ಅಣ್ಣಾವ್ರ ಮೊದಲ ಚಿತ್ರದಲ್ಲಿ ಕುಬಸದ ಶಿವಪ್ಪನವರು ವಹಿಸಿದ ಮಹತ್ವದ ಪಾತ್ರ

ಬಸವ ಮೀಡಿಯಾ
ಬಸವ ಮೀಡಿಯಾ

ನಿಸ್ವಾರ್ಥ ಸೇವೆಯ ಗಾಂಧಿವಾದಿ ಕುಬಸದ ಶಿವಪ್ಪ:

ಬೆಂಗಳೂರು

ಡಾ. ರಾಜ್‌ಕುಮಾರ್ ಅವರು ಬೆಳ್ಳಿತೆರೆಯ ಮೇಲೆ ‘ಕಣ್ಣಪ್ಪ’ನಾಗಿ ಅವತರಿಸಿದ್ದು ಈಗ ಇತಿಹಾಸ.

ಆದರೆ, ಮುತ್ತುರಾಜ ಎಂಬ ರಂಗಭೂಮಿ ಕಲಾವಿದ ಕನ್ನಡ ಚಿತ್ರರಂಗದ ‘ರಾಜಕುಮಾರ’ನಾಗಿ ಹೊರಹೊಮ್ಮುವ ಪ್ರಕ್ರಿಯೆಯಲ್ಲಿ ಗದುಗಿನ ಗಾಂಧಿವಾದಿ ಕುಬಸದ ಶಿವಪ್ಪನವರು ವಹಿಸಿದ ಪಾತ್ರ ಮಾತ್ರ ಅಷ್ಟಾಗಿ ಬೆಳಕಿಗೆ ಬಂದಿಲ್ಲ.

ಈ ಹಿಂದೆ ಕುಬಸದ ಶಿವಪ್ಪನವರು ಮುತ್ತುರಾಜ್ ಅವರಿಗೆ ಕಣ್ಣಪ್ಪನ ಪಾತ್ರ ಕೊಡಿಸುವಲ್ಲಿ ವಹಿಸಿದ ಪಾತ್ರದ ಬಗ್ಗೆ ಈ ಹಿಂದೆ ಅಲ್ಪ ಸ್ವಲ್ಪ ಓದಿದ್ದೆ, ಆದರೆ 15 ದಿನಗಳ ಹಿಂದೆ ಶಿವಪ್ಪ ಕುಬಸದನವರ ಕುಟುಂಬ ಸದಸ್ಯರು ಬೇಡರ ಕಣ್ಣಪ್ಪ ಚಿತ್ರದಲ್ಲಿ ಮುತ್ತುರಾಜ್ ಕಣ್ಣಪ್ಪನ ಮುಖ್ಯಪಾತ್ರದಲ್ಲಿ ಅಭಿನಯಿಸಲಿಕ್ಕೆ ಕುಬಸದ ಶಿವಪ್ಪನವರು ಪತ್ರ ವ್ಯವಹಾರದ ಮೂಲಕ ನಡೆಸಿದ ಮಧ್ಯಸ್ಥಿಕೆಯ ವಿಚಾರಕ್ಕೆ ಸಂಬಂಧಿಸಿದ ಕೆಲವು ಮೂಲ ದಾಖಲೆಗಳನ್ನು ನನಗೆ ಸಾಫ್ಟ್ ಪ್ರತಿ ರೂಪದಲ್ಲಿ ನೀಡಿದಾಗ ಈ ವಿಷಯ ಮತ್ತಷ್ಟು ಖಚಿತವಾಯಿತು.

ಅದು 1950 ರ ಕಾಲಘಟ್ಟ, ಇಡೀ ಉತ್ತರ ಕರ್ನಾಟಕ ಪ್ರದೇಶದಲ್ಲಿ ವೃತ್ತಿ ರಂಗಭೂಮಿ ಉತ್ತುಂಗದಲ್ಲಿದ್ದಂತಹ ಕಾಲ, ಹಳ್ಳಿ ನಗರಗಳೆನ್ನದೇ ಡ್ರಾಮಾ ಕ್ಯಾಂಪ್ ಗಳನ್ನು ಹಾಕಿ ನಾಟಕ ಪ್ರದರ್ಶನವನ್ನು ನಿಡುತ್ತಿದ್ದಂತಹ ಸಮಯ.ಇದೇ ವೇಳೆ ವೃತ್ತಿ ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್.

ಅವರು ಕಂಪನಿ ನಾಟಕಗಳಲ್ಲಿ ನಟರಾಗಿ ಗಾಯಕರಾಗಿ ಉತ್ತರ ಕರ್ನಾಟಕದಾದ್ಯಂತ ಸಂಚರಿಸಿ ನಾಟಕ ಪ್ರದರ್ಶನವನ್ನು ನೀಡುತ್ತಿದ್ದವರು.ವೃತ್ತಿ ರಂಗಭೂಮಿಯನ್ನು ಅರಸಿ ಬಂದಿದ್ದ ಮುತ್ತುರಾಜ ಆಗ ಹುಬ್ಬಳ್ಳಿಯಲ್ಲಿ ಕ್ಯಾಂಪ್ ಹಾಕಿದ್ದ ಎಸ್.ಎಸ್ ನಾಟಕ ಮಂಡಳಿಯಲ್ಲಿ ನಟರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ತಮ್ಮ ಪ್ರತಿಭೆಯಿಂದ ಆಗಲೇ ವೃತ್ತಿರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ರಾಜಕುಮಾರ್ ಅವರ ಹೆಸರು ಬೆಂಗಳೂರು, ಸಿಕಂದರಾಬಾದ್ ನಿಂದ ಹಿಡಿದು ಮದ್ರಾಸ್ ವರೆಗೂ ತಲುಪಿತ್ತು. ಇದೇ ವೇಳೆ ಗುಬ್ಬಿ ವೀರಣ್ಣನವರು ದಿ ಕರ್ನಾಟಕ ಫಿಲಂಸ್ ಲಿಮಿಟೆಡ್ ಅಡಿಯಲ್ಲಿ ಸಿನಿಮಾ ತಯಾರಿಸುವ ಕೆಲಸಕ್ಕೆ ಮುಂದಾಗಿದ್ದರು. ಆಗ ಕಣ್ಣಪ್ಪನ ಚಿತ್ರದಲ್ಲಿ ಕಲಾವಿದರ ಹುಡುಕಾಟದಲ್ಲಿ ತೊಡಗಿದ್ದರು. ಆಗ ಗುಬ್ಬಿ ಕಂಪನಿಯವರು ಹುಬ್ಬಳ್ಳಿಯಲ್ಲಿ ಕ್ಯಾಂಪ್ ಹಾಕಿದ್ದ ಎಸ್ ಎಸ್ ನಾಟಕ ಮಂಡಳಿಯನ್ನು ಸಂಪರ್ಕಿಸಿ ರಾಜಕುಮಾರ್ ಅವರಿಗೆ ಈ ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಮನವಿ ಮಾಡಿದರು.

ಮದ್ರಾಸ್‌ನ ಎವಿಎಂ ಸ್ಟುಡಿಯೋ ನಿರ್ಮಿಸುತ್ತಿದ್ದ ಈ ಚಿತ್ರದಲ್ಲಿ ಮುತ್ತುರಾಜ್ ಅಭಿನಯಿಸುವ ವಿಚಾರವಾಗಿ ಇಂಗ್ಲಿಷ್‌ನಲ್ಲಿ ಕರಾರು ಪತ್ರ ಸಹಿತ ಸಿದ್ಧವಾಯಿತು.

ಆದರೆ ಆಗ ಮುತ್ತುರಾಜಗೆ ಇಂಗ್ಲಿಶ್ ಬರುತ್ತಿರಲಿಲ್ಲವಾದ್ದರಿಂದಾಗಿ ಆಗ ಹುಬ್ಬಳ್ಳಿಯಲ್ಲಿ ನವಯುಗ ಪತ್ರಿಕೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗದುಗಿನ ಕುಬಸದ ಶಿವಪ್ಪನವರನ್ನು ಸಂಪರ್ಕಿಸಿ ಪತ್ರದ ಸಾರವನ್ನು ತಿಳಿಸಲು ಮನವಿ ಮಾಡಿದರು.

ಆಗ ಪತ್ರವನ್ನು ಓದಿದ ಗದುಗಿನ ಕುಬಸದ ಶಿವಪ್ಪನವರು ‘ಯಾವುದೇ ಪಾತ್ರ ನಿರ್ವಹಿಸಬೇಕು’ ಎನ್ನುವ ವಾಕ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕ ದಿ ಕರ್ನಾಟಕ ಫಿಲಂಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿ. ಬಸಯ್ಯನವರಿಗೆ ಆಗಸ್ಟ್ 31, 1953 ರಂದು ಪತ್ರ ಬರೆದರು.

ಆಗ ಕುಬಸದ ಶಿವಪ್ಪನವರ ಮನವಿಗೆ ಸ್ಪಂದಿಸಿದ ಬಸಯ್ಯನವರು ತಕ್ಷಣವೇ ಸೆಪ್ಟೆಂಬರ್ 1, 1953 ರಲ್ಲಿ ಪತ್ರ ಬರೆದು ಯಾವುದೇ ಪಾತ್ರ ಎನ್ನುವುದನ್ನು ಅಳಿಸಿ ಚಿತ್ರದ ಕಣ್ಣಪ್ಪನ ಮುಖ್ಯ ಪಾತ್ರದಲ್ಲಿ ಎಂದು ಸೇರಿಸಿಕೊಳ್ಳಿ ಆಗ ಯಾವುದೇ ಗೊಂದಲ ಇರುವುದಿಲ್ಲ ಎನ್ನುವ ಉತ್ತರ ಕುಬಸದ ಶಿವಪ್ಪನವರಿಗೆ ನೀಡಿದರು.

ಅಷ್ಟೇ ಅಲ್ಲದೇ ಸೆಪ್ಟಂಬರ್ 7 ಹಾಗೂ 8 ರಿಂದ ಬೇಡರ ಕಣ್ಣಪ್ಪ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಹಾಗಾಗಿ ತಕ್ಷಣವೇ ಮುತ್ತುರಾಜ್ ಅವರಿಗೆ ಚಿತ್ರೀಕರಣದಲ್ಲಿ ಭಾಗಿಯಾಗಬೇಕೆಂದು ಅವರು ಸೂಚಿಸಬೇಕೆಂದು ಮನವಿ ಮಾಡಿದರು.

ಕರಾರಿನ ಪ್ರಕಾರವಾಗಿ ಬೇಡರ ಕಣ್ಣಪ್ಪ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಲು ಮುತ್ತುರಾಜ್ ಅವರಿಗೆ ಅಡ್ವಾನ್ಸ್ ರೂಪದಲ್ಲಿ 900 ರೂಪಾಯಿಗಳನ್ನು ಹುಬ್ಬಳ್ಳಿಯಲ್ಲಿನ ಕೆನರಾ ಇಂಡಸ್ಟ್ರಿಯಲ್ ಆಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಬ್ಯಾಂಕ್ ಡ್ರಾಫ್ಟ್ ಮೂಲಕ ಹಣವನ್ನು ಕಳಿಸಲಾಯಿತು.

ಹೀಗೆ ಗದುಗಿನ ಕುಬಸದ ಶಿವಪ್ಪನವರ ಸಮಯಪ್ರಜ್ಞೆ ಮತ್ತು ಮಧ್ಯಸ್ಥಿಕೆಯಿಂದಾಗಿ ಮುತ್ತುರಾಜ್ ಅವರು ಕೇವಲ ಪೋಷಕ ನಟರಾಗುವ ಬದಲು ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಸುವರ್ಣ ಅವಕಾಶ ಒದಗಿ ಬಂದಂತಾಯಿತು.

ನಿಸ್ವಾರ್ಥ ಸೇವೆಯ ಗಾಂಧಿವಾದಿ ಕುಬಸದ ಶಿವಪ್ಪ:

ನಿಸ್ವಾರ್ಥ ಸೇವೆಯ ಹೋರಾಟದ ಬದುಕನ್ನು ನಡೆಸಿದ ಕುಬಸದ ಶಿವಪ್ಪನವರು ಗದುಗಿನ ಶಹಾಪುರ ಪೇಟೆಯಲ್ಲಿ ಸೆಪ್ಟಂಬರ್ 10, 1908 ರಂದು ಜನಿಸಿದರು.ಮ್ಯಾಟ್ರಿಕ್ ವರೆಗೆ ಅಧ್ಯಯನ ಮಾಡಿದ ಶಿವಪ್ಪನವರು 1928 ರಲ್ಲಿ ತಮ್ಮ ಹೆಚ್ಚಿನ ಅಧ್ಯಯನವನ್ನು ಅರ್ಧಕ್ಕೆ ಬಿಟ್ಟು ಸ್ವಾತಂತ್ರ ಹೋರಾಟಕ್ಕೆ ಧುಮುಕಿ ಕಾನೂನು ಭಂಗ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅಹಮದ್ ನಗರದಲ್ಲಿ ಒಂದು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದರು.

ಅಷ್ಟೇ ಅಲ್ಲದೆ ಚಲೇಜಾವ್ ಚಳುವಳಿ ಹಾಗೂ ಏಕೀಕರಣ ಹೋರಾಟದಲ್ಲಿಯೂ ಕೂಡ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಇಂತಹ ಮಹಾನ್ ನಾಯಕ ಸಾಮಾಜಿಕ ಸೇವೆಯನ್ನು ಪರಿಗಣಿಸಿದ ಮುಖ್ಯಮಂತ್ರಿ ನಿಜಲಿಂಗಪ್ಪನವರು ಅವರನ್ನು 1962-1976 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡುವ ಮೂಲಕ ನೈಜ ಗೌರವ ಸಲ್ಲಿಸಿದರು.

ಈಗ ಕನ್ನಡ ಚಿತ್ರರಂಗದ ಚರಿತ್ರೆಯಲ್ಲಿ ಅಣ್ಣಾವ್ರ ಮೊದಲ ಹೆಜ್ಜೆಯ ಹಿಂದೆ ಕುಬಸದ ಶಿವಪ್ಪನವರಂತಹ ಗಾಂಧಿವಾದಿಯ ಗಟ್ಟಿ ಬೆಂಬಲವಿತ್ತು ಎಂಬುದು ಇಂದಿನ ಪೀಳಿಗೆಗೆ ತಿಳಿದಿಲ್ಲ ಎನ್ನುವುದೇ ವಿಪರ್ಯಾಸ..!

ಮಾಹಿತಿ, ಚಿತ್ರ ಕೃಪೆ: ಮಂಜುನಾಥ ನರಗುಂದ

ಕುಬಸದ ಅವರಿಗೆ ಬಂದ ಪತ್ರ

ಮುತ್ತುರಾಜ್ ಬರೆದ ಪತ್ರ
ಕುಬಸದ ಅವರಿಗೆ ಬಂದ ಮತ್ತೊಂದು ಪತ್ರ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *