ಚಿಟ್ಟಗುಪ್ಪ
12ನೇ ಶತಮಾನದಲ್ಲಿನ ಬಸವಾದಿ ಶರಣರ ವಚನ ಸಾಹಿತ್ಯಕ್ಕೆ, ಚಳುವಳಿಗೆ ತನ್ನದೇ ಆದ ಇತಿಹಾಸ, ಹಿರಿಮೆ, ಗರಿಮೆ ಇದೆ.
1,90,000 ಶರಣೆ, ಶರಣರು ಮತ್ತು 770 ಅಮರ ಗಣoಗಳು ಅನುಭವ ಮಂಟಪದಲ್ಲಿ ರಚಿಸಿದ ವಚನ ಪ್ರತಿಯೊಬ್ಬ ಶರಣರ ಅನುಭವದ ನೆಲೆಯಿಂದ ರೂಪುಗೊಂಡಿರ್ತಕ್ಕಂತವು ಆಗಿವೆ.
ಕನ್ನಡ ಸಾರಸ್ವತ ಲೋಕಕ್ಕೆ ಬಸವಾದಿ ಶರಣರ ವಚನ ಸಾಹಿತ್ಯದಿಂದ ಬಹುದೊಡ್ಡ ಕೊಡುಗೆ ನಮ್ಮ ಕನ್ನಡ ಸಾಹಿತ್ಯಕ್ಕೆ ವಿಶ್ವ ಮನ್ನಣೆ ವಚನಕಾರರಿಂದ ದೊರಕಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಪಟ್ಟಭದ್ರ ಶಕ್ತಿಗಳು ಬಸವಣ್ಣನವರನ್ನು ಹಿಂದೂ ಧರ್ಮದ ಸಂತರು ಎಂದು ಬಿಂಬಿಸಲು ಹರಸಾಹಸ ಮಾಡುತ್ತಲಿದ್ದಾರೆ ಈ ನಿಟ್ಟಿನಲ್ಲಿ ಬಸವ ದರ್ಶನ, ವಚನಗಳಲ್ಲಿ ಶೈವ ಮತ್ತು ವೇದಗಳಲ್ಲಿ ವಚನಗಳು ಎಂಬ ಹೆಸರಿನಲ್ಲಿ ಹತ್ತು ಹಲವಾರು ಕೃತಿಗಳನ್ನು ಬಿಡುಗಡೆಗೊಳಿಸುವುದರ ಮೂಲಕ. ಬಸವಾದಿ ಶರಣರ ಸಮಾನತೆಯ ತತ್ವವನ್ನು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹಾಗೂ ಹಿಂದೂ ಧರ್ಮದ ಭಾಗ ಎಂದು ಬಿಂಬಿಸಲು ಎಲ್ಲಿಲ್ಲದ ಪ್ರಯತ್ನ ಪಡುತ್ತಲಿದ್ದಾರೆ.
ಆದರೆ ಎಂದೆಂದಿಗೂ ಅವರು ಯಶಸ್ವಿ ಆಗಲು ಸಾಧ್ಯವಿಲ್ಲ.
ಅಷ್ಟೇ ಅಲ್ಲದೆ ಕೆಲವು ಡಿಜಿಟಲ್ ಪೋರ್ಟಲ್, ಯೂಟ್ಯೂಬ್ ಚಾನೆಲ್ ನಂತಹ ಮಾಧ್ಯಮಗಳು ವಚನಗಳು ವೇದಗಳ ಅನುವಾದ ಎಂದು ಸುಳ್ಳು ಸುದ್ದಿ ಬಿಂಬಿಸುತ್ತಾ ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುತಲಿದ್ದಾರೆ.
ವಚನಗಳು ವೇದಗಳಿಂದ ಹುಟ್ಟಿವೆ, ವಚನಗಳೆಲ್ಲಾ ವೇದಗಳ ಅನುವಾದ, ವಚನಗಳೆಲ್ಲಾ ವೇದಗಳ ಮುಂದುವರಿದ ಭಾಗ ಎಂದು ಬಿಂಬಿಸುತ್ತಾ ಕೆಲವು ವಚನಗಳನ್ನು ಅದಕ್ಕೆ ಪೂರಕ ಎಂಬಂತೆ ಹೇಳುತ್ತಾ ವೇದ ಆಗಮ ಪುರಾಣ ಮುಂತಾದವುಗಳನ್ನು ಸಾರಾಸಗಟಾಗಿ ಒಪ್ಪದೆ ಖಂಡಿಸುವ ಬಸವಾದಿ ಶರಣರ ಹಲವಾರು ವಚನಗಳು ನಮಗೆ ಲಭ್ಯವಿವೆ ಅದರಲ್ಲಿ ಅಲ್ಲಮಪ್ರಭುದೇವರು ತಮ್ಮ ವಚನದಲ್ಲಿ ಹೇಗೆ ಹೇಳಿದ್ದಾರೆ.
“ವೇದವೆಂಬುದು ಓದಿನ ಮಾತು,
ಶಾಸ್ತ್ರವೆಂಬುದು ಸಂತೆಯ ಸುದ್ದಿ,
ಪುರಾಣವೆಂಬುದು ಪುಂಡರಗೋಷ್ಠಿ,
ತರ್ಕವೆಂಬುದು ತಗರ ಹೋರಟೆ,
ಭಕ್ತಿ ಎಂಬುದು ತೋರಿ ಎಂಬ ಲಾಭ ಗುಹೇಶ್ವರನೆಂಬುದು ಮೀರಿದ ಘನವು!
ಕನ್ನಡ ನಾಡಿನ ಹೆಮ್ಮೆಯ ಸರ್ವಜ್ಞ ಕವಿ ತಾನು ಬರೆದ ತ್ರಿಪದಿಯಲ್ಲಿ
‘ಬಸವ ಗುರುವಿನ ಹೆಸರು ಬಲ್ಲವರು ಯಾರಿಲ್ಲ?
ಹುಸಿ ಮಾತನಾಡಿ ಕೆಡದಿರಿ!
ಲಿಂಗಾಯತಕ್ಕೆ ಬಸವಣ್ಣನೆ ಕರ್ತೃ ಸರ್ವಜ್ಞ.’
ಎಂದು ತುಂಬಾ ಸ್ಪಷ್ಟವಾಗಿ ಬರೆದು ಹೇಳಿದ್ದಾರೆ. ಲಿಂಗಾಯಿತ ಧರ್ಮವು ಸ್ವತಂತ್ರ ಧರ್ಮವಾಗಿದೆ, ಬಸವಣ್ಣನವರು ಲಿಂಗಾಯತ ಧರ್ಮದ ಪಿತಾಮಹರಾಗಿದ್ದಾರೆ. ಆದರೆ ಇದನ್ನು ಸಹಿಸದ ಕೆಲವು ಅಂಧ ಭಕ್ತರು ತಮ್ಮದೇ ಆದ ವಿತಂಡವಾದವನ್ನು ಮಂಡಿಸುತ್ತಾ ಒಂದು ಸುಳ್ಳನ್ನು 100 ಸಾರಿ, ಸಾವಿರ ಸಾರಿ ಹೇಳಿ ಅದನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಆದರೆ ಇವರ ಮೊಂಡುವಾದಕ್ಕೆ ಯಾರು ಏನು ಹೇಳಬೇಕು ಎಂದು ತಿಳಿಯದಾಗಿದೆ.
“ವಚನಗಳಲ್ಲಿ ಶೈವ” ಎನ್ನುವ ಪುಸ್ತಕವನ್ನು ಕೂಡಾ ಬರೆದು ಆ ಪುಸ್ತಕದ ಮೂಲಕ ಬಸವಣ್ಣನವರನ್ನು ಹಿಂದೂ ಧರ್ಮದ ಪ್ರವರ್ತಕರು ಎನ್ನುವಂತೆ ಬಿಂಬಿಸಲು ಹೊರಟಿದ್ದಾರೆ.
ವೇದಗಳ ಇತಿಹಾಸವನ್ನು ನಾವು ನೋಡಿದಾಗ ಕ್ರಿಸ್ತಪೂರ್ವ 1,500 ವರ್ಷಗಳ ಪೂರ್ವದ್ದು ಆಗಿವೆ. ವಚನಗಳಿಗೆ ಅಷ್ಟು ದೀರ್ಘವಾದ ಇತಿಹಾಸವಿಲ್ಲ. ಬಸವ ಪೂರ್ವ ಯುಗದಲ್ಲಿ ಅಂದರೆ 11ನೇ ಶತಮಾನದ ಉತ್ತರಾರ್ಧದಲ್ಲಿ ಕೆಲವು ವಚನಕಾರರು ಅದರಲ್ಲಿ ಮುಖ್ಯವಾಗಿ ದೇವರ ದಾಸಿಮಯ್ಯನಂತಹ ವಚನಕಾರರ ವಚನಗಳು ನಮಗೆ ದೊರಕಿವೆ.
ಅದೂ ಅಲ್ಲದೆ ಬಸವಾದಿ ಪ್ರಮುಖರೆಲ್ಲರೂ ಕೂಡ ಪೂರ್ವದ ವಚನಕಾರರನ್ನು ತಮ್ಮ ವಚನಗಳಲ್ಲಿ ನೆನೆಸಿದ್ದಾರೆ. ” ಆದ್ಯರ ವಚನವಿರಲು ಉಪ್ಪು ಬಾವಿಯ ಹಂಗು ನಮಗೇಕೆ ” ಎಂದು ಒಂದು ವಚನದಲ್ಲಿ ಹೇಳುತ್ತಾರೆ.
ಸತ್ಯ ಶುದ್ಧ ಕಾಯಕ ಜೀವಿಗಳು ಆಗಿರುವ ಹಲವಾರು ವರ್ಗದ ಶರಣರು ಕೂಡಿ ಸ್ವತಂತ್ರವಾಗಿ ತಮ್ಮ ಶ್ರಮದಿಂದ ತಮ್ಮ ಅನುಭವದಿಂದ ತಮ್ಮ ಅನುಭವದ ನೆಲೆಯಿಂದ ವಚನಗಳನ್ನು ರಚಿಸಿ, ಪರಮಾತ್ಮನ ಕುರುಹಾದ ಇಷ್ಟ ಲಿಂಗದ ಅನುಸಂಧಾನದಿಂದ ಅನುಭಾವವನ್ನು ಪಡೆದು ರಚಿಸಲಾದ ವಚನ ಸಾಹಿತ್ಯಕ್ಕೆ ವೇದಗಳ ಅನುವಾದ ಎಂದು ಹೆಸರಿಸುವುದರ ಮೂಲಕ ಬಸವಾದಿ ಶರಣರ ವಿಚಾರಧಾರೆಗಳಿಗೆ ಕಪ್ಪುಮಸಿಯನ್ನು ಬೆಳೆಯುವ ಪ್ರಯತ್ನವನ್ನು ಮಾಡುತ್ತಲಿದ್ದಾರೆ.
ಆದರೆ ಇದರಲ್ಲಿ ಎಂದಿಗೂ ಅವರು ಯಶಸ್ವಿಯಾಗಲು ಸಾಧ್ಯವಿಲ್ಲ.
ಪಾಶ್ಚಾತ್ಯ ವಿದ್ವಾಂಸರಾದ ಸಿ.ಪಿ. ಬ್ರೌನ್ ರವರು ಕ್ರಿಸ್ತಶಕ 1840 ರಲ್ಲಿ “ಕ್ರೇಡ್ ಕಸ್ಟಮ್ಸ್ ಅಂಡ್ ಲಿಟರೇಚರ್ ಆಫ್ ಜಂಗಮಾಜ್” ಎಂಬ ಕೃತಿಯಲ್ಲಿ ಬಸವಣ್ಣನವರ ವಚನಗಳಲ್ಲಿ ಬರುವ ವಿಚಾರಗಳು ನಿಜವಾಗಲೂ ಬಹಳ ಪ್ರಚೋದನಕಾರಿಯಾಗಿವೆ ಮತ್ತು ಆಧುನಿಕವಾಗಿವೆ ಎಂಬ ಮಾತನ್ನು ಹೇಳಿದ್ದಾರೆ.
ಜರ್ಮನ್ ದೇಶದ ಇನ್ನೊಬ್ಬ ಪ್ರಸಿದ್ಧ ಸಮಾಜ ಶಾಸ್ತ್ರಜ್ಞರು ಚಿಂತಕರು ಆಗಿರತಕ್ಕಂತ ಮ್ಯಾಕ್ಸ್ ವೆಬರ್ ರವರು ” ರಿಲಿಜನ್ಸ್ ಆಫ್ ಇಂಡಿಯಾ ” ಎಂಬ ಕೃತಿಯಲ್ಲಿ ಬಸವಣ್ಣನವರ ಬಗ್ಗೆ ಬರೆದಿದ್ದಾರೆ.
ಅದೇ ರೀತಿಯಾಗಿ ಕ್ರಿ. ಶ.1931 ರಲ್ಲಿ ಫ್ರಾನ್ಸಿಸ್ ಬೇಕನ್ ಎಂಬ ಯುರೋಪ್ ವಿದ್ವಾಂಸರು “ಲ್ಯಾಂಡ್ ಆಫ್ ದ ಲಿಂಗಂ ” ಎಂಬ ಪುಸ್ತಕದಲ್ಲಿ “Basava Is the first free Thinker of India” ಎಂದು ಬರೆಯುತ್ತಾರೆ.
ಅಂದರೆ ಬಸವಣ್ಣನವರು ಭಾರತದ ಮೊಟ್ಟ ಮೊದಲನೆಯ ಸ್ವತಂತ್ರ ವಿಚಾರವಾದಿ ಎಂದು ಅರ್ಥವಾಗುತ್ತದೆ.
ಎಲ್ಲಾ ಬೇರೆ ದೇಶದ ವಿದ್ವಾಂಸರೇ ಬಸವಣ್ಣನವರ ಬಗ್ಗೆ ಬರೆದು ವಿವರಿಸಬೇಕಾದರೆ ಕೇವಲ ವೇದಗಳಿಗೆ ಸನಾತನ ಧರ್ಮಕ್ಕೆ ಹಿಂದೂ ಧರ್ಮಕ್ಕೆ ಮಾತ್ರ ಬಸವಣ್ಣವರನ್ನು ಸೀಮಿತಗೊಳಿಸುತ್ತಿರುವುದು ಯಾವ ನ್ಯಾಯ ?
ವೈದಿಕ ಧರ್ಮದ ಅನುಯಾಯಿಗಳೇ ನೀವು ಬಾವಿಯೊಳಗಿನ ಕಪ್ಪೆಯಂತೆ ಏಕೆ ವಿಚಾರ ಮಾಡುತ್ತಿರುವಿರಿ ಬಸವಣ್ಣನವರು ಬಹಳ ವಿಶಾಲವಾದ ವಿನೂತನವಾದ ಲಿಂಗಾಯತ ಜೀವನ ವಿಧಾನವನ್ನು ನಮಗೆಲ್ಲರಿಗೂ ಕೊಟ್ಟಿದ್ದಾರೆ.
ವೈದಿಕ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಇರುವ ವ್ಯತ್ಯಾಸಗಳನ್ನು ಗುರುತಿಸೋಣ.
ದೇವರು ಒಬ್ಬನೇ ಇದ್ದಾನೆ ಒಬ್ಬ ದೇವರನ್ನೇ ಪೂಜಿಸಿ ಎಂದು ಋಗ್ವೇದ ಹೇಳಿದೆ ಎಂದು ತಾವು ಹೇಳುತ್ತಿದ್ದೀರಿ ಆದರೆ ಒಟ್ಟು 33 ದೇವತೆಗಳನ್ನು ಪೂಜಿಸಲು ವೇದದಲ್ಲಿ ಬರುವ ಎಲ್ಲಾ ಶ್ಲೋಕಗಳು ಇಂದ್ರ ವರುಣ ವಾಯು ಸೂರ್ಯ ಮುಂತಾದ ದೇವತೆಗಳಿಗೆ ಸಂಬಂಧಿಸಿದ ಅವರ ಆರಾಧನೆಗೆ ಸಂಬಂಧಿಸಿದ ಯಜ್ಞಗಳಿಗೆ ಸಂಬಂಧಿಸಿದ ಶ್ಲೋಕಗಳಾಗಿವೆ.
