ಬಸವ ಪುತ್ಥಳಿಗೆ ಶಂಕುಸ್ಥಾಪನೆ, ಬೆಲ್ದಾಳ ಶರಣರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ

ಬಸವ ಮೀಡಿಯಾ
ಬಸವ ಮೀಡಿಯಾ

ಕರ್ಮ, ವರ್ಣಾಶ್ರಮ ತಿರಸ್ಕರಿಸಿ, ಬಸವಾದಿ ಶರಣರ ಮಾರ್ಗದಲ್ಲಿ ನಡೆಯಲು ಕರೆ

ಮೈಸೂರು

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾ ಬಸವ ದಳಗಳ ಒಕ್ಕೂಟ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಉದ್ಘಾಟಿಸಿದರು.

ಸಿದ್ದರಾಮ ಬೆಲ್ದಾಳ ಶರಣರಿಗೆ ‘ಬಸವ ರಾಷ್ಟ್ರೀಯ ಪುರಸ್ಕಾರ’ ಪ್ರಶಸ್ತಿ ಪ್ರದಾನ ಮಾಡಿ ಸಿದ್ದರಾಮಯ್ಯ ಸಮಸಮಾಜದ ಕನಸು ಬಿತ್ತಿದ ಬಸವಾದಿ ಶರಣರ ಆಶಯಗಳು ಎಲ್ಲೆಡೆ ಮೊಳಕೆಯೊಡೆದು, ಹೆಮ್ಮರವಾಗಿ ಬೆಳೆದು ನಾಡು ಕಲ್ಯಾಣ ರಾಜ್ಯವಾಗಲಿ ಎಂದು ಸೋಮವಾರ ಹಾರೈಸಿದರು.

‘ನಾನು ಬಸವಣ್ಣನವರ ಪಕ್ಕಾ ಅನುಯಾಯಿ. ನಮ್ಮ ಗ್ಯಾರಂಟಿ ಯೋಜನೆಗಳು ಕೂಡ ಬಸವ ತತ್ವದಂತೆ ಎಲ್ಲರನ್ನೂ ಒಳಗೊಂಡಿದೆ,’ ಎಂದರು.

‘ಮನುವಾದಿಗಳು ಮೂಢನಂಬಿಕೆಗಳನ್ನು ಬಿತ್ತಿ, ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಲೇ ಇರುತ್ತಾರೆ. ನಾವು ಯಾಕೆ ಅನಕ್ಷರಸ್ಥರು, ಬಡವರು, ಸೂರಿಲ್ಲದವರು ಎಂಬ ಕಾರಣ ಎಲ್ಲರೂ ತಿಳಿದುಕೊಳ್ಳಬೇಕು. ಬಸವಣ್ಣ, ಬುದ್ಧ, ಗಾಂಧೀಜಿ, ಅಂಬೇಡ್ಕರ್ ಹೋರಾಟ ನೆನೆಯಬೇಕು,’ ಎಂದು ಹೇಳಿದರು.

‘ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಶಪಥ ಮಾಡಬೇಕು. ವೈಜ್ಞಾನಿಕ, ವೈಚಾರಿಕ ಶಿಕ್ಷಣ ಪಡೆಯಲೇಬೇಕು. ಪಟ್ಟಭದ್ರ ಹಿತಾಸಕ್ತಿಗಳ ಕರ್ಮ, ವರ್ಣಾಶ್ರಮ ಸಿದ್ಧಾಂತವನ್ನು ತಿರಸ್ಕರಿಸಬೇಕು,’ ಎಂದರು.

ಪುರಸ್ಕಾರ ಸ್ವೀಕರಿಸಿದ ಸಿದ್ಧರಾಮ ಶರಣ ಬೆಲ್ದಾಳ ಮಾತನಾಡಿ, ‘ರಾಜ್ಯ ಸರ್ಕಾರದಿಂದ ಬಸವ ಪರ ಕಾರ್ಯಗಳು ಆಗಿವೆ. ಸಾಂಸ್ಕೃತಿಕ ನಾಯಕ ಘೋಷಣೆ, ಕಚೇರಿಗಳಲ್ಲಿ ಭಾವಚಿತ್ರ ಸ್ಥಾಪನೆ, ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ, ಗ್ಯಾರಂಟಿಗಳ ಅನುಷ್ಠಾನವು ಬಸವ ತತ್ವದ ಕನಸುಗಳಾಗಿವೆ’ ಎಂದು ಶ್ಲಾಘಿಸಿದರು.

‘ಹಿಂದೂ ಒಂದು ಎಂಬುದು ಬೋಗಸ್ಸು. ಮಾನವತೆ ಒಂದಾಗಬೇಕು. ಸಮ ಸಮಾಜ ನಿರ್ಮಾಣದಿಂದ ಮಾತ್ರವೇ ಭಾರತವು ಒಂದಾಗುತ್ತದೆ. ಬಸವನ ಅನುಯಾಯಿ ಎಂಬುದಕ್ಕೆ‌ ಎದೆಗಾರಿಕೆ ಬೇಕು. ಅದನ್ನು ಸಿದ್ದರಾಮಯ್ಯ, ಮಹದೇವಪ್ಪ ಯಾವಾಗಲೂ ಹೇಳಿಕೊಳ್ಳುತ್ತಾರೆ’ ಎಂದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಜನರ ಭಾಷೆಯಾದ ಕನ್ನಡವನ್ನು ದೈವ ಭಾಷೆಯಾಗಿಸಿದ ನಾಯಕ ಬಸವಣ್ಣ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ನಾಡಿನ ಧ್ರುವತಾರೆಗಳು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಲು, ಬಸವ ತತ್ವಗಳ ಅನುಷ್ಠಾನ ಸೇವೆಯಲ್ಲಿ ನಿರತರಾಗಿರುವ ಸಿದ್ಧರಾಮ ಶರಣರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಕಲ್ಯಾಣ ಕ್ರಾಂತಿ ವಿಚಾರಗಳನ್ನು ಪಸರಿಸುತ್ತಿರುವ ಅವರಿಗೆ ಮಹಾರಾಷ್ಟ್ರ ಸರ್ಕಾರದ ಬಸವ ಭೂಷಣ ಪ್ರಶಸ್ತಿಯೂ ಬಂದಿದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ‘ಯುವಕರು ಕೋಮುವಾದಕ್ಕೆ ಬಲಿಯಾಗದೇ ಬಸವ ತತ್ವಗಳನ್ನು ಅನುಸರಿಸಬೇಕು. ಜಾಗೃತಿ ಮೂಡಿಸಲು ಇಲಾಖೆಯು ಪ್ರತಿ ಜಿಲ್ಲೆಯಲ್ಲಿಯೂ ಬಸವ ಜಯಂತಿ ಆಚರಿಸುತ್ತಿದೆ’ ಎಂದು ಹೇಳಿದರು.

ಇದೇ ವೇಳೆ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆಯ ಶಿಲಾನ್ಯಾಸ ಅನಾವರಣಗೊಳಿಸಲಾಯಿತು. ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಸಂಸದ ಸುನಿಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಜಿ.ಟಿ.ದೇವೇಗೌಡ, ಗಣೇಶ್ ಪ್ರಸಾದ್, ವಿಜಯಾನಂದ ಕಾಶಪ್ಪನವರ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ಭೋವಿ ಅಭಿವೃದ್ಧಿ ನಿಗಮದ ಎಂ.ರಾಮಪ್ಪ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ನಿರ್ದೇಶಕ ಬಿ‌.ಎಸ್.ಮಂಜುನಾಥ ಸ್ವಾಮಿ, ಪ್ರಾದೇಶಿಕ ಆಯುಕ್ತ‌ ನಿತೇಶ್ ಪಾಟೀಲ, ಜಿಲ್ಲಾಧಿಕಾರಿ‌ ಜಿ.ಲಕ್ಷ್ಮಿಕಾಂತರೆಡ್ಡಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *