್ನು ಆಚರಿಸುತ್ತಾ ಬಂದಿರುತ್ತೇವೆ.

ಸ್ವಾತಂತ್ರ್ಯ ಮತ್ತು ಪ್ರೀತಿಯಿಂದ ಬಾಳಬೇಕು ಎಂಬುದು ಬಸವತತ್ವದ ಆದೇಶವಾಗಿರುತ್ತದೆ. ನಾವು ಪ್ರಾಮಾಣಿಕವಾಗಿವುದೇ ಸ್ವಾತಂತ್ರ್ಯ. ಪರಿಶುದ್ಧತೆಯೇ ಸ್ವಾತಂತ್ರ. ನಾವುಗಳೆಲ್ಲರೂ ಒಂದು ರೀತಿಯಲ್ಲಿ ನಿರಾಶ್ರಿತರೇ. ನಿಮ್ಮಗಳ ಸನ್ನಿಧಿಯಲ್ಲಿ ಬಸವ ಜಯಂತಿ ಮಾಡುತ್ತಿರುವುದು ನಮ್ಮ ಭಾಗ್ಯವಾಗಿದೆ. ನಿರಾಶ್ರಿತರಿಗೆ ಬಸವೇಶ್ವರ ಆಸ್ಪತ್ರೆ ಸದಾ ಸಹಕರಿಸುತ್ತದೆ, ಅದರ ಸದುಪಯೋಗ ಪಡೆದುಕೊಳ್ಳಿ ಎಂದು ನುಡಿದರು.
ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್.ಜೆ.ಎಂ. ವಿದ್ಯಾಪೀಠ ಹಾಗೂ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಿ. ಕಳಸದ ಅವರು ಮಾತನಾಡಿ, ಸಮಾಜದ ದೃಷ್ಟಿಯಲ್ಲಿ ನೀವು ನಿರಾಶ್ರಿತರಾಗಿರುವುದು ಸರಿ ಅಷ್ಟೇ. ಆದರೆ ನಾವುಗಳು ಸಹ ತಂದೆ-ತಾಯಿ ಮಕ್ಕಳ ಆಶ್ರಯದಲ್ಲಿ ಬೆಳೆಯುತ್ತಿದ್ದೇವೆ. ನೀವುಗಳು ಸಮಾಜದ ಆಶ್ರಯದಲ್ಲಿ ಬೆಳೆಯುತ್ತಿದ್ದೀರಾ ಅಷ್ಟೇ. ಇಂದಿನ ದಿನಮಾನಗಳಲ್ಲಿ ತಂದೆ-ತಾಯಿಗಳನ್ನು ಆಶ್ರಮಗಳಿಗೆ ಸೇರಿಸುತ್ತಾರೆ, ಅದು ವಿಷಾದಕರವಾದ ಸಂಗತಿಯಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಈ ನಿರಾಶ್ರಿತ ಕೇಂದ್ರ ಉತ್ತಮವಾಗಿ ನಡೆಯುತ್ತಿದೆ. ನೀವುಗಳೆಲ್ಲ ಒಂದೇ ಕುಟುಂಬದವರಾಗಿ ಬಾಳಿರಿ, ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಿಕೊಳ್ಳಿ.

ಬಸವಣ್ಣನವರು ಮಾನವಕುಲಕ್ಕೆ ಅಷ್ಟೇ ಅಲ್ಲ ಪ್ರಾಣಿ-ಪಕ್ಷಿಗಳ ಬಗ್ಗೆಯೂ ಕಾಳಜಿ ಹೊಂದಿದವರಾಗಿದ್ದರು. ಬಸವಣ್ಣನವರ ಜನ್ಮದಿನದಂದು ಅವರ ಸವಿನೆನಪಿಗಾಗಿ ಜಯಂತೋತ್ಸವ ಆಚರಿಸುತ್ತೇವೆ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಶ್ರೀಮಠಕ್ಕೆ ತಾವುಗಳೆಲ್ಲರೂ ಆಗಮಿಸಿ ನಿರಾಶ್ರಿತರೆಂಬ ಭಾವನೆ ತೊಡೆದು ಶ್ರೀಮಠದ ಆತಿಥ್ಯ ಪಡೆಯಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ನಿರಾಶ್ರಿತರಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು. ಎಸ್.ಜೆ.ಎಂ.ಐ.ಟಿ.ಐ. ಕಾಲೇಜಿನ ವಿಶಾಲಾಕ್ಷಿ ಅವರು ನಿರಾಶ್ರಿತರಿಗೆ ಸಮವಸ್ತ್ರವನ್ನು ದೇಣಿಗೆಯಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಂಜಿತಕುಮಾರ್ ಬಂಡಾರು, ನಗರಸಭಾ ಮಾಜಿ ಅಧ್ಯಕ್ಷರಾದ ಸಿ.ಟಿ. ಕೃಷ್ಣಮೂರ್ತಿ, ಹೆಚ್.ಸಿ. ನಿರಂಜನಮೂರ್ತಿ, ಚಿತ್ರದುರ್ಗ ಬೋವಿ ಸಮಾಜದ ಅಧ್ಯಕ್ಷರಾದ ಟಿ ತಿಪ್ಪೇಸ್ವಾಮಿ, ನಿರಾಶ್ರಿತ ಕೇಂದ್ರದ ಮಹದೇವ್ ಹಾಗೂ ವಿಜಯಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಡಾ.ಚೇತನ್ ಎಸ್. ಸ್ವಾಗತಿಸಿ, ಡಾ. ಹೆಚ್.ಜೆ. ಲೋಕೇಶ ನಿರೂಪಿಸಿ ವಂದಿಸಿದರು.
