ಕಲಬುರಗಿ:
ಬುದ್ಧ, ಬಸವ, ಅಂಬೇಡ್ಕರ್ ಹುಟ್ಟಿದ ಕಾಲಮಾನಗಳು ಬೇರೆ ಬೇರೆ ಆಗಿರಬಹುದು. ಆದರೆ ಆ ಮೂವರು ಮಹಾನುಭಾವರ ಸಾಮಾಜಿಕ ದೃಷ್ಟಿಕೋನ ಒಂದೇ ಆಗಿತ್ತು.
ಸಾಮಾಜಿಕ ನ್ಯಾಯ, ಸಮಾನತೆ, ಸಹೋದರತೆ, ಶೋಷಣೆರಹಿತ ವ್ಯವಸ್ಥೆ, ಮಾನವ ಹಕ್ಕುಗಳ ಕುರಿತು ಮೂವರೂ ಕೊಟ್ಟ ಸಂದೇಶ ಒಂದೇ ಎಂಬುದನ್ನು ಮನಗಾಣಬೇಕು ಎಂದು ಬಸವಕಲ್ಯಾಣದ ಬಸವ ಯೋಗಾಶ್ರಮದ ಪೀಠಾಧಿಪತಿ ಬೆಲ್ದಾಳ ಸಿದ್ದರಾಮ ಶರಣರು ಹೇಳಿದರು.
ನಗರದ ಡಾ. ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ (ಅಠವಲೆ), ಸಮತಾ ಸೈನಿಕ ದಳ ಜಿಲ್ಲಾ ಸಮಿತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ ಹಾಗೂ ಡಾ. ಅಂಬೇಡ್ಕರ್ ಜೀವನಾಧಾರಿತ ‘ನನ್ನ ಅಂಬೇಡ್ಕರ್’ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿನಾದ್ಯಂತ ಯುದ್ಧಗಳು ನಡೆಯುತ್ತಿವೆ. ಇಂಥ ಸಮಯದಲ್ಲಿ ಭಗವಾನ್ ಬುದ್ಧರ ಶಾಂತಿ ಸಂದೇಶ ಬೇಕಿದೆ. ಅವರ ಸಂದೇಶ ಅಂದು, ಇಂದು, ಎಂದಿಗೂ ಪ್ರಸ್ತುತ’ ಎಂದು ಅವರು ಪ್ರತಿಪಾದಿಸಿದರು.
ಬಹುತೇಕರಿಗೆ ಬಸವಣ್ಣ ಇಂದು ಬಂಡವಾಳ ಆಗಿದ್ದಾರೆ. ಅವರ ಹೆಸರಲ್ಲಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಅವರೆಲ್ಲ ಬದಲಾಗಬೇಕು. ಮೂಢನಂಬಿಕೆಯುಳ್ಳ ಸ್ವಾಮೀಜಿಗಳು ಸೇರಿಕೊಂಡು ಬಸವಣ್ಣ ಹಿಂದೂ ಆಗಿದ್ದರು, ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದೆಲ್ಲ ಹೇಳುತ್ತಾರೆ.
‘ಹಿಂದೂ ಪದವನ್ನು ಯಾರು ಹೇಳುತ್ತಿದ್ದಾರೋ, ಅವರದೇ ಸಾಹಿತ್ಯವಾದ ವೇದಗಳು, ಉಪನಿಷತ್‌ಗಳು, ರಾಮಾಯಣ, ಆಗಮ, ಮಹಾಭಾರತ, ಭಗವದ್ಗೀತೆ, ಬ್ರಹ್ಮಸೂತ್ರದಲ್ಲೂ ಅದರ ಬಗೆಗೆ ಪ್ರಸ್ತಾಪವಿಲ್ಲ’. ಆದರೂ, ಹಿಂದೂ ಹೆಸರಿನಲ್ಲಿ ಇಡೀ ದೇಶದಾದ್ಯಂತ ಜನರ ತಲೆಗಳಲ್ಲಿ ತುಂಬಿ ಜನರನ್ನು ಹಾಳು ಮಾಡಲಾಗುತ್ತಿದೆ ಇದನ್ನು ಬಿಡಬೇಕು ಎಂದರು.
“ಈ ಜಗತ್ತಿಗೆ ಬುದ್ಧ, ಬಸವಣ್ಣ ಕೊಟ್ಟ ಜಾಗತಿಕ ಮಾನವೀಯ ಮೌಲ್ಯಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಹಕ್ಕುಗಳ ಚೌಕಟ್ಟು ನೀಡಿದರು. ಅವರು ‘ನವಭಾರತದ ಶಿಲ್ಪಿ’ ಎಂದು ಬಣ್ಣಿಸಿದರು.
ಆರ್‌ಪಿಐ ಪಕ್ಷದ ದಕ್ಷಿಣ ಭಾರತ ಪ್ರಧಾನ ಕಾರ್ಯದರ್ಶಿ ಎಂ.ಬಿ. ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಪಿ.ಐ. ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ, ರಾಜ್ಯಾಧ್ಯಕ್ಷ ಸತೀಶ, ಕಾಂಗ್ರೇಸ್ ಮುಖಂಡ ನೀಲಕಂಠರಾವ ಮೂಲಗೆ ಮಾತನಾಡಿದರು.
ಬಸಣ್ಣ ಸಿಂಗೆ, ಹನುಮಂತರಾವ ದೊಡ್ಡಮನಿ, ಶಿವರಾಯ ದೊಡ್ಡಮನಿ, ಎ.ಬಿ. ಹೊಸಮನಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಮಿಲಿಂದ್ ಗುರೂಜಿ, ಮಿಲಿಂದ್ ಕಣಮುಸ, ಶಿವಲಿಂಗ ಹತಗುಂದ, ಉಪಮೇಯರ್ ತೃಪ್ತಿ
ಲಾಖೆ, ಮಾಜಿ ಮೇಯರ್ ವಿಶಾಲ ದರ್ಗಿ ಸೇರಿದಂತೆ ಹಲವರು ವೇದಿಕೆಯಲ್ಲಿಇದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ಡಾ.ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ‘ನನ್ನ ಅಂಬೇಡ್ಕರ್’ ನಾಟಕ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಐವರು ಸಾಧಕರನ್ನು ಸನ್ಮಾನಿಸಲಾಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U
