‘ಮೊಬೈಲ್‌ಗಳ ಸ್ಟೇಟಸ್‌ನಲ್ಲಿ ಪೋಸ್ಟರ್ ಹಾಕುವ ಬದಲು ಗಿಡ ನೆಟ್ಟು ಬೆಳೆಸಿ’

ಬಸವ ಮೀಡಿಯಾ
ಬಸವ ಮೀಡಿಯಾ

ಮುರುಘಾಮಠದಲ್ಲಿ ವಿಶ್ವ ಪರಿಸರ ದಿನಾಚರಣೆ, ಸಾಮೂಹಿಕ ಕಲ್ಯಾಣ ಮಹೋತ್ಸವ

ಚಿತ್ರದುರ್ಗ:

ಮನೆಗೊಂದು ಮರ, ಊರಿಗೊಂದು ವನವಿರಬೇಕು. ಮರ ಆರೋಗ್ಯಕ್ಕೆ, ಮಠ ಸಮಾಜಕ್ಕೆ ಪೂರಕವಾಗಿರುತ್ತದೆ. ಶ್ರೀ ಮುರುಘಾಮಠವು ಇಡೀ ವಿಶ್ವದಲ್ಲೆ ಸರ್ವಜನಾಂಗದವರ ೨೦ ರಿಂದ ೨೫ ಸಾವಿರ ಉಚಿತ ಸಾಮೂಹಿಕ ಸರಳ ವಿವಾಹಗಳನ್ನು ನೆರವೇರಿಸಿದ ಏಕೈಕ ಮಠವಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು.

ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ ವಿಶ್ವಪರಿಸರ ದಿನಾಚರಣೆ ಹಾಗು ೩೬ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೧೨ ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದರು.

ಇಂದು ವಿವಾಹ ಆಗುತ್ತಿರುವ ವಧು-ವರರು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಿರುವುದು ಇತರರಿಗೆ ಮಾದರಿಯಾದ ಕಾರ‍್ಯಯಾಗಿದೆ. ಶ್ರೀಮಠದ ಕೊಡುಗೆ ಕಡಿಮೆ ಇರಬಹುದು ಆದರೆ ಆಶೀರ್ವಾದ ದೊಡ್ಡದಾಗಿರುತ್ತದೆ.

ನೂತನ ವಧುವರರು ವಿಶ್ವಪರಿಸರ ದಿನಾಚರಣೆ ಸಂದರ್ಭದಲ್ಲಿ ನಿಮ್ಮ ವಿವಾಹದ ಕುರುಹಾಗಿ ಒಂದೊಂದು ಗಿಡ ನೆಡಿ. ಮುಂದಿನ ದಿನದಲ್ಲಿ ಇಲ್ಲಿಗೆ ಬಂದಾಗ ಅದು ಸದಾ ನೆನಪಿನಲ್ಲಿರುತ್ತದೆ. ಇಲ್ಲಿ ಸನ್ಮಾನಗೊಂಡಿರುವ ಸಿದ್ಧರಾಜು ಮಾಡಿರುವ ಸಾಧನೆ ಅಸಾಧಾರಣವಾದುದು. ಅವರು ಸುಮಾರು ೪೧ ಸಾವಿರ ಗಿಡ ನೆಟ್ಟಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಇಂದು ವಿಶ್ವಪರಿಸರ ದಿನ. ಭೂಮಿಯನ್ನು ಕಾಪಾಡಿಕೊಳ್ಳಬೇಕು. ಇರುವುದೊಂದೇ ಭೂಮಿಯಾಗಿರುವುದರಿಂದ ಅದು ಅವಶ್ಯಕ. ಮಾನವ ಅನೇಕ ಗ್ರಹಗಳಿಗೆ ಹೋಗಿದ್ದಾನೆ. ಆದರೆ ಅಲ್ಲಿ ಮಾನವ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಜೀವಿಸಲು ಭೂಮಿ ಮುಖ್ಯ.

ಜನಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಮನುಷ್ಯನಿಗೆ ಮರ ಮುಖ್ಯ.

ಅದೇ ರೀತಿ ಅಂತಹ ಮರ ಗಿಡಗಳನ್ನು ಪೋಷಿಸುವ ಕಾರ್ಯವನ್ನು ಶ್ರೀಮಠ ಮಾಡುತ್ತಾ ಬಂದಿದೆ.

ಶ್ರೀಮಠದಲ್ಲಿ ೨೦ ಸಾವಿರ ಜೋಡಿ ಮದುವೆ ಮಾಡಿಕೊಡಲಾಗಿದೆ. ಇದೊಂದು ದಾಖಲೆ. ಶ್ರೀಮಠವು ಹಸಿದು ಬಂದವರಿಗೆ ಅನ್ನದಾಸೋಹ ಸದಾ ಮಾಡುತ್ತಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮೊಬೈಲ್‌ಗಳ ಸ್ಟೇಟಸ್‌ನಲ್ಲಿ ಪರಿಸರ ದಿನದ ಪೋಸ್ಟರ್ ಹಾಕುತ್ತೀರಿ. ಆದರೆ ಮುಂದಿನ ದಿನದಲ್ಲಿ ಸ್ಟೇಟಸ್ ಬದಲಾಗಿ ನಿಮ್ಮ ನಿಮ್ಮ ಜಾಗಗಳಲ್ಲಿ ಗಿಡ ನೆಟ್ಟು ಪರಿಸರ ಸಮತೋಲನವನ್ನು ಕಾಪಾಡಿ ಎಂದು ಕರೆ ನೀಡಿದರು.

ಶಿರಸಂಗಿಯ ಶ್ರೀ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ನಾವೆಲ್ಲ ತಾಯಿಯ ಗರ್ಭದಿಂದ ಬಂದಾಗ ಉಸಿರಿರುತ್ತೆ. ಆದರೆ ಹೆಸರಿರುವುದಿಲ್ಲ. ಸತ್ತಾಗ ಹೆಸರಿರುತ್ತೆ ಉಸಿರಿರುವುದಿಲ್ಲ ಎಂಬುದು ಸತ್ಯ. ಬದುಕಿದ್ದಾಗ ಉಸಿರು ನೀಡುವ ಹಸಿರು ಗಿಡಗಳನ್ನು ರೈತರು, ನಾಗರೀಕರು ತಮ್ಮ ಹೊಲಗದ್ದೆಗಳಲ್ಲಿ ನೆಟ್ಟು ಪೋಷಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬೇಕು.

ಮರ ಕಡಿಯುವುದರಿಂದ ಕೊಟ್ಯಂತರ ಜೀವಿಗಳಿಗೆ ನಷ್ಟ. ಆದ್ದರಿಂದ ಗಿಡ ನೆಡಿ. ಗಾಂಧೀಜಿಯವರು ಗಿಡಗಳ ನಾಶದಿಂದ ಮನುಕುಲ ನಾಶ ಎಂದಿದ್ದಾರೆ. ಶ್ರೀಮಠವು ೩೬ವರ್ಷಗಳಿಂದ ಸಾಮೂಹಿಕ ಕಲ್ಯಾಣ ಮತ್ತು ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯ ಮಾಡುತ್ತ ಬಂದಿದೆ. ಶ್ರೀಮಠದ ಸಾಮೂಹಿಕ ವಿವಾಹ ಕಾರ್ಯಕ್ರಮವು ದುಂದುವೆಚ್ಚವಾಗುವುದನ್ನು ಕಡಿಮೆ ಮಾಡುತ್ತ ಬಂದಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ ಜಿ. ಮಾತನಾಡಿ, ಇಂದು ಇಡೀ ಜಿಲ್ಲೆಯಲ್ಲಿ ೨೫ ಕಡೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಗಿಡ ಮರ ಕಡಿಮೆ. ಆದರೆ ಶ್ರೀಮಠದಲ್ಲಿ ವನದ ರೀತಿ ಕಾಣುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಸುಮಾರು ೭೦೦ ವರ್ಷಗಳ ಹಿಂದೆ ನಮ್ಮ ದೇಶಕ್ಕೆ ಸಾಂಬಾರ ಪದಾರ್ಥ ಖರೀದಿಗೆ ಬಂದು ಗಿಡ ಮರಗಳನ್ನು ನಾಶ ಮಾಡಲಾಗಿದೆ. ಸ್ವಾತಂತ್ರ‍್ಯಪೂರ್ವ ದೇಶದಲ್ಲಿ ಹೆಚ್ಚು ಕಾಡಿತ್ತು. ಆದರೆ ನಂತರ ಕಾಡಿನ ನಾಶವನ್ನು ನಾವುಗಳೇ ಮಾಡುತ್ತ ಬಂದಿದ್ದೇವೆ.

ಹಿರಿಯರ ಕಾಲದಲ್ಲಿ ಹಾಕಿದ ಗಿಡ ಮರಗಳನ್ನಾದರೂ ಉಳಿಸುವ ಪ್ರಕ್ರಿಯೆಯಲ್ಲಿ ನಾವಿಲ್ಲ. ಎಲ್ಲವನ್ನು ನಾಶ ಮಾಡುತ್ತಾ ಬಂದಿದ್ದೇವೆ. ಮೊದಲು ಊರುಗಳಲ್ಲಿ ಅರಳಿ ಕಟ್ಟೆ ಇರುತ್ತಿದ್ದವು. ಅವು ಇಂದು ಕಣ್ಮರೆಯಾಗಿವೆ. ಅರಳಿ ಮರದಿಂದ ಉತ್ತಮ ಆಮ್ಲಜನಕ ಸಿಗುತ್ತದೆ. ಗರ್ಭಿಣಿಯರು, ಮಹಿಳೆಯರು ಮರಗಳನ್ನು ಸುತ್ತಿ ಆರೋಗ್ಯವಾಗಿರುತ್ತಿದ್ದರು. ಇಂದು ಅವು ನಾಶವಾಗುತ್ತಿವೆ. ಪ್ರತಿದಿನ ತಾಪಮಾನ ಹೆಚ್ಚಾಗಿ ಸುಮಾರು ೧೦ ವರ್ಷಕ್ಕೆ ೧ರಿಂದ ಒಂದೂವರೆ ಡಿಗ್ರಿ ಸೆಲ್ಷಿಯಸ್ ಶಾಖ ಹೆಚ್ಚಾಗಿ ಮಳೆಗಾಲವು ಕಡಿಮೆಯಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ಪರಿಣಾಮ ಆಗುತ್ತಿರುವುದನ್ನು ಕಾಣುತ್ತಿದ್ದೇವೆ.

ಶಾಲಾಮಕ್ಕಳಲ್ಲಿ ಶೇ.೨೦ ರಿಂದ ೩೦ರಷ್ಟು ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆಯನ್ನು ಕಾಣಬಹುದು. ಇಂದು ವಿಷಕಾರಿ ಆಹಾರ ಸೇವಿಸುವುದರಿಂದ ಆರೋಗ್ಯ ಕ್ಷೀಣಿಸುತ್ತಿದೆ. ಒಂದು ಮರ ಸಾಕುವುದರಿಂದ ಆಮ್ಲಜನಕ, ಉತ್ತಮ ಹಣ್ಣು, ಪಕ್ಷಿಗಳಿಗೆ ಆಶ್ರಯ ಹೀಗೆ ಹಲವಾರು ಉಪಯೋಗಗಳಿವೆ. ನವ ವಧು-ವರರು ಒಂದೊಂದು ಗಿಡ ನೆಟ್ಟು ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಆಶ್ರಯದಾತರಾಗಿ. ಯಾರು ಗಿಡ ಮರಗಳನ್ನು ಪ್ರೀತಿಸಿ ಪೋಷಿಸುತ್ತಾರೋ ಅವರಿಗೆ ದೈವಕೃಪೆ ಸದಾ ಇರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ೪೭ ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿರುವ ಸಿದ್ಧರಾಜು ಜೋಗಿ ಅವರನ್ನು ಸನ್ಮಾನಿಸಲಾಯಿತು.

ನವಜೋಡಿಗಳು ವಿಶ್ವಪರಿಸರ ದಿನಾಚರಣೆ ಅಂಗವಾಗಿ ಮಠದ ಅಂಗಳದಲ್ಲಿ ಗಿಡಗಳನ್ನು ನೆಟ್ಟರು.

ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಮಹಾಂತೇಶ್ ಆರ್. ಕಮ್ಮಾರ ಮೊದಲಾದವರಿದ್ದರು.

ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಹಾಡುಗಳನ್ನು ಹಾಡಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಶಿಕ್ಷಕ ಗಿರೀಶಾಚಾರ್ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿ, ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *