ಬಸವನಬಾಗೇವಾಡಿ
ಬಸವೇಶ್ವರರನ್ನು ಕ್ರಾಂತಿಕಾರಕ, ಸಾಮಾಜಿಕ ಸುಧಾರಕ ಎಂದು ಬಹುಚರ್ಚೆ ನಡೆಯುತ್ತದೆ. ಅವರು ಈ ನಾಡಿನ ಶ್ರೇಷ್ಠ ದಾರ್ಶನಿಕರಾಗಿದ್ದಾರೆ. ನಮಗೆ ಖಡ್ಗ ಹಿಡಿದ ಬಸವ ಬೇಡ. ಜ್ಞಾನಾರೂಢನಾದ ಬಸವ ಇಂದು ಅಗತ್ಯವಿದೆ.
ಷಟಸ್ಥಲಗಳು ವ್ಯಕ್ತಿಯ ಆಧ್ಯಾತ್ಮದ ವಿಕಾಸದ ಹಂತಗಳಾಗಿವೆ. ಶರಣರ ಅನುಭಾವ ಮೊದಲು ಹುಟ್ಟಿ ಬಳಿಕ ಆ ಅನುಭಾವದ ಅಡಿಪಾಯದ ಮೇಲೆ ಷಟಸ್ಥಲದ ವ್ಯವಸ್ಥೆ ರೂಪುಗೊಳ್ಳುತ್ತದೆ ಎಂದು ಮಂಡ್ಯ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಟಿ.ಎನ್. ವಾಸುದೇವ ಮೂರ್ತಿ ಹೇಳಿದರು.
ಪಟ್ಟಣದ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಆವರಣದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಬಸವೇಶ್ವರ ಜಯಂತ್ಯುತ್ಸವದ ಮೂರನೇ ದಿನ ಸೋಮವಾರ ಸಂಜೆ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬಸವೇಶ್ವರ ದೃಷ್ಟಿಕೋನದಲ್ಲಿ ಶರಣಸ್ಥಲ, ಐಕ್ಯಸ್ಥಲ’ ಕುರಿತು ಉಪನ್ಯಾಸ ನೀಡಿದರು.

ಬದುಕಿನಲ್ಲಿ ಯಾವ ರಚನೆಯೂ ವ್ಯವಸ್ಥಿತವಾಗಿ ಸೃಷ್ಟಿಯಾಗಿರುವುದಿಲ್ಲ. ಇರುವ ರಚನೆ ಕಾಲಾಂತರದಲ್ಲಿ ವ್ಯವಸ್ಥಿತ ರೂಪ ಪಡೆಯುವುದನ್ನೇ ನಾವು ಕಾಣುವೆವು. ಭಾಷೆ ಒಂದು ರಚನೆ ಮತ್ತು ವ್ಯಾಕರಣ ಒಂದು ವ್ಯವಸ್ಥೆ. ರಚನೆಯ ಅಡಿಪಾಯದ ಮೇಲೆ ವ್ಯವಸ್ಥೆ ರೂಪುಗೊಳ್ಳುತ್ತದೆ. ಒಂದು ಮಗು ವ್ಯಾಕರಣದ ಮೂಲಕ ಭಾಷೆ ಕಲಿಯುವುದಿಲ್ಲ, ನೇರವಾಗಿ ಭಾಷೆಯನ್ನೇ ಕಲಿಯುತ್ತದೆ. ನಂತರ ಆ ಭಾಷೆಗೆ ಒಂದು ವ್ಯಾಕರಣ ವ್ಯವಸ್ಥೆಯಾಗಿರುವುದನ್ನು ಅರಿಯುತ್ತದೆ. ಹಾಗೆಯೇ ಸಂಗೀತ ಹುಟ್ಟಿದ ಮೇಲೆ ʼಸ, ರಿ ಗ, ಮ, ಪ, ದ, ನಿʼ ಎಂಬ ಸಪ್ತಸ್ವರಗಳ ವ್ಯವಸ್ಥೆ ರೂಪುಗೊಳ್ಳುತ್ತದೆ. ಮೊದಲು ಕಾವ್ಯ ಹುಟ್ಟುತ್ತದೆ, ಬಳಿಕ ಕಾವ್ಯ ಮೀಮಾಂಸೆ ಹುಟ್ಟುತ್ತದೆ.
ಅಲ್ಲಮ ತನ್ನ ಒಂದು ವಚನದಲ್ಲಿ “ಅನುಭಾವದಿಂದ ಹುಟ್ಟಿತ್ತು ಲಿಂಗ, ಅನುಭಾವದಿಂದ ಹುಟ್ಟಿತ್ತು ಜಂಗಮ, ಅನುಭಾವದಿಂದ ಹುಟ್ಟಿತ್ತು ಪ್ರಸಾದ … ಗುಹೇಶ್ವರ ನಿಮ್ಮ ಅನುಭಾವದ ಅನುವಿನಲ್ಲಿ ಆನು ಸುಖಿಯಾದೆ” ಎಂದು ಹಾಡಿದ್ದಾನೆ. ನಮ್ಮ ಯಾವ ವಚನಕಾರರೂ ಭಕ್ತ, ಮಾಹೇಶ್ವರ, ಪ್ರಸಾದ, ಪ್ರಾಣಲಿಂಗೀ, ಶರಣ, ಐಕ್ಯ ಎಂಬ ಷಟ್ಸ್ಥಲಗಳ ಪಟ್ಟಿ ಮಾಡಿಕೊಂಡು ತರುವಾಯ ಆ ಶೀರ್ಷಿಕೆಗಳ ಅಡಿಯಲ್ಲಿ ವಚನಗಳನ್ನು ರಚನೆ ಮಾಡಲಿಲ್ಲ. ಬಸವಣ್ಣನಂತೂ ಹಾಗೆ ಬರೆದವರಲ್ಲ. ಅವರು ತಾನು ಒಲಿದಂತೆ ಹಾಡಿದವರು. ನಂತರ ಬಂದ ವಚನಗಳ ಸಂಕಲನಕಾರರು ಶರಣರ ಅನುಭಾವೋಕ್ತಿಗಳನ್ನು ಷಟ್ಸ್ಥಲಗಳಿಗೆ ಅನುಗುಣವಾಗಿ ವರ್ಗೀಕರಿಸುವ ಪ್ರಯತ್ನ ಮಾಡಿದರು ಎಂದರು.
ಷಟ್ಸ್ಥಲಗಳು ಅಂತರಂಗದ ವಿಕಾಸವನ್ನು ಗುರುತಿಸುವ ಆರು ಹಂತಗಳಾಗಿವೆ. ಜಗತ್ತಿನ ಎಲ್ಲ ಅನುಭಾವ ಪರಂಪರೆಗಳೂ ಅಂತರಂಗದ ವಿಕಾಸವನ್ನು ಗುರುತಿಸಲು ವಿವಿಧ ಹಂತಗಳನ್ನು ನಿಗದಿಪಡಿಸಿಕೊಂಡಿವೆ. ಆ ಹಂತಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿರಬಹುದು. ಆ ಹಂತಗಳನ್ನು ಹೆಸರಿಸುವ ಪದ-ಪರಿಭಾಷೆಗಳು ಬೇರೆ ಬೇರೆ ಇರಬಹುದು. ಆದರೆ ಅಂತರಂಗದ ಪಯಣವನ್ನು ಅನುಲಕ್ಷಿಸುವ ಇಂತಹುದೊಂದು ನೀಲನಕ್ಷೆಯನ್ನು ನಾವು ಎಲ್ಲ ಪರಂಪರೆಗಳಲ್ಲೂ ಕಾಣಬಹುದು.

ಬೌದ್ಧರು ಆರ್ಯ ಅಷ್ಟಾಂಗಿಕ ಮಾರ್ಗವನ್ನು ಬೋಧಿಸಿದರು. ಜೈನರಲ್ಲಿ ಜೀವ ಅಜೀವ, ಪಾಪ, ಪುಣ್ಯ, ಆಸ್ರವ, ಬಂಧನ, ಸಂವರ, ನಿರ್ಜರ, ಮೋಕ್ಷ ಎಂಬ ಒಂಬತ್ತು ಹಂತಗಳಿವೆ. ಸೂಫಿಗಳಲ್ಲಿ ಶರಿಯತ್, ತಾರೀಖತ್, ಮಾರಿಫತ್, ಹಕೀಕತ್, ಅನ ಅಲ್ ಹಕ್, ಫನಾ ಎಂಬ ಆರು ಹಂತಗಳಿವೆ. ವೇದಾಂತದಲ್ಲಿ ಈ ಹಂತಗಳನ್ನು ಸಾಧನ ಚತುಷ್ಟಯ ಎಂದು ಕರೆಯುತ್ತಾರೆ. ನಿತ್ಯಾನಿತ್ಯ ವಸ್ತು ವಿವೇಕ, ಇಹಾಮುತ್ರ ಫಲಭೋಗ ವಿರಾಗ, ಶಮದಮಾದಿ ಷಟ್ಕರ್ಮ ಸಂಪತ್ತಿ, ಮುಮುಕ್ಷುತ್ವಮ್ ಇವೇ ಆ ನಾಲ್ಕು ಸಾಧನೆಗಳು. ಪತಂಜಲಿಯ ಅಷ್ಟಾಂಗ ಯೋಗದಲ್ಲಿ ಯಮ, ನಿಯಮಾದಿ ಎಂಟು ಅಂಗಗಳಿರುವುದನ್ನು ಕಾಣಬಹುದು ಎಂದರು.
ನಮ್ಮ ಶರಣರ ವಚನಗಳನ್ನು ಭಕ್ತ, ಮಾಹೇಶ್ವರ ಮುಂತಾದ ಷಟ್ಸ್ಥಲಗಳಿಗೆ ಅನ್ವಯಿಸುವ ಹಾಗೆ ಆರ್ಯ ಅಷ್ಟಾಂಗಿಕ ಮಾರ್ಗದ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ ಮುಂತಾದವುಗಳಿಗೂ, ಅಷ್ಟಾಂಗ ಯೋಗದ ಎಂಟು ಅಂಗಗಳಿಗೂ, ಸಾಧನ ಚತುಷ್ಟಯಗಳಿಗೂ ಹಾಗೆಯೇ ಸೂಫೀ, ಜೈನ ಮುಂತಾದ ದರ್ಶನಗಳು ಮಾಡಿಕೊಂಡಿರುವ ವರ್ಗೀಕರಣಗಳಿಗೂ ಹೊಂದುವಂತೆ ಅನ್ವಯಿಸಲು ಸಾಧ್ಯವಿದೆ. ವಚನಗಳು ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮುಂತಾದ ಸಿದ್ಧಾಂತಗಳ ಹಾಗೆ ಏಕವ್ಯಕ್ತಿಯಿಂದ ಪ್ರತಿಪಾದಿತವಾದ ಸಿದ್ಧಾಂತವಲ್ಲ.
ಅನುಭವ ಮಂಟಪದಲ್ಲಿ ಯಾವುದೇ ವಿಷಯ ಚರ್ಚೆಗೆ ಬಂದರೂ ಅದನ್ನು ಒಬ್ಬ ವಚನಕಾರ ಪ್ರತಿಪಾದಿಸುತ್ತಿರಲಿಲ್ಲ. ಆ ವಿಚಾರವನ್ನು ಎಲ್ಲ ವಚನಕಾರರೂ ಕುಳಿತು ಸಮಾನವಾಗಿ ಚರ್ಚಿಸುತ್ತಿದ್ದರು. ವಾಗ್ವಾದ ನಡೆಸುತ್ತಿದ್ದರು. ಅಂತಿಮವಾಗಿ ಒಂದು ನಿರ್ಣಯಕ್ಕೆ ಬರುತ್ತಿದ್ದರು. ವಚನಗಳ ದಾರ್ಶನಿಕತೆ ಆ ಕಾಲಮಾನದ ಸಮಸ್ತ ಅನುಭಾವಿಗಳ ಮಾತು ಮಾತುಗಳಿಂದ ಮಥಿಸಿ ಬಂದ ನವನೀತವಾಗಿದೆ. ಅನುಭವ ಮಂಟಪವನ್ನು ಇಂದಿನ ಸಂಸತ್ ವ್ಯವಸ್ಥೆಗೆ ಹೋಲಿಸುವುದು ಎಂದರು.

ಭಕ್ತ ಸ್ಥಲ ಪ್ರಾರಂಭಿಕ ಬಿಂದುವಾಗಿದೆ. ಶರಣರಲ್ಲಿ ಭಕ್ತಿಯೇ ಅಂತಿಮ ಸಿದ್ಧಿಯಲ್ಲ. ಏಕೆಂದರೆ ಬರೀ ಭಕ್ತಿಯಿಂದ ಏನೂ ಸಾಧ್ಯವಾಗುವುದಿಲ್ಲ. ಮಹೇಶಸ್ಥಲ, ಪ್ರಸಾದಿಸ್ಥಲ, ಪ್ರಾಣಲಿಂಗಸ್ಥಲ, ಶರಣಸ್ಥಲ, ಐಕ್ಯಸ್ಥಲ ಮುಂದಿನ ಹಂತಗಳಾಗಿವೆ. ವಚನಕಾರರ ವಿಶೇಷತೆ ಏನೆಂದರೆ ಸ್ಥೂಲ ಶರೀರವಿರುವಾಗಲೇ ಸೂಕ್ಷ್ಮ, ಕಾರಣ ಶರೀರಗಳು ಲಯವಾಗುವ ಸಾಧ್ಯತೆಯನ್ನು ವಚನಕಾರರು ಒಪ್ಪುತ್ತಾರೆ. ಜೀವನ್ಮುಕ್ತಿ ಅಥವಾ ವಿದೇಹ ಮುಕ್ತಿಯನ್ನು ಅನುಮೋದಿಸುತ್ತಾರೆ. ಅಂತಹವರನ್ನು ಬಸವಾದಿ ಶರಣರು ಅಘಟಿತ ಘಟಿತರು, ವಿಪರೀತ ಚರಿತ್ರರು ಎಂದು ಕರೆಯುತ್ತಾರೆ ಎಂದರು.
ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ ಮಾತನಾಡಿ, 12 ನೇ ಶತಮಾನದಲ್ಲಿ ಸಾಮಾಜಿಕ,ಧಾರ್ಮಿಕ, ಆರ್ಥಿಕ, ಸಾಹಿತಿಕ ಕ್ರಾಂತಿಯಾಗಿದೆ. ಶರಣರು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾದ ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ ರಚಿಸಿದರು. ವಚನಗಳು ಗದ್ಯದಂತೆ, ಪದ್ಯದಂತೆ ಹಾಡಬಹುದಾಗಿದೆ. ಇದು ವಚನ ಸಾಹಿತ್ಯ ವಿಶೇಷವಾಗಿದೆ. ವಚನ ಸಾಹಿತ್ಯದ ಮೂಲಕ ಅನೇಕ ತತ್ವಗಳನ್ನು ಶರಣರು ನಮಗೆ ನೀಡಿದ್ದಾರೆ. ಅವುಗಳ ಪಾಲನೆ ಅಗತ್ಯವಿದೆ ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರುನಾಥ ದಡ್ಡೆ ಇದ್ದರು. ಎಸ್.ಎಂ. ಬಿಸ್ಟಗೊಂಡ ಸ್ವಾಗತಿಸಿದರು. ಎಸ್.ಎಸ್. ಹಡಪದ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶ್ರೀರಾಮ ಕಾಸರ ತಂಡದಿಂದ ವಚನ ಸಂಗೀತ, ಬೆಂಗಳೂರಿನ ನವ್ಯ ನಾಟ್ಯ ಸಂಘದಿಂದ ಅಲ್ಲಮನ ನೃತ್ಯರೂಪಕ, ವಚನ ನೃತ್ಯ ಜರುಗಿತು.
ನಂತರ ರಾತ್ರಿ ಪಟ್ಟಣದಲ್ಲಿ ಅಲಂಕೃತ ಬಸವೇಶ್ವರ ಪಲ್ಲಕ್ಕಿ ಹಾಗೂ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ಮಂಗಲ ವಾದ್ಯ ವೈಭವದೊಂದಿಗೆ ಬೆಳಗಿನ ಜಾವದವರೆಗೂ ಜರುಗಿತು.
