ಬಿದ್ದವರನ್ನು ಮೇಲೆತ್ತುವ ಕೆಲಸವೇ ನಿಜವಾದ ಬಸವತತ್ವ : ಅಲ್ಲಮಪ್ರಭು ಪಾಟೀಲ
ಕಲಬುರಗಿ :
ಸಮಾನತೆ ಮತ್ತು ಸಾಮಾಜಿಕ ನ್ಯಾಯದ ನವ ಸಮಾಜ ಕಟ್ಟಲು ಶ್ರಮಿಸಿದ ಬಸವಣ್ಣನವರ ತತ್ತ್ವಗಳು ಇಂದಿಗೂ ದಾರಿದೀಪ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಸೋಮವಾರ ನಗರದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಆವರಣ, ಜಗತ್ ವೃತ್ತದಲ್ಲಿ ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವೈಚಾರಿಕ ಕ್ರಾಂತಿಯ ಕೇಂದ್ರ 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಸಂಸತ್ತು ಎಂದು ಕರೆಸಿಕೊಳ್ಳಲು ಅಲ್ಲಿನ ಮುಕ್ತ ಚರ್ಚೆ ಮತ್ತು ಸಮಾನತೆಯೇ ಕಾರಣ. ಕೆಳವರ್ಗದವರು, ಶೋಷಿತರು ಮತ್ತು ಮಹಿಳೆಯರಿಗೆ ಸಮಾನ ಗೌರವ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಬಸವಣ್ಣನವರು ಅಂದೇ ಕ್ರಾಂತಿ ಮಾಡಿದ್ದರು.
ಅನುಭವ ಮಂಟಪದಲ್ಲಿ ಪ್ರತಿಯೊಬ್ಬ ಶರಣರ ವಚನಗಳು ಚರ್ಚೆಯಾಗಿ, ಎಲ್ಲರ ಒಪ್ಪಿಗೆಯ ನಂತರವೇ ಅಂಗೀಕರಿಸಲ್ಪಡುತ್ತಿದ್ದವು. “ಅಂದಿನ ಶರಣರು ನುಡಿದಂತೆ ನಡೆದವರು. ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕನಂತಹ ಶರಣೆಯರ ವಚನಗಳು ಇಂದಿಗೂ ನಮಗೆ ನೈತಿಕ ಶಕ್ತಿಯನ್ನು ತುಂಬುತ್ತವೆ. ಬಸವಣ್ಣನವರ ತತ್ತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯ ನೀತಿ ಹಾಗೂ ಯೋಜನೆ ಆಯೋಗ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ ಅವರು ಮಾತನಾಡಿ, ಇಂದಿನ ಜಗತ್ತಿನ ಹಸಿವು, ಅಶಾಂತಿ ಮತ್ತು ಅಸಮಾನತೆಯಂತಹ ಸಮಸ್ಯೆಗಳಿಗೆ ಬಸವಣ್ಣನವರ ವಿಚಾರಧಾರೆಗಳೇ ಮದ್ದಾಗಿದೆ. ಬಸವಣ್ಣನವರು ವಿಶ್ವದ ಮೊದಲ ಸಮಾಜವಾದಿ. ಅವರು ಸಂಪತ್ತಿನ ಕ್ರೋಢೀಕರಣವನ್ನು ವಿರೋಧಿಸಿ ಸಮಾನತೆಯ ಕ್ರಾಂತಿ ಮಾಡಿದವರು. ವಚನ ಸಾಹಿತ್ಯವೇ ನಮಗೆ ಶ್ರೇಷ್ಠ ಮಾರ್ಗದರ್ಶಿ ಎಂದು ಹೇಳಿದರು.
ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆಯ ಸಂದೇಶ ಸಾರಿದರು. ಬಿದ್ದವರನ್ನು ಮೇಲೆತ್ತುವ ಕೆಲಸವೇ ನಿಜವಾದ ಬಸವತತ್ವ ಎಂದರು.
ಸಮಾಜದಲ್ಲಿ ಸ್ತ್ರೀ ಸಮಾನತೆ, ಅಸ್ಪೃಶ್ಯತೆ ನಿವಾರಣೆ ಮತ್ತು ಕಾಯಕ ಧರ್ಮದ ಮಹತ್ವವನ್ನು ಬಸವಣ್ಣನವರು ನಮೂದಿಸಿದ್ದಾರೆ. ಈ ಬಾರಿಯ ಜಯಂತಿಯನ್ನು ಹಣ ವಸೂಲಿ ಮಾಡದೆ ಶಿಸ್ತುಬದ್ಧವಾಗಿ ಆಚರಿಸುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಹಾಗೂ ಆರ್ಥಿಕ ತಜ್ಞ ಡಾ. ಟಿ. ಆರ್. ಚಂದ್ರಶೇಖರ ಅವರು ಉಪನ್ಯಾಸ ನುಡಿಯಲ್ಲಿ, 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು ಕಟ್ಟಿದ ‘ಅನುಭವ ಮಂಟಪ’ವು ಇಂದಿನ ಸಂಸದೀಯ ವ್ಯವಸ್ಥೆಗೆ ಭದ್ರ ಬುನಾದಿಯಾಗಿದೆ. ಅಂದು ಶರಣರು ನಡೆಸಿದ ಚರ್ಚೆ ಹಾಗೂ ಸಂವಾದಗಳೇ ಇಂದಿನ ಸಂವಿಧಾನದ ಸಮಾನತೆ ಮತ್ತು ಹಕ್ಕುಗಳ ಮೂಲ ತತ್ವಗಳಾಗಿವೆ ಎಂದರು.
ಶರಣರು ಕಾಯಕವೇ ಕೈಲಾಸ ಎಂಬ ಸಿದ್ಧಾಂತದ ಮೂಲಕ ಶ್ರಮಕ್ಕೆ ಆಧ್ಯಾತ್ಮಿಕ ಗೌರವ ನೀಡಿದರು. ಅಂದೇ ಲಿಂಗ ಸಮಾನತೆ ಸಾರಿದ ವಚನಕಾರ್ತಿಯರು ಹೆಣ್ಣು ವಸ್ತುವಲ್ಲ ಎಂದು ಪ್ರತಿಪಾದಿಸಿದ್ದರು. ಪ್ರಕೃತಿಯಲ್ಲಿಲ್ಲದ ಜಾತಿ ತಾರತಮ್ಯವನ್ನು ಮನುಷ್ಯರು ಆಚರಿಸುತ್ತಿರುವುದು ವಿಷಾದನೀಯವಾಗಿದ್ದು, ಬಸವಣ್ಣನವರ ಸರ್ವಸಮಾನತೆಯ ತತ್ವ ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ಹುಡಗಿ ಅವರಿಗೆ ‘ಬಸವಶ್ರೀ’ ಪ್ರದಾನ
ಬಸವ ಜಯಂತಿ ಉತ್ಸವ ಸಮಿತಿ ಹಮ್ಮಿಕೊಂಡಿದ್ದ 893ನೇ ಬಸವ ಜಯಂತಿ ಸಮಾರಂಭದಲ್ಲಿ ಹಿರಿಯ ಸಾಹಿತಿ, ಚಿಂತಕ ಪ್ರೊ. ಆರ್.ಕೆ. ಹುಡಗಿ ಅವರಿಗೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡಿ 1 ಲಕ್ಷ ರೂ ಚೆಕ್ ನೀಡಿ ಗೌರವಿಸಲಾಯಿತು. ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದ ಸೃಷ್ಟಿ ಪಾಟೀಲ ಅವರಿಗೆ 1 ಲಕ್ಷ ರೂ. ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಯಿತು. ಸಮಾಜ ಸೇವಕ ಉಮೇಶ ಶೆಟ್ಟಿ ಹಾಗೂ ದುಲಂಗೆ ಅವರಿಗೂ ಗೌರವ ಸಮರ್ಪಿಸಲಾಯಿತು.
ಶ್ರೀ ಶರಣಬಸವೇಶ್ವರ ಸಂಸ್ಥಾನ ಮಾತೋಶ್ರೀ ಡಾ. ದಾಕ್ಷಾಯಿಣಿ ಅಪ್ಪ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಸವೇಶ್ವರ ಪುತ್ಥಳಿಗೆ ಎಲ್ಲ ಗಣ್ಯರು ಹಾಗೂ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಸಲ್ಲಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಶಶೀಲ್ ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಶರಣು ಮೋದಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್, ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಸೇರಿದಂತೆ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ಆರ್.ಜಿ. ಶೆಟಗಾರ, ರವೀಂದ್ರ ಶಾಬಾದಿ ಅಧಿಕಾರಿಗಳು ಮತ್ತು ಸಮಾಜದ ಮುಖಂಡರು, ಬಸವಾಭಿಮಾನಿಗಳು ಉಪಸ್ಥಿತರಿದ್ದರು.
