‘ಜನಿವಾರ ಕಿತ್ತೊಗೆದ ಬಸವಣ್ಣನವರಿಗೆ ಮತ್ತೆ ಜನಿವಾರ ತೊಡಿಸಲು ಹೊರಟಿದ್ದಾರೆ’

ಸಂಘ ಪರಿವಾರ ಪ್ರಾಯೋಜಿತ ಕನ್ನೇರಿ ಸ್ವಾಮಿಯ ಹಿಂದುತ್ವ ಸಮಾವೇಶಕ್ಕೆ ಖಂಡನೆ

ಗದಗ

‘ಸಮಾನತೆಯಾಗಿ ನಾವು ಸಂಘಟನೆ’ ಆಶ್ರಯದಲ್ಲಿ ವಚನಗಳ ಹಾಗೂ ಸಂವಿಧಾನದ ಪೂರ್ವಪೀಠಿಕೆಯ ಸಾಮೂಹಿಕ ಪಠಣ ಕಾರ್ಯಕ್ರಮ ಶನಿವಾರ ನಗರದಲ್ಲಿ ನಡೆಯಿತು.

ವಿವಿಧ ಬಸವಪರ, ಪ್ರಗತಿಪರ, ದಲಿತ ಸಂಘಟನೆಗಳ ನೂರಾರು ಸದಸ್ಯರು ನೆರೆದು ವಚನ ಅರಿವಿನ ಮಹಾಯಾನ, ಬಸವಾದಿ ಶಿವಶರಣರ ವಚನಗಳ ಸಾಮೂಹಿಕ ಪಠಣ ಮತ್ತು ಸಂವಿಧಾನದ ಪೂರ್ವಪೀಠಿಕೆಯ ಸಮಾನತೆಯ ಉದ್ಘೋಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಸಂಘ ಪರಿವಾರ ರವಿವಾರ ಆಯೋಜಿಸಿದ್ದ ಹಿಂದುತ್ವ ಸಮಾವೇಶದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ನಡೆಯಿತು.

ಲಿಂಗಾಯತ ಧರ್ಮ ಒಡೆಯುವ ಹುನ್ನಾರ

ಸಭೆಯಲ್ಲಿ ಮಾತನಾಡಿ ಸಾಹಿತಿ ಬಸವರಾಜ ಸೂಳಿಭಾವಿ “ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ಹಿಂದುತ್ವವಾದಿಗಳು ಕಿತ್ತುಕೊಳ್ಹಲು ಹೊರಟಿದ್ದಾರೆ. ಬಸವಣ್ಣ ಜನಿವಾರ ಕಿತ್ತೊಗೆದು ಹೊರಬಂದು ಸಮಾನತೆಯ ಹೊಸ ಧರ್ಮ ಕಟ್ಟಿ ಸಾರಿದರು. ಮತ್ತೆ‌ ಈಗ ಅವರು ಬಸವಣ್ಣನಿಗೆ ಜನಿವಾರ ತೊಡಿಸಲು ಹೊರಟಿದ್ದಾರೆ,” ಎಂದು ಕಿಡಿಕಾರಿದರು.

ಜಗತ್ತಿಗೆ ಮೊದಲು ಬೆಳಕಿನ ದಾರಿ ತೋರಿದವರು ಬುದ್ಧ. ನಂತರ ಬಸವಣ್ಣ ಸಮಾನತೆಯ ಲಿಂಗಾಯತ ಧರ್ಮವನ್ನು ಕೊಟ್ಟರು.

ಲಿಂಗಾಯತ ಧರ್ಮವು ಮಾನವೀಯತೆ, ಸಮಾನತೆ ಮತ್ತು ಸಹಬಾಳ್ವೆಯ ತತ್ವಗಳ ಮೇಲೆ ನಿಂತಿರುವ ಸ್ವತಂತ್ರ ಧರ್ಮವಾಗಿದ್ದು, ಹಿಂದೂ ಸಮಾವೇಶಗಳ ಹೆಸರಿನಲ್ಲಿ ಅದನ್ನು ಒಡೆಯುವ ಹಾಗೂ ಬಸವ ತತ್ವವನ್ನು ಮಸುಕುಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಸೂಳಿಭಾವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಾನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರು ಬುದ್ಧ ಮತ್ತು ಬಸವಣ್ಣನ ಆಶಯಗಳಿಗೆ ಸಂವಿಧಾನದ ಮೂಲಕ ಕಾನೂನಾತ್ಮಕ ಚೌಕಟ್ಟು ರೂಪಿಸಿ, “ಎಲ್ಲರೂ ಸಮಾನರು” ಎಂಬ ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಮತ್ತೆ ವರ್ಣಾಶ್ರಮ

ಶಹಪುರದ ಹಿಂದುತ್ವ ಸಮಾವೇಶದಲ್ಲಿ ಸಮಾಜದಲ್ಲಿ ಅಸಮಾನತೆ ಅನಿವಾರ್ಯ, ಸಮಾನತೆ ಕೇಳುತ್ತಿರುವವರು ಕಮ್ಯುನಿಷ್ಟರು ಎಂದು ಹೇಳಿದ್ದ ಕನ್ನೇರಿ ಸ್ವಾಮಿಗೆ ಸೂಳಿಭಾವಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

“ಕೈಯ ಬೆರಳು ತೋರಿಸಿ ಅಸಮಾನತೆ ಇರಬೇಕು ಎಂದು ಹೇಳುತ್ತೀರಿ. ಆದರೆ ಅಂಬೇಡ್ಕರ್, ಬುದ್ಧ, ಬಸವ ಸಮಾನತೆ ಸಾರಿದವರು. ಅಂಬೇಡ್ಕರ ಅವರ ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಯಾರು ಹೆಚ್ಚಲ್ಲ, ಯಾರೂ ಕಮ್ಮಿಯಲ್ಲ, ಎಲ್ಲರಿಗೂ ಸಮಾನತೆಯನ್ನು ಕೊಟ್ಟಿದೆ” ಎಂದು ಹೇಳಿದರು.

“ಹಿಂದೂ ಧರ್ಮಕ್ಕೆ ಯಾವುದೇ ಸ್ಪಷ್ಟ ಆಧಾರ ಇಲ್ಲ. ಧರ್ಮಗ್ರಂಥ ಇಲ್ಲ, ಸಂಸ್ಥಾಪಕರು ಇಲ್ಲ. ಆದರೆ ಲಿಂಗಾಯತ ಧರ್ಮಕ್ಕೆ ಬಸವಣ್ಣ, ಶಿವಶರಣರು ಮತ್ತು ವಚನಗಳೇ ಆಧಾರ. ಇದು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ ಸಮಾನತೆಯ ಧರ್ಮ,” ಎಂದರು.

“ಹಿಂದುತ್ವ ನಮ್ಮ ದೇಶದ ಪದವೇ? ಹಿಂದೂ ಧರ್ಮವಾಚಕ ಪದವೇ?, ಅಥವಾ ಪ್ರಾದೇಶಿಕ ಪದವೇ? ಅರ್ಥ ಮಾಡಿಕೊಳ್ಳಬೇಕು. ನಾವೂ ಹಿಂದೂಗಳಲ್ಲ, ಸಿಂಧೂಗಳು ಎಂದು ಹೇಳಬೇಕು” ಎಂದು ಕರೆ ನೀಡಿದರು.

“ಹಿಂದೂ ಧರ್ಮದ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಹಿಂದೂ ಎನ್ನುವ ಪದವನ್ನು ಬೇರೆ ಕಡೆಯಿಂದ ತೆಗೆದುಕೊಂಡವರು ಇವರು. ಒಂದು ಧಾರ್ಮಿಕ ಪದವನ್ನು ಹುಟ್ಟುಹಾಕಲಾಗದವರು ಲಿಂಗಾಯತ ಧರ್ಮದ ಮೇಲೆ ಸಮರ ಸಾರಿದ್ದಾರೆ,” ಎಂದರು.

“ದೇಶದ ಜನರ ಮತಾಧಿಕಾರ ಮತ್ತು ಪೌರತ್ವ ಕಸಿದುಕೊಳ್ಳುವ ಜನವಿರೋಧಿ, ಸಂವಿಧಾನ ವಿರೋಧಿ ಆಗಿರುವ ಎಸ್.ಐ.ಆರ್.”ಅನ್ನು ರದ್ದುಪಡಿಸಬೇಕೆಂದು ಸೂಳಿಭಾವಿ ಹೇಳಿದರು.

ಬಸವಾದಿ ಶರಣರ ದುರ್ಬಳಕೆ

ಕಾರ್ಯಕ್ರಮದಲ್ಲಿ ಮಾತನಾಡಿದ ಶರಣ ಚಿಂತಕ ಎಸ್.ಎಸ್. ಹರ್ಲಾಪುರ “ಕಾಡಸಿದ್ದೇಶ್ವರರ ಪ್ರಖರ ವಿಚಾರಗಳ ವಚನಗಳಿವೆ. ಅದನ್ನು ತಿರಸ್ಕರಿಸಿ ಕನ್ನೇರಿ ಸ್ವಾಮೀಜಿ ವೈದಿಕತೆಯನ್ನು ಒಪ್ಪಿಕೊಳ್ಳುವುದಾದರೆ ನಮ್ಮದೇನು ತಕರಾರಿಲ್ಲ. ನಮ್ಮ ತಕರಾರು ಇರುವುದು ನಮ್ಮ ಶರಣರ ಭಾವಚಿತ್ರ ಬಳಸುವುದಕ್ಕೆ,” ಎಂದರು.

“ಇದು ಬಹುತ್ವದ ಭಾರತ ಇಲ್ಲಿ ಎಲ್ಲರೂ ಕೂಡಿ ಬಾಳುತ್ತಿದ್ದೇವೆ. ಅದರಲ್ಲೂ ಗದಗ ಜಿಲ್ಲೆಯ ಜನಕ್ಕೆ ಮನುಷ್ಯರಾಗಿ ಬಾಳಬೇಕೆನ್ನುವ ದೊಡ್ಡ ಸಂದೇಶವನ್ನು ಲಿಂಗೈಕ್ಯ ತೋಟದ ಸಿದ್ದಲಿಂಗ ಶ್ರೀಗಳು ಕಲ್ಪಿಸಿಕೊಟ್ಟು ಹೋಗಿದ್ದಾರೆ. ಅವರಿದ್ದಾಗ ಈ ಶಕ್ತಿಗಳು ಬಿಲ ಸೇರಿಕೊಂಡಿದ್ದವು. ಅವರು ಹೋದಮೇಲೆ ಬಿಲದಿಂದ ಹೊರಬರುತ್ತಿವೆ,” ಎಂದರು.

“ಇವನಾರವ ಎನ್ನದೆ ಇವನಮ್ಮವ ಎಂದು ಎಲ್ಲರನ್ನೂ ಒಪ್ಪಿಕೊಂಡು, ಅಪ್ಪಿಕೊಂಡು ಬಂದ ಪರಂಪರೆ ನಮ್ಮದು. ದೇಶದ ಸಂವಿಧಾನ ಹೇಳುವುದು ಅದನ್ನೇ. ಸಂವಿಧಾನ ವಿರುದ್ಧವಾಗಿ ಇವರನ್ನು ಮುಂದೆ ಬಿಟ್ಟು ಈ ಕಾರ್ಯ ಮಾಡಿಸುತ್ತಿರುವ ಶಕ್ತಿಗಳು ಜನರ ಒಗ್ಗಟ್ಟು ಒಡೆಯುವ ತಂತ್ರ ಮಾಡ್ತಾರೆ. ಜನರು ಈ ಷಡ್ಯಂತ್ರ ಅರಿತುಕೊಳ್ಳಬೇಕು,” ಎಂದು ತಿಳಿಸಿದರು.

ಸಂಘಟನೆಗಳ ಅನೇಕ ಮುಖಂಡರು ಬುದ್ಧ, ಬಸವ, ಅಂಬೇಡ್ಕರ್ ತತ್ವ ಮತ್ತು ಸಂವಿಧಾನ, ವಚನಗಳ ಕುರಿತು ಮಾತನಾಡಿದರು.

ಶಿವಾನಂದ ತಮ್ಮಣ್ಣವರ ಅವರು ಸಂವಿಧಾನದ ಪೂರ್ವ ಪೀಠಿಕೆ ಓದುವ ಮೂಲಕ, ಎ. ವೈ. ನವಲಗುಂದ ಅವರು ವೇದ ವಿರೋಧಿ ವಚನ ಎಲ್ಲರಿಗೂ ಹೇಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವೇದ, ಆಗಮ, ಪುರಾಣ, ಮೌಢ್ಯ, ಕಂದಾಚಾರ ವಿರೋಧಿ ನೂರಾರು ವಚನಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು.

ದಲಿತ ಕಲಾ ಮಂಡಳಿಯಿಂದ ಕ್ರಾಂತಿ ಗೀತೆ, ವಚನಗಳು, ತತ್ವಪದಗಳು ಕಾರ್ಯಕ್ರಮದುದ್ದಕ್ಕೂ ಮೊಳಗಿದವು. ಶರಣರ ವಚನಗಳು, ಕಾಡಸಿದ್ದೇಶ್ವರ ವಚನಗಳನ್ನು ಮಕ್ಕಳು, ಮಹಿಳೆಯರು ಸೇರಿದಂತೆ ಸಾಮೂಹಿಕವಾಗಿ ಪಠಣ ಮಾಡಿದರು, ಹಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರಾದ ಅಶೋಕ ಬರಗುಂಡಿ ಅವರು ಸಮಾರೋಪ ಮಾತುಗಳನ್ನಾಡಿದರು. ಆರಂಭಕ್ಕೆ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಎಲ್ಲರನ್ನೂ ಸ್ವಾಗತಿಸಿದರು.

ಕಾರ್ಯಕ್ರಮ ಮುಂಜಾನೆ 11.30ರಿಂದ ಸಂಜೆ 5 ಗಂಟೆಯವರೆಗೆ ನಡೆಯಿತು. ಅಣ್ಣಿಗೇರಿ, ಕೊಪ್ಪಳ, ಗದಗ-ಬೆಟಗೇರಿ ನಗರ ಸೇರಿದಂತೆ ಜಿಲ್ಲೆಯ ಬೇರೆಲ್ಲ ತಾಲೂಕುಗಳಿಂದ 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
3 Comments
  • ಒಳ್ಳೆಯ ಸಂದೇಶ ಕೊಟ್ಟ ಎಲ್ಲ ಶರಣರಿಗೆ ಶರಣು ಶರಣರಿಗೆ ಶರಣು ಶರಣಾರ್ತಿಗಳು.

  • ಅತ್ಯುತ್ತಮ ಕಾರ್ಯಕ್ರಮ ಸಂಘಟಿಸಿ ಬಸವಾದಿ ಶರಣರ ಸಿದ್ಧಾಂತ ರಕ್ಷಣೆಯಲ್ಲಿ ಮತ್ತು ಕನ್ನೇರಿ ಸ್ವಾಮಿಯ ಮುಂದಾಳತ್ವದ ಆರ್.ಎಸ್.ಎಸ್. ಕುತಂತ್ರಿಗಳಿಗೆ ತಕ್ಕ ಉತ್ತರ ಕೊಡುವಲ್ಲಿ ಭಾಗಿಯಾದ ಶ್ರಮಿಸಿದ ಸಕಲರಿಗೂ ಧನ್ಯವಾದಗಳು.

  • ಈ ಕೆಲಸದ ಮುಂದಾಳುಗಳಾರು ಎಂಬುವವವರನ್ನು ಹಿಡಿದು ತರಾಟೆಗೆ ತೆಗೆದುಕೊಂಡು ಇದರಮೇಲೆ ಮೊಕ್ಕದಮ್ಮೆ ದಾಖಲಿಸಬೇಕು.

Leave a Reply

Your email address will not be published. Required fields are marked *