ಭಾವಪೂರ್ಣವಾಗಿ ಸಮಾರೋಪಗೊಂಡ ಬಸವ ಭಾಷೆ ಪ್ರವಚನ
ಕೊಪ್ಪಳ
ಬಸವ ಜಯಂತಿ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದ ಕೊನೆಯದಿನ ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ಸದಸ್ಯರು ವಚನಕಟ್ಟುಗಳನ್ನು ಹೊತ್ತು ಬಸವ ಜಾಥಾ ನಡೆಸಿದರು.
ನಗರದ ಮಧ್ಯದಲ್ಲಿರುವ ಬಸವಣ್ಣ ದೇವಸ್ಥಾನದಿಂದ ಪ್ರವಚನ ಸ್ಥಳವಾದ ತಾಲೂಕು ಸಾರ್ವಜನಿಕ ಕ್ರೀಡಾಂಗಣದವರೆಗೆ ನೂರಾರು ಜನ ಶರಣ ಶರಣೆಯರು ವಚನ ಕಟ್ಟುಗಳನ್ನು ಹೊತ್ತು, ವಚನ ಹೇಳುತ್ತ, ಬಸವಾದಿ ಶರಣರಿಗೆ ಜಯಘೋಷ ಹಾಕುತ್ತಾ ಅತ್ಯಂತ ಸಂಭ್ರಮದಿಂದ ಸಾಗಿದರು.

ಟಣಕನಕಲ್ಲ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಪರಪ್ಪ ಗೊಂದಿಹೊಸಳ್ಳಿ, ಕೊಪ್ಪಳ ಜಿಲ್ಲಾ ಟೇಲರ್ಸ್ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ ಆವಜಿ, ಕೊಪ್ಪಳ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಹನಮೇಶ ಕಲ್ಮಂಗಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅರ್ಚನಾ ಸಸಿಮಠ, ಯುವ ಘಟಕದ ಅಧ್ಯಕ್ಷ ಶೇಖರ ಇಂಗಳದಾಳ, ಶಿವಶರಣೆ ನೀಲಾಂಬಿಕಾತಾಯಿ ಮಹಿಳಾ ಪ್ರತಿಷ್ಠಾನದ ಅಧ್ಯಕ್ಷೆ ವಿಶಾಲಾಕ್ಷಮ್ಮಾ, ಕಾರ್ಯದರ್ಶಿ ಶ್ರೀದೇವಿ ಇಂಗಳದಾಳ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ವೀರಭದ್ರಪ್ಪ ನಂದ್ಯಾಲ, ಕಾರ್ಯದರ್ಶಿ ಬಾಪೂಗೌಡ ಪಾಟೀಲ ಇನ್ನಿತರ ಗಣ್ಯರು, ಅನೇಕ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.
ಭಾವಪೂರ್ಣವಾಗಿ ನಡೆದ ಪ್ರವಚನ ಸಮಾರೋಪ
ಬಸವತತ್ವಗಳಲ್ಲಿನ ಸರಳತೆಯೇ ಆಕರ್ಷಣೆ ಎಂದು ಕೊಪ್ಪಳ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಪ್ರೊ. ಎಸ್.ವಿ. ಡಾಣಿ ನುಡಿದರು.
ಅವರು ಕೊಪ್ಪಳದಲ್ಲಿ ಬಸವ ಜಯಂತಿ ಪ್ರಯುಕ್ತ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ವತಿಯಿಂದ 15 ದಿನಗಳವರೆಗೆ ನಡೆದ ಬಸವ ಭಾಷೆ ಪ್ರವಚನದ ಸಮಾರೋಪ ಸಮಾಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಬಸವಣ್ಣನವರು ಮೊಟ್ಟಮೊದಲ ಭಾರತೀಯ ಸ್ವತಂತ್ರ ಚಿಂತಕ, ಅವರನ್ನು ಭಾರತದ ಮಾರ್ಟಿನ್ ಲೂಥರ್ ಎಂದು ಕರೆಯಬಹುದು. ಅವರು ಲಿಂಗ ಸಮಾನತೆ, ವರ್ಗ ಸಮಾನತೆ, ಕುಲ-ಜಾತಿ ನಿವಾರಣೆ, ಸಾಮಾಜಿಕ ನ್ಯಾಯವನ್ನು ಸಾಧಿಸಿದ್ದಾರೆ. ಬಾಲ್ಯವಿವಾಹ ತಪ್ಪು ಎಂಬ ಅರಿವು ಮತ್ತು ವಿಧವೆಯರಿಗೆ ಮರುಮದುವೆಯಾಗಲು ಅವಕಾಶ ನೀಡಬೇಕು ಎಂದು ಬೋಧಿಸಿದರು. ವೈಯಕ್ತಿಕ ಸ್ವಾತಂತ್ರ್ಯವನ್ನುಅನುಭವಿಸುವಂತೆ ಮಾಡಿದರು.
ದೈವಿಕ ಇಷ್ಟಲಿಂಗವನ್ನು ಧರಿಸಿದವರೆಲ್ಲರೂ ಒಂದೇ ಮತ್ತು ಸರ್ವಸಮಾನರು ಎಂದು ಸಾರಿದರು. ಎಲ್ಲರೂ ಒಟ್ಟಿಗೆ ಉಣ್ಣಬೇಕು. ಪರಸ್ಪರ ರಕ್ತಸಂಬಂಧ ಬೆಳೆಸಿದಾಗ ಬಸವತತ್ವಗಳು ಸಾಕಾರಗೊಳ್ಳುತ್ತವೆಯೆಂದರು.

ಕೊಪ್ಪಳದ ಮುಖಂಡರಾದ ಸಿ. ವಿ. ಚಂದ್ರಶೇಖರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತೆ ಮತ್ತು ಕರ್ನಾಟಕ ಚಲನಚಿತ್ರ ಮಂಡಳಿ ಸದಸ್ಯೆ ಸಾವಿತ್ರಿ ಮುಜಮದಾರ ಅವರು ಉಪಕುಲಪತಿಗಳನ್ನು ಪರಿಚಯಿಸಿದರು.
ಪ್ರವಚನಕಾರರಾದ ಪೂಜ್ಯ ಪ್ರಭುದೇವ ಮಹಾಸ್ವಾಮಿಗಳಿಗೆ ಅವರ ಪ್ರವಚನ ಆಲಿಸಿದ ಸಾವಿರಾರು ಜನ ವಿಶೇಷವಾಗಿ ಗೌರವಿಸಿದರು. ಕಳೆದೆಲ್ಲ ವರ್ಷಗಳಿಗಿಂತ ವಿಭಿನ್ನ ಮತ್ತು ಭಾವಪೂರ್ಣವಾಗಿ ಸ್ವಾಮೀಜಿ ಅವರನ್ನು ಬೀಳ್ಕೊಟ್ಟರು.

ಸಾವಿರಾರು ಜನ ಶರಣ ಶರಣೆಯರು ಕಳೆದ 15 ದಿನ ಬಸವಭಾಷೆ ಪ್ರವಚನ ಆಲಿಸಿದರು, ಅರಿವು ಮೂಡಿಸಿಕೊಂಡರು.