ಈ ವೇದದ 33 ದೇವತೆಗಳೇ ಮುಂದೆ 33 ಕೋಟಿ ದೇವತೆಗಳಾಗಿ ಭಾರತೀಯರ ದೇವತೆಗಳಾಗಿ ಪೂಜಿಸಲ್ಪಡುತ್ತಿರುವುದು ದುರ್ದೈವವೇ ಸರಿ, ಅಷ್ಟೇ ಅಲ್ಲದೆ ವೈದಿಕ ಧರ್ಮದಲ್ಲಿರುವ ಕಂದಾಚಾರ ಮೂಢ ನಂಬಿಕೆ, ಪ್ರಾಣಿಬಲಿ, ಯಜ್ಞ, ಯಾಗಾದಿ, ವರ್ಣವ್ಯವಸ್ಥೆ, ಜಾತಿ ಪದ್ದತಿ ಮುಂತಾದ ಕೆಟ್ಟ ಆಚರಣೆಗಳು ಭಾರತೀಯ ಸಂಸ್ಕೃತಿಗೆ ಅಂಟಿದ ಕಳಂಕವಾಗಿವೆ.
ವೈದಿಕ ಧರ್ಮದ ಧರ್ಮ ಗ್ರಂಥಗಳಾಗಿರಲಿ ಪುರಾಣಗಳಾಗಿರಲಿ ಉಪ ನಿಷತ್ತುಗಳಾಗಿರಲಿ ವೇದಗಳಾಗಿರಲಿ ಬಹು ದೇವತಾ ಆರಾಧನೆಗೆ ಮಾತ್ರ ಹೆಚ್ಚಿನ ಒತ್ತು ಕೊಟ್ಟಿವೆ ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತದೆ.
ಎಂಟನೇ ಶತಮಾನದಲ್ಲಿ ಬಂದಿರುವ ಶಂಕರಾಚಾರ್ಯರ ಕೃತಿಯಾದ ” ಪ್ರಪಂಚ ಸಾರತಂತ್ರ ” ದಲ್ಲಿ ನೋಡಿ ವೇದಗಳನ್ನು ನಂಬುವವರು ಕಡ್ಡಾಯವಾಗಿ ಆರು ದೇವರುಗಳನ್ನು ಪೂಜಿಸಲೇಬೇಕೆಂದು ಹೇಳಿದ್ದಾರೆ. ಆರು ದೇವತೆಗಳು ಎಂದರೆ ಶಿವ, ವಿಷ್ಣು, ಶಕ್ತಿ, ಸ್ಕಂದ, ಕುಮಾರ ಮತ್ತು ಗಣೇಶ. ಇದನ್ನೇ ಷಟ್ ಮತವಾದ ಎಂದು ಕರೆಯಲಾಗಿದೆ.
ಹಾಗಿದ್ದ ಮೇಲೆ ವೈದಿಕ ಧರ್ಮದಲ್ಲಿ ಎಂದಾದರೂ ಒಬ್ಬನೇ ದೇವರನ್ನು ಪೂಜಿಸುವ ಕುರಿತು ತಿಳಿಸಲಾಗಿದೆಯೇ? ನಿಮ್ಮ ಧರ್ಮ ಪುನರ್ ಸ್ಥಾಪಕರಾದ ಶಂಕರಾಚಾರ್ಯರೇನಾದರೂ ಏಕದೇವ ಉಪಾಸನೆಯ ಬಗ್ಗೆ ತಿಳಿಸಿದ್ದಾರೆಯೇ?
ಪ್ರಖರ ವಿಚಾರವಾದಿಗಳು ಚಿಂತಕರು ವಿಭೂತಿ ಪುರುಷರು ಆಗಿರುವ ಬಸವಣ್ಣನವರು ದೇವರು ಒಬ್ಬನೇ ಎಂದು ನಂಬಿದ್ದರು.
ಭಗವದ್ಗೀತೆಯಲ್ಲಿನ ಕರ್ಮ ಸಿದ್ಧಾಂತಕ್ಕೂ ಮತ್ತು ಬಸವಾದಿ ಶರಣರು ಹೇಳಿದ ಕಾಯಕ ಸಿದ್ಧಾಂತಕ್ಕೂ ಬಹಳ ವ್ಯತ್ಯಾಸವಿದೆ.
ಭಗವದ್ಗೀತೆಯಲ್ಲಿ ಸ್ವತಃ ಕೃಷ್ಣ ವರ್ಣ ವ್ಯವಸ್ಥೆಯನ್ನು ಪಾಲಿಸಬೇಕೆಂದು ಕಟ್ಟುನಿಟ್ಟಾಗಿ ಹೇಳಿದ್ದಾನೆ.
ಬಸವಾದಿ ಶರಣರು ಹೇಳಿಕೊಟ್ಟ ಕಾಯಕವೇ ಕೈಲಾಸವು ತುಂಬಾ ವಿಶಿಷ್ಟವಾದ ವಿನೂತನವಾದ ತತ್ವವಾಗಿದೆ.
ಸಮಾಜಕ್ಕೆ ಒಳ್ಳೆಯದು ಮಾಡುವ ಸಮಾಜ ಪರವಾದ ಯಾವುದೇ ರೀತಿಯ ಸತ್ಯ ಶುದ್ಧವಾದ ಕಾಯಕ ಮಾಡಿ ಆ ಕಾಯಕದಿಂದ ಬಂದ ಹಣದಿಂದ ತಮ್ಮ ಉಪಜೀವನವನ್ನು ನಡೆಸಿ, ಹೆಚ್ಚಾಗಿರತಕ್ಕಂತಹ ಹಣವನ್ನು ದಾಸೋಹಕ್ಕೆ ಸಲ್ಲಿಸಿ ದಾಸೋಹ ನಡೆಸುವುದರ ಮೂಲಕ ಶರಣ ತತ್ವವನ್ನು ಪಾಲಿಸುವ ಒಂದು ಪ್ರಖರತೆ ಇದು ಒಳಗೊಂಡಿದೆ.
ನಿಮ್ಮ ವೇದ ಆಗಮ ಉಪನಿಷತ್ತು ಭಗವದ್ಗೀತೆ ಮುಂತಾದವುಗಳೆಲ್ಲವೂ ಕರ್ಮ ಸಿದ್ದಾಂತವನ್ನು ನಂಬುತ್ತವೆ.
ಆದರೆ ಬಸವಾದಿ ಶರಣರು ಕರ್ಮವನ್ನು ನಂಬುವುದಿಲ್ಲ ಪುನರ್ಜನ್ಮವನ್ನು ನಂಬುವುದಿಲ್ಲ ಲಿಂಗಾಯತರಲ್ಲಿ ಪಾಪ ಪುಣ್ಯವೆಂಬುವುದಿಲ್ಲ ಶರಣರು ಆಚಾರವೇ ಸ್ವರ್ಗ ಅನಾಚಾರವೇ ನರಕವೆಂದು ತಿಳಿಸಿದ್ದಾರೆ.
ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ.
ಪುಣ್ಯ ಪಾಪವೆಂಬ ಉಭಯ ಕರ್ಮವನ್ನಾರು ಬಲ್ಲರಯ್ಯ? ಇದೇನಾರುಂಬರು?
ಕಾಯ ತಾ ನುಂಬಡೆ ಕಾಯ ತಾ ಮಣ್ಣು :
ಜೀವ ತಾ ನುಂಬಡೆ ಜೀವ ತಾ ಬಯಲು!
ಈ ಉಭಯ ನಿರ್ಣಯವ ಕೂಡಲಸಂಗಮದೇವ ನಿಮ್ಮ ಶರಣ ಬಲ್ಲ.
ಬಯಲಿನಿಂದ ಬಂದ ಆತ್ಮವೂ ಪರಮಾತ್ಮನೆಂಬ ಬಯಲಿಗೆ ಹೋಗಿ ಸೇರುತ್ತದೆ ಅಂದಮೇಲೆ ಲಿಂಗಾಯತರಿಗೆ ಪುನರ್ಜನ್ಮ ಎಂಬುವುದಿಲ್ಲ ಇರುವುದು ಇದು ಒಂದೇ ಜನ್ಮ ಈ ಭೂಮಿಯನ್ನು ಶರಣರು ಕರ್ತಾರನ ಕಮ್ಮಟ ಎಂದು ಕರೆದಿದ್ದಾರೆ.
ದೇವರು ಮನುಷ್ಯನ ಆತ್ಮದಲ್ಲಿಯೇ ಇದ್ದಾನೆ, ದೇವರನ್ನು ಮತ್ತೆ ಬೇರೆ ಕಡೆ ಹುಡುಕುವ ಅವಶ್ಯಕತೆ ಇಲ್ಲ ಗುಡಿ ಗುಂಡಾರಗಳಲ್ಲಾಗಿರಲಿ ತೀರ್ಥಯಾತ್ರೆಗಳಲ್ಲಾಗಿರಲಿ ಎಲ್ಲಿಯೂ ದೇವರು ಇಲ್ಲ. ಸ್ವರ್ಗ ನರಕವು ಕೂಡ ಇಲ್ಲೇ ಇದೆ. ನಾವು ನಡೆದುಕೊಳ್ಳುವ ರೀತಿಯಲ್ಲಿಯೇ ಸ್ವರ್ಗ ನರಕವಿದೆ ಹಾಗಾಗಿಯೇ ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಶರಣರು ತಿಳಿಸಿದ್ದಾರೆ.
ವೈದಿಕ ಧರ್ಮದಲ್ಲಿ ಕಾಲಾನುಕಾಲದಿಂದ ಶೂದ್ರ ವರ್ಗದವರಾಗಿ ತುಳಿತಕ್ಕೆ ಒಳಗಾಗಿ ಅನ್ಯಾಯಕ್ಕೆ ಒಳಗಾಗಿ ಶಿಕ್ಷಣದಿಂದ ವಂಚಿತರಾಗಿ ಇರತಕ್ಕಂತ ಜನರನ್ನು ಬಸವಣ್ಣನವರು ಒಂದೆಡೆ ಸೇರಿಸಿ ಶಿಕ್ಷಣ ಕೊಟ್ಟು ವಚನ ರಚಿಸಲು ಅವರಿಗೆ ಅವಕಾಶ ಕೊಟ್ಟು ಅನುಭವ ಮಂಟಪವನ್ನು ಸ್ಥಾಪಿಸಿ ಸ್ತ್ರೀ ಸಮಾನತೆಯನ್ನು ಕೊಟ್ಟು ಸ್ತ್ರೀಯರು ವಚನ ಸಾಹಿತ್ಯವನ್ನು ರಕ್ಷಿಸುವಂತೆ ಮಾಡಿರುವಂತ ಮಹಾ ಮಾನವತಾವಾದಿ ಆಗಿದ್ದಾರೆ.
ಈ ರೀತಿ ಕಾಯಕ ಜೀವಿಗಳನ್ನು ಸೇರಿಸಿ ಶರಣ ಸಂಕುಲವನ್ನು ಬಸವೇಶ್ವರರು ಕಟ್ಟಿದರು ಅದುವೇ ಅನುಭವ ಮಂಟಪವಾಯಿತು ಹಾಗೆಯೇ ಅಲ್ಲಿ ಕಸ ಗುಡಿಸುವ ಸತ್ಯಕ್ಕ, ಸೂಳೆ ಸಂಕವ್ವ, ಆಯ್ದಕ್ಕಿ ಲಕ್ಕಮ್ಮ ಅಕ್ಕಮಹಾದೇವಿಯಂತಹ ಹತ್ತು ಹಲವರು ಶರಣೆ ಯರು ತಮ್ಮ ಜೀವನದ ಅನುಭವಗಳನ್ನು ವಚನ ಗಳನ್ನಾಗಿ ಬರೆದು ಜನಮಾನಸಕ್ಕೆ ಅರ್ಪಿಸಿದ್ದಾರೆ. ನಿಮ್ಮ ಪೂರ್ವಗ್ರಹ ಪೀಡಿತತನವನ್ನು ಬಿಟ್ಟು ಬಾವಿಯೊಳಗಿನ ಕಪ್ಪೆಯಂತೆ ವಿಚಾರ ಮಾಡುವುದನ್ನು ಬಿಟ್ಟು ವಚನಗಳನ್ನು ಆಳವಾಗಿ ವಿಸ್ತೃತವಾಗಿ ಓದಿದಾಗ ವೇದಗಳಿಗಿಂತ ಒಳ್ಳೆ ಜೀವನದ ಅನುಭವ ವಚನಗಳಲ್ಲಿ ಕಾಣಬಹುದಾಗಿದೆ.
